`ಆತ್ಮನಿವೇದನೆ’ಯ ಅಪರೂಪದ ಗುರು

`ಆತ್ಮನಿವೇದನೆ’ಯ ಅಪರೂಪದ ಗುರು

`ಸತ್ಪುರುಷನ ಸಹವಾಸದಿಂದ ದುಷ್ಟನೂ ಸತ್ಪುರುಷನಾ ಗುತ್ತಾನೆ. ಅದು ಹೇಗೆಂದರೆ ಪರರ ನಿಂದೆಯನ್ನು ಮಾಡುವವನೇ ದುಷ್ಟ ಪುರುಷನು. ಸತ್ಪುರುಷನು ಅವನನ್ನು ಪ್ರತಿಯಾಗಿ ನಿಂದಿಸದೆ ಅವನ ವಿಷಯದಲ್ಲಿ ಉದಾಸೀನನಾಗಿರುತ್ತಾ ನಾದುದರಿಂದ ದುಷ್ಟನು ನಿಂದಿಸಿ ನಿಂದಿಸಿ ಬೇಜಾರಾಗುತ್ತಾನೆ. ಅವನಿಗೆ ಸಾಕಾಗಿ ಹೋಗುತ್ತದೆ. ಆನಂತರ ತನ್ನೊಳಗೆ ನಾನೇಕೆ ಈ ರೀತಿಯಾಗಿ ಹುಚ್ಚನಂತೆ ನಿಂದಿಸುತ್ತೇನೆ? ಇದು ಶುದ್ಧ ಅನ್ಯಾಯ. ಆದ್ದರಿಂದ ಇನ್ನು ಮುಂದೆ ಪರನಿಂದೆಯನ್ನು ಮಾಡಬಾರದೆಂಬ ತಿಳಿವಳಿಕೆಯುಂಟಾಗುತ್ತದೆ. ಈ ರೀತಿಯ ತಿಳುವಳಿಕೆ ಹುಟ್ಟಲು ಸತ್ಪುರುಷನು ಪ್ರತಿನಿಂದೆಯನ್ನು ಮಾಡದೆ ಉದಾಸೀನವಾಗಿದ್ದು ನಿಂದಕನಿಗೆ ವಿಚಾರಿಸಲವಕಾಶವನ್ನು ಕೊಡುವುದೇ ಈ ಪರಿಣಾಮಕ್ಕೆ ಕಾರಣವಾಗುತ್ತದೆ. ಯಾರಾದರೂ ಸತ್ಪುರುಷರನ್ನು ನಿಂದಿಸುತ್ತಾರೆಂದರೆ ಅದು ಅವರ ಸೌಭಾಗ್ಯ. ಯಾಕೆಂದರೆ ಪರಿಣಾಮದಲ್ಲಿ ಅವರಿಗೆ ಸುಜ್ಞಾನವು ಹುಟ್ಟುತ್ತಾದುದರಿಂದ. ಎಲೈ ಮಾನವ! ನಾನು ಸತ್ಯವಾಗಿ ಹೇಳುತ್ತೇನೆ. ಆದುದರಿಂದಲೇ ಸಜ್ಜನರ ಸಹವಾಸದಿಂದ ದುರ್ಜನರೂ ಸಜ್ಜನರಾಗುತ್ತಾರೆಂದು ಹಿರಿಯರು ಹೇಳುವುದು. ಆದ್ದರಿಂದಲೇ ಸತ್ಪುರುಷರಿಗೆ ಈ ಜಗತ್ತಿನಲ್ಲಿ ದೇವತೆಗಳಿಗಿಂತಲೂ ಮಿಗಿಲಾದ ಪೂಜ್ಯ ಸ್ಥಾನವು ದೊರೆತಿರುವುದು’. (ಪು: 121-122) 24-25ರ ಹರೆಯದ ತರುಣ ಸನ್ಯಾಸಿಯ ದಿನಚರಿಯ ನುಡಿಗಳಿವು. ಹೀಗೆ ಬರೆದು ಅದರಂತೆ ಬಾಳಿದವರು 20ನೆಯ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು. ಅವರ ಬದುಕೇ ರೋಚಕವಾದುದು.

