ಸಾಧನೆಯ ಮಹಾಮೇರು ಜಗದ್ಗುರು ವಾಗೀಶ ಪಂಡಿತಾರಾಧ್ಯರು

ಸಾಧನೆಯ ಮಹಾಮೇರು ಜಗದ್ಗುರು ವಾಗೀಶ ಪಂಡಿತಾರಾಧ್ಯರು

ಶ್ರೀಗಳವರ ಪುಣ್ಯಸ್ಮರಣೆ ಪ್ರಯುಕ್ತ ಕಿರು ಲೇಖನ

ವೀರಶೈವ ಧರ್ಮ ಪೀಠಗಳಲ್ಲಿ ಒಂದಾದ ಶ್ರೀ ಶೈಲ ಸೂರ್ಯ ಸಿಂಹಾಸನ ಪೀಠವು ಆಂಧ್ಯಪ್ರದೇಶದ  ಶ್ರೀ ಶೈಲಂನಲ್ಲಿ ನೆಲೆಗೊಂಡು ಜನತೆಯಲ್ಲಿ ತುಂಬಿಕೊಂಡಿರುವ ಅಜ್ಞಾನಾಂಧಕಾರವನ್ನು ಹೊಡೆದು ಹಾಕಿ,  ಸುಜ್ಞಾನದ ಬೆಳಕನ್ನು ತುಂಬಿದ ಮಹಾಪೀಠವಾಗಿದೆ. 

ಆದಿ ಜಗದ್ಗುರು ಪಂಡಿತಾರಾಧ್ಯರು ಶಿವನ ಆಜ್ಞೆ ಯಂತೆ ಶ್ರೀ  ಶೈಲ ಮಹಾಕ್ಷೇತ್ರದ ಶ್ರೀ ಮಲ್ಲಿಕಾರ್ಜುನನ ಮಹಾಜ್ಯೋರ್ತಿಲಿಂಗ ಮುಖದಿಂದ ದಿವ್ಯ ದೇಹಿಯಾಗಿ ಜನಿಸಿ,  ಶಿವಾದ್ವೈತ ಸಿದ್ದಾಂತವನ್ನು ಸಂಸ್ಥಾಪಿಸಿ ಶಿವನ ಸ್ವರೂಪವಾದ ಇಷ್ಟಲಿಂಗವನ್ನು ಎಲ್ಲಾ ಮಾನವರಿಗೂ ಅನುಗ್ರಹಿಸಿ ಶಿವ  ಸೂತ್ರಾದಿ ರಹಸ್ಯಗಳನ್ನು ಉಪದೇಶಿಸಿ ಈ ನಾಡನ್ನು ಬೆಳಗಿದವರಾಗಿದ್ದಾರೆ. 

ಶ್ರೀಶೈಲ ಪೀಠದ ಇತಿಹಾಸದಲ್ಲಿ ಶ್ರೀ ಪತಿ ಪಂಡಿತಾ ರಾಧ್ಯರು ಮತ್ತು ಶ್ರೀ ಮಲ್ಲಿಕಾರ್ಜುನ ಪಂಡಿತಾರಾಧ್ಯರು  ಭಾರತದಲ್ಲೆಡೆ ಸಂಚರಿಸಿ ತಮ್ಮ ಜ್ಞಾನದ ವರ್ಚಸ್ಸು ಮತ್ತು ತಪೋ ಬಲದಿಂದ ವೀರಶೈವ ಧರ್ಮ ವನ್ನು ಮತ್ತಷ್ಟು  ಉತ್ತುಂಗಕ್ಕೆರಿಸಿದ ಕೀರ್ತಿಶಾಲಿಗಳೆನ್ನಿಸಿ ದ್ದಾರೆ.  ಕದಂಬ, ಚಾಲುಕ್ಯ, ರಾಷ್ಟ್ರಕೂಟ ಹಾಗೂ ವಿಜಯನಗರದ ಅರಸು ಮನೆತನಗಳು ಶ್ರೀ ಶೈಲ ಸೂರ್ಯಪೀಠಕ್ಕೆ ಅನೇಕ ದಾನ ದತ್ತಿಗಳನ್ನು ನೀಡುವ ಮೂಲಕ ಪರಮ ಪೀಠಾಚಾರ್ಯರ ಮಹಿಮೆಗೆ ತಲೆಬಾಗಿ ಅವರನ್ನು ತಮ್ಮ  ಆರಾಧ್ಯ ದೈವವನ್ನಾಗಿಸಿಕೊಂಡವರಾಗಿದ್ದಾರೆ. ಇಂತಹ ಪರಂಪರೆ ಯುಳ್ಳ ಮಹಾಪೀಠಕ್ಕೆ “ಸ್ವರ್ಣಯುಗ” ವನ್ನು ಬರೆದು  ಅದನ್ನು ದಾಖಲಿಸಿದ ಕೀರ್ತಿ ಲಿಂ, ಜಗದ್ಗುರು ಶ್ರೀ ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರಿಗೆ ಸಲ್ಲುತ್ತದೆ. 

