ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ ನಗರವು ಒಂದು ಕಾಲದಲ್ಲಿ “ಕರ್ನಾಟಕದ ಮ್ಯಾಂಚೆಸ್ಟರ್” ಎಂಬ ಹೆಸರಿಗೆ ಪಾತ್ರವಾಗಿತ್ತು. ಹತ್ತಾರು ಹತ್ತಿಗಿ ರಣಿಗಳಿದ್ದು, ಹತ್ತಾರು ಸಾವಿರ ಜನ ಕಾರ್ಮಿಕರು ದುಡಿಯುತ್ತಿದ್ದ ಕಾಲವೂ ಇತ್ತು. ಕಾರಣಾಂತರಗಳಿಂದ ಒಂದೊಂದಾಗಿ ಹತ್ತಿ ಗಿರಣಿಗಳು ಸ್ಥಗಿತಗೊಂಡು, ಕಾರ್ಮಿಕರು ಬೀದಿ ಪಾಲಾದ ಕಥೆ – ವ್ಯಥೆ ತಂದಿತು.
ಇಂತಹ ಸಂದರ್ಭದಲ್ಲಿ ಕೈಗಾರಿಕಾ ನಗರವನ್ನು ಶೈಕ್ಷಣಿಕ ನಗರಿಯನ್ನಾಗಿ ಮಾಡಿದ ಕೀರ್ತಿ ಬಾಪೂಜಿ ವಿದ್ಯಾಸಂಸ್ಥೆಗೆ ಸೇರುತ್ತದೆ. ಲಕ್ಷಾಂತರ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆದು ದೇಶ – ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ . ಕೈಗಾರಿಕಾ ಕ್ಷೇತ್ರದಲ್ಲಿ ದಾವಣಗೆರೆ ಹಿನ್ನಡೆ ಕಂಡರೂ ಆಟೋಮೊಬೈಲ್ ಕ್ಷೇತ್ರದಲ್ಲಿ ದೊಡ್ಡ ಸಾಧನೆಯಾಗಿದೆ, ದಾವಣಗೆರೆಯಲ್ಲಿ ಆಟೋಮೊಬೈಲ್ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಕೀರ್ತಿ ಮಲ್ಲಿಕಾರ್ಜುನ ಮೋಟಾರ್ಸ್ ಮಾಲೀಕರಾದ ಎನ್.ಜೆ. ಗುರುಸಿದ್ದಯ್ಯ ಅವರಿಗೆ ಸಲ್ಲುತ್ತದೆ.
ಗುರುಸಿದ್ದಯ್ಯನವರು 1972ರಲ್ಲಿ ನಗರದ ಹಳೆಯ ಪ್ರವಾಸಿ ಮಂದಿರ ರಸ್ತೆಯಲ್ಲಿ ಸಣ್ಣ ಗ್ಯಾರೇಜ್ ಆರಂಭಿಸಿ, ದಿನದಿಂದ ದಿನಕ್ಕೆ ಬೆಳವಣಿಗೆ ಕಾಣುತ್ತಾ ಮಲ್ಲಿಕಾರ್ಜುನ ಮೋಟಾರ್ಸ್ ಸಂಸ್ಥೆ ಪ್ರಾರಂಭಿಸಿ ದ್ವಿಚಕ್ರ , ತ್ರಿಚಕ್ರ ಮತ್ತು ನಾಲ್ಕು ಚಕ್ರಗಳ ವಾಹನಗಳ ಮಾರಾಟದಲ್ಲಿ ಐತಿಹಾಸಿಕ ದಾಖಲೆಯನ್ನೇ ಮಾಡಿದ ವ್ಯಕ್ತಿಯಾದರು. ತುಂಬು ಜೀವನವನ್ನು ನಡೆಸಿ ತಮ್ಮ 80ನೇ ವರ್ಷದಲ್ಲಿ ( ದಿನಾಂಕ 21- 08 – 2024 ರಂದು ) ಇಹಲೋಕವನ್ನು ತ್ಯಜಿಸಿದರು, ಇಂದು ಅವರು ಜೀವಂತವಾಗಿ
ಇಲ್ಲದಿದ್ದರೂ, ಅವರು ಬೆಳೆಸಿದ ಸಂಸ್ಥೆಗಳು, ಮಾಡಿದ ಸಾಧನೆ ನಮ್ಮ ಕಣ್ಮುಂದೆ ಇದ್ದು, ಅವರ ಹೆಸರನ್ನು ಹೇಳುತ್ತೇವೆ .
