ಆ.1 ರಾಷ್ಟ್ರೀಯ ಬಾಯಿ ಶುಚಿತ್ವ ದಿನ…

ಆ.1 ರಾಷ್ಟ್ರೀಯ ಬಾಯಿ ಶುಚಿತ್ವ ದಿನ…

ಭಾರತ ದೇಶದಲ್ಲಿ ಡಾ. ಜಿ.ಬಿ. ಶಾಂಕ್ವಾಲ್ಕರ್ ಅವರ ಜನ್ಮ ದಿನದ ನೆನಪಿಗಾಗಿ ಆಗಸ್ಟ್ 1 ರಂದು ರಾಷ್ಟ್ರೀಯ  ಬಾಯಿ ಶುಚಿತ್ವ ದಿನ ಎಂದು ಆಚರಿಸಲಾಗುತ್ತದೆ. ಇಂಡಿಯನ್ ಸೊಸೈಟಿ ಆಫ್ ಪೆರಿಯೋಡಾಂಟಲಜಿಯ ಸಂಸ್ಥಾಪಕರಾದ ಡಾ. ಜಿ.ಬಿ ಶಾಂಕ್ವಾಲ್ಕರ್‌ರನ್ನು ಭಾರತೀಯ ಪೆರಿಯೋಡಾಂಟಿಕ್ಸ್‌ ಡಯೋನ್ ಎಂದು ಪರಿಗಣಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯು 2022 ರಲ್ಲಿ ಬಿಡುಗಡೆ ಮಾಡಿದ ವರದಿಯ ಪ್ರಕಾರ ಭಾರತದಲ್ಲಿ ಶೇಕಡ 9.8ರಷ್ಟು ಜನರಲ್ಲಿ ತುಟಿ  ಮತ್ತು ಬಾಯಿಯ ಅರ್ಬುದ ರೋಗಕ್ಕೆ ಗುರಿಯಾಗುವ ಸಾಧ್ಯತೆ ಇದೆ ಎಂದು ಪ್ರಸ್ತುತ ಪಡಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಬಹುತೇಕ ಮಂದಿಯಲ್ಲಿ ವಸಡಿನ ತೊಂದರೆ ಸಾಮಾನ್ಯವಾಗಿದೆ. ಇದಕ್ಕೆ ಪ್ರಮುಖ ಕಾರಣ ಬಾಯಿಯ ಅಸ್ವಚ್ಛತೆ.   ಹೃದ್ರೋಗದ ಕಾಯಿಲೆ, ಮಧುಮೇಹ, ಶ್ವಾಸಕೋಶದ ಸೋಂಕುಗಳು ಮತ್ತು ಬುದ್ಧಿಮಾಂದ್ಯತೆ ಸೇರಿದಂತೆ ಹಲವಾರು ಪರಿಸ್ಥಿತಿಗಳೊಂದಿಗೆ ಈ ವಸಡಿನ ತೊಂದರೆ ತೀವ್ರತೆಯನ್ನು ಹೆಚ್ಚಿಸುತ್ತದೆ. ಇದರ ಪರಿಣಾಮದಿಂದ ಆರಂಭಿಕ ಹಂತಗಳಲ್ಲಿ ವಸಡುಗಳು ಊದಿಕೊಳ್ಳುವುದು. ಕೆಂಪು ಬಣ್ಣ ಹೊಂದುವುದು ಮತ್ತು ಸುಲಭವಾಗಿ ರಕ್ತ ಸ್ರಾವ ಆಗಬಹುದು. ಈ ಹಂತವನ್ನು ಜಿಂಜಿವೈಟಿಸ್ ಎಂದು ಕರೆಯುತ್ತಾರೆ. ಚಿಕಿತ್ಸೆ ನೀಡದೇ ಹೋದಲ್ಲಿ ಜಿಂಜಿವೈಟಿಸ್ ಮುಂದಿನ ಹಂತಕ್ಕೆ ತಿರುಗಬಹುದು. ಇದನ್ನು ಪೆರಿಯೋಡಾಂಟೈಟಿಸ್ ಎಂದು ಕರೆಯುತ್ತಾರೆ.

ಪೆರಿಯೋಡಾಂಟೈಟಿಸ್ ರೋಗದ ಗುಣ ಲಕ್ಷಣಗಳು: 

