`ಕೃಷ್ಣ’ ಎಂಬ ಒಂದು ಭವ್ಯ ಶಕ್ತಿ

`ಕೃಷ್ಣ’ ಎಂಬ ಒಂದು ಭವ್ಯ ಶಕ್ತಿ

ಪರಮಾತ್ಮ ಎಂದೇ ಕರೆಸಿಕೊಳ್ಳುವ ಆ ಶ್ರೀ ಕೃಷ್ಣ ಪರಮಾತ್ಮ ಭಗವದ್ಗೀತೆಯಲ್ಲಿ 15ನೇ ಅಧ್ಯಾಯ ಪುರುಷೋತ್ತಮ ಯೋಗದಲ್ಲಿ , ಎರಡು ರೀತಿಯ ಜೀವಿಗಳನ್ನು ಪರಿಚಯಿಸುತ್ತಾನೆ. ಕ್ಷರ ಮತ್ತು ಅಕ್ಷರ. ಕ್ಷರ ಎಂದರೆ ನಾಶವಾಗುವ ಜೀವಿಗಳು ಎಂದರೆ ನಮ್ಮ ದೇಹ ಈ ಮಣ್ಣು ನೀರು ಮತ್ತು ಬೆಂಕಿಯಿಂದ ಆಗಿರುವಂತಹ ಎಲ್ಲ ಪದಾರ್ಥಗಳು ನಾಶ ಹೊಂದುತ್ತವೆ. ಅಕ್ಷರ ಎಂದರೆ ನಾಶವಾಗದ ಆತ್ಮ ಸ್ವರೂಪ. ಇವೆರಡನ್ನು  ವಿವರಿಸಿದ ನಂತರ ತಾನು ಕ್ಷರ ಮತ್ತು ಅಕ್ಷರ ಎರಡಕ್ಕೂ ಮೀರಿದಂತಹವನು. ಪರಮಾತ್ಮ ಎಂದು ಹೇಳಿಕೊಳ್ಳುತ್ತಾನೆ. ಎಲ್ಲ ವೇದಗಳು ತನ್ನನ್ನೇ ಕೊಂಡಾಡುವುದು. ತಾನು ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣಕರ್ತನು ಮತ್ತು ತಾನು ಸೃಷ್ಟಿಸಿದ ಪ್ರಪಂಚದೊಳಗೆ ವ್ಯಾಪ್ತನಾಗಿ ಅದಕ್ಕೆ ಚೈತನ್ಯವನ್ನು ತುಂಬುವಂತಹ ಶಕ್ತಿ ಎಂದು ಹೇಳಿಕೊಳ್ಳುತ್ತಾನೆ ‌.

ವೈಜ್ಞಾನಿಕವಾಗಿ ನಾವು ನೋಡಿದಾಗ ಕೃಷ್ಣ ಅಥವಾ ಪರಮಾತ್ಮ ಎಂದರೆ  ಎಲ್ಲವನ್ನೂ ಮಾಡುವ ಸಾಮರ್ಥ್ಯವಿರುವ ಶಕ್ತಿ. ನಾವು ಇದನ್ನು ನಮ್ಮ ವಿದ್ಯುತ್‌ಗೆ ಹೋಲಿಸಿಕೊಳ್ಳಬಹುದು. ಒಂದು ವಿದ್ಯುತ್ತಿನಿಂದ ಚಲಿಸುವ ಯಂತ್ರ ಯಾವುದೇ ಇರಲಿ, ವಿದ್ಯುತ್ ಇಲ್ಲದಿರುವಾಗ ಅದು ನಿಶ್ಚೇತನವಾಗಿ ಜಡವಾಗಿ ನಿಂತಿರುತ್ತದೆ, ಯಾವಾಗ ಅದರಲ್ಲಿ ವಿದ್ಯುತ್ ಶಕ್ತಿ ಚಾಲನೆ ಆಗುತ್ತದೋ ಅದು ತಿರುಗುತ್ತದೆ ಮುಂದಕ್ಕೆ ಚಲಿಸುತ್ತದೆ ನಾವು ಊಹಿಸಲಿಕ್ಕಾಗದ ಎಲ್ಲವನ್ನು ಮಾಡುತ್ತದೆ. ಅದೇ ಆ ಶಕ್ತಿ ಅದರಿಂದ ಹೊರಬಂದಾಗ, ನಿಶ್ಶಕ್ತವಾಗಿ ನಿಂತುಬಿಡುತ್ತದೆ. 