ಹಿರಿಯ ಸಹಕಾರೀ ಧುರೀಣರೂ, ಸಹಕಾರ ರತ್ನ ಪ್ರಶಸ್ತಿ ವಿಜೇತರು, ದಾವಣಗೆರೆ – ಹರಿಹರ ಅರ್ಬನ್ ಸಹಕಾರಿ ಬ್ಯಾಂಕ್ ಮಾಜಿ ಅಧ್ಯಕ್ಷರಾದ ದಿ. ಎನ್.ಎಂ.ಜೆ.ಬಿ. ಆರಾಧ್ಯ ಅವರ ಸಹೋದರ ಎನ್.ಜೆ. ಗುರುಸಿದ್ದಯ್ಯ ಅವರು ದಾವಣಗೆರೆ ತಾಲ್ಲೂಕಿನ ನರಗನಹಳ್ಳಿಯಲ್ಲಿ ದಿನಾಂಕ 7 – 06 – 1944ರಲ್ಲಿ ಜಯದೇವಯ್ಯ – ಶಿವಲಿಂಗಮ್ಮ ದಂಪತಿಯ ಪುತ್ರರಾಗಿ ಜನಿಸಿದರು. ದಾವಣಗೆರೆಯ ಕೆಟಿಜೆ ನಗರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತಮ್ಮ ವಿದ್ಯಾಭ್ಯಾಸ ಮುಗಿಸಿ, ಡಿ ಇ ಎ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಪೂರೈಸಿ, ಮುನಿಸಿಪಲ್ ಹೈಸ್ಕೂಲ್ ನಲ್ಲಿ ಓದಿ, ಮುಂದೆ ಧರಾಮ ಕಾಲೇಜಿನಲ್ಲಿ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಣ ಮುಗಿಸಿ, ಬೆಂಗಳೂರಿನ ಇಂಡಸ್ಟ್ರಿಯಲ್ ಕೋ – ಆಪರೇಟಿವ್ ಕಾಲೇಜಿನಲ್ಲಿ ಡಿಪ್ಲೋಮ ಪಡೆದರು.
ದಿನಾಂಕ 25 – 08 – 1969 ರಂದು ಗುರುಸಿದ್ದಯ್ಯನವರು ಶಕುಂತಲ ಅವರನ್ನು ಮದುವೆಯಾದರು. ಕೈಗಾರಿಕೋದ್ಯಮಿ ಯಾಗಿ ಹೆಸರು ಮಾಡಿದ ಗುರುಸಿದ್ದಯ್ಯನವರು ಶ್ರೀ ಮಲ್ಲಿಕಾರ್ಜುನ ಸಮೂಹ ಸಂಸ್ಥೆಯ ಸಂಸ್ಥಾಪಕರಾಗಿ, ಶ್ರೀ ಮಲ್ಲಿಕಾರ್ಜುನ ಮೋಟಾರ್ ಅಂಡ್ ಸ್ಕೂಟರ್ ಮಾರ್ಟ್, ಶ್ರೀ ಮಲ್ಲಿಕಾರ್ಜುನ ಟೆಂಪೋ ಸೇಲ್ಸ್ ಅಂಡ್ ಸರ್ವೀಸ್, ಚಂದ್ರು ಟ್ರಾನ್ಸ್ ಪೋರ್ಟ್ಸ್ ಮತ್ತು ಗುರು ಮೋಟಾರ್ಸ್ ಅಧ್ಯಕ್ಷರಾಗಿ ದಕ್ಷತೆಯಿಂದ ಮುನ್ನಡೆಸಿದರು. ಆಟೋಮೊಬೈಲ್ ಕ್ಷೇತ್ರದಲ್ಲಿ ತಮ್ಮ ಚಾಣಾಕ್ಷತೆ, ಶಿಸ್ತು, ಪ್ರಾಮಾಣಿಕತೆ, ಬದ್ಧತೆ, ನಿಷ್ಠೆ, ಪರಿಶ್ರಮದಿಂದ ಹೆಸರು ಗಳಿಸಿ ಜನಮೆಚ್ಚುಗೆ ಗಳಿಸಿದರು. ಅವರು ದೇಶದ ಹೆಸರಾಂತ ಕಂಪನಿಗಳಾದ ಆಟೋಮೊಬೈಲ್ ಪ್ರಾಡಕ್ಟ್ ಆಫ್ ಇಂಡಿಯಾ (ಮುಂಬೈ), ಕೈನೆಟಿಕ್ ಇಂಜಿನಿಯರಿಂಗ್ ಲಿಮಿಟೆಡ್ ಕಂಪನಿ (ಪೂನಾ), ಬಜಾಜ್ ಆಟೋ ಲಿಮಿಟೆಡ್ (ಮುಂಬೈ), ಮಹೇಂದ್ರ ಮತ್ತು ಮಹೇಂದ್ರ ದ್ವಿಚಕ್ರ ವಾಹನಗಳ ಕಂಪನಿ (ಮುಂಬೈ) ಮುಂತಾದ ಕಂಪನಿಗಳ ಡೀಲರ್ಸ್‌ಶಿಪ್ ಪಡೆದಿದ್ದರು.
