ಹೆಸರಾಂತ ಕಂಪನಿ ನಾಟಕಗಳೇ ಇರಲಿ, ಹಳ್ಳಿಗಾಡಿನ ನಾಟಕಗಳೇ ಇರಲಿ ಅಲ್ಲಿ ಪೇಟಿ ಮಾಸ್ತರನ ಪಾತ್ರ ಮಹತ್ತರವಾದುದು. ಅವನಿಲ್ಲದೇ ನಾಟಕವೇ ಇಲ್ಲ. ಉತ್ತರ ಕರ್ನಾಟಕದ ಕಡೆ ಪೇಟಿ ಇಲ್ಲವೇ ಪೆಟಗಿ ಮಾಸ್ತರನೆಂದು ಕರೆಯಲಾಗುವ ಇವರನ್ನು ದಕ್ಷಿಣ ಕರ್ನಾಟಕ ಮತ್ತಿತರೆ ಕಡೆಗೆ ಹಾರ್ಮೋನಿಯಂ ಮೇಷ್ಟ್ರು ಇಲ್ಲವೇ ಪಿಯಾನೋ ಪೆಟಗಿ ಮೇಷ್ಟ್ರು ಎಂತಲೂ ಕರೆಯಲಾಗುತ್ತದೆ. ಕಂದಪದ್ಯ, ವೃತ್ತಪದ್ಯಗಳ ಹಾಡುವಿಕೆಯನ್ನು ಕಲಾವಿದರಿಗೆ ಕಲಿಸಿಕೊಟ್ಟು ಅವುಗಳಿಗೆ ಶಾಸ್ತ್ರೀಯ ನೆಲೆಗಟ್ಟಿನ ರಾಗ ಸಂಯೋಜನೆ ಮಾಡಿ ಹಾರ್ಮೋನಿಯಂ ನುಡಿಸುವುದು ಇವರ ಪ್ರಮುಖ ಕಾಯಕ.
ಅಷ್ಟು ಮಾತ್ರ ಆಗಿದ್ರೆ ಇಲ್ಲಿ ಉಲ್ಲೇಖಿಸುವ ಅಗತ್ಯ ಇರುತ್ತಿರಲಿಲ್ಲ. ಅದನ್ನು ಮೀರಿ ಕುಟುಂಬದ ಸದಸ್ಯರೆಲ್ಲರೂ ಕುಂತು ನೋಡುವ ಸದಭಿರುಚಿ ನಾಟಕದ ಸಂಪೂರ್ಣ ಯಶಸ್ಸಿನ ಹೊಣೆಯೇ ಇವರದು. ಎಲ್ಲಿಯೂ ಸಭ್ಯತೆಯ ಎಲ್ಲೆ ಮೀರದಂತೆ ನವರಸಭರಿತ ಒಟ್ಟು ನಾಟಕದ ದಿಗ್ದರ್ಶನವೂ ಇವರ ರಂಗಕ್ಷಮತೆಯ ಜವಾಬ್ದಾರಿ. ನಾಟಕದ ಪಾತ್ರಗಳ ಹಂಚಿಕೆಯಲ್ಲಿ ಹಳ್ಳಿಗಳಲ್ಲಿನ ಕಲಾವಿದರ ಪ್ರತಿಭಾನ್ವೇಷಣೆಯ ಕೆಲಸ ಇವರದು. ಅಂತೆಯೇ ಸಂಗೀತವೂ ಸೇರಿದಂತೆ, ಸ್ಥಳೀಯವಾಗಿ ರಂಗ ಸಂಸ್ಕೃತಿಯ ಸುದೀಪ್ತ ಪರಂಪರೆಯನ್ನು ಪೊರೆದವರು ಪೇಟಿ ಮಾಸ್ತರರು. ಇತ್ತೀಚೆಗೆ ಇದೆಲ್ಲಕ್ಕೂ ಧಕ್ಕೆ ಬಂದಿರುವುದು ಅಷ್ಟೇ ಗಮನೀಯ. ಹಾಗೆ ನೋಡಿದರೆ ಸಮಗ್ರ ವೃತ್ತಿ ರಂಗಭೂಮಿಯೇ ಆತ್ಮಪರೀಕ್ಷೆಯ ಕಾಲ ತಲುಪಿದಂತಿದೆ.
