ಯಡ್ರಾಮಿ ಸೀಮೆಯ ಬೆಂಕಿಯ ಚಂಡಮಾರುತ ಹಾಗೂ ಉರಿಬಿಸಿಲಿನ ನಾಡಿನ ಒಬ್ಬ ಸಂತ, ಅನುಭಾವಿ, ತತ್ವಪದಗಳ ಹರಿಕಾರ ಕಡಕೋಳ ಮಡಿವಾಳಪ್ಪನ ನೆಲೆಯ ಬಸಿರಿನಿಂದ ಚಿಗುರೊಡೆದ ಮಲ್ಲಿಕಾರ್ಜುನ ಕಡಕೋಳ ಈಗ ಪ್ರತಿಷ್ಠಿತ “ದಾವಣಗೆರೆ ವೃತ್ತಿ ರಂಗಭೂಮಿ ರೆಪರ್ಟರಿ”ಯ ಸಾರಥಿ ಯಾ ನಿರ್ದೇಶಕ.
ಈ ವೃತ್ತಿರಂಗಭೂಮಿ ರೆಪರ್ಟರಿ ಹಲವು ದಶಕಗಳ ಕನಸು. ರಂಗಭೀಷ್ಮ ಬಿ ವಿ ಕಾರಂತರ ನೇತೃತ್ವದಲ್ಲಿ ಮೈಸೂರಿನ “ರಂಗಾಯಣ” ಆರಂಭವಾದಾಗ ಇಡೀ ರಾಜ್ಯಕ್ಕೆ ಒಂದೇ ರೆಪರ್ಟರಿ! ಈಗ ಅದೂ ವಿಕೇಂದ್ರೀಕರಣ ಆಗಿ ಆರು ರೆಪರ್ಟರಿಗಳಾಗಿವೆ. ಅವುಗಳ ಚುಕ್ಕಾಣಿ ಹಿಡಿಯಲು ಭಾರೀ ಪೈಪೋಟಿ. ಪ್ರತಿಭೆ, ಸಾಧನೆ, ಪ್ರಾದೇಶಿಕತೆ, ಜಾತಿ, ರಾಜಕಾರಣ ಎಲ್ಲಾ ಮಿಶ್ರಣದಲ್ಲಿ ಕಲಸುಮೇಲೋಗರವಾಗಿ “ಸಾಮಾಜಿಕ ನ್ಯಾಯ”ದ ತಕ್ಕಡಿ ಗುಲಗಂಜಿ ತೂಕದ್ದಾಗುತ್ತದೆ! ಹೀಗೆ ಆಯ್ಕೆ ಪಟ್ಟಿ ಹೊರಬಂದಾಗ ಒಂದಿಬ್ಬರಾದರು ಪ್ರತಿಭಾವಂತರು ಆ ಕ್ಷೇತ್ರಕ್ಕೆ ನ್ಯಾಯ ಒದಗಿಸುವವರು ಇದ್ದೇ ಇದ್ದಾರೆ ಅನ್ನೋದನ್ನು ಖಾತ್ರಿ ಪಡಿಸುವಂತೆ ಮಿತ್ರ ಮಲ್ಲಿಕಾರ್ಜುನ ಕಡಕೋಳ ರೆಪೆರ್ಟರಿಯ ಯಜಮಾನನಾಗಿ ಆಯ್ಕೆ ಆಗಿರುವುದು “ದಾವಣಗೆರೆ ರಂಗ ಬಳಗ”ಕ್ಕೆ ಅತೀವ ಸಂತೋಷ. ಹೀಗಾಗಿ ವೈಯಕ್ತಿಕವಾಗಿಯೂ ಈ ಗೆಳೆಯನಿಗೆ ಅಭಿನಂದನೆ.
ರೆಪರ್ಟರಿ ಅಧ್ಯಕ್ಷ ಮಲ್ಲಿಕಾರ್ಜುನ ಕಡಕೋಳ ಈ ಮೊದಲು ದಾವಣಗೆರೆಯನ್ನು ಆರೋಗ್ಯ ಇಲಾಖೆಯ ತನ್ನ ವೃತ್ತಿ ಬದುಕಿನ ನೆಲೆಯಾಗಿ ಆಯ್ಕೆ ಮಾಡಿಕೊಂಡ. ತನ್ನ ಪತ್ನಿಯು ಅದೇ ಇಲಾಖೆಯ ನೌಕರಿಯವರಾಗಿದ್ದರಿಂದ ಸಹಜವಾಗೇ ದಾವಣಗೆರೆ ಸುತ್ತಮುತ್ತಲ ನೂರಾರು ಹಳ್ಳಿಗಳ ಆರೋಗ್ಯ ಉಸ್ತುವಾರಿಯನ್ನು ನೋಡಿಕೊಳ್ಳಬೇಕಾಯ್ತು.