ಶ್ರೀ ಜಗದ್ಗುರು ವಾಗೀಶ ಪಂಡಿತಾರಾಧ್ಯ ಭಗವತ್ಪಾದರು 1908ರಲ್ಲಿ  ರಾಣೆಬೆನ್ನೂರು ತಾಲ್ಲೂಕಿನ ಮುದೇನೂರು ಗ್ರಾಮದ ಹಿರೇಮಠದ ವೇ|| ಶ್ರೀ ಬಸವಯ್ಯ ಸ್ವಾಮಿ ಮತ್ತು ಶ್ರೀಮತಿ  ರುದ್ರಮ್ಮಾಂಭೆ ಅವರ ಪುಣ್ಯ ಗರ್ಭದಲ್ಲಿ ಜನಿಸಿ ಚಿಕ್ಕಂದಿನಲ್ಲಿಯೇ ವೀರಶೈವಧರ್ಮ ಸಂಸ್ಕಾರಗಳನ್ನು  ಮೈಗೊಡಿಸಿಕೊಂಡು ಸಿದ್ದಾಂತ ಶಿಖಾಮಣ , ಯೋಗಶಾಸ್ತ್ರ, ವೇದೋಪನಿಷತ್ ಹಾಗೂ ವಚನ ಸಾಹಿತ್ಯವನ್ನು  ಆಳವಾಗಿ ಅಭ್ಯಾಸಿಸಿ ಆಗಾಧ ಪ್ರತಿಭೆಯ ಪ್ರಭೆಯನ್ನು ತಮ್ಮದಾಗಿಸಿಕೊಂಡವರು. ಶ್ರೀ ಉಜ್ಜಯಿನಿ ಸದ್ದರ್ಮ ಪೀಠದ ಲಿಂ. ಸಿದ್ದಲಿಂಗ ಶಿವಾಚಾರ್ಯ ಭಗವತ್ಪಾದರ ಕೃಪಕಾರುಣ್ಯಕ್ಕೆ ಪಾತ್ರರಾಗಿ ಅವರ ಮಾರ್ಗದರ್ಶನದಲ್ಲಿ ಬೆಳೆದವರು.  ಕಾಶಿ ಪೀಠದಲ್ಲಿ ಹೆಚ್ಚಿನ ವೀರಶೈವ ಸಿದ್ದಾಂತವನ್ನು ಮತ್ತು ಭಾರತೀಯ ಸನಾತನ ಧರ್ಮ ಸಂಸ್ಕೃತಿಯ ಅಧ್ಯಯನವನ್ನು  ಕೈಗೊಂಡು ವಿದ್ವಾತ್‌ಪೂರ್ಣ ಜ್ಞಾನವನ್ನು ಸಂಪಾದಿಸಿ ವಿದ್ಯಾನಿಧಿಯಾಗಿ ಹೊರಹೊಮ್ಮಿದವರು ಪಾಳಿ, ಪಾರ್ಸಿ,  ಸಂಸ್ಕೃತ, ಬಂಗಾಳಿ, ಹಿಂದಿ, ಉರ್ದು, ಕನ್ನಡ, ತೆಲುಗು, ಭಾಷೆಗಳನ್ನು ಕಲಿತು ಅವುಗಳಲ್ಲಿ ನಿರರ್ಗಳವಾಗಿ  ಮಾತನಾಡುತ್ತ ಪ್ರವಚನ ನೀಡುವ ಪರಿ ತುಂಬಾ ಅದ್ವಿತೀಯವಾಗಿರುತಿತ್ತು. ಅಂತಹ ಮಹಾಮಹಿಮರು  ದಿನಾಂಕ: 07.07.1940 ರಲ್ಲಿ ಶ್ರಿ ಶೈಲ ಪೀಠದ ಅಧಿಪತ್ಯವನ್ನು ವಹಿಸಿಕೊಂಡು ಶ್ರೀ ಪೀಠದ ಅಭಿವೃದ್ಧಿಗಾಗಿ  ಹಗಲಿರುಳು ಶ್ರಮಿಸಿ ಶ್ರೀ ಪೀಠವನ್ನು ಉತ್ತುಂಗಕ್ಕೆರಿಸಿದ ಧೀರೋದಾತರು. ಶ್ರೀ ಭಗವತ್ಪಾದರು ರಾಷ್ಟ್ರಭಕ್ತಿ ಮತ್ತು  ರಾಷ್ಟ್ರಪ್ರೇಮಗಳಲ್ಲಿ ಮೇಲ್ಪಂಕ್ತಿ ಹಾಕಿದವರು. 