ನಮ್ಮ ದೇಹ ಆತ್ಮಶಕ್ತಿಯು ಹೊರಹೋದಾಗ, ನಿಶ್ಚೈತನ್ಯದಿಂದ ನಿಲ್ಲುವುದರ ಜೊತೆಗೆ, ಕೊಳೆತು ಹೋಗುತ್ತದೆ ಮತ್ತು ತಾನು ಸೃಷ್ಟಿಯಾಗಿರುವ ಮಣ್ಣಿನಲ್ಲಿ ಬೆರೆತು ಹೋಗುತ್ತದೆ. ನಾವು ವೈಜ್ಞಾನಿಕ ವಾಗಿ ನೋಡಿದರೆ ಕಾರ್ಬನ್ ಹೈಡ್ರೋಜನ್ ಮತ್ತು ಆಕ್ಸಿಜನ್ ಇವುಗಳ ಸೇರ್ಪಡೆಯಿಂದ ಎಲ್ಲಾ ದೇಹದೊಳಗಿನ ಪದಾರ್ಥಗಳ ಸೃಷ್ಟಿಯಾಗುತ್ತದೆ. ಕೊಳೆಯುವಾಗ ಇದು ಮತ್ತೆ ತನ್ನ ಮೂಲ ಸ್ಥಿತಿಗೆ ಎಂದರೆ ಕಾರ್ಬನ್ ಹೈಡ್ರೋಜನ್ ಆಕ್ಸಿಜನ್ ಆಗಿ ಬೇರ್ಪಟ್ಟು ಜಗತ್ತನ್ನು ಸೇರಿಬಿಡುತ್ತದೆ. ನಾವು ಸೃಷ್ಟಿ ಮಾಡಿರುವ ಪ್ಲಾಸ್ಟಿಕ್ ನಂತೆ ಪ್ರಕೃತಿಯ ನಾಶಕ್ಕೆ ಕಾರಣವಾಗದೆ, ಪ್ರಕೃತಿಯ ಪುನರ್ ಸೃಷ್ಟಿಗೆ ಚೈತನ್ಯಗಳಾಗಿ ಮರುಬಳಕೆ ಆಗುತ್ತದೆ.

ಪರಮಾತ್ಮನಾದ ಶ್ರೀ ಕೃಷ್ಣನು ಅಪ್ರಾಕೃತ ಎಂದು ಹೇಳುತ್ತಾರೆ. ಪ್ರಾಕೃತವಾದ ವಸ್ತು ಎಂದರೆ ಪ್ರಕೃತಿಯಿಂದ ಸೃಷ್ಟಿ ಯಾದದ್ದು ಎಂದರೆ ನಾವು ಮೊದಲೇ ಹೇಳಿದಂತೆ ಮಣ್ಣು ನೀರು ಬೆಂಕಿಯಿಂದ ಆಗುವಂತಹ ಪದಾರ್ಥಗಳು. ಪರಮಾತ್ಮ ಹೀಗೆ ಇಲ್ಲದಿರುವುದರಿಂದ, ಅವನಿಗೆ ದೇಹದ ಅಂಗಾಂಗಗಳು ಅದೇ ಕೆಲಸಗಳನ್ನು ಮಾಡಬೇಕೆಂ ದೇನಿಲ್ಲ, ಅವನು ಕಣ್ಣಿನಿಂದಲೇ  ಕೊಲ್ಲಬಹುದು. ಕಿವಿಯಿಂದಲೇ ಉಣ್ಣಬಹುದು, ಇಂತಹ ಶಕ್ತಿಯನ್ನು ನಾವು ಪ್ರೀತಿಸಲು ಮುದ್ದಾಡಲು ಮನಸ್ಸಿನಲ್ಲಿ ಇಟ್ಟುಕೊಂಡು ಧ್ಯಾನಿಸಲು ಸಾಧ್ಯವೇ? ಕಣ್ಣಿನಿಂದ ನೋಡಲಾಗದ ಗಾಳಿಯನ್ನು ನಾವು ಹೇಗೆ ಹೃದಯಕ್ಕೆ ಹತ್ತಿರವಾಗಿಟ್ಟುಕೊಂಡು ಪೂಜಿಸುವುದು ಕಷ್ಟವೋ ಹಾಗೆ ಭಗವಂತನು ನಮ್ಮಿಂದ ಬಹಳ ದೂರವಾಗಿ ಬಿಡುತ್ತಾನೆ. ಆದರೆ, ಭಗವಂತ ಕೇವಲ ಹೊರಗಿನ ಪ್ರಪಂಚದಲ್ಲಿಲ್ಲ. ಪ್ರತಿಯೊಂದು ಜೀವಿಯ ಒಳಗಿದ್ದು ಅದರ ಎಲ್ಲ ಚಟುವಟಿಕೆಗಳಿಗೆ ಕಾರಣನಾಗಿದ್ದಾನೆ. 