`ಕಾಲವನ್ನರಿತು ಮಾತನಾಡುವುದೂ ಮೌನವೇ. ಜಗತ್ತಿನಲ್ಲಿ ಅಲ್ಪ ಭಾಷಿಯೇ ಬುದ್ಧಿವಂತನು. ಗಾಂಭೀರ್ಯವಿಲ್ಲದವನ ಬಾಳು ಗಾರ್ದಭನ ಬಾಳು. ಶಾಂತಿಯು ಸ್ವರ್ಗೀಯ ಪಿತಾಮಹನ ಕೃಪೆಯು. ಶಾಂತನು ಸುಖಿಯು. ಪರರ ನಿಂದೆಯನ್ನು ಸಹಿಸುವವನು ಸುಖಿಸುತ್ತಾನೆ. ಯಾರನ್ನೂ ಆತ್ಮೀಯರೆಂದು ತಿಳಿಯಬಾರದು. ಸಂಸಾರವೆಂಬುದೊಂದು ಸಂತೆ. ಸಂತೆಯಲ್ಲಿ ಎಷ್ಟು ವ್ಯವಹರಿಸಬೇಕೋ ಅಷ್ಟೆ. ದೇವರಲ್ಲಿ ಅಸೀ ಮವಾದ ವಿಶ್ವಾಸವಿಟ್ಟವನು ಪಾರಾಗುತ್ತಾನೆ. ನನಗೇನಾದರೂ ಸುಖ ವಾಗಿದೆಯೆಂದರೆ ಈಶ್ವರನಿಂದಲೇ. ಬ್ರಹ್ಮಚರ್ಯೆಯು ಉತ್ತಮವಾದ ತಪವು’. (ಪು: 72) ತಾರುಣ್ಯದಲ್ಲಿ ಇಂಥ ಸಂದೇಶಗಳು ಹೊರಹೊಮ್ಮಲು ಸಾಧ್ಯವೇ ಎನ್ನುವವರು `ಆತ್ಮನಿವೇದನೆ’ ಕೃತಿಯನ್ನು ಓದಲೇಬೇಕು.

`ಸಮಾಜದ ಪರಿಸ್ಥಿತಿಯು ಇದೇ ರೀತಿಯಲ್ಲಿದ್ದರೆ ಸುಧಾರಣೆಯು ಬರುವುದು ತುಂಬಾ ಕಷ್ಟ. ನಮ್ಮ ಸಮಾಜಕ್ಕೆ ಮುಖ್ಯವಾಗಿ ಮೂರು ವರ್ಗಗಳ ಸುಧಾರಣೆಯು ನಡೆಯಬೇಕಾಗಿದೆ. ಮೊಟ್ಟಮೊದಲು ಗುರು ವರ್ಗದಲ್ಲಿರುವ ಅನೈಕ್ಯವು ದೂರವಾಗಿ ಗುರುಗಳಾದವರೆಲ್ಲರೂ ಶಿಷ್ಯ ಸೇವೆಯೇ ಈಶಸೇವೆಯೆಂಬ ಮಂತ್ರವನ್ನು ಗ್ರಹಿಸತಕ್ಕವರಾಗಬೇಕು. ಎರಡನೆಯದಾಗಿ ಜಂಗಮರಲ್ಲಿ ವೈದಿಕ ಮತ್ತು ಧಾರ್ಮಿಕ ಸುಧಾರಣೆಗಳು ಬರಬೇಕು. ಮೂರನೆಯದಾಗಿ ಶಿಷ್ಯವರ್ಗದಲ್ಲಿ ಧಾರ್ಮಿಕ, ನೈತಿಕ ಮತ್ತು ವಿದ್ಯಾವಿಷಯಕ ಸುಧಾರಣೆಗಳು ನಡೆಯಬೇಕು. ಇದೆಲ್ಲಾ ನಡೆಯಲು ಇಡೀ ಪ್ರಪಂಚದ ಈ ಸಮಾಜವು ಒಗ್ಗಟ್ಟಾಗದೇ ಸಾಧ್ಯವಿಲ್ಲ. ಒಗ್ಗಟ್ಟಾಗಲು ಜನರಲ್ಲಿರುವ ಸಂಕುಚಿತ ಬುದ್ಧಿಯು ದೂರವಾಗಬೇಕು. ಒಗ್ಗಟ್ಟಾಗದೆ ಯಾವ ಕಾರ್ಯವೂ ನಡೆಯುವುದಿಲ್ಲ. ಇದಕ್ಕಾಗಿ ಉಪಾಯವೇನೆಂದರೆ ಸಮಾಜಿಕರನ್ನೆಲ್ಲಾ ಕೂಡಿಸಿ ಒಂದು ಮಧ್ಯಸ್ಥಳದಲ್ಲಿ ಸಾಧು ವೀರಶೈವ ಸಂಯುಕ್ತ ಸಭೆಯನ್ನು ನಡೆಸಿ ಅಲ್ಲಿ ಈ ವಿಷಯವನ್ನು ದೇಶದವರೆದುರಿನಲ್ಲಿಡಬೇಕು. ಅವರ ಅವಗಾಹನೆಗೆ ತಂದು ಅದರಲ್ಲಿರುವ ಮಹತ್ತರವಾದ ಪ್ರಯೋಜನವನ್ನು ತೋರಿಸಿಕೊಡಬೇಕು. ಹಾಗೆ ಮಾಡಿದರೆ ಈ ಸಮಾಜವು ಒಗ್ಗಟ್ಟಾಗುತ್ತದೆ. ಆನಂತರ ಸುಧಾರಣೆಗಳು ತಾನಾಗಿ ತಾನೇ ಬರುತ್ತವೆ’. (ಪು: 143-144) ಇಲ್ಲಿ ಸಮಾಜ ಸುಧಾರಣೆ, ಗುರುವರ್ಗದ ಅನೈಕ್ಯತೆ ಭಕ್ತರ ಜವಾಬ್ದಾರಿ ಮುಂತಾದ ವಿಷಯಗಳಿವೆ.