ಆನುಷಂಗಿಕ ಫಲದಂತೆ ಸ್ಥಳೀಯ ನಾಟಕಗಳ ರಂಗ ತಾಲೀಮುಗಳಿಗೆ ರೋಚಕ ವಾದ ರಂಗೇತಿಹಾಸವುಂಟು. ಅವುಗಳ ಸೂಕ್ಷ್ಮ ಮತ್ತು ಸಂವೇದನಾಶೀಲ ಆಯಾಮಗಳಿಗೆ ಹತ್ತು, ಹಲವು ತರಹೇವಾರಿ ದಂತಕತೆಗಳು ಇಲ್ಲದಿಲ್ಲ. ಇವರಿಲ್ಲದೇ ಹಳ್ಳಿಗಳಲ್ಲಿ ನಾಟಕ ಸಂಸ್ಕೃತಿಯೇ ಇಲ್ಲ. ಗ್ರಾಮೀಣ ರಂಗಭೂಮಿಯ ಬೆಳವಣಿಗೆಯಲ್ಲಿ ಹಾರ್ಮೋನಿಯಂ ಮಾಸ್ತರರ ಪಾತ್ರ ಮಾತ್ರ ಮಹತ್ವವಾದುದು. ವೃತ್ತಿರಂಗ ಭೂಮಿಯ ಅಧ್ಯಯನ ಮತ್ತು ಸಂಶೋಧನಾ ರ್ಥಿಗಳಿಗೆ ಹಾರ್ಮೋನಿಯಂ ಮಾಸ್ತರರು ಘನೀಭೂತ ಅನುಭವಗಳ ಆಕರ ಗ್ರಂಥಗಳೇ ಹೌದು.
ಒಂದು ಅಂದಾಜಿನಂತೆ ಕರ್ನಾಟಕದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಮಂದಿ ಹಾರ್ಮೋ ನಿಯಂ ಮಾಸ್ತರರು ರಂಗಸೇವೆಯಲ್ಲಿ ತೊಡಗಿಸಿ ಕೊಂಡಿದ್ದಾರೆ. ಒಬ್ಬ ಹಾರ್ಮೋ ನಿಯಂ ಮಾಸ್ತರ ವರ್ಷಕ್ಕೆ ಕಮ್ಮಿ ಎಂದರೂ ನಾಲ್ಕೈದು ನಾಟಕಗಳನ್ನು ಕಲಿಸುತ್ತಾರೆ. ಇವರಲ್ಲಿ ನೀಲಗುಂದ ಬಸವನಗೌಡರು ಓರ್ವ ಪ್ರಮುಖರು. ಎಪ್ಪತ್ತರ ಏರು ಪ್ರಾಯದ ಬಸವನ ಗೌಡ ವೃತ್ತಿ ರಂಗಭೂಮಿಯ ತವರೂರು ದಾವಣಗೆರೆಯವರು. ಮೂಲತಃ ಹರಪನಹಳ್ಳಿ ತಾಲ್ಲೂಕಿನ ನೀಲಗುಂದ ಗ್ರಾಮದ ಬಸವನ ಗೌಡರು ಪ್ರಸ್ತುತ ದಾವಣಗೆರೆ ಶಹರದ ಯಲ್ಲಮ್ಮ ನಗರ ನಿವಾಸಿ. ಅವರದು ಸಮೃದ್ಧ ರಂಗ ಕುಟುಂಬ. ಅವರ ಪತ್ನಿ ಸಾವಿತ್ರಮ್ಮ ಮತ್ತು ಮಗಳು ಸುಜಾತ ಸಹಿತ ರಂಗಭೂಮಿ ಕಲಾವಿ ದರು. ಬಸವನಗೌಡರು ಅರ್ಧ ಶತಮಾನ ಮಿಕ್ಕಿದಷ್ಟು ತಮ್ಮ ಆಯಸ್ಸನ್ನು ವೃತ್ತಿ ರಂಗಭೂಮಿಗಾಗಿಯೇ ಮುಡಿಪಿಟ್ಟವರು.