ಇಂತಹ ಪರಮಾತ್ಮನನ್ನು ನಾವು ಆರಾಧಿಸಲು ಸುಲಭವಾಗಲಿ ಎನ್ನುವ ಉದ್ದೇಶದಿಂದಲೇ ಅವನು ಸುಂದರವಾದ ಅವತಾರಗಳಲ್ಲಿ ಧರೆಗಿಳಿದು ಬಂದಿದ್ದಾನೆ. ಅನೇಕ ಲೀಲೆಗಳನ್ನು ಮಾಡಿ ಜನರ ಮನವನ್ನು ಸೂರೆಗೊಂಡಿದ್ದಾನೆ. ಅಂತಹ ಪರಮಾತ್ಮನ ಬಹಳ ವಿಶಿಷ್ಟವಾದ, ನಮಗೆ ಬಹಳ ಹತ್ತಿರವಾದ ಅವತಾರವೇ ಶ್ರೀ ಕೃಷ್ಣನ ಅವತಾರ. 

ಈ ಅವತಾರದಲ್ಲಿ ಮುದ್ದಾದ ಮಗುವಾಗಿ ಬಂದು, ನಮ್ಮ ಅಂತರಂಗದಲ್ಲಿರುವ ವಾತ್ಸಲ್ಯ ಭಾವವನ್ನು ಉಕ್ಕಿಸುತ್ತಾನೆ, ನಾವು ನೋಡಿದ ಪ್ರತಿಯೊಂದು ಮಗುವಿನಲ್ಲೂ ತನ್ನ ರೂಪವನ್ನು ತೋರಿಸುತ್ತಾನೆ. ಪ್ರತಿ ತಾಯಿಗೂ ತನ್ನ ಮಗನು ಮುದ್ದುಕೃಷ್ಣನಲ್ಲವೇ? ಪ್ರತಿ ಅಜ್ಜಿಗೂ ತನ್ನ ಮೊಮ್ಮಗು ಸಾಕ್ಷಾತ್ ಕೃಷ್ಣನೆ ? ಅಲ್ಲವೇ? ತಂದೆ, ತಾತಂದಿರಿಗೂ ಕೂಡ ಆ ಮುದ್ದು ಮಗುವನ್ನು ಬಿಟ್ಟಿರಲು ಸಾಧ್ಯವೇ? 