`ಕೈಲಾಗದವನಾದರೆ ಈ ಮಾರ್ಗದಿಂದಲೇ ದೂರವಿರು. ಈ ಪವಿತ್ರ ಮಾರ್ಗಕ್ಕೆ ಕಳಂಕವನ್ನು ತರಬೇಡ. ಸಾರಿ ಸಾರಿ ಹೇಳುತ್ತೇನೆ. ವಿನಯದಿಂದ ಬೇಡಿಕೊಳ್ಳುತ್ತೇನೆ. ಗುರುತ್ವದ ಪವಿತ್ರತೆಯು ಜಗತ್ತಿನಲ್ಲಿ ಶಾಶ್ವತವಾಗಿರಲಿ. ಆಡಂಬರದ ಡಾಂಭಿಕದ ಗುರುತ್ವವನ್ನು ಕೈಬಿಡು. ಗುರುವಾಗು. ನಿಜವಾದ ಗುರುತ್ವದ ಮಹಿಮೆಯನ್ನು ಜಗತ್ತಿಗೆ ಬೋಧಿಸು. ಜಗದೀಶ್ವರ! ಗುರುತ್ವವನ್ನು ಕಾಪಾಡು’ (ಪು: 144) ಎಂದು ಗುರುತ್ವಕ್ಕೆ ಉಪದೇಶ ಮಾಡಿದ್ದಾರೆ ಎನ್ನುವುದಕ್ಕಿಂತ ತಮಗೇ ಉಪದೇಶ ಮಾಡಿಕೊಂಡು ನಿಜವಾದ ಗುರುವಾಗಿ ಬಾಳಿದವರು. `ವ್ಯಭಿಚಾರವನ್ನು ಮಾಡುವ ನಾಮಧಾರಿ ಗುರುಗಳನ್ನು ನೋಡಲು ಸಹ ಮನಸ್ಸು ಬರುವುದಿಲ್ಲ. ದೇವರೇ! ಈ ಜಗತ್ತಿನಲ್ಲಿ ಯಾರೂ ಇಲ್ಲವಲ್ಲ. ಈ ಗುರು ವರ್ಗದವರಿಗೂ ಸಹ ಸ್ವಲ್ಪವೂ ಜ್ಞಾನವಿಲ್ಲವಲ್ಲ! ಶಿಷ್ಯರ ಭಯವೇ ಇಲ್ಲ. ಮೂರ್ಖ ಶಿಷ್ಯರು. ಇಂಥ ನೀಚರನ್ನು ಹೊಡೆದೇಕೆ ಓಡಿಸಬಾರದು? ಇಂಥವರಿಗೆಲ್ಲ ಬೆಲೆಯನ್ನು ಕೊಡುತ್ತಾ ಹೋದರೆ ಜಗದ್ವ್ಯಾಪಾರವೆಲ್ಲಾ ಕೆಟ್ಟು ಹೋಗುವುದರಲ್ಲಿ ಸಂಶಯವಿಲ್ಲ. ಇಂತಹ ಮೂರ್ಖ ಶಿಷ್ಯರಿಗೆ ಇಂತಹ ಗುರುಗಳೇ ಯೋಗ್ಯರೆಂದೂ ಹೇಳಬಹುದು. ಅಯ್ಯೋ ನೀಚ ಗುರು ವರ್ಗವೇ! ನಿಮ್ಮ ಅಂತಸ್ತು ಎಲ್ಲಿತ್ತು! ಈಗ ಎಲ್ಲಿಗೆ ಬಂದಿರುತ್ತೆ! ನೀವು ದೇವರಿಗೂ ದೇವರಾಗಿದ್ದಿರಲ್ಲಾ. ಈ ದಿನ ನಿಮ್ಮ ಈ ಅವನತಿಗೆ ಕಾರಣವೇನೆಂಬುದನ್ನು ಸ್ವಲ್ಪವಾದರೂ ಆಲೋಚಿಸಬಾರದೇ? ಈ ನೀಚ ಪ್ರವೃತ್ತಿಯನ್ನು ನಾಶಮಾಡಿ ಗುರು ವರ್ಗವನ್ನೆತ್ತಿ ಕಾಪಾಡು!’ (ಪು: 145)

