ಶಿವಕುಮಾರ ಶ್ರೀ ಶ್ರದ್ಧಾಂಜಲಿ : ಶ್ರೀಗಳ ಮಾದರಿ ಬದುಕಿನಂತಿರಲಿ

ಶಿವಕುಮಾರ ಶ್ರೀ ಶ್ರದ್ಧಾಂಜಲಿ : ಶ್ರೀಗಳ ಮಾದರಿ ಬದುಕಿನಂತಿರಲಿ

ನಾವೆಲ್ಲಾ ಬಲ್ಲಂತೆ ಶಿವಕುಮಾರಶ್ರೀ ನುಡಿದಂತೆ ನಡೆದು, ನಡೆದಂತೆ ನುಡಿದು ಭಕ್ತರಿಗೆ, ಸ್ವಾಮಿಗಳಿಗೆಲ್ಲಾ ಮೇಲ್ಪಂಕ್ತಿ ಹಾಕಿ ಮಾರ್ಗ ದರ್ಶನ ಮಾಡಿದವರು.

ಶ್ರೀ ಗುರುಶಾಂತ ಸ್ವಾಮಿಗಳ  ಕಾಲದಲ್ಲಿ ಪ್ರಪ್ರಥಮ ಮಾಧ್ಯಮಿಕ ಶಾಲೆ ಸಿರಿಗೆರೆ ಮಠದಿಂದ ಸಿರಿಗೆರೆಯಲ್ಲಿ ಪ್ರಾರಂಭವಾಗಿ ಅನಕ್ಷರಸ್ಥರಾಗಿದ್ದ ಅಂದಿನ ಕೃಷಿಕ ಭಕ್ತರ ಎದೆಗೆ ಅಕ್ಷರಗಳ ಬೀಜ ಬಿತ್ತಲಾಯಿತು.

ತದ ನಂತರ ಶಿವಕುಮಾರ ಶ್ರೀ ಸ್ವಾತಂತ್ರ ಪೂರ್ವದಲ್ಲೇ ಪ್ರೌಢಶಾಲೆ ಪ್ರಾರಂಭಿಸಿ, ಅಕ್ಷರ ದಾಸೋಹವನ್ನು ನೂರಾರು ಶಾಲಾ-ಕಾಲೇಜುಗಳನ್ನು ತೆರೆದು, ಬೃಹತ್ ಪ್ರಮಾಣದಲ್ಲಿ ಲಕ್ಷಾಂತರ ಜನರನ್ನು ವಿದ್ಯಾವಂತರನ್ನಾಗಿಸಿದರು. ಇದಕ್ಕೆ ಅವರು ಶಕ್ತಿ ಪಡೆದಿದ್ದು
ವಿಶ್ವಬಂಧು ಶ್ರೀ ಮರುಳಸಿದ್ಧ, ಶರಣರ ವಚನಗಳು, ಭಕ್ತರೊಡನೆ ಅಪೂರ್ವ, ಅನುಪಮ, ಅನನ್ಯ ಪ್ರೀತಿ-ನೀತಿ, ಸಮತೆ-ಮಮತೆಗಳ ಮಧುರ ತಾಯ್ತನದ ಸಂಬಂದಿಂದ.

ಎಂತಹ ವಿಪರೀತದ ಆರ್ಥಿಕ, ಅಧ್ಯಾತ್ಮಿಕ ಸಾಮಾಜಿಕ, ವೈಯಕ್ತಿಕ ಆಘಾತಕಾರಿ ಸಂದರ್ಭಗಳನ್ನೂ ಕರುಣೆ  ಮೈತ್ರಿಯಿಂದ, ಆತ್ಮ ವಿಮರ್ಶೆಯ ಮೂಲಕ ನಾಲ್ಕು ಗೋಡೆಗಳ ಮಧ್ಯೆ ಬಗೆಹರಿಸಿದ ಪ್ರಖ್ಯಾತಿ ಅವರದು. ಒಗ್ಗಟ್ಟಿನ, ಒಮ್ಮತದ ಮಂತ್ರ ಜಪಿಸಿದ, ಪಾಲಿಸಿದ ಶ್ರೀಗಳು ಅವರು.

ಈ ತರಳಬಾಳು ಸಂತಾನ ಶ್ರೀ ಜೀವನದ ಹಲವು ಕ್ಷೇತ್ರಗಳಲ್ಲಿ ಬೆಳಕನ್ನು ನೀಡಬೇಕು, ಬೆಂಕಿಯಾಗಬಾರದು ಎಂಬುದು ಸಜ್ಜನ ಭಕ್ತರೆಲ್ಲರ ಆಶಯ, ಪ್ರಾರ್ಥನೆ. ಹಾಗಾದಾಗ ಮಾತ್ರ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಸೊಬಗು, ಸೊಡರು, ಅರ್ಥಪೂರ್ಣತೆ, ಸಾರ್ಥಕತೆ ಬರುತ್ತದೆ. ಈಗ ನಡೆದಿರುವುದೆಲ್ಲ ಬಟಾ ಬಯಲಾಗಿ ಸರ್ವರಿಗೂ ಗೊತ್ತಿರುವ, ಸಜ್ಜನ ಭಕ್ತರಿಗೆ ಬೇಡವಾದ ಕ್ಷುಲ್ಲಕ ಘಟನೆಗಳು. ‘ನಾನು , ನನ್ನಿಂದ, ನನಗಾಗಿ’ ಬಿಟ್ಟು `ನಾವು, ನಮ್ಮಿಂದ, ನಮ್ಮೆಲ್ಲರಿಗಾಗಿ, ನಾವೆಲ್ಲಾ ವಿಶ್ವಬಂಧು ಗಳು’ ಎಂಬ ಭಾವನೆ ಬಂದರೆ ಎಲ್ಲಾ ಸಮಸ್ಯೆಗಳು ಕೆಲವೇ ದಿನಗಳಲ್ಲಿ ಬಗೆ ಹರಿಯುತ್ತವೆ. ಈಗ ನಡೆಯುತ್ತಿರುವ ಘಟನೆಗಳು ನಿಜಕ್ಕೂ ವಿಷಾದನೀಯ. 

ನಾವೆಲ್ಲರೂ ಬಸವಾದಿ ಶರಣರ, ಶಿವಕುಮಾರ ಶ್ರೀಗಳು  ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಸಹ ಪಯಣ ಮಾಡುವುದೇ ನಮ್ಮ ಮುಂದಿರುವ ಸವಾಲು ಮತ್ತು ಮಾರ್ಗ .

– ಶಿವನಕೆರೆ ಬಸವಲಿಂಗಪ್ಪ.

error: Content is protected !!