ತಾನು ಮಗುವಲ್ಲ ಭಗವಂತ ಎಂದು ತೋರಿಸಲು ಶಂಕಚಕ್ರ ಗಧಾ ಪದ್ಮವನ್ನು ಹಿಡಿದು ದೇವಕಿಯ ಮುಂದೆ ಪ್ರಾಧುರ್ಭಾವಾಗುತ್ತಾನೆ, ಎಲ್ಲ ಬೀಗಗಳನ್ನು ಒಡೆದು ರಾಕ್ಷಸರಿಗೆ ನಿದ್ದೆ ಬರಿಸಿ, ಯಮುನೆಯು ದಾರಿ ಬಿಡುವಂತೆ ಮಾಡಿ, ಪೂತನಿಯನ್ನು ಸಂಹರಿಸಿ , ಯಶೋಧೆಗೆ ಬಾಯಲ್ಲಿ ಬ್ರಹ್ಮಾಂಡವನ್ನೇ ತೋರಿಸುತ್ತಾನೆ. 

ಆದರೂ ಮರುಕ್ಷಣವೇ ಆಕೆಯ ಮನದಲ್ಲಿ “ನನ್ನ ಮಗು ನನ್ನ ಮಗು” ಎಂಬ ಮಮಕಾರವನ್ನು ಹುಟ್ಟಿಸಿ, ಮಾಯಾ ಮೋಹದ ಪರದೆಯನ್ನು ಹಾಕುತ್ತಾನೆ .

ಹಂಚಿ ತಿನ್ನಿ ಎಂದು ತೋರಿಸಲೆಂದೇ ಬೆಣ್ಣೆಯನ್ನು ಕದಿಯುತ್ತಾನೆ, ಎಲ್ಲ ಗ್ವಾಲ ಬಾಲರಿಗೂ, ಹಂಚುತ್ತಾನೆ ಅಷ್ಟೇ ಅಲ್ಲ, ಅಲ್ಲಿದ್ದ ಪ್ರಾಣಿಗಳು, ಬೆಕ್ಕು, ನಾಯಿ ಮುಂತಾದವುಗಳಿಗೂ ಕೊಡುತ್ತಾನೆ. ನೀವೂ ಕೊಡಿ, ಸ್ವಾರ್ಥದಿಂದ ಎಲ್ಲ ನನಗೇ ಎಂದು ಕೂಡಿಟ್ಟರೆ, ಅದನ್ನು ಕದಿಯುತ್ತಾರೆ, ನಾಶ ಮಾಡುತ್ತಾರೆ ಎನ್ನುತ್ತಾನೆ.ಇಲ್ಲಿ ಬೆಣ್ಣೆ ಸಂಪತ್ತಿನ ಪ್ರತೀಕ.

ಭಗವಂತ ನಮ್ಮನ್ನು ಸದಾ ಪರೀಕ್ಷೆ ಮಾಡುತ್ತಿರುತ್ತಾನೆ. ನಿನಗೆ ನಾನು ಬೇಕೋ ಅಥವಾ ನಿನ್ನ ಇಂದ್ರಿಯಗಳನ್ನು ತೃಪ್ತಿಪಡಿಸುವ ವಸ್ತುಗಳು ಬೇಕೋ ಎಂದು! ಅಳುವ ಮಗುವಿಗೆ ಆಟದ ಸಾಮಾನನ್ನು ಕೊಟ್ಟರೆ, ಹೇಗೆ ತನ್ನ ತಾಯಿಯನ್ನು ಮರೆತು ಆಟದ ಸಾಮಾನಿನಲ್ಲಿ ಮುಳುಗಿ ಹೋಗುತ್ತದೋ! ಹಾಗೆಯೇ ಭಗವಂತನೇ ಬೇಕು ಎಂದು ಹಠ ಹಿಡಿದು ಬೇರೆ ಪದಾರ್ಥಗಳಿಂದ ನಮ್ಮ ಮನಸ್ಸನ್ನು ದೂರ ಮಾಡದಿದ್ದರೆ, ಮರೀಚಿಕೆಯಂತೆ ಪರಮಾತ್ಮ ಎಂದಿಗೂ ಸಿಗುವುದಿಲ್ಲ. ಕ್ಷಿತಿಜದಂತೆ ಹತ್ತಿರದಲ್ಲೇ ಇರುವಂತೆ ಭಾಸವಾದರೂ, ಬಹಳ ದೂರವಾಗಿ ಬಿಡುತ್ತಾನೆ. ಅವನನ್ನೇ ಧ್ಯಾನಿಸಿ, ಅಂತರಂಗದ ಕಣ್ಣನ್ನು ತೆಗೆದಾಗ ಮಾತ್ರ ಅವನನ್ನು ತಿಳಿದುಕೊಳ್ಳಬಹುದು, ಅವನನ್ನು ಕಾಣಬಹುದು ಆನಂದದ ಅತಿರೇಕಕ್ಕೆ ಏರಬಹುದು.