ಕಡಕೋಳ ಹೊಟ್ಟೆಪಾಡಿಗಾಗಿ ಸರ್ಕಾರಿ ನೌಕರಿ ಮಾಡಲಿಲ್ಲ. ಗ್ರಾಮೀಣರ ಆರೋಗ್ಯದ ಜೊತೆಗೆ ತನ್ನೊಳಗಿದ್ದ ಸಾಹಿತ್ಯ ಸಾಂಸ್ಕೃತಿಕ ವಿಚಾರಗಳಿಗೂ ತೆರೆದುಕೊಂಡು ಅದನ್ನು ಹಂಚಿದ. ಬರವಣಿಗೆಯನ್ನು ಸಾಮಾಜಿಕ ಅಸ್ತ್ರವಾಗಿ ಬಳಸಿದ. ಆರಂಭದಲ್ಲಿ ತನ್ನ ಪತ್ನಿ ಅನಸೂಯ ಹೆಸರಿನಲ್ಲಿ “ಮುಟ್ಟು” ಕಥೆ ಬರೆದ. ಅದು “ತುಷಾರ” ಪತ್ರಿಕೆಯಲ್ಲಿ ಪ್ರಕಟವಾಗಿ ಭಾರೀ ಚರ್ಚೆಗೆ ಒಳಗಾಗಿತ್ತು. ಮುಂದೆ “ಲಂಕೇಶ್ ಪತ್ರಿಕೆ”ಗೆ ರಾಜಕೀಯ ಹಾಗೂ ಸಾಮಾಜಿಕ ಸಮಸ್ಯೆಗಳ ಕುರಿತು ವರದಿ ಮಾಡಿದ. ಸಹಜವಾಗಿ ರಾಜಕಾರಣಿಗಳ ಕೆಂಗಣ್ಣಿಗೆ ಗುರಿಯಾಗಬೇಕಾಯ್ತು. ಮುಂದೆ ರವಿ ಬೆಳಗೆರೆಯ “ಹಾಯ್ ಬೆಂಗಳೂರ್” ಪತ್ರಿಕೆಗೂ ವರದಿ ಮಾಡಿದ. ವಿಮರ್ಶೆ, ವ್ಯಕ್ತಿ ಚಿತ್ರಣ, ಲೇಖನಗಳನ್ನು ಸಾಂದರ್ಭಿಕವಾಗಿ ದಾಖಲಿಸಿದ. ಕ್ರಮೇಣ ಮೂಲದಲ್ಲಿ ಅಡಗಿದ್ದ ರಂಗಭೂಮಿಯ ತಿದಿ ಒತ್ತಿ ಅದರೊಳಗಿನ ಅನುಭವ ಗಣಿಯನ್ನು ಹೆಕ್ಕಿ ಹೊರ ತೆಗೆದ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕದ ವೃತ್ತಿ ರಂಗಭೂಮಿ ಕಲಾವಿದರ ನಿಜ ಬದುಕಿನ ಕಷ್ಟಕಾರ್ಪಣ್ಯ ಹಾಗೂ ರಂಗದ ಮೇಲಿನ ಅಭಿನಯದ ನೈಜ ಕಲಾವಿದರ ಪರಿಚಯವನ್ನು ನಾಡಿನ ಹೆಸರಾಂತ ಪತ್ರಿಕೆಗಳಿಗೆ ಮಾಡಿದ. `ಪ್ರಜಾವಾಣಿ’ ಈ ದೈನಿಕಗಳಲ್ಲಿ ಮುಖ್ಯ ಪಾತ್ರವಹಿಸಿತು. ಮುಂದೆ ದಾವಣಗೆರೆ ದೈನಿಕ `ಜನತಾವಾಣಿ’ ಪತ್ರಿಕೆಗೆ ಅಂಕಣಕಾರನಾಗಿ ಪರಿಚಯವಾದ. ಇದಕ್ಕೆ ಈ ಪತ್ರಿಕೆಯ ಸಂಪಾದಕರಾಗಿದ್ದ ಎಚ್.