ಚತುರ್ಥಿಯಂದು ಸ್ಥಾಪಿಸಿದ ಗಣೇಶನನ್ನು ನೋಡಲು ಜನ ಹೋಗುವುದು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಭರದಿಂದ ನಡೆಯುತ್ತಿವೆ.
ನಮ್ಮ ಬಾಲ್ಯದಲ್ಲಿ ಹಳೆ ದಾವಣಗೆರೆ ಭಾಗದಲ್ಲಿನ ಗಣೇಶೋತ್ಸವದ ಸ್ವಾರಸ್ಯ…
ಅನೇಕ ದಶಕಗಳ ಹಿಂದೆ ದಾವಣಗೆರೆಯಲ್ಲಿ ಪ್ರತಿಷ್ಠಿತ ಗಣೇಶೋತ್ಸವವೆಂದರೆ ಹಳೆಯ ನಗರದ ದೊಡ್ಡಪೇಟೆಯ ಶ್ರೀ ಗಣೇಶ ದೇವಸ್ಥಾನದ್ದು. ಬೇತೂರು ಚನ್ನಬಸಪ್ಪ, ಬಳ್ಳಾರಿ ಶಿವಯೋಗಪ್ಪ, ಬೆಳಗಾವಿ ಗುರುಬಸಪ್ಪ, ಪಲ್ಲಾಗಟ್ಟೆ ಬಸಣ್ಣ, ಟಿ.ಜಿ.ಷಡಕ್ಷರಪ್ಪ, ಮುಂಡಾಸ್ ವೀರಭದ್ರಪ್ಪ, ಹಳ್ಳಳ್ಳಿ ಗುರುಸಿದ್ದಪ್ಪ ಮುಂತಾದ ಆ ಭಾಗದ ದೊಡ್ಡಪೇಟೆ ಹಾಗೂ ಕಾಯಿಪೇಟೆಯ ಗಣ್ಯರುಗಳು ಸೇರಿ ಅದ್ದೂರಿ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದ್ದರು.
ಈಗ ಎ.ಜಿ.ಮಂಜುನಾಥ್, ನಿಜಗುಣರು, ರವಿಶಂಕರ್ ಮುಂತಾದವರು ಚೆನ್ನಾಗಿ ನಡೆಸಿಕೊಂಡು ಬರುತ್ತಿದ್ದಾರೆ.
ಆಗಿನ ಕಾಲದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಲು ಶಾಸ್ತ್ರೀಯ ಸಂಗೀತ ಕ್ಷೇತ್ರದ ದಿಗ್ಗಜಗಳಾದ ಡಾ. ಎಂ.ಬಾಲಮುರಳಿ ಕೃಷ್ಣ, ಪಂಡಿತ್ ಬಸವರಾಜ ರಾಜಗುರು, ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್, ಪಂಡಿತ ಪುಟ್ಟರಾಜ ಗವಾಯಿಗಳು, ಲತಾ ಮಂಗೇಶ್ಕರ್ ರವರ ತಂಗಿ ಉಷಾ ಖಾಡಿಲ್ಕರ್, ಗಂಗೂಬಾಯಿ ಹಾನಗಲ್‌ರ ಪುತ್ರಿ ಕೃಷ್ಣಾ ಹಾನಗಲ್, ಸುಗಮ ಸಂಗೀತದ ಮೈಸೂರ್ ರಂಗಸ್ವಾಮಿ, ಭಾರತೀಶ್, ಕೀರ್ತನಕಾರರಾದ ಚಿತ್ತರಗಿ ಗಂಗಾಧರ ಶಾಸ್ತ್ರಿ, ಜಾನಪದ ವಿದ್ವಾಂಸರಾದ ತರೀಕೆರೆ ಲಿಂಗಪ್ಪ, ನಾಟ್ಯಾಚಾರ್ಯ ಶ್ರೀನಿವಾಸ ಕುಲಕರ್ಣಿ ತಂಡ ಮುಂತಾದವರಿಂದ ಅಮೂಲ್ಯವಾದ ಸಂಗೀತ ನೃತ್ಯ ಕೀರ್ತನಾದಿಗಳು ಶ್ರೀ ಗಣೇಶೋತ್ಸವದಲ್ಲಿ ಜರುಗುತ್ತಿದ್ದವು, ಕಿಕ್ಕಿರಿದು ಜನ ಸೇರುತ್ತಿದ್ದರು.
ವಿಸರ್ಜನೆಯ ದಿನವಂತೂ ಕೀಲು ಕುದುರೆ ನೃತ್ಯ ನೋಡಲು ಪರ ಊರುಗಳಿಂದಲೂ ಜನ ಧಾವಿಸಿ ಬರುತ್ತಿದ್ದರು. ಈ ಬಗ್ಗೆ ಸ್ವಾರಸ್ಯವನ್ನು ಮುಂದಿನ ಲೇಖನದಲ್ಲಿ ಹೇಳುತ್ತೇನೆ.
