ಗುರು ಎಂದರೆ ಭಾರತೀಯ ಧರ್ಮಗಳಲ್ಲಿ ಶಿಕ್ಷಕ ಅಥವಾ ಮಾಸ್ಟರ್ ಎಂದು. ಹಾಗೆಯೇ ಹಿಂದೂ ಧರ್ಮ ದಲ್ಲಿ ಗುರು-ಶಿಷ್ಯ ಪರಂಪರೆಯಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗೆ ಹರಡುವ ಮೌಖಿಕ ಸಂಪ್ರದಾಯ ಅಥವಾ ಧಾರ್ಮಿಕ ಸಿದ್ದಾಂತ ಅಥವಾ ಅನುಭವದ ಜಾಣ್ಮೆ ಹೊಂದಿದವರು ಎಂದರ್ಥ.
ಪ್ರಾಮಾಣಿಕ ವಿಚಾರಣೆ, ವಿನಮ್ರ ಗೌರವವನ್ನು ಸ್ವತಃ ಅರಿತು ಅಲೌಕಿಕ ಜ್ಞಾನವನ್ನು ಪಡೆದು, ಸತ್ಯದ ಅರಿವಿನಲ್ಲಿ ಸೇವೆ ಮಾಡುವ ಜ್ಞಾನಿಯನ್ನು ಹಿಂದೂ ಸಂಪ್ರದಾಯದಲ್ಲಿ ಗುರು ಅಥವಾ ಶಿಕ್ಷಕ ಎಂದು ಕರೆಯಲಾಗುತ್ತದೆ.
ಭಾರತೀಯ ಸಂಸ್ಕೃತಿಯಲ್ಲಿ ಅತೀಂದ್ರಿಯ ಜ್ಞಾನವುಳ್ಳ ವ್ಯಕ್ತಿಯಿಂದ ಜ್ಞಾನವನ್ನು, ಜಾಗೃತಿ ದೀಕ್ಷೆಯನ್ನು ಶಿಷ್ಯನಿಗೆ ನೀಡುವವನು ಗುರು, ಗುರು ಎಂಬ ವಿಷಯ ದೈವೀಕತೆಯ ಶಿಕ್ಷಕ ಎಂಬ ಆಲೋಚನೆ ಮೊದಲಿನ ಬ್ರಾಹ್ಮಣ ಸಂಘಟನೆಗಳಿಂದ ಅಭಿವ್ಯಕ್ತಗೊಂಡಿದೆ. ಮಹಾಭಾರತ ಯುದ್ದದಲ್ಲಿ ಅರ್ಜುನನಿಗೆ ಗುರುವಾಗಿ ಕೃಷ್ಣ ಮಾರ್ಗದರ್ಶನ ನೀಡಿದ್ದನು.
ಕಲಿಕೆಯಲ್ಲಿ ಆಸಕ್ತಿ ಇರುವ ಎಲ್ಲರಿಗೂ ಗುರುವೊಬ್ಬ ಬೇಕೇ ಬೇಕು. ಜಗತ್ತಿನಲ್ಲಿ ತಾಯಿ ಹೊರತಾಗಿ ಎಲ್ಲಾ ಸಮಸ್ಯೆಗಳಿಗೂ ದಾರಿದೀಪವಾಗಿ ನಿಲ್ಲಬಲ್ಲ ಸೃಷ್ಮಿ ಎಂದರೆ ಶಿಕ್ಷಕ ಮಾತ್ರ. ವಿದ್ಯೆ, ಜ್ಞಾನ, ಮಾಹಿತಿ ಪಡೆಯಲು ಮತ್ತು ಸರಿ ಯಾವುದು ? ತಪ್ಪು ಯಾವುದು ? ತಿಳಿಹೇಳಲು ಎಲ್ಲ ರಂಗಕ್ಕೂ ಗುರುವಿನ ಅಗತ್ಯ ಇದೆ.
ಸರಳತೆ, ತಾಳ್ಮೆ, ಸಮಗ್ರತೆಯ ಪ್ರತಿರೂಪವಾಗಿ ಶಿಕ್ಷಕರನ್ನು ಹಿಂದೆ ಕಾಣುತ್ತಿದ್ದೆವು, ಶಿಕ್ಷಕರೇ ನಿಜವಾದ ಅನುಕರಣೆಯ ವ್ಯಕ್ತಿಗಳು. ನಮ್ಮ ಜೀವನದಲ್ಲಿ ಧನಾತ್ಮಕ ಚಿಂತನೆಯನ್ನು ಬೆಳೆಸಿ ಸರಿ ಮಾರ್ಗವನ್ನು ತೋರುವವರು. ಇಂತಹ ಶಿಕ್ಷಕರಿಗೆ ಜನ್ಮ ಕೊಟ್ಟ ತಾಯಿ ತಂದೆಗಿಂತ ಹೆಚ್ಚಿನ ಗೌರವ ಸ್ಥಾನ ಲಭಿಸಿದೆ.