ರಂಗಭೂಮಿಗಾಗಿಯೇ ನೂರೆಂಬತ್ತು ಎಕರೆ ಹೊಲವನ್ನು ಕಳಕೊಂಡವರು. ಹೀಗೆ ನಾಟಕದ ಹುಚ್ಚು ನೀಲಗುಂದ ಗೌಡರ ಮನೆತನದ ನಿರಂತರ ರಂಗ ಪರಂಪರೆಯಾಗಿ ಬೆಳೆದು, ಅದೀಗ ಆ ಅಜ್ಜನಿಂದ ಈ ಮೊಮ್ಮಗ ಬಸವನ ಗೌಡರವರೆಗೆ ಹರಿಗಡೆಯದೇ ಮುನ್ನಡೆದಿದೆ. ಇವರ ತಾತ ಕಟ್ಟಿದ `ಶ್ರೀಶೈಲ ಮಲ್ಲಿಕಾರ್ಜುನ ನಾಟ್ಯಸಂಘ’ದ ಹೆಸರನ್ನು ವಾರ್ಷಿಕವಾಗಿ ಕಳೆದ ಹತ್ತು ವರುಷಗಳಿಂದ ಮೊಮ್ಮಗ ಬಸವನಗೌಡ ಕ್ರಿಯಾಶೀಲವಾಗಿಸಿ ದ್ದಾರೆ. ಪ್ರತಿವರ್ಷವೂ ಸಂಘದ ವಾರ್ಷಿಕೋತ್ಸವ ಸಂದರ್ಭದಲ್ಲಿ ರಂಗಭೂಮಿ ಸೇವೆಗೈಯ್ದ ಐವತ್ತು ಮಂದಿ ಹಿರಿಯ ಮತ್ತು ಅರ್ಹ ರಂಗ ಕಲಾವಿದರನ್ನು ಸತ್ಕರಿಸುತ್ತಾರೆ.
ಗ್ರಾಮೀಣ ನಾಟಕಗಳ ಸಂದರ್ಭದಲ್ಲಿ ಬಸವನಗೌಡರಿಗೆ ವಿಶಿಷ್ಟವಾದ ಸ್ಥಾನಮಾನ. ಉತ್ತರ ಕರ್ನಾಟಕದ ಹತ್ತಾರು ಜಿಲ್ಲೆಗಳಲ್ಲಿ ಅವರ ಕುಶಲತೆಯ ರಂಗಸಂಗೀತಕ್ಕೆ ಜನ ಸ್ನೇಹಿ ಹೆಸರು. ರಂಗಗೀತೆ ಮಾತ್ರವಲ್ಲ, ರಂಗ ನೃತ್ಯ, ಒಪ್ಪ ಓರಣದ ಸಂಭಾಷಣೆ ಒಪ್ಪಿಸುವಿಕೆ, ಭಾವಾಭಿನಯಗಳು ನಾಟಕವೊಂದರ ಸೂಕ್ಷ್ಮಸಂವೇದನೆಗಳು. ಇಂತಹ ರಂಗಕ್ರಿಯೆ ಅನಾವರಣಗೊಳಿಸುವಲ್ಲಿ ಗೌಡರ ರಂಗ ಶಿಸ್ತು ಗ್ರಾಮೀಣ ಪ್ರದೇಶಗಳಲ್ಲಿ ಇವತ್ತಿಗೂ ಮನೆಮಾತು. ಇದುವರೆಗೆ ಅವರು ನಿರ್ದೇಶನ ಮಾಡಿದ ಮತ್ತು ಹಾರ್ಮೋನಿಯಂ ನುಡಿಸಿದ ನಾಟಕಗಳ ಲೆಕ್ಕವಿಟ್ಟಿಲ್ಲ. ಕ್ರಮಬದ್ಧ ಶಿಕ್ಷಣ ಕಲಿಯದ, ರಂಗಭೂಮಿ ಒಡನಾಟವೆಂಬ ಲೋಕ ಶಿಕ್ಷಣದ ಅನುಭವದಿಂದ ನಾಲ್ಕೈದು ನಾಟಕಗಳನ್ನು ರಚಿಸಿ ಪ್ರಯೋಗಿಸಿದ್ದಾರೆ.
ತನ್ನ ಹದಿನೈದನೇ ವಯಸ್ಸಿನಲ್ಲೇ ಕಂದಗಲ್ಲ ಹನುಮಂತರಾಯರ `ಬಡತನದ ಭೂತ’ ನಾಟಕದ ಕಂದಪದ್ಯಗಳಿಗೆ ಲೆಗ್ ಹಾರ್ಮೋನಿಯಂ ನುಡಿಸುವ ಮೂಲಕ ಹುಟ್ಟೂರಲ್ಲೇ ರಂಗಪ್ರವೇಶ. ಪುಟ್ಟಪ್ರಾಯದ ಕಾಲುಗಳಿಗೆ ಲೆಗ್ ಹಾರ್ಮೋನಿಯಂ ನಿಲುಕುವಂತೆ ಕುಂತ ಕುರ್ಚಿಗೆ ತಲೆದಿಂಬಿನ ಬಳಕೆ. ಇವರ ತಂದೆ ಈಶ್ವರಗೌಡ ಕೂಡ ಆ ಕಾಲದ ಉತ್ತಮ ಪೆಟಗಿ ಮಾಸ್ತರರು. ಇವರದೇ ಹೆಸರಿನ ಇವರ ತಾತ ಬಸವನಗೌಡ `ಶ್ರೀಶೈಲ ಮಲ್ಲಿಕಾರ್ಜುನ ನಾಟ್ಯಸಂಘ’ ಎಂಬ ಹೆಸರಿನ ನಾಟಕ ಕಂಪನಿ ಕಟ್ಟಿಕೊಂಡು ರಂಗಭೂಮಿಗೆ ಪೂರ್ಣವಾಗಿ ಅರ್ಪಣೆ ಮಾಡಿಕೊಂಡವರು.