`ಯಾರೆಷ್ಟು ದ್ವೇಷಿಸಿದರೂ ಪರಮಾತ್ಮನು ಕಾಪಾಡಬೇಕು. ಮನುಷ್ಯನು ಮನುಷ್ಯನನ್ನು ಕೆಡಿಸಲಾರನು. ಪರಮೇಶ್ವರನ ಕೃಪೆಯು ತಪ್ಪಿದರೆ ಯಾರೂ ಕಾಪಾಡಲಾರರು. `ನಾನು ನಾನು’ ಎಂಬ ಅಹಂಕಾರಕ್ಕೆ ಇದಿರಾರೂ ಇಲ್ಲ. ನಮ್ಮಲ್ಲಿರುವ ಸತ್ಯವು ನಮ್ಮನ್ನು ಕಾಪಾಡಬೇಕೇ ವಿನಃ ಇನ್ನಾರೂ ಕಾಪಾಡಲಾರರು’ (ಪು: 146) ಎಂದು ಬರೆದಿರುವುದು ನೂರಕ್ಕೆ ನೂರು ಸತ್ಯವಾಗಿದೆ. `ಈಗಿನ ಗುರುಗಳು ಮಾಡಿದಷ್ಟು ಪಾಪವನ್ನು ಮತ್ತಾರೂ ಮಾಡುತ್ತಾ ಇಲ್ಲ. ಎಲೈ ಮೂರ್ಖ ಶಿಷ್ಯ ಸಮುದಾಯವೇ! ನಿಮಗೇನು ಹುಚ್ಚು ಹಿಡಿದಿದೆ. ಭ್ರಷ್ಟರನ್ನು ಪೂಜಿಸಿ ಪರಮೇಶ್ವರನ ರಾಜ್ಯದಲ್ಲಿ ಅಸತ್ಯಕ್ಕೆ ಬೆಲೆಯನ್ನೇರಿಸುತ್ತಿರುವಿರಲ್ಲಾ! ಸತ್ಯವನ್ನು ಜೀವಸಹಿತ ಹೂಣುತ್ತಿರುವಿರಲ್ಲಾ! ನೀವು ಭ್ರಾಂತರಾಗಿರುವಿರಿ. ನೀಚ ಗುರುವರ್ಗ! ಅಧಮ ಗುರುವರ್ಗ! ಜಗ್ರೋಹಿ! ನಿನಗೆ ಧಿಕ್ಕಾರ!’ (ಪು: 147) ಹೀಗೆ ಬರೆಯಲು ಎಂಟೆದೆಯೇ ಬೇಕು. `ಯಾವನು ತಾನು ಪೂಜ್ಯನು, ದೊಡ್ಡವನು, ಒಳ್ಳೆಯವನು ಎಂದು ತಿಳಿದುಕೊಂಡಿದ್ದಾನೋ, ಅವನು ಕೇವಲ ವಾಚಿಕ ಪೂಜ್ಯನಾಗದೆ ಅವುಗಳಿಗೆ ಬೇಕಾಗುವ ಗುಣಗಳನ್ನು ಸಂಪಾದಿಸಿದರೆ ಪ್ರತಿಯೊಬ್ಬರೂ ವಂದಿಸುತ್ತಾರೆ. ಅದನ್ನು ಬಿಟ್ಟು ಸಾಮಾನ್ಯನೂ ಮಾಡಲಾರದಂತಹ ದುಷ್ಟ ಕೃತ್ಯಗಳೆಂದರೆ ಸುಳ್ಳು, ವ್ಯಭಿಚಾರ ಇತ್ಯಾದಿಗಳನ್ನು ಮಾಡಿದರೆ ಯಾರೂ ಪೂಜಿಸಲಾರರು. ಅಲ್ಲದೆ ಅವನು ಪ್ರತ್ಯಕ್ಷವಾಗಿ ಅಧೋಗತಿಯನ್ನು ಹೊಂದದಿರಲಾರನು, ಪರಮೇಶ್ವರ! ಶಾಸ್ತ್ರ ಶಿಷ್ಟಾಚಾರ ದ್ರೋಹಿಗಳು ಸಮಾಜದಿಂದ ತೊಲಗಬೇಕು’. (ಪು: 148)

