ಚಾತುರ್ಮಾಸವೆಂದರೆ ನಾಲ್ಕು ತಿಂಗಳುಗಳ ವ್ರತವೆಂದು ಅರ್ಥ. ಈ ವ್ರತವನ್ನು ಪೂರ್ವಕಾಲದಲ್ಲಿ ಪರಿವ್ರಾಜಕ ಸನ್ಯಾಸಿಗಳು, ಮಠಾಧಿಪತಿಗಳು ಆಚರಿಸುತ್ತಿದ್ದರು. ಇಂದಿಗೂ ಉತ್ತರ ಪ್ರದೇಶದಲ್ಲಿ ಬ್ರಹ್ಮನಿಷ್ಠರೂ, ಸನ್ಯಾಸಿಗಳೂ, ಮಠಾಧಿಪತಿಗಳೂ ಅಧಿಕವಾಗಿ ಇರುವುದರಿಂದ ಅಲ್ಲಿ ಆ ವ್ರತವು ಬಹಳ ಆಚರಣೆಯಲ್ಲಿದೆ. ದಕ್ಷಿಣ ದೇಶದಲ್ಲಿ ಅಂತಹ ಸಾಧು-ಸತ್ಪುರುಷರು ಕಡಿಮೆ ಇರುವುದರಿಂದ ಇದರ ಆಚಾರವು ಮತ್ತು ಪ್ರಚಾರವು ವಿರಳವಾಗಿ ಕಂಡು ಬರುತ್ತದೆ. ಬುದ್ಧನ ಕಾಲದಲ್ಲಿ ಈ ವ್ರತವು ಬಹಳ ಪ್ರಚಾರದಲ್ಲಿ ಇತ್ತು. ಬೌದ್ಧರು ಈ ವ್ರತವನ್ನು ವರ್ಷವಾಸವೆಂದು ಕರೆಯುತ್ತಿದ್ದರು. ಜೈನರಲ್ಲಿಯೂ ಸಹ ಈ ವ್ರತವು ಅತ್ಯಂತ ಪ್ರಮುಖವಾಗಿದೆ. ಇಂದಿಗೂ ಜೈನರು ಈ ವ್ರತವನ್ನು ಆಚರಿಸುತ್ತಿದ್ದಾರೆ.
ಈ ವ್ರತವು ಆಷಾಢ ಶುದ್ಧ ಏಕಾದಶಿಯಿಂದ ಪ್ರಾರಂಭವಾಗುತ್ತದೆ. ಆಷಾಢ ಶುದ್ಧ ಏಕಾದಶಿಯನ್ನು ದೇವಶಯನೀ ಏಕಾದಶಿ, ಶಯನೈಕಾದಶಿ ಎಂದೂ ಕರೆಯುತ್ತಾರೆ. ಇದರ ಪರಿಸಮಾಪ್ತಿ ಕಾರ್ತಿಕ ಶುದ್ಧ ಏಕಾದಶಿಯಂದು ಆಗುತ್ತದೆ. ಇದನ್ನು ಪ್ರಭೋಧಿನೀ ಏಕಾದಶಿ ಎನ್ನುತ್ತಾರೆ. ಕಾರ್ತೀಕ ಶುದ್ಧ ದ್ವಾದಶಿಯನ್ನು ಉತ್ಥಾನ ದ್ವಾದಶಿ ಎನ್ನುತ್ತಾರೆ.
ಆಷಾಢ ಮಾಸದ ಶುಕ್ಲ ಪಕ್ಷದ ಏಕಾದಶಿಯಲ್ಲಿ ಉಪವಾಸ ಮಾಡಿ ಶಾಸ್ತ್ರೋಕ್ತವಾದ ಕೆಲವು ನಿಯಮಗಳನ್ನು ಸಂಕಲ್ಪಪೂರ್ವಕವಾಗಿ ಆಚರಿಸಲು ಈ ಚಾತುರ್ಮಾಸ್ಯ ವ್ರತವನ್ನು ಆರಂಭಿಸಬೇಕು.
ನಾಲ್ಕು ಮಾಸಗಳು ಚೆನ್ನಾಗಿ ಆಚರಿಸಲ್ಪಟ್ಟ ಚಾತುರ್ಮಾಸ್ಯ ವ್ರತವನ್ನು ಕಾರ್ತಿಕ ಶುದ್ಧ ದ್ವಾದಶಿಯಂದು ಪೂರ್ಣಾ ಹುತಿ ಮಾಡಿ ಮುಕ್ತಾಯಗೊಳಿಸಬೇಕು.