ದೇಶದ ಸ್ವಾತಂತ್ರ್ಯ ಸಮರದಲ್ಲಿ ಭಾಗವಹಿಸಿ ಮಹಾತ್ಮ ಗಾಂಧೀಜಿಯವರ  ಪ್ರೀತಿ – ಗೌರವಕ್ಕೆ ಪಾತ್ರ ರಾದವರು ಅಂತಹ ಮಹಾನ್ ವ್ಯಕ್ತಿತ್ವದ ಎದುರಿಗೆ ಅಂದಿನ ರಾಷ್ಟ್ರಪತಿಗಳಾದ ಡಾ|| ಬಾಬು  ರಾಜೇಂದ್ರ ಪ್ರಸಾದ್, ಡಾ|| ಎಸ್ ರಾಧಕೃಷ್ಣನ್ ಇನ್ನೂ ಅನೇಕರು ರಾಜ ಕೀಯ ಮಾರ್ಗದರ್ಶನ ಪಡೆದಿದ್ದಾರೆ. 

ಶ್ರೀ ವಾಗೀಶ ಪಂಡಿತಾರಾಧ್ಯ ಭಗವತ್ಪಾದರು ಸಮನ್ವಯ ಸಮತೋಲನದ ಸಮಗ್ರ ದೃಷ್ಟಿಯುಳ್ಳವರಾಗಿ ಎಲ್ಲಾ ಜಾತಿ-ಮತ-ಪಂಥಗಳೊಂದಿಗೆ ಸಮರಸವನ್ನು ಸಾಧಿಸಿ ತಮ್ಮ ಘನ ವ್ಯಕ್ತಿತ್ವವನ್ನು ರೂಪಿಸಿಕೊಂಡವರಾಗಿ ದ್ದರು. ಬೆಳಗು ಪಂಚಾಚಾರ್ಯ ತತ್ವವೇ ಬೆಳಗು ಬಸವನ ಭಕ್ತಿ ತತ್ವವೇ ಎಂಬ ಅವರ ಕವಿತೆಯ ಸಾಲು ವೀರಶೈವ-ಲಿಂಗಾಯತ ಕವಲುದಾರಿಯನ್ನು ಒಗ್ಗೂಡಿಸುವ ದಾರಿದೀಪದಂತಿರುವುದುಸಹ ಬಹು  ವಿಶೇಷವಾಗಿದೆ. 

