ಹುಟ್ಟು ಸಾವು ನಮ್ಮದಲ್ಲ, ಬದುಕು ಮಾತ್ರ ನಮ್ಮದು, ನಮ್ಮ ಬದುಕು ದೀಪವಾದರೂ ಇಲ್ಲವೇ ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ನೀಡುತ್ತದೆ. ಇನ್ನೊಂದು ಪ್ರತಿಬಿಂಬವಾಗುತ್ತದೆ. ಇಂತಹ ಬದುಕಿನ ಸಾರ್ಥಕತೆಯನ್ನು ಕಂಡುಂಡವರು ಶ್ರೀ ಫಕೀರಪ್ಪ ಗುರುಬಸಪ್ಪ ಹಳಕಟ್ಟಿಯವರು. 12 ನೇ ಶತಮಾನದ ಬಸವಾದಿ ಶರಣರ ವಚನ ಸಾಹಿತ್ಯವನ್ನು ಸಂಗ್ರಹಿಸಿ, ಸಂರಕ್ಷಿಸಿ ಬೆಳಕಿಗೆ ತಂದು ಪುನರ್ ಚೇತನ ನೀಡಿ, ಒಂದು ವಿಶ್ವವಿದ್ಯಾಲಯ ಸಾಧಿಸುವಷ್ಟು ಕೆಲಸವನ್ನು ಏಕಾಂಗಿಯಾಗಿ ಸಾಧಿಸಿ, ಒಬ್ಬ ವ್ಯಕ್ತಿಯಾಗದೆ ಒಂದು ಒಂದು ಶಕ್ತಿಯಾಗಿ, ಸಮಾಜಕ್ಕೆ ಬೆಳಕಾಗಿ ಆದರ್ಶ ಬದುಕಿನ ಪ್ರತಿಬಿಂಬವಾಗಿ ಬದುಕಿ ಬಾಳಿದ ಇತಿಹಾಸ ಪುರುಷ, ಒಮ್ಮೆ ನಮ್ಮ ಕನ್ನಡದ ಕಣ್ವ ಬಿ ಎಂ ಶ್ರೀಯವರು ಬಿಜಾಪುರಕ್ಕೆ ಹೋದಾಗ, ಅಲ್ಲಿ ಕೆಲವರು ಪ್ರಶ್ನಿಸಿದರು. ಇತಿಹಾಸ ಪ್ರಸಿದ್ಧ ಗೋಳಗುಮ್ಮಟ ನೋಡುವಿರಾ? ಅದಕ್ಕೆ ಶ್ರೀಯವರು ನಕ್ಕು, ಅದನ್ನು ನೋಡಿಲ್ಲ ಕೇಳಿದ್ದೇನೆ, ಅದಕ್ಕಿಂತಲು ಮೊದಲು ವಚನ ಗುಮ್ಮಟವನ್ನು ನೋಡಬೇಕಾಗಿದೆ ಎಂದರು. ಆ ವಚನ ಗುಮ್ಮಟವೇ ಶ್ರೀ ಫ ಗು ಹಳಕಟ್ಟಿಯವರು. ಆಚಾರ್ಯ ಬಿ ಎಂ ಶ್ರೀಯವರು ಶ್ರೀಯುತರ ಬದುಕಿನ ಮೇರು ಸಾಧನೆಗೆ ಇವರನ್ನು ವಚನ ಪಿತಾಮಹ ಎಂದು, 64ನೇ ಪುರಾತನರು ಎಂದು ಕರೆದರು.