ಎನ್. ಷಡಕ್ಷರಪ್ಪ ಅವರು ನೀಡಿದ ಪ್ರೊತ್ಸಾಹ ಕಾರಣ. ಅಂಕಣ ಬರಹಗಳ ಸೊಗಸು, ಭಾಷೆ, ಲಯ ಸೌಂದರ್ಯಕ ವಿಚಾರಗಳು, ಮುನ್ನೋಟಗಳು, ನೆನಪುಗಳು ಓದುಗರಿಗೆ ಇಷ್ಟವಾಯಿತು. ಯಾವುದಾದರೂ ವಿಚಾರಗಳನ್ನು ಮನಕ್ಕೆ ತಾಕುವಂತೆ ಬರೆಯುವ ಕಲೆ ಮಲ್ಲಿಕಾರ್ಜುನ ಕಡಕೋಳಗೆ ಸಿದ್ದಿಸಿದೆ. ತತ್ವಪದಗಳ ಕುರಿತ ಅವನ ಗಂಭೀರ ಅಧ್ಯಯನ ಇದಕ್ಕೆ ಸ್ಪಷ್ಟ ಉದಾಹರಣೆ. `ಜವಾರಿ ಭಾಷೆ’ ಅಂತ ಏನಾದರೂ ನಾವು ಕರೆದರೆ ಅದು ಕಡಕೋಳನಲ್ಲಿ ಇದೆ. ಮಾತು – ಬರವಣಿಗೆಯಲ್ಲಿ ಅದು ಪ್ರತಿಬಿಂಬಿತವಾಗಿದೆ. ಹೀಗಾಗಿ `ಅವಳ ಸನ್ನಿಧಿಯಲ್ಲಿ…’, `ರಂಗ ಸುನೇರಿ’, `ಫಲ್ಗುಣಿಯಲ್ಲಿ ಕೇಳಿ ಬಂದ ರುದ್ರವೀಣೆ’, `ಯಡ್ರಾಮಿ ಸೀಮೆಯ ಕಥನಗಳು’, `ಪರಿಮಳದ ಹಾದಿಯಲ್ಲಿ’ ಮೊದಲಾದ ಕೃತಿಗಳನ್ನು ಕನ್ನಡಕ್ಕೆ ನೀಡಿದ. ಹಲವು ಕೃತಿಗಳಿಗೆ ಸಾಹಿತ್ಯ ಅಕಾಡೆಮಿ ಹಾಗೂ ರಾಜ್ಯದ ಹಲವು ಸಂಸ್ಥೆಗಳಿಂದ ಗೌರವ ಪುರಸ್ಕಾರ ದೊರೆತಿದೆ.
ತನ್ನ ಹುಟ್ಟು ಜಿಲ್ಲೆ ಕಲಬುರ್ಗಿಯ ಯಡ್ರಾಮಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಸ್ಥಾನ ನೀಡಿ ಗೌರವಿಸಲಾಗಿದೆ. ವಿದ್ಯಾರ್ಥಿ ಆಗಿದ್ದಾಗಲೇ ಬಂಡಾಯ ಧೋರಣೆ ಹೊಂದಿ, ತುರ್ತುಸ್ಥಿತಿಯಲ್ಲಿ ಪ್ರತಿಭಟಿಸಿದ್ದಕ್ಕೆ ಪೊಲೀಸರಿಂದ ಲಾಠಿ ರುಚಿ ಉಂಡ ಅನುಭವ. ರಾಜ್ಯ ಬಂಡಾಯ ಸಾಹಿತ್ಯ ಸಂಘಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಪ್ರಗತಿಪರ, ವೈಚಾರಿಕ ವಿಚಾರ ರೂಢಿಸಿಕೊಂಡ ಕಡಕೋಳಗೆ ಸಾಂಸ್ಕೃತಿಕವಾಗಿ ಮಹತ್ವದ ಸ್ಥಾನವಿದೆ.
