ಗುರು ಪೂರ್ಣಿಮೆ ಎಂಬುದು ಜಗತ್ತಿನ ಅನೇಕ ಭಾಗಗಳಲ್ಲಿ ಆಚರಿಸುವ ಗೌರವ ಪೂರ್ವಕವಾದ ಆಚರಣೆಯಾಗಿದೆ. ಅಧ್ಯಾತ್ಮಿಕವಾಗಿ ಇದನ್ನು ವ್ಯಾಸಪೂರ್ಣಿಮೆ ಎಂದು ಕರೆಯಲಾಗುತ್ತದೆ. ಜಗತ್ತಿನಲ್ಲಿ ವ್ಯಕ್ತಿಯೋರ್ವನನ್ನ ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯುವ ಶಕ್ತಿ ಇರುವುದೊಬ್ಬರಿಗೆ ಮಾತ್ರ ಅದು ಗುರು… ಬದುಕಿನ ಅಂಧಕಾರ ಓಡಿಸಿ, ಹಸನಾದ ಬದುಕು ರೂಪಿಸುವ ನಾವಿಕ ಗುರು… ಅಂತಹ ಗುರುವನ್ನು ಸ್ಮರಿಸುವ ಮೂಲಕ ಅವರ ಆದರ್ಶವನ್ನು ನಮ್ಮ ಬದುಕಲ್ಲಿ ರೂಢಿಸಿಕೊಳ್ಳುವುದೇ ಗುರು ಪೂರ್ಣಿಮೆ. ಇದು ಕೇವಲ ಅಧ್ಯಾತ್ಮಿಕವಾಗಿರದೆ ಶೈಕ್ಷಣಿಕವಾಗಿಯೂ ಪ್ರಾಮುಖ್ಯತೆ ಪಡೆದಿದೆ. ಬೌದ್ಧ ಧರ್ಮದಲ್ಲಿ ಬುದ್ಧನ ಮೊದಲ ಧಾರ್ಮಿಕ ಉಪದೇಶದ ಭಾಗವಾಗಿ ಗುರುಪೂರ್ಣಿಮೆ ಆಚರಿಸಲಾಗುತ್ತದೆ. ಯೋಗ ಸಂಪ್ರದಾಯದಲ್ಲಿ ಈ ದಿನವನ್ನು ಶಿವನು ಸಪ್ತರ್ಷಿಗಳಿಗೆ ಯೋಗ ವಿದ್ಯೆ ಧಾರೆ ಎರೆದು ಪ್ರಥಮ ಗುರುವಾದ ದಿನವಾಗಿ ಗುರು ಪೂರ್ಣಿಮೆ ಆಚರಿಸಲಾಗುತ್ತದೆ.
ಜೈನ ಧರ್ಮದಲ್ಲಿ ಮಹಾವೀರ ಜ್ಞಾನ ಪಡೆದು ಗಣಾಧರ ಎಂಬ ಶಿಷ್ಯ ಬಳಗ ಹೊಂದಿದ ದಿನವನ್ನಾಗಿ ಗುರು ಪೂರ್ಣಿಮೆ ಆಚರಿಸಲಾಗುತ್ತದೆ. ಈ ಎಲ್ಲಾ ಸಂಪ್ರದಾಯಗಳನ್ನು ಗಮನಿಸಿದಾಗ ಗುರು ಪೂರ್ಣಿಮೆ ಎನ್ನುವುದು ಜಗದ್ವಿಖ್ಯಾತ ಆಚರಣೆಯಾಗಿದೆ. ತತ್ವಜ್ಞಾನದ ಪ್ರಕಾರ ಗುರುವಿಲ್ಲದ ವಿದ್ಯಾರ್ಥಿಯನ್ನು ಅನಾಥ ಎಂದು ಸಂಬೋಧಿಸಲಾಗುತ್ತದೆ. ಸಾಧನೆ ಮಾಡಲು ಹೊರಟವನಿಗೆ ಗುರು ಮತ್ತು ಗುರಿ ಎರಡು ಅತ್ಯವಶ್ಯಕ. ಇಂದಿನ ದಿನಮಾನದಲ್ಲಿ ಗುರು-ಶಿಷ್ಯರ ಸಂಬಂಧ ಗಟ್ಟಿಯಾಗಿಲ್ಲ, ಯುವ ಪೀಳಿಗೆ ಗುರುವನ್ನು ಗೌರವಿಸುವ ಬದಲು ಅವಮಾನಿಸುವ ಘಟನೆಗಳನ್ನು ಕೇಳಿ ಮನಸ್ಸಿಗೆ ಘಾಸಿಯಾಗುತ್ತದೆ. ಇಲ್ಲಿ ಶಿಷ್ಯಬಳಗವನ್ನು ಸಮರ್ಥವಾಗಿ ನಿಭಾಸುವ ಕಲೆ ಶಿಕ್ಷಕರಾದವರಿಗೂ ಕರಗತವಾಗಬೇಕಿದೆ.
ಪ್ರತಿಯೊಬ್ಬರು ಜೀವನದಲ್ಲಿ ಒಬ್ಬರನ್ನು ಗುರು ಎಂದು ತಿಳಿದಿರುತ್ತಾರೆ. ಗುರು ಶಿಷ್ಯರ ಸಂಬಂಧ ಮಧುರವಾಗಿರಬೇಕು, ಜೊತೆಗೆ ಪರಸ್ಪರ ಗೌರವವಿರಬೇಕು.
– ಶ್ರೀಮತಿ ಚೇತನಾ ಎಸ್. ಪರಪ್ಪನವರ ಉಪನ್ಯಾಸಕರು, ಜಿಹೆಚ್ ಕಾಲೇಜು ಹಾವೇರಿ.