ರಾಘವೇಂದ್ರ ಸ್ವಾಮಿಗಳು – ಕಲಿಯುಗದ ಕಾಮಧೇನು

ರಾಘವೇಂದ್ರ ಸ್ವಾಮಿಗಳು – ಕಲಿಯುಗದ ಕಾಮಧೇನು

ಶ್ರೀ ರಾಘವೇಂದ್ರ ಸ್ವಾಮಿಗಳ 353 ನೇ ಆರಾಧನಾ ಮಹೋತ್ಸವ

ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮರತಾಯಚ 

ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ 

ರಾಘವೇಂದ್ರ ಸ್ವಾಮಿಗಳು ಎಂದ ತಕ್ಷಣ ನಮ್ಮ ಮನಸ್ಸಿಗೆ ಮೊದಲು ಬರುವುದು ಅತ್ಯಂತ ದಯಾಳುಗಳು, ಕಾರುಣ್ಯ ಮೂರ್ತಿಗಳು, ಕೇಳಿದ್ದನ್ನೆಲ್ಲ ಕೊಡುವವರು. 

ಕಲಿಯುಗದ ಭೀಕರ ಕಷ್ಟಗಳನ್ನು ಅನುಭವಿಸುತ್ತಿರುವ ಪಾಪರಾಶಿಗಳ ದೊಡ್ಡ ದೊಡ್ಡ ಹೊರೆಗಳನ್ನು ಹೊತ್ತಂತಹ ಜೀವಿಗಳ ಉದ್ಧಾರಕ್ಕಾಗಿ ಅವತಾರ ಮಾಡಿದಂಥವರು ರಾಘವೇಂದ್ರ ಸ್ವಾಮಿಗಳು. ಇವರು ಪ್ರಹ್ಲಾದ ರಾಜರ ಅವತಾರ. 

ಭಕ್ತಿ ,ನಿಷ್ಠೆ ,ಶ್ರದ್ಧೆ, ಏಕಾಗ್ರತೆ, ಏಕ ನಿಷ್ಠೆ ಎಲ್ಲದಕ್ಕೂ ಪ್ರತೀಕವಾಗಿರುವಂತಹ ಬಾಲಕರು ಪ್ರಹ್ಲಾದ ರಾಜರು. ಘೋರ ರಾಕ್ಷಸನಾದ ಹಿರಣ್ಯ ಕಶ್ಯಪಿವಿನ ಮಗನಾದರೂ ಪರಮಾತ್ಮನಾದ ನಾರಾಯಣನಲ್ಲಿ ಅತ್ಯಂತ ಭಕ್ತಿ ಶ್ರದ್ಧೆ ಉಳ್ಳವನಾಗಿ, ನಾರದರಿಂದ ತಿಳಿದಂತಹ ಜ್ಞಾನದಿಂದ, ‌ ತನ್ನ ಸಹಪಾಠಿಗಳು ಉದ್ಧಾರವಾಗಲೀ ಎಂಬ ಉದ್ದೇಶದಿಂದ, ಅವರಿಗೆ ಭಗವಂತನ ಬಗ್ಗೆ ತಿಳುವಳಿಕೆಕೊಟ್ಟ ಶ್ರೇಷ್ಠರು.

ಇವರ ಭಕ್ತಿಗೆ ಒಲಿದು ಭಗವಂತ ಕಂಬದಿಂದ ಪ್ರಾಧುರ್ಭವಿಸಿ ತಾನು ಎಲ್ಲೆಲ್ಲೂ ಇರುವೆನೆಂಬ ಸತ್ಯ ತೋರಿಸಿದ. ಸಿಂಹ ಮುಖ ಮತ್ತು ಮನುಷ್ಯ ದೇಹ ಧರಿಸಿ ಹೇಗೆ ಬೇಕಾದರೂ ತಾನು ಕಾಣಬಹುದು ಎಂದು ತೋರಿಸಿದ.ಉಗುರಿನಿಂದ  ಕರುಳು ಸೀಳಿ, ತನಗೆ ಆಯುಧವೇ ಬೇಡ ಎಂದು ತೋರಿಸಿದರೆ. ತನ್ನ ಕಣ್ಣು ದೃಷ್ಟಿಯಿಂದ ಕೊಲ್ಲಬಲ್ಲವನು  ಭಕ್ತನಿಗೆ ಕೊಟ್ಟ ಕಷ್ಟಕ್ಕೆ ಸಿಟ್ಟಿನಿಂದ ಈ ಘೋರ ರೂಪದಲ್ಲಿ ಪ್ರತ್ಯಕ್ಷನಾದ.