`ಮಾತೃದೇವೋಭವ’, `ಪಿತೃದೇವೋಭವ’, `ಆಚಾರ್ಯದೇವೋಭವ’ ಎಂಬ ಉಕ್ತಿ ಮತ್ತು ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರ ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ಎಂದು ಆರಾಧಿಸುತ್ತಾ ಗುರುವನ್ನು ಪ್ರಾಚೀನ ಭಾರತದಲ್ಲಿ ದೈವಾಂಶ ಸಂಭೂತರೆಂದು ಗೌರವಿಸುತ್ತಿದ್ದರು. ಈಗ ಶಿಕ್ಷಕರ ದಿನಾಚರಣೆ ಎಂದು ಆಚರಿಸಲಾಗುತ್ತಿದೆ.
ವಿಶ್ವ ಸಂಸ್ಥೆಯ ಯುನೆಸ್ಕೊ ಕರೆಯ ಮೇರೆಗೆ ಶಿಕ್ಷಕರನ್ನು ಗೌರವಿಸಲು 1996ರಿಂದ ಅಕ್ಟೋಬರ್ 5ರಂದು ವಿಶ್ವ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಹಾಗೆಯೇ ವಿಶ್ವದ ವಿವಿಧ ದೇಶಗಳಲ್ಲಿ ಶಿಕ್ಷಕರ ದಿನಾಚರಣೆಯನ್ನು ಬೇರೆ ಬೇರೆ ದಿನಗಳಲ್ಲಿ ಆಚರಿಸಲಾಗುತ್ತಿದೆ.
ಡಾ|| ಸರ್ವಪಲ್ಲಿ ರಾಧಾಕೃಷ್ಣನ್‌ರವರು, ಜನ್ಮ ದಿನವನ್ನು ಆಚರಿಸಲು ತಮ್ಮ ವಿದ್ಯಾಥಿಗಳು ವಿನಂತಿಸಿದಾಗ, ವಿನಮ್ರವಾಗಿ ತಿರಸ್ಕರಿಸಿ, ರಾಷ್ಟದ ಸರ್ವಾಂಗೀಣ ಪ್ರಗತಿಗೆ ಕಾರಣರಾದ ಶಿಕ್ಷಕರ ಹೆಸರಿನಲ್ಲಿ ಆಚರಿಸಲು ಹೇಳಿದರು. ಅವರ ಸಲಹೆಯಂತೆ ದೇಶಕ್ಕೆ ಕೊಟ್ಟ ಕೊಡುಗೆಗಾಗಿ, ಗೌರವ ಸಂಕೇತವಾಗಿ ಹಾಗು ನಿಸ್ವಾರ್ಥ ಸೇವೆಯ ಕೃತಜ್ಞತೆಗಾಗಿ, ಶಿಕ್ಷಕರು, ಶೈಕ್ಷಣಿಕ ತತ್ವಜ್ಞಾನಿಗಳು ಹಾಗು ಭಾರತದ ಎರಡನೆಯ ರಾಷ್ಟ್ರಪತಿಗಳಾದ ಡಾ|| ಸರ್ವಪಲ್ಲಿ ರಾಧಾಕೃಷ್ಣನ್‌ರವರು ಜನ್ಮ ದಿನವಾದ ಸೆಪ್ಟಂಬರ್ 5 ರಂದು ಶಿಕ್ಷಕರ ದಿನಾಚರಣೆ ಎಂದು 1962ರಲ್ಲಿ ಭಾರತ ಸರ್ಕಾರ ಘೋಷಿಸಿತು. ಅಂದಿನಿಂದ ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತಿದೆ.
`ಶಿಕ್ಷಕರ ದಿನಾಚರಣೆ’ ಯಂದು ಕೃತಜ್ಞತೆಯಿಂದ ಸ್ಮರಿಸಿ ಗೌರವ ಸಲ್ಲಿಸಬೇಕಾದದ್ದು ನಮ್ಮೆಲ್ಲರ ಕರ್ತವ್ಯ. ಶಿಕ್ಷಕರಿಗೆ ಗೌರವಪೂರ್ವಕ ನಮನಗಳೊಂದಿಗೆ ಶಿಕ್ಷಕರ ದಿನಾಚರಣೆಯ ಗೌರವಪೂರ್ವಕ ಶುಭಾಶಯಗಳು.
-ಎಸ್.ಸಿದ್ದೇಶ್ ಕುರ್ಕಿ
ಬೋಧಕರು, ಬಾಪೂಜಿ ಇಂಜಿನಿಯರಿಂಗ್ ಕಾಲೇಜು, ದಾವಣಗೆರೆ.