ಗುರುಸಿದ್ದಯ್ಯನವರು ಕೇವಲ ತಮ್ಮ ವ್ಯವಹಾರಕ್ಕಷ್ಟೇ ಸೀಮಿತವಾಗದೆ ಬಹುಮುಖ ವ್ಯಕ್ತಿತ್ವವನ್ನೂ ಹೊಂದಿದ್ದರು. ಸಹಕಾರ, ಶಿಕ್ಷಣ, ಸಮಾಜಸೇವೆ ಮುಂತಾದ ರಂಗಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಸಿಟಿ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷರಾಗಿ, ದಾವಣಗೆರೆ ಆಟೋಮೊಬೈಲ್ ಡೀಲರ್ಸ್ ಸಂಘ, ಶ್ರೀ ಮಲ್ಲಿಕಾರ್ಜುನ ಎಜುಕೇಷನ್ ಟ್ರಸ್ಟ್ ಅಧ್ಯಕ್ಷರಾಗಿ, ದಾವಣಗೆರೆ ಜಿಲ್ಲಾ ಐಟಿಐ ಕಾಲೇಜುಗಳ ಸಮೂಹದ ನಾಮನಿರ್ದೇಶಕರಾಗಿ, ರೋಟರಿ ಕ್ಲಬ್ ನಿರ್ದೇಶಕರಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಅವರು ಸಮಾಜಕ್ಕೆ ಸಲ್ಲಿಸಿರುವ ಸೇವೆಯನ್ನು ಗುರುತಿಸಿ, ಶ್ರೀ ರಂಭಾಪುರಿ ಜಗದ್ಗುರುಗಳಿಂದ `ಗುರುಸೇವಾರತ್ನ’ ಪ್ರಶಸ್ತಿಯನ್ನು ಪಡೆದಿದ್ದಾರೆ. ಭಾರತದಾದ್ಯಂತ ಅತ್ಯಂತ ಅಧಿಕ ಲೂನಾ ಮೊಪೆಡ್ಸ್ ವಾಹನಗಳನ್ನು ಮಾರಾಟ ಮಾಡಿದ್ದಕ್ಕಾಗಿ ಆಲ್ ಇಂಡಿಯಾ ನಂ. 1 ಡೀಲರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡು, ಈ ಕಾರಣಕ್ಕಾಗಿ ಅಮೇರಿಕಾ ಪ್ರವಾಸವನ್ನೂ ಮಾಡಿದ್ದಾರೆ. ಇದೇ ರೀತಿ ಅನೇಕ ಕಂಪನಿಗಳಿಂದ ಪ್ರಶಸ್ತಿಗಳನ್ನು ಪಡೆದು, ಪತ್ನಿ ಸಮೇತರಾಗಿ ಜರ್ಮನಿ, ಅಮೇರಿಕಾ, ಸಿಂಗಾಪುರ, ಹಾಂಕಾಂಗ್, ಮೆಕಾವ್, ಆಸ್ಟ್ರೇಲಿಯಾ, ಯುರೋಪ್ ಪ್ರವಾಸ ಕೈಗೊಂಡಿದ್ದಾರೆ. ಕರ್ನಾಟಕ ಸರ್ಕಾರದ ವಾಣಿಜ್ಯ ಇಲಾಖೆಯಿಂದ ಪ್ರಾಮಾಣಿಕ `ಕರದಾತ’ ಪ್ರಶಸ್ತಿ ಪಡೆದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಒಬ್ಬ ಯಶಸ್ವೀ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂಬಂತೆ ಗುರುಸಿದ್ದಯ್ಯನವರ ಸಾಧನೆಗೆ ಅವರ ಧರ್ಮಪತ್ನಿ ಶ್ರೀಮತಿ ಶಕುಂತಲ ಅವರದು ಸಿಂಹಪಾಲು ಎಂದರೆ ಅತಿಶಯೋಕ್ತಿಯಾಗಲಾರದು. ಮನೆಗೆದ್ದು