ದಶಕಗಳ ಹಿಂದೆ ಕಲಾವಿದರಿಗೆ ಕೊಡುತ್ತಿದ್ದ ಸಂಭಾವನೆ ಸುಮಾರು 400 ರೂಪಾಯಿಗಳ ಆಸು ಪಾಸಿನಲ್ಲಿ ಇರುತ್ತಿತ್ತು, ಆಗ ಅದೇ ದೊಡ್ಡ ಮೊತ್ತ. ಅತಿ ದೊಡ್ಡ ಸಂಭಾವನೆ ಕೊಟ್ಟಿದ್ದೆಂದರೆ ಬಾಲಮುರಳಿ ಕೃಷ್ಣರಿಗೆ ಆ ಕಾಲದಲ್ಲಿ 1,600 ರೂಪಾಯಿ !!
ಆಕಾಶವಾಣಿ ಧಾರವಾಡ ಕೇಂದ್ರದ ಸುಪ್ರಸಿದ್ಧ ಸುಗಮ ಸಂಗೀತ ಗಾಯಕಿ ಅನುರಾಧ ಧಾರೇಶ್ವರ್ ಅನೇಕ ಬಾರಿ ಈ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಲತಾ ಮಂಗೇಶ್ಕರ್ ರವರು ಹಾಡಿದ `ಏ ಮೇರೆ ವತನ್ ಕೆ ಲೋಗೋ…’ ಹಾಡನ್ನು ಅದೇ ರಾಗ ಅದೇ ಧಾಟಿಯಲ್ಲಿ ಕನ್ನಡದಲ್ಲಿ `ಓ ಎನ್ನ ದೇಶ ಬಾಂಧವರೇ ಕಂಬನಿಗಳೆರಾ ಸುರಿಸಿ, ಪ್ರಾಣಾರ್ಪಣೆಗೈದಾ ಅವರಾ ಸಂಸ್ಮರಿಸಿರಿ ಆ ಬಲಿದಾನ…’ ಎಂಬುದಾಗಿ ಅನುರಾಧಾರೇಶ್ವರ ಹಾಡುವಾಗ ಎಲ್ಲರೂ ಕಣ್ಣು ತುಂಬಿ ತಲೆದೂಗುತ್ತಿದ್ದರು.
ಅನೇಕ ದಶಕಗಳ ಹಿಂದೆ ದಾವಣಗೆರೆಯಲ್ಲಿ ಪ್ರತಿಷ್ಠಿತ ಗಣೇಶೋತ್ಸವವೆಂದರೆ ಹಳೆಯ ನಗರದ ದೊಡ್ಡಪೇಟೆಯ ಶ್ರೀ ಗಣೇಶ ದೇವಸ್ಥಾನದ್ದು.
ಸುಮಾರು 55 ವರ್ಷಗಳ ಹಿಂದಿರಬಹುದು ಅನುರಾಧ ಧಾರೇಶ್ವರರ ಒಂದು ವಿಡಂಬನಾತ್ಮಕ ಹಾಡನ್ನು ಹಾಡುವಾಗ ನಡೆದ ಸ್ವಾರಸ್ಯವೆಂದರೆ, ಆ ಹಾಡು ಹೀಗಿತ್ತು `ಸುಳ್ಳು ಹೇಳಿದರು ಸುಖವೈತಿ, ಸುಲಿಗೆ ಮಾಡಿದರು ನಡಿತೈತಿ, ಮೋಸ ಮಾಡಿದರು ದಕ್ಕುತೈತಿ, ಯಾಕಂತೀ, ನಿನ್ ಹಂತಕ ದುಡ್ಡ್ ಐತಿ.. ಮುದುಕನಾದರೂ ಮದುವೈತಿ, ತಲೆಯ ಬಿಳುಪಿಗೂ ಕಪ್ ಐತಿ, ಗೋರಿಗ್ ಹೋಗೋ ಮುದಿ ಗೂಬೆಯಾದರೂ ಹಾರಿ ಕುಣಿವ ಹರೆ ಬರುತೈತಿ..’ ಈ ಹಾಡು ಹಾಡುತ್ತಿದ್ದರು. ಅದೇ ವೇಳೆಗೆ ಸರಿಯಾಗಿ ಪ್ರಸಿದ್ಧ ಕಿರಾಣಿ ವರ್ತಕರಾಗಿದ್ದ ಆ ಭಾಗದಲ್ಲಿ ವಾಸವಾಗಿದ್ದ ವಯೋವೃದ್ಧ ಸಂಸಿ ವೀರಪ್ಪನವರು ವೇದಿಕೆ ಮುಂಭಾಗದಿಂದಲೇ ಸಭಾ ಪ್ರವೇಶ ಮಾಡಿದರು.