ನರಸಿಂಹ ರೂಪದಲ್ಲಿ ಭಗವಂತ ಬಂದರೂ ಒಂದು ಸ್ವಲ್ಪವೂ ಭಯಪಡದೆ, ದೇವಾನು ದೇವತೆಗಳೆಲ್ಲ ಹೆದರಿ ಗಡಗಡ ನಡುಗುತ್ತಿರುವಾಗ, ಸ್ತೋತ್ರ ಮಾಡಿ ಅವನನ್ನು ಶಾಂತ ಮಾಡಿದಂತಹ ಭಕ್ತಾಗ್ರೇಸರರು ಇವರು!

ಏನೇ ಕಷ್ಟ ಕೊಟ್ಟರೂ, ವಿಷವನ್ನೇ ತಿನ್ನಿಸಿದರು, ಬೇಸರವಿಲ್ಲದೆ, ಒಂದೇ ನಂಬಿಕೆಯಿಂದ ಬಾಳಿದಂತಹ ಮುಗ್ಧ ಬಾಲಕರು. ಸತತ ಹರಿನಾಮ ಸ್ಮರಣೆ, ಮನಸ್ಸಿನಲ್ಲಿ ಅವನ ಚಿಂತನೆ, ಕೈಗಳನ್ನು ಮುಗಿದು ಕೊಂಡು ಅವನ ಪ್ರಾರ್ಥನೆ ಮಾಡಿದ ಆ ಬಾಲನ ಭಕ್ತಿಗೆ ದೇವ ಮೆಚ್ಚಿದ.

ಸಾಧಕರಿಗೆ ಒಂಭತ್ತು ವಿಧದ ಭಕ್ತಿಯನ್ನೂ ಪ್ರಹ್ಲಾದರು ಬೋಧಿಸಿದರು.ಭಗವಂತನ ಬಗ್ಗೆ ಕೇಳುವುದು -ಶ್ರವಣ, ಅವನ ಗುಣಗಾನ ಮಾಡುವುದು –ಕೀರ್ತನ, ಅವನ ಬಗ್ಗೆ ಚಿಂತಿಸುವುದು-ಸ್ಮರಣ, ಅವನ ಪಾದ ಸೇವೆ ಮಾಡುವುದು-ಪಾದಸೇವನ, ಅವನನ್ನು ಹೂವು, ಕುಂಕುಮ ಇತ್ಯಾದಿಯಿಂದ ಅರ್ಚನೆ ಮಾಡಿ ಪೂಜಿಸುವುದು -ಅರ್ಚನ, ಅವನಿಗೆ ನಮಸ್ಕರಿಸುವುದು –ವಂದನ, ಅವನ ದಾಸ ನಾನು ಎಂದು ಅವನಿಗಾಗಿ ಜೀವನ ಮಾಡುವುದು. – ದಾಸ್ಯ, ಅವನ ಸ್ನೇಹಿತನಂತೆ ಪ್ರೀತಿಸುವುದು (ಉದಾಹರಣೆಗೆ ಅರ್ಜುನ ಕೃಷ್ಣರ ಸ್ನೇಹ ) — ಸಖ್ಯ .ಮತ್ತು ಅವನಲ್ಲಿ ಸಂಪೂರ್ಣ ಶರಣಾಗತಿ. ನೀನೇ ಕಾಪಾಡಬೇಕು ಎಂಬ  ಆಗ್ರಹ. ನೀನಿಲ್ಲದೇ ಗತಿ ಇಲ್ಲ ಎಂಬ ಭಾವ—ಆತ್ಮನಿವೇದನೆ.ಈ ಭಕ್ತಿ ಭಾವದಿಂದ ಎಲ್ಲರೂ ಭಕ್ತಿ ಮಾಡುವ ಒಂದು ಮಾರ್ಗದರ್ಶನ ಕೊಟ್ಟಿದ್ದಾರೆ.

ರಾಕ್ಷಸನನ್ನು ಸಂಹರಿಸಿದ ನಂತರ, ಏನು ಬೇಕು ಎಂದು ಕೇಳಿದಾಗ, ಕೇವಲ ನಿನ್ನ ಭಕ್ತಿಯನ್ನು ಕೊಡು ಎಂದು ಪ್ರಾರ್ಥಿಸಿದಂತಹ ಪ್ರಹ್ಲಾದರು, ಭಗವಂತನು ಮೋಕ್ಷ ಕೊಡುತ್ತೇನೆ ಎಂದಾಗ, ನನ್ನ ಜೊತೆ ಇರುವ ಈ ಅಸುರ ಬಾಲಕರಿಗೂ, ಜ್ಞಾನದ ಮಾರ್ಗವನ್ನು ತೋರಿಸಿ ಮೋಕ್ಷದ ದಾರಿಗೆ ಕರೆದುಕೊಂಡು ಬರುತ್ತೇನೆ ಎಂದು ಹೇಳಿದಂತಹ ನಿಸ್ವಾರ್ಥ ಪುಣ್ಯಾತ್ಮರು. ತನಗೆ ಸಿಕ್ಕಂತಹ ಜ್ಞಾನವನ್ನು ಎಲ್ಲರಿಗೂ ಹಂಚಬೇಕು ಎಂಬ ಸದುದ್ಧೇಶ ಅವರದು. 