ದಾವಣಗೆರೆ ಮೂಲತಃ ವ್ಯಾಪಾರಿ ಕೇಂದ್ರವಾದರೂ ಶಿಕ್ಷಣ ಕ್ಷೇತ್ರಕ್ಕೂ ಮಹತ್ವದ ಕಾಣಿಕೆ ನೀಡಿದೆ. ಮುಖ್ಯವಾಗಿ ವೃತ್ತಿರಂಗಭೂಮಿಗೆ ಮರುಜೀವ ಕೊಟ್ಟ ಊರು. ದಾನಿಗಳ ತವರು. ಉತ್ತರ ಕರ್ನಾಟಕದ ಅನೇಕ ನಾಟಕ ಕಂಪನಿಗಳ ಸಾಮಾಜಿಕ, ಪೌರಾಣಿಕ ನಾಟಕಗಳು ಜನಮನ ಗೆದ್ದಿವೆ. ನಷ್ಟದಲ್ಲಿದ್ದ ಕಂಪನಿಗಳು ಲಾಭ ಪಡೆದು ಕಲಾವಿದರಿಗೆ ಬದುಕು ನೀಡಿವೆ. ಇದೆಲ್ಲಾ ವಾಸ್ತವಗಳೂ, ಕಂಪನಿ, ಮಾಲೀಕ, ನಟ -ನಟಿಯರು, ಸಂಗೀತಗಾರರು ಎಲ್ಲಾ ಕಡಕೋಳಗೆ ಪರಿಚಿತರೆ. ಇಂಥ ಕಲಾವಿದರು ಹಾಗೂ ಕಂಪನಿ ಕುರಿತು ನಿರಂತರ ಲೇಖನ, ಅಂಕಣ ಬರಹ ಬರೆದು ಸರ್ಕಾರದ, ನಾಡಿನ ಪ್ರಜ್ಞಾವಂತರ ಗಮನ ಸೆಳೆಯುವಲ್ಲಿ ಯಶಸ್ವಿ ಆಗಿದ್ದಾನೆ.
ಹಿಂದೆ ತೊಂಬತ್ತರ ದಶಕದಲ್ಲಿ ರಾಜ್ಯ ನಾಟಕ ಅಕಾಡೆಮಿ ಸದಸ್ಯನಾಗಿದ್ದಾಗ ತಿಂಗಳ ಕಾರ್ಯಕ್ರಮ “ಬಾ ಅತಿಥಿ” ಮೂಲಕ ನಾಡಿನ ರಂಗ ದಿಗ್ಗಜರನ್ನು ದಾವಣಗೆರೆಗೆ ಕರೆಯಿಸಿ, ಅವರೊಂದಿಗೆ ಮುಕ್ತ ಚರ್ಚೆಗೆ ದಾರಿಮಾಡಿಕೊಟ್ಟಿದ್ದನ್ನ ರಂಗಾಸಕ್ತರು ಮರೆಯಲು ಸಾಧ್ಯವೇ ಇಲ್ಲ. ನಾನು ಹವ್ಯಾಸಿ ರಂಗಭೂಮಿ ಹಾಗೂ ಬೀದಿ ನಾಟಕಗಳ ಭೀಷ್ಮ ಎ.ಎಸ್. ಮೂರ್ತಿಯವರನ್ನು ಈ ಕಾರ್ಯಕ್ರಮಕ್ಕೆ ಬೆಂಗಳೂರಿನಿಂದ ಕರೆತಂದ ನೆನಪು ಇದೆ. ಕನ್ನಡ ಚಿತ್ರರಂಗದ ನಟಸಾರ್ವಭೌಮ ಡಾ. ರಾಜಕುಮಾರ್ ಅವರನ್ನು ಕರೆಯಿಸಿದ ಕಡಕೋಳ ಹಾಗೂ ಮಿತ್ರರು ವೃತ್ತಿ ರಂಗ ಕಲಾವಿದರ ಸಮಾವೇಶ ಮಾಡಲು ಕೈ ಜೋಡಿಸಿದ್ದು ಮಹತ್ವದ ಸಾಧನೆ.