ಶ್ರೀ ಡಾ. ಫ.ಗು. ಹಳಕಟ್ಟಿಯವರು ಜುಲೈ 2, 1880 ರಂದು ತಾಯಿ ದಾನಮ್ಮ, ತಂದೆ ಗುರುಬಸಪ್ಪನವರ ಪುತ್ರರಾಗಿ ಧಾರವಾಡದಲ್ಲಿ ಜನಿಸಿದರು. ತಾನು ಮೂರು ವರ್ಷದವನಿದ್ದಾಗ ತಾಯಿಯನ್ನು ಕಳೆದುಕೊಂಡರು. ತಂದೆ ಶಿಕ್ಷಕರು ಮತ್ತು ಸಾಹಿತ್ಯ ವಿದ್ವಾಂಸರಾಗಿದ್ದರಿಂದ ಏನನ್ನಾದರು ಸಾಧಿಸುವ ಛಲ ಮತ್ತು ಆತ್ಮವಿಶ್ವಾಸವನ್ನು ಪಡೆದುಕೊಂಡರು. ಪ್ರಾಥಮಿಕ ಶಿಕ್ಷಣವನ್ನು ಧಾರವಾಡದಲ್ಲಿ ಪ್ರಾರಂಭಿಸಿ 1897 ರಲ್ಲಿ ಮೆಟ್ರಿಕ್ಯುಲೇಶನ್ ಪಾಸಾಗಿ ಉನ್ನತ ಶಿಕ್ಷಣವನ್ನು ಮುಂಬೈಯಲ್ಲಿ, ಸೇಂಟ್ ಝೇವಿಯರ್ ಕಾಲೇಜಿನಲ್ಲಿ ಪಡೆದರು. ಅಲ್ಲಿ ಕನ್ನಡದ ಪುರೋಹಿತ ಆಲೂರು ವೆಂಕಟರಾಯರು ಸಹಪಾಠಿಯಾಗಿದ್ದರು, ಅಲ್ಲಿನ ಕನ್ನಡ ನಿರಭಿಮಾನ ಮನಸ್ಸಿನ ಮೇಲೆ ಪ್ರಭಾವ ಬೀರಿತು. ಕನ್ನಡಿಗರು ಎಚ್ಚರಗೊಳ್ಳದಿದ್ದರೆ ಕನ್ನಡ ಭಾಷೆ, ಸಂಸ್ಕೃತಿ ಉದ್ಧಾರವಾಗದೆಂದು, ಕನ್ನಡಕ್ಕಾಗಿ ದುಡಿಯುವ ಸಂಕಲ್ಪ ಮಾಡಿದರು. 1897 ಬನಹಟ್ಟಿಯ ಚಿಕ್ಕೋಡಿ ತಮ್ಮಣ್ಣನವರ ಮಗಳು ಭಾಗೀರಥಿಯವರ ಜೊತೆಗೆ ವಿವಾಹವಾಯಿತು. 1901 ರಲ್ಲಿ ಬಿ ಎ ಪದವಿ, 1904ರಲ್ಲಿ ಕಾನೂನು ಪದವಿ ಪಡೆದು ಬೆಳಗಾವಿಯಲ್ಲಿ ಪ್ರಥಮವಾಗಿ ವಕೀಲಿ ವೃತ್ತಿಯನ್ನು ಪ್ರಾರಂಭಿಸಿ, ಕಾರಣಾಂತರಗಳಿಂದ ತಮ್ಮ ವಕೀಲಿ ವೃತ್ತಿಯನ್ನು ಬಿಜಾಪುರಕ್ಕೆ ವರ್ಗಾಯಿಸಿ ಕೊಂಡರು. ನಂತರ ಸರ್ಕಾರ ಇವರ ಕೌಶಲ್ಯ, ಪಾವೀಣ್ಯತೆಯನ್ನು ಪರಿಗಣಿಸಿ ಸರ್ಕಾರಿ ವಕೀಲರನ್ನಾಗಿ ನೇಮಿಸಿತು. ಪ್ರವೃತ್ತಿಯಲ್ಲಿ ಸಾಹಿತ್ಯಾಸಕ್ತಿ ಪ್ರಜ್ವಲವಾಗಿತ್ತು.
ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಶರಣರು ಕಲ್ಯಾಣ ಬಿಟ್ಟು ಹೋಗುವಾಗ ತಮ್ಮೊಂದಿಗೆ ತಾಡೋಲೆಗಳಲ್ಲಿ ಬರೆಯಲಾದ ವಚನ ಸಾಹಿತ್ಯವನ್ನು ಕಟ್ಟಿಕೊಂಡು ಹೋಗಿ ದಾರಿಯಲ್ಲಿ ಸಿಕ್ಕ ಮಠ, ಮನೆಗಳಿಗೆ ಕೊಟ್ಟು ಈ ಪವಿತ್ರ ಗ್ರಂಥಗಳನ್ನು ಪೂಜ್ಯ ಭಾವನೆಯಿಂದ ಜೋಪಾನ ಮಾಡಿ ಎಂದು ಹೇಳಿ ಹೋದಾಗ ಜನರು ಅವುಗಳನ್ನು ಅರಿವೆಯಲ್ಲಿ ಸುತ್ತಿಟ್ಟು ಪೂಜಿಸಿದರೇ ವಿನಃ ಓದಲಿಲ್ಲ. ಧಾರವಾಡದಲ್ಲಿ ಪ್ಲೇಗ್ ತೀವ್ರವಾಗಿದ್ದರಿಂದ ಶ್ರೀ ಹಳಕಟ್ಟಿಯವರು ಬನಹಟ್ಟಿಯಲ್ಲಿರಬೇಕಾಯಿತು. ಆಗ ಮಾವನವರಿಂದ ತಾಡೋಲೆಗಳ ಮಹತ್ವ ತಿಳಿಯಿತು. ಬನಹಟ್ಟಿಯ ಶಿವಲಿಂಗಪ್ಪ ಪಂಚಾಳ ಮನೆಯಲ್ಲಿ ಷಟ್ಟಳ ತಿಲಕ ಮತ್ತು ವಚನ ತಾಡೋಲೆಗಳು, ಗೋರೆ ಗ್ರಾಮದ ವೀರಭದ್ರಪ್ಪನವರಿಂದ ಅಮೂಲ್ಯ ಗ್ರಂಥ ಭಾಷ್ಯರತ್ನಮಾಲೆ ಓದಲು ದೊರೆತವು. ಇವು ಅವರ ಬದುಕಿನ ದಿಕ್ಕನ್ನೇ ಬದಲಾಯಿಸಿದವು. ನಂತರ ಬಸವಾದಿ ಶರಣರ ವಚನ ಸಾಹಿತ್ಯ ಸಂಶೋಧನೆಯಲ್ಲಿ ತೊಡಗಿದರು. ರಬಕವಿ, ಬನ್ನಟ್ಟಿ, ಶ್ರೀ ಶೈಲ, ಮುದನೂರು, ಮಂಗಳವಾಡ, ಮುದಗಲ್ಲು, ಮುರುಗೋಡು, ಪೊಟಿಲಕೆರೆ- ಹೀಗೆ ಅನೇಕ ಊರುಗಳನ್ನು ಸುತ್ತಾಡಿ ತಾಡೋಲೆಗಳನ್ನು ಸಂಗ್ರಹಿಸಿದರು. ತಮ್ಮ ಬದುಕನ್ನು ವಚನ ಸಾಹಿತ್ಯ ಸಂಗ್ರಹ, ಅಧ್ಯಯನ, ವಿಶ್ಲೇಷಣೆ, ಪ್ರಕಟಣೆ ಮತ್ತು ಪ್ರಚಾರಕ್ಕೆ ತ್ಯಾಗ ಮಾಡಿದರು.
ಹುಡುಕಾಟದ ಊರುಗಳಿಲ್ಲ, ತಡುಕಾಡದ ಕೇರಿಗಳಿಲ್ಲ, ಅನ್ವೇಷಣೆಗೈಯ್ಯದ ಆಲಯಗಳಲ್ಲಿ ಸಂಶೋಧನೆಗೈಯ್ಯದ ಆಲಯಗಳಿಲ್ಲ ಎಂದು ತಾವೇ ಹೇಳಿಕೊಂಡಿದ್ದಾರೆ.
ಉರಿಯುಂಡ ಕರ್ಪೂರವಾಗಿ ತನ್ನ ತಾ ಸುಟ್ಟುಕೊಂಡು, ವಕೀಲ ವೃತ್ತಿ ತ್ಯಜಿಸಿ 1923 ರಲ್ಲಿ ವಚನಶಾಸ್ತ್ರ ಸಾರ ಎಂಬ ಬೃಹತ್ ಗ್ರಂಥವನ್ನು ಹೊರತಂದರು. ವಚನಗಳನ್ನು ಪ್ರಚಾರ ಮಾಡಲು ತಮ್ಮ ಮನೆಯನ್ನು ಮಾರಿ 1925 ರಲ್ಲಿ ಹಿತಚಿಂತಕ ಪ್ರಿಂಟಿಂಗ್ ಪ್ರೆಸ್ ಸ್ಥಾಪಿಸಿದರು. 