ಭಾರತ ಸೇವಾದಳದ ಸಂಸ್ಥಾಪಕ, ಪದ್ಮಭೂಷಣ ನಾ.ಸು. ಹರ್ಡೇಕರ್ ಅವರ 49 ನೇ ಪುಣ್ಯಸ್ಮರಣೆ ಇಂದು
1923 ನಾಗಪುರದಲ್ಲಿ ಪ್ರಥಮವಾಗಿ ಧ್ವಜ ಸತ್ಯಾಗ್ರಹವು ಕಾಕಿನಾಡ ನಗರದ ಕಾಂಗ್ರೆಸ್ ಕಛೇರಿ ಆವರಣದಲ್ಲಿ ಧ್ವಜ ವನ್ನು ಹಾರಿಸುವ ಕಾರ್ಯಕ್ರಮ ನಡೆಯುತ್ತದೆ. ಈ ಸಮಾರಂಭದಲ್ಲಿ ಶಿಸ್ತು ಮತ್ತು ಸಂಘಟ ನೆಯ ಅಭಾವವು ಎದ್ದು ಕಾಣುತ್ತಿರುತ್ತದೆ. ಮತ್ತು ಬ್ರಿಟಿಷರು ಸ್ವಾತಂತ್ರ್ಯ ಹೋರಾಟ ಗಾರರಿಗೆ ಊಟ ಔಷಧೋಪಚಾರ ಇಲ್ಲದೇ ಕೊಡುತ್ತಿದ್ದ ಶಿಕ್ಷೆಯಿಂದ, ಹೋರಾಟ ಗಾರರು ಮರಳಿ ಹೋರಾಟಕ್ಕೆ ಬರಲು ಹಿಂದೇಟು ಹಾಕುತ್ತಿದ್ದರು. ಇದನ್ನು ಗಮನಿಸಿ, ಹೋರಾಟ ಗಾರರಲ್ಲಿ ಮಾನಸಿಕ ಮತ್ತು ದೈಹಿಕ ಸದೃಢತೆ ಬೆಳೆಸಿ, ಶಿಸ್ತು, ಸಂಯಮವನ್ನು ಕಲಿಸಲು, ಒಂದು ಸಂಘ ಟನೆಯು ಅವಶ್ಯಕತೆ ಇದೆ ಎಂದು ಸರೋಜಿನಿ ನಾಯ್ಡು, ಮಹಾತ್ಮಾ ಗಾಂಧೀಜಿ, ಜವಾಹರ ಲಾಲ್ ನೆಹರು, ಸುಭಾಷ್ ಚಂದ್ರಬೋಸ್ ಮತ್ತು ಮುಂತಾದ ನಾಯಕರು ಆಲೋಚಿಸಿ, ಒಂದು ಮಂಡಲವನ್ನು ಕಟ್ಟಬೇಕೆಂಬ ಆಲೋಚನೆಗೆ ಬರುತ್ತಾರೆ. ಇದಕ್ಕೆ ಎನ್.ಎಸ್. ಹರ್ಡೇಕರ್ ಅವರೇ ಸೂಕ್ತ ಎಂದು ನಿರ್ಧರಿಸಿ, ಅವರಿಗೆ ಒಂದು ಮಂಡಲವನ್ನು ಕಟ್ಟಲು ನೇಮಿಸುತ್ತಾರೆ. ಅದರಂತೆ ನಾರಾಯಣರವ್ ಸುಬ್ಬರಾವ್ ಹರ್ಡೇಕರ್ ಅವರು ಒಂದು ಮಂಡಲವನ್ನು ಕಟ್ಟುತ್ತಾರೆ. ಆಗ ಅದಕ್ಕೆ ನಾಯಕರೆಲ್ಲರೂ ಕೂಡಿ `ಹಿಂದೂಸ್ಥಾನ್ ಸೇವಾದಳ’ ಎಂದು ಹೆಸರಿಡುತ್ತಾರೆ. ನಂತರ ಕಾಂಗ್ರೆಸ್ ಸೇವಾದಳ ಎಂದು ಹೆಸರಾಗುತ್ತದೆ. ಸ್ವಾತಂತ್ರ್ಯಾ ನಂತರ 16.03.1950 ರಲ್ಲಿ ಸರ್ಕಾರದಿಂದ ಮಾನ್ಯತೆ ಪಡೆದು, ಹಾಸನದ ಬೇಲೂರಿನಲ್ಲಿ ಭಾರತ ಸೇವಾದಳ ಎಂದು ಮರು ನಾಮಕರಣಗೊಳ್ಳುತ್ತದೆ.
ಸೇವಾದಳವು ಶಿಸ್ತು, ಸಂಯಮ, ಧ್ವಜಾ ರೋಹಣದ ವಿಧಿ ವಿಧಾನಗಳನ್ನು ಕಲಿಸಿಕೊ ಡುತ್ತದೆ. ಸುಭಾಷ್ ಚಂದ್ರ ಬೋಸ್ ಅವರು ‘ಜೈ ಹಿಂದ್’ ಎಂಬ ಜಯ ಘೋಷ ಕೊಟ್ಟು, ಪದ ಕವಾಯತ್ ಕಲಿಸಿ, ಹೋರಾಟಗಾರರನ್ನು ಮಿಲಿಟರಿ ಸೈನಿಕರಂತೆ ಸಿದ್ದಪಡಿಸುತ್ತಾರೆ.