`ಎಲೈ ನೀಚ ಮನಸ್ಸೇ! ನಿನ್ನ ಪಾಪ ಕೃತ್ಯಗಳಿಗೆ ಸೀಮೆಯೇ ಇಲ್ಲ. ಹೀಗೆ ನೀನು ಎಷ್ಟು ದಯನೀಯ ಜನರನ್ನು ಅಧೋಮಾರ್ಗಕ್ಕೆ ಕಳುಹಿಸಿರಲಿಕ್ಕಿಲ್ಲ? ನೀನು ಹೀಗೆ ದುರ್ವಿಚಾರಗಳಿಂದ ವ್ಯಾಪ್ತನಾಗಿ ನಿನಗಾಧಾರ ಮಾತ್ರನಾಗಿರುವ ಪರಮಾತ್ಮನ ಪುತ್ರನಾದ ಜೀವಾತ್ಮನನ್ನು ಬಂಧನಕ್ಕೀಡುಮಾಡುತ್ತೀಯಲ್ಲಾ? ಇದರಿಂದುಂಟಾಗುವ ಪರಹಿಂಸೆಯ ಪಾಪ ಭಯವು ನಿನಗಿಲ್ಲವೇ? ಬರವಣಿಗೆಯಲ್ಲೇನೋ ಓದುವವರಿಗೆ ಕಾಣುವಂತೆ ಪಶ್ಚಾತ್ತಾಪ ವಾಕ್ಯ ಮಾಲೆಗಳು ಸೃಷ್ಟಿಸಲ್ಪಡುತ್ತವೆ. ಆದರೆ ಅಂತರಂಗವು ಮಾತ್ರ ಪಾಪ ಚಿಂತನೆಯನ್ನು ಬಿಡುವುದಿಲ್ಲ. ಎಲೈ ಮನಸ್ಸೇ! ಸಾಕು ಬಿಡು ಪಾಪ ಚಿಂತನೆಯನ್ನು. ವ್ಯರ್ಥವಾಗಿ ಗುರುದ್ರೋಹ, ದೇವದ್ರೋಹ, ದೇಶದ್ರೋಹಕ್ಕೆ ಪಾತ್ರನನ್ನಾಗಿ ಮಾಡಬೇಡ’. (ಪು: 85-86) `ಜಗತ್ತಿಗೆ ಸುಖವು ಸಿಗಬೇಕಾದರೆ ಅಧ್ಯಾತ್ಮ ವಿದ್ಯೆಯಿಂದ. ಅಧ್ಯಾತ್ಮ ವಿದ್ಯೆಯನ್ನು ಪ್ರಚಾರ ಮಾಡುವವರಾರು? ಧರ್ಮಗುರುಗಳು. ನಾಮಧಾರಿ ಗುರುಗಳಿಂದ ಲೋಕಕ್ಕೆ ಹಾನಿ. ಧರ್ಮಗುರುಗಳಲ್ಲಿ ಸಂಘಟನೆಯಾಗಬೇಕು. ಎಲ್ಲರೂ ತಂತಮ್ಮ ಹಿರಿಯರ ಸಂದೇಶವನ್ನು ಜಗತ್ತಿನೆದುರಿಗೆ ತರಬೇಕು. ಗುರುಗಳು ತಮ್ಮ ಜವಾಬ್ದಾರಿಯನ್ನು ಎಲ್ಲಿಯವರೆಗೆ ತಿಳಿಯುವುದಿಲ್ಲವೋ ಅಲ್ಲಿಯವರೆಗೆ ಜಗತ್ತಿಗೆ ಸುಖವಿಲ್ಲ. ಧರ್ಮ ಗುರುಗಳು ಮೊದಲು ಒಳ್ಳೇ ಸಹವಾಸದಲ್ಲಿದ್ದು ವಿದ್ಯೆಯನ್ನು ಸಂಪಾದಿಸಬೇಕು. ಬಸವಾದಿ ಪ್ರಮಥರ ನುಡಿಯಂತೆ ನಡೆಯನ್ನಿಡಬೇಕು. (ಪು: 61)