ಆಷಾಢ ಶುದ್ಧ ಏಕಾದಶಿಯಂದು ಶ್ರೀ ವಿಷ್ಣು ಭಗವಾನನು ಕ್ಷೀರಸಾಗರದಲ್ಲಿ ಶೇಷಶಾಹಿಯಾಗಿ ಮಲಗುತ್ತಾನೆ. ಆದ್ದರಿಂದ ಅದು ಶಯನೈಕಾದಶಿ. ನಾಲ್ಕು ತಿಂಗಳ ಕಾಲ ನಿದ್ರೆಯಲ್ಲಿದ್ದು, ಕಾರ್ತಿಕ ಶುದ್ಧ ದ್ವಾದಶಿಯಂದು ಏಳುತ್ತಾನೆ. ಆದುದರಿಂದ ಅದು ಉತ್ಥಾನ ದ್ವಾದಶಿ ಎಂದು ಹೇಳಲ್ಪಟ್ಟಿದೆ. ಆ ಸಮಯದಲ್ಲಿ ಭಗವಂತನನ್ನು ಕುರಿತು ಪೂಜಾ, ಹೋಮ, ಜಪ, ಧ್ಯಾನ, ದಾನ ಮುಂತಾದ ಪುಣ್ಯ ಕರ್ಮಗಳನ್ನು, ಅಧ್ಯಾತ್ಮಿಕ ಸಾಧನೆಗಳನ್ನು ಮಾಡುವವರಿಗೆ ಸಹಸ್ರಾಧಿಕಫಲವೆಂದು ಪುರಾಣಗಳು ಹೇಳುತ್ತಿವೆ. ಇನ್ನು ಕೆಲವರು ಈ ವ್ರತವನ್ನು ಆಷಾಢ ಶುದ್ಧ ಪೌರ್ಣಿಮೆಯಿಂದ ಪ್ರಾರಂಭಿಸಿ, ಕಾರ್ತಿಕ ಶುದ್ಧ ಪೌರ್ಣಿಮೆಯವರೆಗೂ ಆಚರಿಸುತ್ತಾರೆ.
ಚಾತುರ್ಮಾಸವೆಂದರೆ ನಾಲ್ಕು ತಿಂಗಳುಗಳ ವ್ರತವೆಂದು ಅರ್ಥ. ಈ ವ್ರತವನ್ನು ಪೂರ್ವಕಾಲದಲ್ಲಿ ಪರಿವ್ರಾಜಕ ಸನ್ಯಾಸಿಗಳು, ಮಠಾಧಿಪತಿಗಳು ಆಚರಿಸುತ್ತಿದ್ದರು. ಇಂದಿಗೂ ಉತ್ತರ ಪ್ರದೇಶದಲ್ಲಿ ಬ್ರಹ್ಮನಿಷ್ಠರೂ, ಸನ್ಯಾಸಿಗಳೂ, ಮಠಾಧಿಪತಿಗಳೂ ಅಧಿಕವಾಗಿ ಇರುವುದರಿಂದ ಅಲ್ಲಿ ಆ ವ್ರತವು ಬಹಳ ಆಚರಣೆಯಲ್ಲಿದೆ.
ಆಷಾಢ ಶುದ್ಧ ಪೂರ್ಣಿಮೆಯನ್ನು ವ್ಯಾಸಪೂರ್ಣಿಮೆ, ಗುರು ಪೂರ್ಣಿಮೆ ಎಂದೂ ಕರೆಯುತ್ತಾರೆ. ಈ ದಿನದಂದು ವ್ಯಾಸ ಭಗವಾನರು ತಮ್ಮ ಅವತಾರ ಪರಿಸಮಾಪ್ತಿ ಮಾಡಿದರೆಂದು ಹೇಳುತ್ತಾರೆ.