ಕಂಸನನ್ನು ಕೊಂದರೂ ಅವನು ಸಿಂಹಾಸನ ವನ್ನು ಏರಲಿಲ್ಲ! ತನ್ನ ತಾತನನ್ನು ರಾಜನನ್ನಾಗಿ ಮಾಡಿದ. ಧರ್ಮವನ್ನು ಸಂಸ್ಥಾಪಿಸಿದ. ಧರ್ಮಿಷ್ಠ ರಾದ ಧರ್ಮರಾಯನನ್ನು ಪೊರೆದ. ಅಧರ್ಮಿ ಗಳಾದ ದುರ್ಯೋಧನಾದಿಗಳನ್ನು ಸಂಹರಿಸಿದ. ನಾನು ಯಾವಾಗಲೂ ಧರ್ಮದ ಪಕ್ಷದಲ್ಲಿ ಇರುತ್ತೇನೆ ಎಂಬುದನ್ನು ಮತ್ತೆ ಮತ್ತೆ ಸಾರಿದ. ಆದ್ದರಿಂದ “ನೀವು ಸತ್ಯ ಧರ್ಮ ಮಾರ್ಗದಲ್ಲಿ ನಡೆಯಿರಿ. ನಾನು ನಿಮ್ಮ ಜೊತೆ ಇರುತ್ತೇನೆ ಜಯ ನಿಮ್ಮದಾಗುತ್ತದೆ” ಎಂದು ಹೇಳಿದ್ದಾನೆ.

ಪ್ರಕೃತಿಯನ್ನು ಪೂಜಿಸಿ ಸಂರಕ್ಷಿಸಿ ಎಂದು ಸಾರಲು ಗೋವರ್ಧನ ಗಿರಿಗೆ ಪೂಜೆಯನ್ನು ಮಾಡಿಸಿದ್ದಾನೆ. 

“ನಿಮ್ಮ ಭಾರವನ್ನೆಲ್ಲ ನನಗೆ ಬಿಡಿ”. ಎಂದು ಹೇಳಲು ಭಾರವಾದ ಗೋವರ್ಧನವನ್ನು ಎತ್ತಿ ಮಳೆಯಿಂದ ಸಂರಕ್ಷಿಸಿದ್ದಾನೆ. ಇಲ್ಲಿ ಮಳೆ ಕಷ್ಟಗಳ ಪ್ರತೀಕವಾದರೆ, ಗೋವರ್ಧನ ಗಿರಿ ಭಗವಂತನ ಆಶ್ರಯ, ಅದರ ಕೆಳಗೆ ನಿಂತಂತಹ ಗೊಲ್ಲರು, ಏಳು ದಿನ ಹಸಿವೆ ಬಾಯಾರಿಕೆ ರೋಗ ರುಜಿನ ಯಾವುದು ಇಲ್ಲದಂತೆ ಜೀವಿಸಿದರು  ಎಂಬುದು ಮುಕ್ತಿಯ ಪ್ರತೀಕವಾಗಿದೆ. ಭಗವಂತನ ಆಶ್ರಯ ದೊರೆತರೆ, ಪ್ರಾಕೃತಿಕವಾಗಿ ಆಗುವಂತಹ ಯಾವ ಕಷ್ಟಗಳೂ ಆಗುವುದಿಲ್ಲ ಎಂಬ ತತ್ವ ಅದರಲ್ಲಿ ಅಡಗಿದೆ.