1926 ರಲ್ಲಿ ಶಿವಾನುಭವ ತ್ರೈಮಾಸಿಕ ಪತ್ರಿಕೆ, 1927 ರಲ್ಲಿ ನವ ಕರ್ನಾಟಕ ಪತ್ರಿಕೆ ಪ್ರಾರಂಭಿಸಿ ಇವುಗಳ ಮೂಲಕ ವಚನಸಾಹಿತ್ಯ ಪ್ರಚಾರ ಮಾಡುತ್ತ ಪತ್ರಿಕೆಗಳನ್ನು ಸೈಕಲ್ ಮೇಲೆ ಹೊತ್ತು ಮನೆ ಮನೆಗೆ ತಲುಪಿಸಿದರು. ಶಿವಾನುಭವ ತತ್ವ ಅನುಷ್ಠಾನಕ್ಕೆ ಸಂಘಟನೆ ಮೂಲಕ ಸುಧಾರಣೆಯಾಗಬೇಕೆಂದು ಅಕ್ಕನ ಬಳಗ ಸ್ಥಾಪಿಸಿದರು. ವಚನಗಳನ್ನು ಇಂಗ್ಲೀಷ್‌ನಲ್ಲಿ ಭಾಷಾಂತರಿಸಿ ಇಂಡಿಯನ್ ಆಂಟಿಕ್ವರಿಯಲ್ಲಿ ಪ್ರಕಟಿಸಿದ್ದಾರೆ. ಹರಿಹರನ 42 ರಗಳೆಗಳನ್ನು ಸಂಶೋಧಿಸಿ ಪ್ರಕಟಿಸಿದ ಯಶಸ್ಸು ಇವರದು. ತಮ್ಮ ಸಂಶೋಧನೆಯ ಮೂಲಕ 250 ಕ್ಕೂ ಹೆಚ್ಚು ವಚನಕಾರರನ್ನು ಬೆಳಕಿಗೆ ತಂದ ಕೀರ್ತಿ ಇವರದು. ಇವರ ಸ್ವತಂತ್ರ ಕೃತಿಗಳ ಜೊತೆಗೆ ಸಂಪಾದಿಸಿದ ವಚನ ಸಾಹಿತ್ಯ ಕೃತಿಗಳು 175 ಕ್ಕೂ ಹೆಚ್ಚು. ಶೂನ್ಯ ಸಂಪಾದನೆ, ಶಿವಾನುಭವ, ಕೃಷಿ ವಿಜ್ಞಾನ, ಹರಿಹರನ ರಗಳೆ, ಪ್ರಭುದೇವರ ವಚನಗಳು, ಶಬ್ದಕೋಶ, ಆದಿಶೆಟ್ಟಿ ಪುರಾಣ, ಮುಂತಾದವುಗಳು ಪ್ರಮುಖ ಕೃತಿಗಳು.
ದೂರದೃಷ್ಟಿ ವ್ಯಕ್ತಿತ್ವದ ಹಳಕಟ್ಟಿಯವರು ಸಾಹಿತ್ಯ ಮತ್ತು ಪತ್ರಿಕೋದ್ಯಮದ ಜೊತೆಗೆ ಬ್ಯಾಂಕಿಂಗ್, ಕೃಷಿ, ನೇಕಾರಿಕೆ, ಸಹಕಾರಿ, ಶಿಕ್ಷಣ ಇತ್ಯಾದಿ ಹೀಗೆ ಎಲ್ಲದರಲ್ಲೂ ತೊಡಗಿಸಿಕೊಂಡರು. 1910 ರಲ್ಲಿ ಬಿ.ಎಲ್.ಡಿ.ಇ ಸಂಸ್ಥೆ ಸ್ಥಾಪಿಸಿ ಶಿಕ್ಷಣಕ್ಕೆ ಮೈಲಿಗಲ್ಲಾದರು. 1912 ರಲ್ಲಿ ಸಿದ್ದೇಶ್ವರ ಸಂಸ್ಥೆ, 1913 ರಲ್ಲಿ ಸಿದ್ದೇಶ್ವರ ಸಹಕಾರಿ ಪತ್ತಿನ ಸಂಘ, 1914 ರಲ್ಲಿ ಸಿದ್ದೇಶ್ವರ ಹೈಸ್ಕೂಲ್, ಕೃಷಿ ಸಹಕಾರ ಸಂಘ, ನೇಕಾರರ ಸಂಘ, ಹತ್ತಿ ಮಾರಾಟ ಸಂಘಗಳು, ಭೂತನಾಳ ಕೆರೆಯ ನಿರ್ಮಾಣ ಹೀಗೆ ಸಮಾಜದ ಅಭಿವೃದ್ಧಿಗೆ ದುಡಿದ ಅಪರೂಪದ ವ್ಯಕ್ತಿತ್ವ.