ಈ ನಾಲ್ಕು ತಿಂಗಳು ಭಗವದಾರಾಧನೆಗೆ ಬಹಳ ಪ್ರಶಸ್ತವಾದ ಸಮಯ. ಈ ಚಾತುರ್ಮಾಸ್ಯದ ಕಾಲದಲ್ಲಿಯೇ ಅನೇಕ ಧಾರ್ಮಿಕ, ಸಾಮಾಜಿಕ ಪರ್ವ ದಿನಗಳು, ವಿಶೇಷ ವ್ರತಾಚರಣೆಗಳು ಬರುತ್ತವೆ. ಅವು ಶಯನೈಕಾದಶಿ, ಗುರುಪೂರ್ಣಿಮಾ, ನಾಗಚತುರ್ಥಿ, ಗರಡುಪಂಚಮಿ, ಸಿರಿಯಾಳ ಷಷ್ಠಿ, ಶ್ರೀಕೃಷ್ಣ ಜನ್ಮಾಷ್ಠಮಿ, ವಿನಾಯಕ ಚತುರ್ಥಿ, ಗೌರಿ ಹಬ್ಬ, ಮಹಾಲಯ ಅಮವಾಸ್ಯೆ, ಭೀಮನ ಅಮಾವಾಸ್ಯೆ, ಸಂಕಷ್ಟ ಚತುರ್ಥಿ, ಋಷಿ ಪಂಚಮಿ, ಉಪಾಕರ್ಮ ಹುಣ್ಣಿಮೆ, ದೇವಿ ನವರಾತ್ರಿ, ಸರಸ್ವತಿ ಪೂಜೆ,ದುರ್ಗಾಷ್ಟಮಿ, ಮಹಾನವಮಿ, ಆಯುಧ ಪೂಜೆ, ಶಮೀಪೂಜೆ, ವಿಜಯದಶಮಿ, ನರಕಚತುರ್ದಶಿ, ದೀಪಾವಳಿ, ಬಲಿಪಾಡ್ಯಮಿ, ಲಕ್ಷ್ಮಿ ಪೂಜೆ, ತುಳಸೀ ಪೂಜೆ, ಉತ್ಥಾನ ದ್ವಾದಶಿ ಮುಂತಾದ ಹಬ್ಬಗಳು ಹಾಗೂ ಚಾಮುಂಡೇಶ್ವರಿ ಜಯಂತಿ, ಹಯಗ್ರೀವ ಜಯಂತಿ, ಕಲ್ಕಿ ಜಯಂತಿ, ವಾಮನ ಜಯಂತಿ, ವಾಲ್ಮೀಕಿ ಜಯಂತಿ, ಧನ್ವಂತರಿ ಜಯಂತಿ ಮುಂತಾದ ಜಯಂತಿಗಳು ಇದೇ ಸಮಯದಲ್ಲಿ ಬರುತ್ತವೆ.
ಈ ವ್ರತವನ್ನು ಪೂರ್ವಕಾಲದಲ್ಲಿ ಸನ್ಯಾಸಿಗಳು ಮಾತ್ರವೇ ಮಾಡುತ್ತಿದ್ದರೆಂದು, ಗೃಹಸ್ಥರು ಮತ್ತು ಸ್ತ್ರೀಯರು, ಶೂದ್ರರೂ ಮಾಡಬಾರದೆಂಬ ಒಂದು ತಪ್ಪು ಅಭಿಪ್ರಾಯವು ಲೋಕದಲ್ಲಿ ಪ್ರಚಲಿತವಾಗಿತ್ತು. ಇದಕ್ಕೆ ಯಾವ ಶಾಸ್ತ್ರದ ಆಧಾರವೂ ಕಂಡು ಬರುತ್ತಿಲ್ಲ. ಬದಲಾಗಿ ಚಾತುರ್ಮಾಸ ವ್ರತಕಾಲದಲ್ಲಿ ಭಗವತ್ಪ್ರೀತಿಗಾಗಿ ಮಹಾಪಾಪಿ ಗಳು, ದುಷ್ಟಬುದ್ಧಿಗಳು, ಸಾಧುಗಳು, ಭಗವದ್ಭಕ್ತರು, ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು, ಶೂದ್ರರು, ಸುಹಾಸಿನಿಯರು, ವಿಧವೆಯರು, ಸನ್ಯಾಸಿಗಳು, ಯೋಗಿಗಳು, ಯೋಗಿನಿಯರು ಎಲ್ಲರೂ ತಪ್ಪದೇ ಆಚರಿಸ ಬೇಕೆಂದೂ, ಅದರಿಂದ ಭಗವತ್ಸಾಯುಜ್ಯವು ಪ್ರಾಪ್ತವಾಗುವುದೆಂದು ಹೇಳಲಟ್ಟಿದೆ.
ಬ್ರಹ್ಮಚಾರಿಗಳು, ವಾನಪ್ರಸ್ಥರು, ಸನ್ಯಾಸಿಗಳು, ನೈಷ್ಠಿಕ ಬ್ರಹ್ಮಚರ್ಯವನ್ನು ತ್ರಿಕರಣ ಶುದ್ಧಿಯಿಂದ ಆಚರಿಸಬೇಕು. ಗೃಹಸ್ಥರಾದವರು ಮಾತ್ರ ಈ ನಾಲ್ಕು ತಿಂಗಳು ತಪ್ಪದೇ ಬ್ರಹ್ಮಚರ್ಯವನ್ನು ಆಚರಿಸಬೇಕು. ಸಾಮರ್ಥ್ಯವುಳ್ಳವರು ಪ್ರಾತಃ ಸಾಯಂಕಾಲಗಳಲ್ಲಿ ಇತರರಿಗೆ ಪ್ರವಚನ ಮಾಡಬಹುದು. ಪ್ರತಿನಿತ್ಯವೂ ಅನ್ನದಾನ ಮುಂತಾದವುಗಳನ್ನು ಶಕ್ತಿಯಿದ್ದವರು ನಿಯಮಾನುಸಾರ ಆಚರಿಸಬಹುದು.