ಆದ್ದರಿಂದಲೇ ಕಲಿಯುಗದ ಮನುಷ್ಯರನ್ನು ಉದ್ಧಾರ ಮಾಡಲು ಭಗವಂತನು ರಾಯರನ್ನು ಕಳಿಸಿದ್ದಾನೆ. ಅವರ ಗ್ರಂಥಗಳಲ್ಲಿ ಭಗವಂತನ ಮಹಿಮೆಗಳ ಅತ್ಯುತ್ತಮ ಚಿತ್ರಣವಿದೆ. ತಮ್ಮ ಜ್ಞಾನ ಭಂಡಾರವನ್ನೇ ತಮ್ಮ ರಚನೆಗಳಲ್ಲಿ ತುಂಬಿದ್ದಾರೆ.

ನೊಂದು ಬೆಂದು ಹೋದವರ ಎಲ್ಲ ಕಷ್ಟಗಳನ್ನು ಪರಿಹರಿಸುತ್ತಾರೆ. ಅವರ ಸನ್ನಿಧಾನದಲ್ಲಿ ಪವಾಡಗಳು ಇಂದಿಗೂ ನಡೆಯುತ್ತಿವೆ. ಅವರ ಭಕ್ತರ ಒಂದು ದೊಡ್ಡ ಸಾಗರವೇ ಈ ಜಗತ್ತಿನಲ್ಲಿ ತುಂಬಿದೆ. ವಿಶ್ವದಾದ್ಯಂತ ಅವರ ಮಠಗಳು, ಸಂಸ್ಕಾರ, ಸಂಸ್ಕೃತಿ, ಅಧ್ಯಾತ್ಮಿಕ ಆನಂದವನ್ನು ಹಂಚುತ್ತಿವೆ. ಜ್ಞಾನಮಾರ್ಗವನ್ನು ಬೋಧಿಸುತ್ತಿವೆ.

ಅವರ ನಾಮಜಪ, ಮಂತ್ರಾಕ್ಷತೆ, ಮೃತ್ತಿಕೆಗಳಿಗೆ ಅಪಾರ ಶಕ್ತಿ. ರೋಗಗಳನ್ನು ಕಳೆವುದರಿಂದ ರೋಗಹರನೆ ಕೃಪಾಸಾಗರ ಶ್ರೀ ಗುರು ರಾಘವೇಂದ್ರ  ಎಂದು ಭಕ್ತರು ಹಾಡಿದ್ದಾರೆ.

ರಾಯರಿಗೆ ಎಲ್ಲರೂ ಒಂದೇ, ಜಾತಿ, ಮತ ಬೇಧ ಮಾಡದೆ ಎಲ್ಲರೊಳಗೆ ಇರುವ ಆತ್ಮ ಭಾವಕ್ಕೆ ಬೆಲೆ ಕೊಡುವವರು. ಎಲ್ಲರ ಉನ್ನತಿಗಾಗಿ ಶ್ರಮಿಸಿದ್ದಾರೆ.ಇಂದಿಗೂ ಬೃಂದಾವನದಲ್ಲಿ ಕುಳಿತು ಆಶೀರ್ವಾದ ನೀಡುತ್ತಿದ್ದಾರೆ ಎಂಬ ನಂಬಿಕೆ ಇದೆ ‌.

ಕೇಳಿದ್ದನ್ನೆಲ್ಲ ಕೊಡುವ ರಾಯರನ್ನು ಕಲ್ಪವೃಕ್ಷ ಎಂದು ಕರೆದಿದ್ದಾರೆ.  ಇಂತಹ ರಾಯರು ಎಲ್ಲರಿಗೂ ನೆಮ್ಮದಿ ಸಂತೃಪ್ತಿ ಆನಂದ ನೀಡಲಿ ಎಂದು ಪ್ರಾರ್ಥಿಸುತ್ತೇನೆ. 

-ಶ್ರೀ ಕೃಷ್ಣಾರ್ಪಣಮಸ್ತು 

ರೂಪಶ್ರೀ ಶಶಿಕಾಂತ್

error: Content is protected !!