ಈಗ್ಗೆ ಸರಿಯಾಗಿ 60 ವರ್ಷಗಳ ಕೆಳಗೆ ನಾನು ಹಳೇ ದಾವಣಗೆರೆ ಭಾಗದ ದೇವಾಂಗಪೇಟೆಯ ಸಿಟಿ ಮಿಡ್ಲ್ ಸ್ಕೂಲ್ನಲ್ಲಿ ಓದುತ್ತಿದ್ದೆ. ಅದು ಬಾಲಕರ ಮಾಧ್ಯಮಿಕ ಶಾಲೆ. ಕೋಗುಂಡಿ ಹಾಲಪ್ಪನವರೂ ನಮಗೆ ಪಾಠ ಮಾಡಿದ್ದರು. ಅಂದನೂರು ಮಹಾಲಿಂಗಪ್ಪ ಆಗ ಮುಖ್ಯೋಪಾಧ್ಯಾಯರು.
ಸಿದ್ಧನಂಜಪ್ಪನವರು, ಪಿನಾಕೇಶ್ವರಯ್ಯ, ಚನ್ನವೀರಯ್ಯ, ಶೇಷ ಜೋಯಿಸರು, ಶರಣಪ್ಪ, ಮುರಿಗೆಪ್ಪ, ಬೇತೂರು ಮಲ್ಕಪ್ಪ, ಬಸವಲಿಂಗಪ್ಪ, ನಾಗರತ್ನಮ್ಮ ಮುಂತಾದವರು ನಮಗೆಲ್ಲಾ ಅಧ್ಯಾಪಕ ವರ್ಗದವರು.
ಸಂಪ್ರದಾಯದಂತೆ ಗಣೇಶ ಚತುರ್ಥಿಯಂದು ನಮ್ಮ ಶಾಲೆಯಲ್ಲೂ ಗಣೇಶನ ಪ್ರತಿಷ್ಠಾಪನೆ ಮಾಡಲಾಯಿತು. ಶೇಷ ಜೋಯಿಸ ಮೇಷ್ಟ್ರು ವೇದೋಕ್ತ ಮಂತ್ರಗಳನ್ನು ಹೇಳಿ ಕ್ರಮವತ್ತಾಗಿ ಪೂಜೆ ಸಹಾ ಮಾಡಿದರು. ನಮ್ಮ ಸಹಪಾಠಿ, ಬಹುಷಃ ಹೆಸರು ರಾಜು ಎಂದಿರಬೇಕು. ಗಣೇಶ ವಂದನೆಯ ಹಾಡನ್ನು ಹೇಳಿದ. `ಜಯಶಂಕರ ವರ ಗಣಾಧಿಪನಿಗೆ, ನಮಿಪೆವು ನಮಿಪೆವು ಗಣಾಧಿಪನಿಗೆ, ಸಂಗೀತೋಮಯ ಕಲಾವಿಶಾರಗೆ, ಸುಗುಣಭರಿತ ಸುಖ ಶಾಂತಿಯ ನೀಡ್ವಗೆ, ಶಿವಶಂಕರ ವರ ಗೌರಿ ಕುವರಗೆ, ನಮಿಪೆವು ನಮಿಪೆವು ಗಣಾಧಿಪನಿಗೆ, ಜಯಶಂಕರವರ ಗಣಾಧಿಪನಿಗೆ..’ ಚೆನ್ನಾಗಿ ಹಾಡಿದ.
ಹಳೆ ಊರಲ್ಲಿನ ಹಳೆ ಕಾಲದ ಗಣೇಶೋತ್ಸವದ ಸ್ವಾರಸ್ಯಗಳು
ಚತುರ್ಥಿಯಂದು ಸ್ಥಾಪಿಸಿದ ಗಣೇಶನನ್ನು ನೋಡಲು ಜನ ಹೋಗುವುದು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಭರದಿಂದ ನಡೆಯುತ್ತಿವೆ.