`ದಯಾನಿಧೇ! ವಿಷಯಗಳಲ್ಲಿರುವ ಸುಖಬುದ್ಧಿಯು ತೊಲಗಲಿಲ್ಲ. ಅದಕ್ಕಾಗಿ ಮನಸ್ಸು ಪರಿಪರಿಯಾಗಿ ಬಳಲುತ್ತಿದೆ. ನಿನ್ನನ್ನು ಬೇಡಿ ಬೇಡಿ ಬೇಸತ್ತೆನು. ಇದರ ಮೇಲೆ ನಾನೆಷ್ಟು  ಪ್ರಾರ್ಥಿಸಿಕೊಳ್ಳುವುದು. ನನಗೆ ಈ ಭಯಂಕರ ವಾದ ವಿಪತ್ತು ಬಂದಿದೆ. ನೀನು ದೂರ ಮಾಡದಿದ್ದರೆ ಮತ್ತಾರೂ ಸಮರ್ಥರಿಲ್ಲ. ಮನುಷ್ಯನು ಮನಸ್ಸಿನಿಂದಲೇ ಹಾಳಾಗುವುದು, ಉದ್ಧಾರವಾಗು ವುದು ಮನಸ್ಸಿನಿಂದಲೇ. ನನ್ನ ಮನಸ್ಸನ್ನು ಪವಿತ್ರ ಮಾಡಿ ಕಾಪಾಡುವುದು ನಿಮ್ಮ ಭಾರ. ನನ್ನ ಮನಸ್ಸು ವಿಷಯಗಳಲ್ಲಿ ಪ್ರವರ್ತಿಸುವುದೇ ನನಗೆ ಮಹಾ ವಿಪತ್ತು. ಇದನ್ನೊಂದನ್ನು ನಾಶ ಮಾಡಿದರೆ ನನಗೆ ಮತ್ತಾವುದೂ ಬೇಕಿಲ್ಲ… ಎಲೈ ಮನಸ್ಸೇ! ನಿನ್ನ ನಿಜವಾದ ಸ್ವರೂಪವನ್ನು ತಾಳು. ವಿಷಯಗಳು ವಿಷಗಳು. ನಂಬಬೇಡ. ನೀನು ಮೋಸ ಹೊಂದಿದೆ. ಹಿಂದಿನಿಂದ ಪಶ್ಚಾತ್ತಾಪವು ಬಹಳವಾಗುತ್ತದೆ. ಹೊರಗೆ ಸುಖವಿಲ್ಲವೆಂಬುದನ್ನು ದೃಢ ಮಾಡಿಕೋ. ಖಂಡಿತವಾಗಿಯೂ ನಿನ್ನ ಪರಿಸ್ಥಿತಿಯು ಬಹಳ ಶೋಚನೀಯವಾಗಿದೆ. ನೀನು ಶೀಘ್ರವಾಗಿ ಸುಧಾರಿಸಿಕೊಳ್ಳದಿದ್ದರೆ ನಿನ್ನ ಅಧಃಪತನವು ಸಿದ್ಧವಾಗಿದೆ. ನನ್ನ ಹಿತೋಕ್ತಿಗಳನ್ನು ಸ್ವಲ್ಪವಾದರೂ ಕೇಳು. ವ್ಯರ್ಥವಾಗಿ ಕೆಡಬೇಡ. ಬಹಳವಾಗಿ ಹೇಳಿದ್ದೇನೆ’. (ಪು: 49-50)

`ಮಹಾದೇವ! ಖಂಡಿತವಾಗಿಯೂ ನನ್ನ ಪುರಾಕೃತ್ಯಗಳು ಬಲವಾಗಿವೆ. ನಾನು ಸಾಪರಾಧನು. ಲಜ್ಜೆಯು ಬಲವಾಗಿದೆ. ನಾನು ಈ ವಿಪತ್ತಿನಿಂದ ಪಾರಾಗುವುದು ನಿನ್ನ ಕೃಪೆಯಿಲ್ಲದೆ ಸಾಧ್ಯವಿಲ್ಲ, ಅನಾಥನಾಗಿದ್ದೇನೆ. ದೇವ! ನನ್ನ ಕಾಪಾಡು. ಅಯ್ಯೋ! ದೇವರೇ! ನನಗೇಕಪ್ಪಾ ಇಂತಹ ದುರವಸ್ಥೆಯು ಬಂದಿತು. ಮಹಾದೇವ! ಅಪರಾಧ, ಅಪರಾಧ. ನನ್ನನ್ನು ಕ್ಷಮಿಸಿ ಕಾಪಾಡು. ವಿಷಯಾನಲವು ನನ್ನನ್ನು ಸುಡುತ್ತಿದೆ. ಈ ವಿಷಯ ಮಾರುತವು ನನ್ನನ್ನು ಪಾಪಕ್ಕೆ ಹೊತ್ತುಕೊಂಡು ಹೋಗಿ ಹಾಕುತ್ತದೆ. ವಿಷಯ ಪಿಶಾಚಿಯು ನನ್ನನ್ನು ಮರೆಮಾಚಿ ಪಾಪಕ್ಕೆ ಎಳೆಯುತ್ತಿದೆ. ದೇವ! ಸರ್ವಥಾ ನನಗೆ ನೀನೇ ರಕ್ಷಕನು. ದೇವ! ಯಾವ ಸಮಯದಲ್ಲೇನಾಗುತ್ತದೋ ಹೇಳಲು ಸಾಧ್ಯವಿಲ್ಲ. ದಯಮಾಡು. ದರ್ಶನವನ್ನು ಕೊಡು. ಎನ್ನ ಸನ್ನಿತನಾಗಿರುವುದು. ಸಾಕಾಯಿತು. ಈ ಎನ್ನ ದುಃಸ್ಥಿತಿಯು ಎನ್ನ ಕರ್ಮಫಲವು. ಮೌನವಾಗಿರುವುದೇ ಲೇಸು. ಎಷ್ಟು ವದರಿದರೂ ಫಲವೇನು? ತಾ ಪಡೆದಷ್ಟು ಆಗಿಯೇ ತೀರಬೇಕು. (ಪು: 51)