  • ವಸಡು  ಮತ್ತು ಹಲ್ಲಿನ ಅಂತರ ಜಾಸ್ತಿಯಾಗುವುದು. 
  • ವಸಡಿನಲ್ಲಿ ಪದೇ ಪದೇ ರಕ್ತ ಬರುವುದು ಹಾಗೂ ಕೀವು ತುಂಬಿಕೊಳ್ಳುವುದು.
  • ಹಲ್ಲುಗಳ ಮಧ್ಯೆ ಆಹಾರ ಸಿಕ್ಕಿಕೊಂಡು ವಸಡಿನಲ್ಲಿ ಕಡಿತ ಕಾಣಿಸಿ, ಚೂಪಾದ ವಸ್ತುವಿನಿಂದ ಚುಚ್ಚಿದಾಗ ಸಮಾಧಾನವೆನಿಸುವುದು.
  • ಹಲ್ಲುಗಳ ಮಧ್ಯೆ ಕಿಂಡಿ ಬಿಟ್ಟು ಬಾಯಿಯಿಂದ ದುರ್ವಾಸನೆ ಬರುವುದು.  
  • ಬಿಸಿ ಮತ್ತು ತಣ್ಣನೆಯ ಆಹಾರ ಸೇವಿಸಿದಾಗ ಹಲ್ಲು ಜುಮ್ಮೆನ್ನುವುದು.
  • ವಸಡಿನ ಮೂಳೆಯು ಸವೆಯಬಹುದು. 
  • ಕೊನೆಯದಾಗಿ ಹಲ್ಲು ತನ್ನಷ್ಟಕ್ಕೆ ತಾನೇ ಸಡಿಲಗೊಂಡು ಉದುರುವುದು.

ಮೇಲಿನ ಎಲ್ಲ ಪರಿಣಾಮಗಳಿಂದ ಹಲ್ಲುಗಳನ್ನು ಕಳೆದುಕೊಂಡಾಗ ಇದರ ನಷ್ಟವು ವಯಸ್ಕರಲ್ಲಿ ಆರೋಗ್ಯ  ಸಂಬಂಧಿತ ಜೀವನದ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. 

ಈ ರೋಗದಿಂದ ಕೇವಲ ಹಲ್ಲುಗಳು ಮಾತ್ರ ಹಾಳಾಗುವುದಿಲ್ಲ ಬದಲಿಗೆ ಸಾಮಾನ್ಯ ಆಂತರಿಕ ಆರೋಗ್ಯದ ಮೇಲೆ ಪರಿಣಾಮ ಬೀರಿ ವ್ಯಕ್ತಿಯ ರೋಗ ಪ್ರತಿರೋಧಕ ಶಕ್ತಿಯನ್ನು ಕುಂಠಿತಗೊಳಿಸುತ್ತದೆ. ವಸಡು ರೋಗವು ತೀವ್ರವಾದಾಗ ಪೆರಿಯೊಡಾಂಟೈಟಿಸ್ ರೋಗದ  ಚಿಕಿತ್ಸೆಗಾಗಿ ಜನರು ಬಂದರೆ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಲು ಕಷ್ಟವಾಗುತ್ತದೆ. ಚಿಕಿತ್ಸೆಗೆ ತಗಲುವ ಸಮಯ ಹಾಗೂ ವೆಚ್ಚ ಹೆಚ್ಚಾಗುತ್ತದೆ.

ಬಾಯಿಯ ದುರ್ವಾಸನೆಯ ಕಾರಣಗಳು : ಬಾಯಿಯ ದುರ್ವಾಸನೆಗೆ ಕಾರಣ ಹಲವಾರು ಇದ್ದರೂ, ಪ್ರಮುಖ ಕಾರಣ ಬ್ಯಾಕ್ಟೀರಿಯಾಗಳು. ಇವು ಆಹಾರ ಕಣಗಳೊಂದಿಗೆ ವರ್ತಿಸಿ ಉತ್ಪಾದಿಸುವ ರಾಸಾಯನಿಕ ವಸ್ತುಗಳಿಂದ ಬಾಯಿಯ ವಾಸನೆ ಉಂಟಾಗುವಲ್ಲಿ ಪಾತ್ರವಹಿಸುತ್ತವೆ. ಶೇ 90 ರಷ್ಟು ಜನರ ಬಾಯಿಯ ದುರ್ವಾಸನೆಗೆ ಸ್ಥಳೀಯ ಕಾರಣಗಳೇ ಹೆಚ್ಚು. ಇನ್ನು ಶೇ. 10 ರಷ್ಟು ಅಂತರ್ವ್ಯಾಪಿ ಕಾರಣಗಳಿರಬಹುದು.

ಸ್ಥಳೀಯ ಕಾರಣಗಳು :

  • ಹಲ್ಲು ಮತ್ತು ನಾಲಿಗೆಯನ್ನು ಸ್ವಚ್ಛವಾಗಿಡದೇ ಇರುವುದು
  • ವಸಡು ರೋಗ
  • ದಂತಕುಳಿ, ಸೀಳು ಅಂಗುಳ, ಬಾಯಿ ಒಣಗುವಿಕೆ
  • ಧೂಮಪಾನ ಮತ್ತು ಮದ್ಯಪಾನ
  • ಬಾಯಿಯ ಅರ್ಬುದ ರೋಗ (ಕ್ಯಾನ್ಸರ್)
  • ಕೆಲವು ಬಗೆಯ ಆಹಾರ ಪದಾರ್ಥಗಳು ಸೇವನೆ (ಉದಾ:- ಬೆಳ್ಳುಳ್ಳಿ ಈರುಳ್ಳಿ ಮೀನು…….. ಇತ್ಯಾದಿ)