ವಿಷಪೂರಿತ ಮಡುವಿನಲ್ಲಿದ್ದ ಕಾಳಿಂಗನ ಮೇಲೆ ಕುಣಿದಂತಹ ಕೃಷ್ಣ, ನಮ್ಮ ಹೃದಯವೆಂಬ ಮಡುವಿನಲ್ಲಿ ಸೇರಿಕೊಂಡು ಅದನ್ನು ವಿಷಪೂರಿತವನ್ನಾಗಿ ಮಾಡುತ್ತಿರುವ ಅಹಂಕಾರ ವೆಂಬ ದುಷ್ಟ ಸರ್ಪದ ಮೇಲೆ ನಿಂತು ಕುಣಿಯಲಿ ನಮ್ಮ ಹೃದಯವನ್ನು ನಿಷ್ಕಲ್ಮಶವನ್ನಾಗಿ ಮಾಡಿಸಲಿ ಎಂಬ ಪ್ರಾರ್ಥನೆ ಕಳಿಂಗ ಮರ್ಧನ ಕೃಷ್ಣನ ಕಥೆಯಲ್ಲಿದೆ. ಭಗವಂತನ ರೂಪ ನಮ್ಮ ಅಂತರಂಗದ ಕನ್ನಡಿಗೆ ಕಾಣಿಸಬೇಕಾದರೆ, ಅದು ಪರಿಶುದ್ಧವಾಗಿ ಸ್ವಚ್ಛವಾಗಿರಬೇಕು, ಅಹಂಕಾರ, ಮಮಕಾರ ಎಂಬ ವಿಷ ಭಗವಂತನನ್ನು ಕಾಣಲು ಸಾಧ್ಯವಾಗದಂತೆ ಮಾಡಿಬಿಡುತ್ತದೆ. ಹೇಗೆ ಆ ವಿಷಪೂರಿತ ನೀರನ್ನು ಕುಡಿದು ಗೋವುಗಳೆಲ್ಲ ಮಡಿದವೋ, ಹಾಗೆ ನಾವು ಈ ಶರೀರದಲ್ಲಿ ಬಂದು ಯಾವ ಸಾಧನೆಯೂ ಇಲ್ಲದೆ ಮಡಿದು ಹುಟ್ಟು ಸಾವಿನ ಚಕ್ರದಲ್ಲಿ ಸಿಕ್ಕಿ ಹಾಕಿಕೊಳ್ಳುತ್ತೇವೆ. ಭಗ ವಂತನು ಅಹಂಕಾರವೆಂಬ ದರ್ಪದ ಸರ್ಪವನ್ನು ತುಳಿಯಲಿ ಎಂಬ ಪ್ರಾರ್ಥನೆ ಈ ಕಥೆಯಲ್ಲಿದೆ.

ಕಾಡುಕಿ ಚ್ಚನ್ನು ನುಂಗಿ ಆ ಕೃಷ್ಣ ಪರಮಾತ್ಮ, ಅಲ್ಲಿ, ಕಾಲಿಂದಿ ಮಡುವಿನ  ಬಳಿ ಅವನನ್ನು ನೋಡಲು ಬಂದು ನಿದ್ರಿಸುತ್ತಿದ್ದ ತನ್ನ ಗೆಳೆಯರನ್ನೆಲ್ಲ ಕಾಪಾಡುತ್ತಾನೆ. ಇದು ಅವನು ಏನನ್ನು ಬೇಕಾದರೂ ತಿನ್ನುತ್ತಾನೆ ಎಂಬ ತತ್ವವನ್ನು ಸಾರುತ್ತದೆ. ಲಯಕರ್ತನಾದಾಗ ಪರಮಾತ್ಮ ಪ್ರಳಯ ಕಾಲದಲ್ಲಿ ತಾನು ಸೃಷ್ಟಿಸಿದ ಸರ್ವಸ್ವವನ್ನು ತಾನೇ ಭುಂಜಿಸುತ್ತಾನೆ. ಅವನಿಗೆ ಅಸಾಧ್ಯವಾವುದು? ಇಲ್ಲಿ ಬೆಂಕಿ ನಮ್ಮ ಬಳಿಗೇ ಬರಬೇಕೆಂದಿರುವಂತಹ ಕಷ್ಟಗಳ ಪ್ರತೀಕವಾಗಿದೆ, ಅದನ್ನು ನುಂಗಿ ಕಾಪಾಡುವವನು ಭಗವಂತ