ನಮ್ಮ ಬಾಲ್ಯದಲ್ಲಿ ಹಳೆ ದಾವಣಗೆರೆ ಭಾಗದಲ್ಲಿನ ಗಣೇಶೋತ್ಸವದ ಸ್ವಾರಸ್ಯ…
ಮಂಗಳಾರತಿ ಪ್ರಾರಂಭವಾಯಿತು. `ಆರತಿ ಹಾಡನ್ನು ನೀನೇ ಹೇಳಪ್ಪಾ’ ಎಂದು ಹೆಡ್ ಮಾಸ್ಟರ್ ಮಹಾಲಿಂಗಪ್ಪ ರಾಜುಗೆ ಹೇಳಿದರು. ರಾಜು ಪ್ರಾರಂಭ ಮಾಡಿದ. `ಮಾಡೂವೆನಾರುತಿಯಾ ಶ್ರೀರಾಮಚಂದ್ರಗೀಗಾ, ಬೆಳಗೂವೆನಾರುತೀಯ. ಗುರು ವಿಶ್ವಮಿತ್ರ ಕರೆದಾ, ಲಕ್ಷ್ಮಣನ ಕೂಡಿ ಹೋದ. ರಾಕ್ಷಸನ ರಾಮ ಕೊಂದಾ, ತಾನೊಂದೇ ಬಾಣದಿಂದ..’ ಆರತಿ ಹಾಡಿಗೆ ಎಲ್ಲರೂ ತಲೆದೂಗುತ್ತಿದ್ದರು. ರಾಜು ಆರತಿ ಹಾಡನ್ನು ಮುಂದುವರೆಸಿದ.
`ಹಲ್ಲೀಯು ಶಾಪದಿಂದಾ, ಹೋದಾಳು ಮುಕ್ತಿಯಿಂದ, ಬಾರೋ ಶ್ರೀರಾಮ ಬಾರೋ, ನೀ ಎಮಗೆ ದಯವ ತೋರೋ, ಮಾಡೂವೆನಾರುತೀಯ ಶ್ರೀರಾಮಚಂದ್ರಗೀಗ, ಬೆಳಗೂವೆನಾರುತೀಯ’ ಎಂದು ಮುಗಿಸಿದ.
ಹಾಡಿನಲ್ಲಿ `ಹಲ್ಲೀಯು ಶಾಪದಿಂದಾ, ಹೋದಾಳೊ ಮುಕ್ತಿಯಿಂದ’ ಎಂಬ ಸಾಲಿನ ಬಗ್ಗೆ ಎಲ್ಲರಲ್ಲೂ ಗೊಂದಲ ಉಂಟಾಯಿತು. ಏನಿದು? ರಾಮಾಯಣಕ್ಕೂ ಹಲ್ಲಿ ಶಾಪಕ್ಕೂ ಏನು ಸಂಬಂಧ? ರಾಮಾಯಣದಲ್ಲಿ ಹಲ್ಲಿ ಶಾಪದ ಪ್ರಸಂಗ ಎಲ್ಲಿ ಬರುತ್ತದೆ? ಮೇಷ್ಟ್ರುಗಳು ಒಬ್ಬರನ್ನೊಬ್ಬರು ಕೇಳಿದರು. ಬಗೆ ಹರಿಯಲಿಲ್ಲ. `ಏನಲೇ ಅದು ಹಲ್ಲಿ ಶಾಪ?!’ ರಾಜುವನ್ನೇ ಕೇಳಿದರು. `ಅದು ಹಂಗೇ ಇರೋದು ಸಾ’ ಎಂದ ರಾಜು. `ಲೇ ಏನರಾ ಹಿಂದೆ ಮುಂದೆ ಸಾಲು ಬಿಟ್ಟೀಯೆನಲೇ, ನೆನಪು ಮಾಡ್ಕೊಂಡು ಹೇಳಲೇ’ ಎಂದರು. ರಾಜು ನೆನಪು ಮಾಡಿಕೊಂಡು ಹೇಳಿದ. `ಗೌತಮರ ಬಳಿಗೆ ಹೋದಾ, ಕಲ್ಲನ್ನು ಮೆಟ್ಟಿನಿಂದ. ಹಲ್ಲಿಯೂ ಶಾಪದಿಂದಾ, ಹೋದಾಳು ಮುಕ್ತಿಯಿಂದ..’ ತಕ್ಷಣ ಎಲ್ಲರಿಗೂ ಅರ್ಥವಾಯ್ತು. ಗೊಳ್ಳೆಂದು ನಕ್ಕರು. ರಾಜುವನ್ನು ಹತ್ತಿರ ಕರೆದು ಹೇಳಿದರು. `ಲೇ ಅದು ಹಲ್ಲೀಯು ಶಾಪದಿಂದ ಅಲ್ಲ ಕಣಲೇ, ಅಹಲ್ಯೇಯು ಶಾಪದಿಂದಾ ಅಂತ ಹೇಳ್ಬೇಕಲೇ, ಅಹಲ್ಯನ್ನ ತಗೊಂಡು ಹೋಗಿ ಹಲ್ಲಿ ಮಾಡಿದ್ಯಲ್ಲಪ್ಪ!!’ ಎಂದರು.
– ಹೆಚ್.ಬಿ.ಮಂಜುನಾಥ, ಹಿರಿಯ ಪತ್ರಕರ್ತ