`ವಿಷಯ ವಾಸನೆಯಿಂದ ಹೃದಯವೆಲ್ಲಾ ಕಲುಷಿತವಾಗಿದೆ. ದೇವ! ಹೀಗೆ ಇದ್ದರೆ ನಾನು ಪುಣ್ಯಜೀವಿಯಾಗುವುದೆಂತು? ಪಾವನತೆಯು ನಷ್ಟವಾಗುತ್ತದೆಯಲ್ಲಾ? ಜಗದೀಶ್ವರ! ಖಂಡಿತವಾಗಿಯೂ ನಿನ್ನ ಕೃಪೆಯಿಲ್ಲದೆ ನನಗೆ ಅಸಾಧ್ಯವಾಗಿದೆ. ದೇವಾದಿದೇವ! ಇಷ್ಟು ಕಲ್ಮಷವು ಹೃದಯದಲ್ಲಿದ್ದರೆ ನೀನೆನ್ನಲ್ಲಿರು ವುದೆಂತು? ಖಂಡಿತವಾಗಿಯೂ ನಾನು ಅಪರಾಧಿಯಾಗಿದ್ದೇನೆ. ಮತ್ತು ನಾನೆಷ್ಟು ಪ್ರಯತ್ನಪಟ್ಟರೂ ಮುಂದುವರಿಯುವಂತಿಲ್ಲ. ಕೆಳಗುರುಳಿ ಬೀಳುತ್ತಿರುವೆನು. ಏನಾದರೂ ಆಗಲಿ. ದೇವರೇ ಗತಿ. ನನ್ನಿಂದೇನೂ ಸಾಧ್ಯವಿಲ್ಲ. ವ್ಯರ್ಥವಾಗಿ ಪರಿತಪಿಸುತ್ತಿರುವೆನು. ಈ ಅಕ್ಷಮ್ಯ ಅಪರಾಧವನ್ನು ಕ್ಷಮಿಸೆಂದು ನಿನ್ನಲ್ಲಿ ಅರಿಕೆ ಮಾಡಿಕೊಳ್ಳಲು ನನಗೇನೇ ನಾಚಿಕೆಯಾಗುತ್ತದೆ. ನನಗೀಗ ಮಾತನಾಡಲು ಬಾಯಿಲ್ಲ. ಯಾವುದಕ್ಕೂ ನಿನ್ನ ಸಂಕಲ್ಪವೇ ಕಾರಣ. ದೇವಾಧಿದೇವ! ನೀನು ಉಚಿತವಾಗಿ ತಿಳಿದದ್ದನ್ನು ಮಾಡು. ಸರ್ವಜ್ಞ! ನಿನಗೆ ನಾನೇನು ಹೇಳುವುದೋ ತಿಳಿಯದು. ಕಾಪಾಡು ನಾಥ. ಕಾಪಾಡು. ಅಸಾಧ್ಯ ಪಶ್ಚಾತ್ತಾಪ, ಭಯಂಕರ ಪರಿತಾಪ, ದೇವ! ನೀನೆನ್ನನ್ನು ಬಿಟ್ಟು ಬಿಡುವೆಯಾ!’ (ಪು: 84)

`ಓಹೋ! ನನ್ನ ಪಾಶವೀ ಕೃತ್ಯವು ಮಿತಿ ಮೀರುವುದರಲ್ಲಿದೆ. ಜಗದೀಶ್ವರ! ಯಾವುದಕ್ಕೆ ಪ್ರತಿಜ್ಞೆಯನ್ನು ಮಾಡಲಿ? ಮನಸ್ಸು ದುರ್ಬಲವಾದುದಾಗಿರುವುದರಿಂದ  ಪ್ರತಿಜ್ಞೆಗಳನ್ನು ಪಾಲಿಸುವುದೇ ಕಠಿಣವಾಗಿದೆ. ಆದದ್ದಾಗಲಿ ಮಾಡುವುದೇನು? ಇಂದಿನಿಂದ ಗಾಂಭೀರ್ಯವನ್ನು ಧರಿಸಬೇಕಾಗಿದೆ. ಗಾಂಭೀರ್ಯವಿಲ್ಲದವನ ಬಾಳು ಗಾರ್ದಭನ ಬಾಳೆಂದು ಹಿಂದೆ ಬರೆದಿರುವೆನು. ಆದರೆ ಅದರಂತೆ ನಡೆಯಲಿಲ್ಲ. ನನ್ನ ತಪ್ಪನ್ನು ನಾನೇ ಅಂಗೀಕರಿಸಲೂ ಸಹ ನಾಚಿಕೆಯಾಗುತ್ತಿಲ್ಲ. ಈ ಭಂಡ ಜೀವನವು ವ್ಯರ್ಥವಾದುದು. ಆದರ್ಶ ಜೀವನ, ಪವಿತ್ರ ಚರಿತ್ರೆಯು ಮಾನವನ ಉನ್ನತಿಗೆ ಕಾರಣವಾದವು. ಈಗಲೇನೋ ಗಾಂಭೀರ್ಯ ಮುದ್ರೆಯನ್ನು ಧರಿಸಬೇಕೆಂದು ಹಿಂದಿನ ನನ್ನ ಕೃತ್ಯಗಳಿಗೆ ಪಶ್ಚಾತ್ತಾಪ ಪಡತಕ್ಕವನಾಗಿ ನಿಶ್ಚಯಿಸುತ್ತಿದ್ದೇನೆ. ಆದರೆ ಅದೆಷ್ಟು ಕಾಲವೋ? ನನಗೇ ವಿಶ್ವಾಸವಿಲ್ಲ. ದೇವರು ಏನು ತಿಳಿದುಕೊಂಡು ಈ ರೀತಿ ಪ್ರೇರಿಸುತ್ತಿದ್ದಾನೋ ತಿಳಿಯಲಾರದು. ಪರರ ಆತ್ಮಕ್ಕೆ ದುಃಖವನ್ನು ಕೊಟ್ಟು ನನ್ನ ಸ್ವಾರ್ಥವನ್ನು ಸಾಧಿಸಿಕೊಳ್ಳುವುದೆಷ್ಟರಮಟ್ಟಿನ ಔಚಿತ್ಯವಾದೀತು. ದೇವರೇ ಈ ಭಂಡನ ಮೇಲೆ ಇನ್ನಾದರೂ ದಯವಿಲ್ಲವೇ? ಎಲೇ ನೀಚ ಮನಸ್ಸೆ! ಇಷ್ಟೇಕೆ ಪಾಪಕೃತ್ಯಗಳನ್ನು ಮಾಡುತ್ತಿರುವೆ’. (ಪು: 85)