ನಂತರ ಭಗವಂತನೇ ತನ್ನ ಪತಿ ಎಂದು ಸತಿ ಭಾವದಲ್ಲಿ ಭಕ್ತಿಯನ್ನು ಮಾಡುವಂತಹ ಎಲ್ಲ ಭಕ್ತರಿಗೂ ಪ್ರತೀಕಳಾದವಳು ರಾಧೆ. ಆ ರಾಧೆಯಂತೆ ಎಲ್ಲ ಗೋಪಿಕಾ ಸ್ತ್ರೀಯರು ಕೃಷ್ಣನನ್ನು ತಮ್ಮ ಪತಿ ಎಂದು ಭಾವಿಸಿ ಪೂಜಿಸುತ್ತಾರೆ. ನದಿಗಳೆಲ್ಲವೂ ಹರಿದು ಹೋಗುವುದು ಸಮುದ್ರವನ್ನು ಸೇರಲೆಂದು. ಹಾಗೆಯೇ ಭಗವಂತನ ಒಂದು ಪುಟ್ಟ ಅಂಶವಾ ದಂತಹ ನಾವೆಲ್ಲ ಆತ್ಮಗಳು ಕಡೆಗೆ ಸೇರಬೇಕಾಗಿ ರುವುದು ಆ ಪರಮಾತ್ಮನನ್ನೇ. ಆದ್ದರಿಂದ ರಾಧಾ ಕೃಷ್ಣರ ಪ್ರೀತಿ ಅದು ಆತ್ಮ ಪರಮಾತ್ಮರ ಮಿಲನ.

ಕೊಳಲನ್ನು ಕೃಷ್ಣ ಊದುತ್ತಿರುವಾಗ ಪ್ರತಿಯೊಂದು ಜೀವಿ, ಅಳಿಲಿರಬಹುದು ಹುಲಿ ಇರಬಹುದು ಸಿಂಹವಿರಬಹುದು ಅಥವಾ ಗೋಪಿಕೆಯರಿಬಹುದು, ಅಲುಗಾಡದಂತೆ ಏಕಾಗ್ರಚಿತ್ತದಿಂದ ಅವನ ಗಾನ ಸುಧೆದಲ್ಲಿ ತಲ್ಲೀನ ರಾಗಿರುತ್ತಾರೆ. ಅಲ್ಲಿ ಯಾವ ಜಗಳವಿಲ್ಲ ವೈರತ್ವವಿಲ್ಲ ಕೇವಲ ಪ್ರೀತಿ, ಅಂತರಂಗದ ಪ್ರೀತಿ, ಆನಂದದ ಪ್ರೀತಿ, ಆಧ್ಯಾತ್ಮದ ಪ್ರೀತಿ. ಈ ಪ್ರೀತಿಯೇ ಜಗತ್ತಿನಲ್ಲಿ ನೆಮ್ಮದಿ ಸಂತೋಷ ಸಂಭ್ರಮ  ಎಲ್ಲದಕ್ಕೂ ಕಾರಣ. ಹೃದಯ ಸಂತೃಪ್ತವಾಗಿ ಸಂತೋಷವಾಗಿ ಇರಬೇಕಾದರೆ ಅದು ಬೇರೆಯವರಿಗಾಗಿ ತುಡಿಯಬೇಕು. ಎಲ್ಲಿ ತ್ಯಾಗವಿರುತ್ತದೆ, ದಾನವಿರುತ್ತದೆ, ಅಲ್ಲಿ ಆತ್ಮತೃಪ್ತಿ ಇರುತ್ತದೆ, ಆತ್ಮಾನಂದ ವಿರುತ್ತದೆ. ಶ್ರೀ ಕೃಷ್ಣನ ಅವತಾರದಲ್ಲಿ ಅವನು ಗೋವುಗಳನ್ನು ನೋಡಿಕೊಂಡ ಬಗೆಯನ್ನು ಮತ್ತು ಯುದ್ಧದ ಸಮಯದಲ್ಲಿ ಅರ್ಜುನನ ರಥದ ಕುದುರೆಗಳಿಗೆ ಮಾಡಿದ ಆರೈಕೆಯನ್ನು ನೋಡಿದಾಗ ಭಗವಂತ ತಾನು ಸೃಷ್ಟಿಸಿದ ಜೀವಿಗಳ ಬಗ್ಗೆ ಎಷ್ಟು ಕಾಳಜಿ ಎಷ್ಟು ಪ್ರೀತಿ ವಹಿಸುತ್ತಾನೆ ಎಂಬುದು ಸುಸ್ಪಷ್ಟವಾಗುತ್ತದೆ.