ಶ್ರೀ ಭಗವತ್ಪಾದರು ಬುದ್ದಿ-ಮನಸ್ಸುಗಳನ್ನು ತಿದ್ದುವು ದಲ್ಲದೆ ಶರೀರವನ್ನು ಸದೃಢವಾಗಿಸುವ ಕಲೆಯನ್ನು  ಕರಗತ ಮಾಡಿಕೊಂಡು ವೈದ್ಯ ವಿದ್ಯೆಯಲ್ಲಿ ಧನ್ವಂತರಿಗಳಾಗಿ ನಾಡಿನ ಲಕ್ಷಾಂತರ ಅನಾರೋಗ್ಯ ಪೀಡಿತರಿಗೆ  ದಿವ್ಯೌಷಧಿಯಾಗಿ ಹಾಗೂ ಉತ್ತಮ ಸಂಜೀವಿನಿಯಾಗಿ ಕಾರ್ಯ ನಿರ್ವಹಿಸುವುದರೊಂದಿಗೆ ಆರೋಗ್ಯಕ್ಕೆ ಸಂಬಂಧಿಸಿದ  ಹತ್ತಾರು ಗ್ರಂಥಗಳನ್ನು ರಚಿಸಿ ಅವುಗಳನ್ನು ಇಂದಿನ ವೈದ್ಯ ಪೀಳಿಗೆಗೆ ಹಸ್ತಾಂತರಿಸಿದ್ದಾರೆ.  

ಹೀಗೆ ಭಕ್ತರನ್ನು ಬೆಳಕಿನೆಡೆಗೆ ಕರೆತಂದು ಜ್ಞಾನ-ಕ್ರಿಯೆಗಳನ್ನು ಧಾರೆಯೆರೆದು ಶ್ರೀ ಶೈಲ ಪೀಠಕ್ಕೆ ಶಕ್ತಿ  ತುಂಬಿದ ಜ್ಞಾನ ಸೂರ್ಯಸಿಂಹಾಸನಾಧೀಶರಾದ ಶ್ರೀ ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಭಕ್ತರ  ಹೃದಯದಲ್ಲಿ ಸಾಧನೆಯ ಮಹಾಮೇರುವೆಂದೇ ಅಭಿದಾನವನ್ನು ಪಡೆದು 16.09.1986ರ ಭಾದ್ರಪದ ಶುದ್ದ  ದ್ವಾದಶಿಯಂದು ಲಿಂಗಾಂಗ ಸಾಮರಸ್ಯದಲ್ಲಿ ಒಂದಾಗಿ ತಮ್ಮ ಚಿತ್ಪ್ರಭೆಯನ್ನು ಹಾಗೇ ಉಳಿಸಿಕೊಂಡವರು. 

ಶ್ರೀ ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರ ಪೂಜಾಫಲ, ತಪೋಬಲ ಹಾಗೂ ದಿವ್ಯ ದೃಷ್ಠಿ ಯೋಗದ ಫಲವಾಗಿ ಶ್ರೀ ಉಜ್ಜಯಿನಿ ಸದ್ದರ್ಮ ಪೀಠ ಹಾಗೂ ಶ್ರೀ ಶೈಲ ಸೂರ್ಯ ಪೀಠಕ್ಕೆ ಪ್ರಸ್ತುತ ಸಮರ್ಥ  ಪರಮ ಪೀಠಾಚಾರ್ಯರಾಗಿ ಕಾರ್ಯನಿರ್ವ ಹಿಸುತ್ತಿರುವ ಶ್ರೀ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ  ಭಗವತ್ಪಾದರು ಮತ್ತು ಶ್ರೀ ಜಗದ್ಗುರು ಡಾ|| ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಶ್ರೀ  ಭಗವತ್ಪಾದರ ಬದುಕು-
ಬರಹ, ನೆನಹು- ನಮನ ಕಾರ್ಯಕ್ರಮಗಳನ್ನು ಆಯೋಜಿಸುವ ಮುಖೇನ  ಸ್ಮರಣಾರಾಧನೆಯನ್ನು ಆಚರಿಸುತ್ತಿರುವುದು ಈ ನಾಡಿನ ಪುಣ್ಯವೇ ಆಗಿದೆ. 

– ನಿರಂಜನ ದೇವರಮನೆ, ಚಿತ್ರದುರ್ಗ.

error: Content is protected !!