ಸೇವಾದಳದಿಂದ ರೂಪಿಸಿದ ಶಿಸ್ತು ಧ್ವಜ ವಂದನೆಯ ವಿಧಿ ವಿಧಾನ ಪದ್ಧತಿಯು ಅಂದಿನಿಂದ ಇಂದಿನವರೆಗೂ ಭಾರತದ ಎಲ್ಲಾ ಭಾಗಗಳಲ್ಲಿಯೂ ಅನುಸರಿಸಲ್ಪಡುತ್ತಿದೆ.
ಧ್ವಜ ವಂದನೆಗೆ ಬೇಕಾದ ಸರ್ವ ಸಾಮಗ್ರಿ ಗಳು ಸೇವಾದಳದ ಮುಖ್ಯ ಕಚೇರಿಯಾದ ಹುಬ್ಬಳ್ಳಿಯಿಂದ, ಭಾರತದಾದ್ಯಂತ ಎಲ್ಲಾ ಕಡೆ ಪೂರೈಸಲ್ಪಡುತ್ತಿದ್ದವು ಎಂಬುದು ಕನ್ನಡಿಗರು ಹೆಮ್ಮೆಪಡುವ ವಿಚಾರವಾಗಿದೆ.
ಇಂತಹ ಒಂದು ಸಂಘಟನೆಯನ್ನು ಕಟ್ಟಿ, ಸ್ವಾತಂತ್ರ್ಯ ಹೋರಾಟಗಾರರನ್ನು, ಸೇನಾನಿ ಗಳನ್ನು ಶಿಸ್ತು ಬದ್ದವಾಗಿ ಸಿದ್ದಗೊಳಿಸುತಿದ್ದವರು ನಮ್ಮ ಕರ್ನಾಟಕದ ನಾ.ಸು. ಹರ್ಡೇಕರ್ ಅವರು ಎಂದು ಹೇಳಲು ಹೆಮ್ಮೆಯಾಗುತ್ತದೆ.
ಪದ್ಮಭೂಷಣ ಡಾ. ನಾರಾಯಣರಾವ್ ಸುಬ್ಬರಾವ್ ಹರ್ಡೀಕರ್ ಅವರು 07.05.1889 ರಂದು ಹಾವೇರಿ ಜಿಲ್ಲೆಯ ತಿಳುವಳ್ಳಿ ಗ್ರಾಮದಲ್ಲಿ ಜನಿಸುತ್ತಾರೆ. ತಂದೆ ಸುಬ್ಬರಾವ್ ತಾಯಿ ಯಮುನಾಬಾಯಿ. ಹರ್ಡೀಕರ್ ಅವರು ಸೇವೆಗಾಗಿ ಬಾಳು ಎಂಬ ಧ್ಯೆಯ ಘೋಷಣೆಯನ್ನು ಉಸಿರಾಗಿಸಿಕೊಂಡು ಸ್ವಾತಂತ್ರ್ಯ ಹೋರಾಟವನ್ನು ಮಾಡಿದವರು.
ಈಗಲೂ ಇವರು ಕಟ್ಟಿದ `ಭಾರತ ಸೇವಾದಳ’ ಸಂಸ್ಥೆ ಸರ್ಕಾರದಿಂದ ಮಾನ್ಯತೆ ಪಡೆದು, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ರಾಷ್ಟ್ರೀಯತೆ, ರಾಷ್ಟ್ರ ಧ್ವಜ ರಾಷ್ಟ್ರ ಗೀತೆ ಮಾಹಿತಿ, ಶಿಸ್ತು ಸಂಯಮದ ಕುರಿತು ತಿಳಿಸುವ ಕಾರ್ಯದಲ್ಲಿ, ಸಾಮಾಜಿಕ ಸೇವಾ ಚಟುವಟಿಕೆಯಲ್ಲಿ ನಿರತವಾಗಿದೆ. ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ `ಭಾರತ ಸೇವಾದಾಳ’ ಕಚೇರಿಗಳಿವೆ.
ಭಾರತ ಸೇವಾದಳವು 101 ನೇ ವರ್ಷಾ ಚರಣೆಯಲ್ಲಿದೆ. ಇಂತಹ ಸಂಘಟನೆಯನ್ನು ಕಟ್ಟಿ ಬೆಳೆಸಿದ ಎನ್.ಎಸ್.ಹರ್ಡೇಕರ್ವರು 26.08.1975 ರಂದು ನಿಧನರಾಗುತ್ತಾರೆ. ಇಂದಿಗೆ ನಾವು ಅವರನ್ನು ನೆನಸಿಕೊಳ್ಳುವ 49 ನೇ ಪುಣ್ಯಸ್ಮರಣೆಯಲ್ಲಿದ್ದೇವೆ.
ಅಂಚೆ ಇಲಾಖೆ ; ಇವರ ಭಾವ ಚಿತ್ರದ ಅಂಚೆ ಚೀಟಿ ಬಿಡುಗಡೆ ಮಾಡಿದೆ. ತಿಳುವಳ್ಳಿ ಗ್ರಾಮದಲ್ಲಿ ವೃತ್ತಕ್ಕೆ ಇವರ ಹೆಸರಿನ್ನಿಟ್ಟು, ವೃತ್ತದಲ್ಲಿ ಪ್ರತಿಮೆಯ ನಿಟ್ಟು ಗೌರವಿಸಿದ್ದಾರೆ.
– ️ಶಿವಪ್ರಸಾದ ಕರ್ಜಗಿ, ದಾವಣಗೆರೆ.