ರಾಕ್ಷಸರಿಗೂ ರಾಕ್ಷಸ ಪ್ರವೃತ್ತಿಯವರೆಗೂ ತಿದ್ದಿಕೊಳ್ಳಲು ಅವಕಾಶ ಕೊಡುತ್ತಾನೆ. ಶಿಶುಪಾಲನ 100 ತಪ್ಪುಗಳನ್ನು ಕ್ಷಮಿಸುತ್ತಾನೆ, ಇದು ಅವನ ಕ್ಷಮಾ ಗುಣವನ್ನು ತೋರಿಸುತ್ತದೆ. ‌ ಆದ್ದರಿಂದಲೇ ಅವನನ್ನು ಕರುಣಾಮಯಿ ಎಂದು ನಾವು ಕೊಂಡಾಡುತ್ತೇವೆ.

ಕಾಳಜಿ ವಹಿಸಿ ಇಷ್ಟು ಸಂರಕ್ಷಿಸಿದ ಯಾದವರನ್ನು, ಕಡೆಯ ಕಾಲದಲ್ಲಿ ಶಾಪಗ್ರಸ್ತರಾಗಿ ಅವರು ಹೊಡೆದಾಡಿಕೊಂಡು ಸಾಯುತ್ತಿರುವಾಗ , ಸುಮ್ಮನೆ ಮರದ ಕೆಳಗೆ ಕುಳಿತು ನೋಡುತ್ತಾನೆ. ಆಯಾ ಕಾಲಕ್ಕೆ ಏನೇನು ಆಗಬೇಕು ಅದು ಆಗಬೇಕು. ಅದನ್ನು ಅವನು ತಪ್ಪಿಸುವುದಿಲ್ಲ. ಅವರು ತಮ್ಮ ತಮ್ಮ ಸ್ಥಾನಕ್ಕೆ ಹಿಂದಿರುಗುವ ಕಾಲ ಬಂದಾಗ, ಅದಕ್ಕೆ ಅನುವು ಮಾಡಿ ಕೊಟ್ಟು, ಮತ್ತೆ ಹೊಸ ಲೀಲೆಗಳನ್ನು ಮಾಡಲು ಹೊಸ ಅವತಾರವನ್ನು ತಾಳಲು ಸಿದ್ದನಾಗುತ್ತಾನೆ.

ಇಂತಹ ಕೃಷ್ಣ ಪರಮಾತ್ಮ ಭೂಮಿಗೆ ಇಳಿದಂತಹ ದಿನ ಈ ಕೃಷ್ಣ ಜನ್ಮಾಷ್ಟಮಿ ಎಲ್ಲರಿಗೂ ಅಂತರಂಗದ ಆನಂದವನ್ನು ಕೊಡಲಿ, ಅವರಲ್ಲಿರುವ ಅಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸಲಿ. ಕೃಷ್ಣನು ತಾನು ತೋರಿಸಿ ದಂತಹ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಶ್ರೇಷ್ಠ ಗುಣಗಳು ಬೆಳೆಯಲಿ ಎಂದು ಆಶಿಸುತ್ತೇನೆ.

– ಶ್ರೀ ಕೃಷ್ಣಾರ್ಪಣಮಸ್ತು

ರೂಪಶ್ರೀ ಶಶಿಕಾಂತ್

error: Content is protected !!