ಮಾರುಗೆಲ್ಲು ಎಂಬಂತೆ ಮನೆಯ ಜವಾಬ್ದಾರಿಯ ಜೊತೆಗೆ ಪತಿ ಮತ್ತು ಮಕ್ಕಳ ಶ್ರೇಯೋಭಿವೃದ್ಧಿಗಾಗಿ ದುಡಿದಿದ್ದಾರೆ. ಬಾಪೂಜಿ ವಿದ್ಯಾ ಸಂಸ್ಥೆಗೆ ಸೇರಿದ ಅವರು ಕಾಲೇಜು ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಅತ್ಯುತ್ತಮವಾದ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ. ಇಬ್ಬರು ಗಂಡು ಮಕ್ಕಳು ಚಂದ್ರಶೇಖರ್ ಮತ್ತು ಸಿದ್ದೇಶ್ ಇಬ್ಬರನ್ನೂ ಸುಸಂಸ್ಕೃತರನ್ನಾಗಿ ಮಾಡಿ ಅವರ ಕಾಲ ಮೇಲೆ ಅವರು ನಿಲ್ಲುವಂತೆ ಮಾಡಿದ್ದಾರೆ. ಸೊಸೆಯಂದಿರಾದ ಸಿರಿಗೌರಿ ಚಂದ್ರಶೇಖರ್, ಸುಮನ್ ಸಿದ್ದೇಶ್, ಮೊಮ್ಮಕ್ಕಳಾದ ನಿಕಿತ ಸಿರಿ, ವರುಣ್, ನಮ್ರತ ಹಾಗೂ ಅಮೃತ ಇವರಿಗೂ ಸಂಸ್ಕಾರ – ಸಂಸ್ಕೃತಿಯನ್ನು ಹೇಳಿ ಕೊಟ್ಟಿದ್ದಾರೆ.
ಗುರುಸಿದ್ದಯ್ಯನವರು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ದಾವಣಗೆರೆ – ಹರಿಹರ ರಸ್ತೆಯಲ್ಲಿ ಶಂಕರ್ ಮಿಲ್ ವಿಶಾಲ ಜಾಗದಲ್ಲಿ ಐ ಟಿ ಐ ಕಾಲೇಜನ್ನು ಆರಂಭಿಸಿದರು. ಈಗ ಅವರ ಪತ್ನಿ ಶಕುಂತಲ ಅವರು ಐ ಟಿ ಐ ಕೇಂದ್ರವನ್ನು ನೋಡಿಕೊಳ್ಳುತ್ತಿದ್ದಾರೆ .
ಗುರುಸಿದ್ದಯ್ಯನವರು ಆಟೋಮೊಬೈಲ್ ಕ್ಷೇತ್ರದಲ್ಲಿ ಸಾಧನೆ ಮಾಡುವಲ್ಲಿ ಸಹೋದರರಾದ ಎನ್.ಎಂ.ಜೆ.ಬಿ. ಆರಾಧ್ಯ, ಸಹಕಾರಿ ಧುರೀಣರಾದ ಎಸ್.ಕೊಟ್ರಬಸಪ್ಪ, ಹಿರಿಯ ಮುತ್ಸದ್ಧಿ ಶಾಮನೂರು ಶಿವಶಂಕರಪ್ಪ ಮತ್ತಿತರರು ನೀಡಿದ ಸಹಕಾರ, ಪ್ರೋತ್ಸಾಹವನ್ನು ಶ್ರೀಮತಿ ಶಕುಂತಲ ಅವರು ಸ್ಮರಿಸುತ್ತಾರೆ. ಗುರುಸಿದ್ದಯ್ಯನವರ ಬಗ್ಗೆ ಹಿರಿಯ ಸಾಹಿತಿ ದಿ. ಟಿ. ಗಿರಿಜಾ ಅವರು “ಹೆಜ್ಜೆಗಳು” ಎಂಬ ಅವಿಸ್ಮರಣೀಯ ಗ್ರಂಥವನ್ನು ಬರೆದಿದ್ದಾರೆ . ಗುರುಸಿದ್ದಯ್ಯನವರ ಕಾಯ ಅಳಿದಿದ್ದರೂ, ಅವರು ಮಾಡಿದ ಸತ್ಕಾರ್ಯದಿಂದ ಅವರ ನೆನಪು ಸದಾ ಹಸಿರಾಗಿರುತ್ತದೆ.
– ಬಕ್ಕೇಶ ನಾಗನೂರು,
ಹಿರಿಯ ಪತ್ರಕರ್ತರು, ದಾವಣಗೆರೆ