ಅಂತರ್ವ್ಯಾಪಿ ಕಾರಣಗಳು :  ಗಂಟಲಿನ ತೊಂದರೆ ,  ಜ್ವರ , ಸಕ್ಕರೆ ಕಾಯಿಲೆ, ಮೂತ್ರಕೋಶದ ತೊಂದರೆ, ಶ್ವಾಸಕೋಶದ ತೊಂದರೆ ಹಾಗೂ ಇತ್ಯಾದಿಗಳು

ವಿವಿಧ ರೀತಿಯ ವಸಡು ಚಿಕಿತ್ಸೆ ವಿಧಾನಗಳು:

ವಸಡು ಮತ್ತು ಹಲ್ಲುಗಳನ್ನು ಸ್ವಚ್ಛಗೊಳಿಸುವ ಚಿಕಿತ್ಸೆ , ವಸಡಿನ ಶಸ್ತ್ರಚಿಕಿತ್ಸೆ, ವಸಡಿನ ಅಂಗಾಂಶದ ಪುನರುತ್ಪತ್ತಿ ಚಿಕಿತ್ಸೆ, ಪೆರಿಯೊಡಾಂಟಲ್ ಪ್ಲಾಸ್ಟಿಕ್ ಸರ್ಜರಿ

ದಂತ ಆರೋಗ್ಯ ಕಾಪಾಡಿಕೊಳ್ಳಲು ಪಾಲಿಸಬೇಕಾದ ನಿಯಮಗಳು:

  • ನಿಯಮಿತವಾಗಿ ಸರಿಯಾದ ಕ್ರಮದಲ್ಲಿ ಪ್ರತಿದಿನ ಬೆಳಗ್ಗೆ ಮತ್ತು ರಾತ್ರಿ ಮಲಗುವ ಮೊದಲು ಬ್ರಷ್  ಮಾಡಬೇಕು.
  • ಊಟದ ಮದ್ಯ ಸಿಹಿ ತಿಂಡಿಗಳನ್ನು ತಿನ್ನುವ ಅಭ್ಯಾಸವನ್ನು ಕಡಿಮೆ ಮಾಡಬೇಕು
  • ಕ್ಯಾಲ್ಸಿಯಂ ಮತ್ತು ಖನಿಜಯುಕ್ತವಾದ ಹಸಿ ಸೊಪ್ಪು ಮತ್ತು ತರಕಾರಿಗಳನ್ನು  ಸೇವಿಸಬೇಕು.
  • ಎರಡು ಹಲ್ಲುಗಳ ನಡುವೆ ಆಹಾರ ಕಣಗಳು ಸಿಕ್ಕಿಹಾಕಿಕೊಂಡಾಗ ಫ್ಲಾಸ್ ಮತ್ತು ಚಿಕ್ಕ ಬ್ರಷ್‌ಗಳಿಂದ ಶುಚಿಗೊಳಿಸಬೇಕು.
  • ಪ್ರತಿ ಆರು ತಿಂಗಳಿಗೊಮ್ಮೆ ದಂತ ವೈದ್ಯರನ್ನು ಕಂಡು ತಪಾಸಣೆಗೆ ಒಳಗಾಗಿ, ಸೂಕ್ತ ಚಿಕಿತ್ಸೆಯನ್ನು ಪಡೆದು, ಅವರ ಸಲಹೆ, ಸೂಚನೆಗಳನ್ನು ಪಾಲಿಸಬೇಕು.

ನಮ್ಮ ಜೀವನ ಶೈಲಿ ಮತ್ತು ಆಹಾರ ಪದ್ಧತಿಗಳು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. `ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ’ ಎಂಬ ಗಾದೆ ಮಾತಿನಂತೆ ಸರಿಯಾದ ಆಹಾರ ಪದ್ಧತಿಯನ್ನು ಅಳವಡಿಸಿಕೊಂಡು ನಮ್ಮ ಬಾಯಿ, ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಸಮತೋಲನದಲ್ಲಿಟ್ಟುಕೊಂಡು ಜೀವನದ ಸಂತಸದ ಕ್ಷಣಗಳನ್ನು ಅನುಭವಿಸಿ ಬದುಕಿನಲ್ಲಿ ಸಫಲತೆಯನ್ನು ಪಡೆಯೋಣ.

– ಡಾ|| ಭೂಮಿಕಾ ರಾವ್ ಎಸ್., ಡಾ|| ಅನುಷಾ ಕೆ., ಡಾ|| ಮಂಜುಶ್ರೀ ಪಿ.,  ಡಾ|| ಶೃತಿ ಎಸ್. ಪಾಟೀಲ್, ಡಾ|| ಟಿಫಾನಾ ಫಾತಿಮಾ ಎಚ್., ಡಾ|| ಜೆನ್ಸಿ ಜಾರ್ಜ್
ಸ್ನಾತಕೋತ್ತರ ವಿದ್ಯಾರ್ಥಿಗಳು,  ವಸಡು ರೋಗ ಶಸ್ತ್ರಚಿಕಿತ್ಸಾ ವಿಭಾಗ,  ಬಾಪೂಜಿ ದಂತ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ , ದಾವಣಗೆರೆ.

error: Content is protected !!