ಕಾರ್ತಿಕ ಶುದ್ಧ ದ್ವಾದಶಿ ಅಥವಾ ಹುಣ್ಣಿಮೆಯಂದು ಈ ವ್ರತದ ಪೂರ್ಣಾಹುತಿಯನ್ನು ಮಾಡಬೇಕು. ಅಂದು ಪರಮಾತ್ಮನನ್ನು ಕುರಿತು ಓ ಪ್ರಭು, ನಿನ್ನ ಪ್ರೀತ್ಯರ್ಥವಾಗಿ ನಾನೀ ವ್ರತವನ್ನು ಆಚರಿಸಿದೆನು. ಈ ವ್ರತದ ಪುಣ್ಯದ ಫಲವನ್ನು ನಿನಗೇ ಅರ್ಪಿಸುತ್ತಿದೇನೆ. ಇದರಿಂದ ಎಲ್ಲಾ ಲೋಕಕಗಳಿಗೂ ಶಾಂತಿಯುಂಟಾಗಲಿ, ದೀನ ದಲಿತರು ತಮ್ಮ ದುಃಖಗಳಿಂದ ಮುಕ್ತರಾಗಲಿ. ಸರ್ವರಿಗೂ ಶಾಂತಿ, ಸುಖಗಳು ಲಭಿಸಲಿ ಎಂದು ಪ್ರಾರ್ಥಿಸಬೇಕು. ಮಂತ್ರ ಪೂರ್ವಕವಾಗಿ ಪೂಜಾ, ಹೋಮಾದಿಗಳನ್ನು ಆಚರಿಸಿ, ಕಲಶೋದ್ವಾಸನೆಯನ್ನು ಮಾಡಬಹುದು. ಸಮೀಪದಲ್ಲಿರುವ ನದಿ ಅಥವಾ ಜಲಾಶಯದಲ್ಲಿ ಅವಭೃತ ಸ್ನಾನ ಮಾಡಬೇಕು. ವ್ರತಶಾಂತಿಗಾಗಿ ಅವಭೃತ ಸ್ನಾನ ಮಾಡಿದ ನಂತರ ಸಾಧು ಸತ್ಕಾರ, ದರಿದ್ರ ನಾರಾಯಣರ ಸೇವೆ, ಸಂತರ್ಪಣೆ, ಅನ್ನ ಶಾಂತಿ, ವಸ್ತ್ರಾದಿ ದಾನಗಳನ್ನು ಯಥಾಶಕ್ತಿ ಆಚರಿಸಬೇಕು. ಸಕಲ ಭೂತ ಸಂತೃಪ್ತಿಯೇ ಪರಮಾತ್ಮನ ಸಂತೃಪ್ತಿ.
ವ್ರತ ದೀಕ್ಷಿತರೆಲ್ಲರೂ ಪರಮೇಶ್ವರಾರ್ಪಣ ಭಾವದಿಂದ, ಅನನ್ಯ ಭಕ್ತಿಯಿಂದ ಈ ಚಾತುರ್ಮಾಸ್ಯ ವ್ರತವನ್ನು ಆಚರಿಸಿ, ದೈವಾನುಗ್ರಹಕ್ಕೆ ಪಾತ್ರರಾಗಿ, ಶಾಶ್ವತ ಆತ್ಮಶಾಂತಿಯನ್ನು, ನಿತ್ಯಾನಂದನವನ್ನು ಪಡೆಯುವಂತಾಗಲಿ. ಈ ವ್ರತಾಚರಣೆಯನ್ನು ಸರ್ವರೂ ನಿಷ್ಠೆಯಿಂದ ಆಚರಿಸಿ, ಲೋಕಕ್ಕೆ ಅಪೂರ್ವ ಆದರ್ಶವಾಗುವಂತಾಗಲಿ.
ಶ್ರೀ ಶಿವದೇವಾನಂದ ಗಿರಿ ಸ್ವಾಮೀಜಿ, ಶಾಸ್ತ್ರೀಹಳ್ಳಿ, ಅಭಯಾಶ್ರಮ, ದಾವಣಗೆರೆ.
– ಸಂಗ್ರಹ ಬಿ. ಸತ್ಯನಾರಾಯಣಮೂರ್ತಿ, ಸ್ಫೂರ್ತಿ ಸೇವಾ ಟ್ರಸ್ಟ್, ದಾವಣಗೆರೆ.