`ನಮ್ಮ ನಮ್ಮ ದೋಷಗಳು ನಮಗೆ ಗೊತ್ತಾಗುವುದಿಲ್ಲ. ಆದರೆ ಸುವಿವೇಕಿಯು ಮತ್ತು ಸ್ವಾರ್ಥತಹಿತನೂ ಯೋಚಿಸಬಲ್ಲ. ದೋಷಿಯೂ ಆತ್ಮನನ್ನು ಒಪ್ಪಿಸಿಯೇ ಮಾಡುತ್ತಾನೆ. ನಿರ್ದೋಷಿಯೂ ಆತ್ಮನನ್ನು ಒಪ್ಪಿಸಿಯೇ ಮಾಡುತ್ತಾನೆ. ಆದರೆ ಇವರಿಬ್ಬರೂ ಆತ್ಮಸಂಯಕ ಬುದ್ಧಿಯು ಕೆಲವು ಕಾಲವಾದ ಮೇಲೆ ಜನರಿಂದ ಕಾರ್ಯ ರೂಪದಲ್ಲಿ ಬಂದಾಗ ಪರೀಕ್ಷಿಸಲ್ಪಡುತ್ತದೆ. ಅಥವಾ ಆ ತಕ್ಷಣವೇ ಜಗದೀಶ್ವರನು ನೋಡುತ್ತಾನೆ’. (ಪು-88) `ದೇವ! ನಿನ್ನ ವಿರಹವು ನನ್ನ ಮನಸ್ಸನ್ನು ಬಾಡಿಸಿತು. ಇಂದು ನಿನ್ನ ದರ್ಶನದಿಂದ ಎನ್ನ ಮನಃಕುಸುಮವು ಅರಳಿ ತನ್ನ ಸೌಗಂಧವನ್ನು ಎಲ್ಲಾ ಕಡೆಗೂ ಬೀರುತ್ತಾ ಇದೆ. ನಾನು ಧನ್ಯನಾದೆನು. ನನ್ನ ಆನಂದಕ್ಕೆ ಪಾರವಿಲ್ಲ, ಆನಂದವೇ ಆನಂದ! ನನ್ನ ಡೈರಿಯನ್ನು ಯಾವ ಪುಣ್ಯಾತ್ಮನು ಓದುತ್ತಾನೋ ಅವನೇ ಧನ್ಯನು!’ (ಪು: 132)

(ಈ ಬರಹವನ್ನು ಶ್ರೀ ತರಳಬಾಳು ಜಗದ್ಗುರು ಬೃಹನ್ಮಠವು ಪ್ರಕಟಿಸಿರುವ `ಆತ್ಮನಿವೇದನೆ’ ಮೂರನೆಯ ಆವೃತ್ತಿಯಿಂದ ಆಯ್ಕೆ ಮಾಡಿಕೊಳ್ಳಲಾಗಿದೆ).

`ಆತ್ಮನಿವೇದನೆ’ಯ ಅಪರೂಪದ ಗುರು - Janathavaniಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ಶ್ರೀ ತರಳಬಾಳು ಜಗದ್ಗುರು ಶಾಖಾಮಠ, ಸಾಣೇಹಳ್ಳಿ- 577515. ಮೊ. 94480 57748 ಈಮೇಲ್: [email protected]

error: Content is protected !!