ವೀರಪ್ಪನವರಿಗೆ ಮುದಿತನ ಹತ್ತಿರವಾಗಿತ್ತು, ತಲೆ ಕೂದಲು ಬಿಳುಪಾಗಿತ್ತು, ಮಂಡಿ ನೋವು ಏನೋ ಇದ್ದುದರಿಂದ ಅವರು ನಡೆಯುವಾಗ ಕಾಲನ್ನು ಸ್ವಲ್ಪ ಎತ್ತಿ ಹಾಕುತ್ತಿದ್ದರು. ಅದು ಒಂದು ರೀತಿ ಹಾರಿ ಕುಪ್ಪಳಿಸುವಂತೆಯೂ ಕಾಣುತ್ತಿತ್ತು. ಕಾಕತಾಳೀಯವೆಂಬಂತೆ ಹೇಳುತ್ತಿದ್ದ ಹಾಡಿಗೂ ವೀರಪ್ಪನವರ ಸ್ಥಿತಿಯನ್ನೂ ಗಮನಿಸಿದ ಕುಳಿತ ಸಹಸ್ರಾರು ಜನರು ಚಪ್ಪಾಳೆ ಹೊಡೆದು ಕೆಲವರು ಶಿಳ್ಳೆ ಹಾಕಿ, ಕೆಲವರು ಕೇಕೆ ಹಾಕಿ `ವೀರಪ್ಪೋರೆ ನಿಮಗೇ ಹೇಳ್ತಿರಂಗೈತಿ’ ಎಂದರು. ಇನ್ನಾರೇ ಆಗಿದ್ದರೂ ಕೋಪಗೊಳ್ಳುತ್ತಿದ್ದರು ಅಥವಾ ಬೇಸರಗೊಳ್ಳುತ್ತಿದ್ದರು. ಆದರೆ, ಸಂಸಿ ವೀರಪ್ಪನವರು ಅಂತವರಲ್ಲ. ಸಹೃದಯರು ಸಮಾಧಾನಿಗಳು ಅಷ್ಟೇ ಹಾಸ್ಯ ಪ್ರಜ್ಞೆಯನ್ನೂ ಉಳ್ಳವರು.
ಸಾವಧಾನವಾಗಿ ಸಭೆಗೆ ಬಂದು ಕುಳಿತು ಜೇಬಿನಿಂದ ಐದು ರೂಪಾಯಿ ನೋಟನ್ನು ತೆಗೆದು ಹಾಡನ್ನು ಮೆಚ್ಚಿದ ಉಡುಗೊರೆ ಯಾಗಿ ಹಾಡುಗಾರ್ತಿ ಅನುರಾಧಾರಿಗೆ ಕಳಿಸಿಕೊಟ್ಟರು. ಈ ಸ್ವಾರಸ್ಯವನ್ನೆಲ್ಲಾ ಹಾಡುತ್ತಲೇ ಗಮನಿಸುತ್ತಿದ್ದ ಅನುರಾಧಾರವರು ನಗುತ್ತಲೇ ವೀರಪ್ಪನವರಿಗೆ ಕೈ ಮುಗಿದು ಗೌರವದಿಂದ ಅದನ್ನು ಸ್ವೀಕರಿಸಿದರು.
ಸಭೆಯಲ್ಲಿದ್ದ ಜನರೆಲ್ಲರೂ ವೀರಪ್ಪನವರ ಈ ನಡೆಯನ್ನು ಮೆಚ್ಚಿ ಚಪ್ಪಾಳೆ ತಟ್ಟಿದರು. ಒಬ್ಬರಂತೂ `ವೀರಪ್ಪ ಯು ಆರ್ ಗ್ರೇಟ್’ ಎಂದರು. ಆಗಿನ ಐದು ರೂಪಾಯಿ ಎಂದರೆ ಈಗಿನ ಒಂದು ಸಾವಿರ ರೂಪಾಯಿಗೂ ಹೆಚ್ಚಿನ ಮೌಲ್ಯದ್ದು. ಆಗ ಒಂದು ತೊಲ ಬಂಗಾರಕ್ಕೆ 300 ರೂಪಾಯಿ ಇತ್ತು. ಅನುರಾಧ ರವರು ಹಾಡಿನ ಕೊನೆಯ ಚರಣವಾದ `ಇಲ್ಲೇನೇನೋ ಆಗೈತಿ, ಅಲ್ಲಾಗೋದೇ ಉಳಿದೈತಿ, ಯಮ ಬಂದ ಹಗ್ಗ ಹಿಡಿದ ರೊಕ್ಕ ಕೊಟ್ರೆ ಅದು ತಪ್ಪೀತೇ, ಏನ್ ಅಂತೀ, ಭಲೇ ಇದು ಖರೆ ಐತಿ’ ಎಂದು ಮುಗಿಸಿದರು. ಸಂಸಿ ವೀರಪ್ಪನವರು ನಿಜಕ್ಕೂ ದೊಡ್ಡವರು ದೊಡ್ಡ ಮನಸ್ಸಿನವರು.
– ಹೆಚ್.ಬಿ.ಮಂಜುನಾಥ, ಹಿರಿಯ ಪತ್ರಕರ್ತ