ಅಷ್ಟು ಮಾತ್ರವಲ್ಲ, ಅವರು ರಂಗಭೂಮಿಗಾಗಿಯೇ ನೂರೆಂಬತ್ತು ಎಕರೆ ಹೊಲವನ್ನು ಕಳಕೊಂಡವರು. ಹೀಗೆ ನಾಟಕದ ಹುಚ್ಚು ನೀಲಗುಂದ ಗೌಡರ ಮನೆತನದ ನಿರಂತರ ರಂಗ ಪರಂಪರೆಯಾಗಿ ಬೆಳೆದು, ಅದೀಗ ಆ ಅಜ್ಜನಿಂದ ಈ ಮೊಮ್ಮಗ ಬಸವನ ಗೌಡರವರೆಗೆ ಹರಿಗಡೆಯದೇ ಮುನ್ನಡೆದಿದೆ.
ಇವರ ತಾತ ಕಟ್ಟಿದ `ಶ್ರೀಶೈಲ ಮಲ್ಲಿಕಾರ್ಜುನ ನಾಟ್ಯಸಂಘ’ದ ಹೆಸರನ್ನು ವಾರ್ಷಿಕವಾಗಿ ಕಳೆದ ಹತ್ತು ವರುಷಗಳಿಂದ ಮೊಮ್ಮಗ ಬಸವನಗೌಡ ಕ್ರಿಯಾಶೀಲವಾಗಿಸಿ ದ್ದಾರೆ. ಪ್ರತಿವರ್ಷವೂ ಸಂಘದ ವಾರ್ಷಿಕೋತ್ಸವ ಸಂದರ್ಭದಲ್ಲಿ ರಂಗಭೂಮಿ ಸೇವೆಗೈಯ್ದ ಐವತ್ತು ಮಂದಿ ಹಿರಿಯ ಮತ್ತು ಅರ್ಹ ರಂಗ ಕಲಾವಿದರನ್ನು ಸತ್ಕರಿಸುತ್ತಾರೆ. ಅಂದು ಸಂಜೆ ಒಂದು ವೃತ್ತಿ ನಾಟಕ ಪ್ರದರ್ಶನ ಮಾಡುವ ಮೂಲಕ ಅಜ್ಜನ ಆತ್ಮಕ್ಕೆ ಶಾಂತಿ ಕೋರುವ ಸಂಕಲ್ಪ.
ಅರ್ಧ ಶತಮಾನಕ್ಕೂ ಹೆಚ್ಚು ಕಾಲದ ಬಸವನಗೌಡರ ರಂಗ ಕೈಂಕರ್ಯ ಮನಗಂಡು ಸ್ಥಳೀಯ ಅನೇಕ ಸಂಘ ಸಂಸ್ಥೆಗಳು ಗೌಡರನ್ನು ಗೌರವಿಸಿವೆ. 2014ರಲ್ಲಿ ದಾವಣಗೆರೆ ಜಿಲ್ಲಾಡಳಿತವು ಇವರನ್ನು ಗುರುತಿಸಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿರುವುದು ಗಮನಾರ್ಹ. ಇದೀಗ ಸರ್ಕಾರದ ಸಾಂಸ್ಕೃತಿಕ ಸಂಸ್ಥೆ ಕರ್ನಾಟಕ ನಾಟಕ ಅಕಾಡೆಮಿಯು ಗೌಡರಿಗೆ ವಾರ್ಷಿಕ ಪ್ರಶಸ್ತಿ ಪ್ರಕಟಿಸಿರುವುದು ಶ್ಲ್ಯಾಘನೀಯ. ತನ್ಮೂಲಕ ನೀಲಗುಂದ ಬಸವನಗೌಡರ ರಂಗ ಸೇವೆಗೆ ಸಾಂಸ್ಕೃತಿಕ ಗೌರವದ ಹಿರಿಮೆ ದೊರಕಿದೆ.
ಮಲ್ಲಿಕಾರ್ಜುನ ಕಡಕೋಳ
9341010712