ದಾವಣಗೆರೆಯಲ್ಲಿ ಆರು ವರ್ಷಗಳ ಹಿಂದೆ ಸರ್ಕಾರ ಆರಂಭಿಸಿದ “ವೃತ್ತಿರಂಗಭೂಮಿ ರೆಪರ್ಟರಿ”ಗೆ ಗ್ರಹಣ ಹಿಡಿದಿದೆ. ಅದು ಇತ್ತೆಂಬ ಕುರುಹು ಇಲ್ಲ! ಸಮೀಪದ ಕೊಂಡಜ್ಜಿಯಲ್ಲಿ ಈ ರೆಪರ್ಟರಿ ನೆಲೆಗೊಳ್ಳುವ ಕನಸು ಈಡೇರಿಲ್ಲ. ವಿಧಾನಪರಿಷತ್ತು ಮಾಜಿ ಸದಸ್ಯ ಮೋಹನ್ ಕುಮಾರ ಕೊಂಡಜ್ಜಿ ಇದರ ಬಗ್ಗೆ ಆಸಕ್ತರಾಗಿದ್ದು, ಅವರ ಸಹಕಾರ ಮುಖ್ಯವಾಗಿದೆ. ಅತ್ಯುತ್ತಮ ಸ್ಕೌಟ್ ಕೇಂದ್ರವಾಗಿ ಪರಿಚಯವಾದ ಸುಂದರ ಪ್ರದೇಶ ಕೊಂಡಜ್ಜಿ ಸಾಂಸ್ಕೃತಿಕವಾಗಿಯೂ ಶಾಶ್ವತ ಸ್ಥಾನ ಪಡೆಯಬೇಕಾಗಿದೆ. ಅಲ್ಲಿ ವೃತ್ತಿರಂಗಭೂಮಿ ರೆಪರ್ಟರಿ ನೆಲೆಗೊಳ್ಳಲು ಸಮಯ ಹಿಡಿಯಬಹುದು. ಇದಕ್ಕೆ ಜಿಲ್ಲಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಆರ್ಥಿಕ ಸಹಾಯ ಮುಖ್ಯ.
ಹೆಸರಿಗೆ ಮಾತ್ರ ರೆಪರ್ಟರಿ ಇರುವ ದಾವಣಗೆರೆಯಲ್ಲಿ ಅದಕ್ಕೆ ಹೇಳಿದಂತೆ ಅದರ ಅಸ್ತಿತ್ವವೇ ಇಲ್ಲ. ಹಿಂದೆ ಇದ್ದ ನಿರ್ದೇಶಕ ಮಹಾಶಯರು ನಯಾಪೈಸೆ ಕೆಲಸ ಮಾಡದೆ ಕಾಲಹರಣ ಮಾಡಿ ಅದನ್ನು ಮತ್ತಷ್ಟು ಹಾಳು ಮಾಡಿದರು ಎಂದು ರಂಗಾಸಕ್ತರೇ ದೂಷಿಸುತ್ತಾರೆ. ಈಗ ಕಡಕೋಳ ಎದುರು ಹಲವು ಸವಾಲುಗಳಿವೆ. ಈ ಸಂಸ್ಥೆಗೆ ಭದ್ರ ಬುನಾದಿ ಹಾಕಿ ತಳಮಟ್ಟದಿಂದ ಕಟ್ಟಬೇಕಿದೆ. ಇಡೀ ರಾಜ್ಯಕ್ಕೆ ಇರುವ ಈ ಒಂದು ವೃತ್ತಿರಂಗಭೂಮಿ ರೆಪರ್ಟರಿಯನ್ನು ಎತ್ತರಕ್ಕೆ ಕೊಂಡೊಯ್ದು ದಾವಣಗೆರೆ ಹೆಸರನ್ನು ಗಟ್ಟಿಗೊಳಿಸುವ ಇಚ್ಛಾಶಕ್ತಿಬೇಕಿದೆ. ಕಡಕೋಳಗೆ ಇರುವ ಹಲವು ಕನಸುಗಳಲ್ಲಿ ಅಭಿನಯ ಪರಂಪರೆಯನ್ನು ಕಟ್ಟಿಕೊಡುವುದು, ನಶಿಸುತ್ತಿರುವ ರಂಗ ಗೀತೆಗಳ ಪರಂಪರೆಯನ್ನು ರಂಗದಮೇಲೆ ಕಲಾವಿದರೇ ಹಾಡುವಂತೆ ಶಾಸ್ತ್ರೀಯವಾಗಿ ಕಲಿಸುವುದು, ರಂಗಸಜ್ಜಿಕೆಯ ಪರಂಪರೆ ಯನ್ನು ಗತ ವೃತ್ತಿರಂಗಭೂಮಿಯನ್ನು ನೆನಪಿಸುವಂತೆ ಸ್ಮರಣೀಯಗೊಳಿಸುವುದು ಸೇರಿದೆ ಎಂಬುದು ಮುಖ್ಯ. ಈ ಎಲ್ಲಾ ಯೋಜನೆಗಳ ಕನಸುಗಳು ಈಡೇರಲಿ ಎಂದು ಆಶಿಸುತ್ತೇನೆ.
– ಆರ್. ಜಿ. ಹಳ್ಳಿ ನಾಗರಾಜ, ಬೆಂಗಳೂರು.
ಫೋ : 99005 66020