1920 ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಸ್ಥಾಪನೆಯಲ್ಲಿ ಇವರ ಪಾತ್ರ ಪ್ರಮುಖವಾದುದು. ಇದೇ ವರ್ಷದಲ್ಲಿ ಮುಂಬೈ ವಿಧಾನ ಪರಿಷತ್ ಸದಸ್ಯರಾಗಿ, 1926 ರಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, 1928ರಲ್ಲಿ ಕರ್ನಾಟಕ ಏಕೀಕರಣ ಪರಿಷತ್ ಅಧ್ಯಕ್ಷತೆ, 1930 ರಲ್ಲಿ ಮುಂಬೈ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯತ್ವ 1933 ರಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷತೆ, ಬಿಜಾಪುರ ನಗರ ಸಭೆಯ ಶಾಲಾ ನಿರ್ವಹಣಾ ಸಮಿತಿಯ ಅಧ್ಯಕ್ಷರಾಗಿ, ಜಿಲ್ಲಾ ಗ್ರಾಮಾಂತರ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿಯಾಗಿ ಹೀಗೆ ವಿವಿಧ ಸ್ಥರಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಮುಂಬೈ ಕರ್ನಾಟಕದಲ್ಲಿ ಕನ್ನಡ ಶಾಲೆಗಳನ್ನು ತೆರೆದು, ಕನ್ನಡದ ವಾತಾವರಣವನ್ನು ನಿರ್ಮಿಸಿದ್ದಾರೆ. ಇವರ ಸಾಮಾಜಿಕ ಮತ್ತು ಸಾಂಸ್ಕೃತಿಕ ಸೇವೆಗೆ ಸರ್ಕಾರ `ರಾವ್ ಸಾಹೇಬ್’ ಮತ್ತು `ರಾವ್ ಬಹದ್ದೂರ್, ಬಿರುದನ್ನು ನೀಡಿ ಗೌರವಿಸಿದೆ.
ಅತ್ಯುದ್ಭುತ ಸಾಧಕ ಹಳಕಟ್ಟಿಯವರು ಕಿತ್ತು ತಿನ್ನುವ ಬಡತನ, ಅನಾರೋಗ್ಯ, ಹಿರಿಯ ಮಗನ ಅಕಾಲಿಕ ಸಾವು, ಬಂದ ಎಲ್ಲಾ ಆಪತ್ತು ವಿಪತ್ತುಗಳನ್ನು ಧೈರ್ಯದಿಂದ ಎದುರಿಸಿದರು. ವಚನ ಸಾಹಿತ್ಯಕ್ಕಾಗಿ ತಮಗೆ ಬಂದ ಪ್ರಶಸ್ತಿ, ಹಣ, ಬಹುಮಾನದ ಹಣವನ್ನು ಸಮರ್ಪಿಸಿದರು. ತನ್ನದೆಲ್ಲವನ್ನೂ ಸಕಲ ಜೀವಾತ್ಮರ ಲೇಸಿಗಾಗಿ ಅರ್ಪಿಸಿದ ಮಹಾನುಭಾವ. ಈಶ್ವರ ಸಣ್ಣಕಲ್ಲ ಅವರು `ಏನೂ ಇಲ್ಲದ ಘನ ಫಕ್ಕೀರಾ ಸೂರೆಗೈದೆಯಾ ಜಗಕ್ಕೆ ವಚನ ಭಂಡಾರ’ಎಂದು ಹಾಡಿಹೊಗಳಿದ್ದಾರೆ. 1956ರಲ್ಲಿ ಧಾರವಾಡ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪಡೆಯಲು ಹೋದಾಗ ಕುಲಪತಿಗಳಾಗಿದ್ದ ಪ್ರೊ. ಪಾವಟೆ ಇದೇನು ಹರಿದ ಕೋಟಿನಲ್ಲಿ ಬಂದಿದ್ದೀರಲ್ಲಾ ಅಂದಾಗ, ಕುಲಪತಿಗಳೊ ಕೋಟು ಹರಿದಿರಬಹುದು, ಆದರೆ ಶುಭ್ರವಾಗಿದೆ ಎಂದಾಗ ಪಾವಟೆಯವರ ಕಣ್ಣಲ್ಲಿ ನೀರು ಸುರಿಯಲಾರಂಭಿಸಿದವು.
ಕರ್ನಾಟಕ ಇತಿಹಾಸದಲ್ಲಿ 1964 ಜೂನ್ 29 ರ ಸಂಜೆ ಅಂಗವೊಂದು ಲಿಂಗದೊಳಗೆ ಬೆರೆತು, ಆತ್ಮ ಪರಮಾತ್ಮನೊಂದಿಗೆ ಸೇರಿಕೊಂಡ ಪುಣ್ಯಗಳಿಗೆಯದು. ಕನ್ನಡಮಾತೆಯ ಮುಡಿಗೆ ಸಾವಿಲ್ಲದೆ, ಕೇಡಿಲ್ಲದೆ ಎಣೆಯಿಲ್ಲದೆ ಕೃತಿ ಕುಸುಮಗಳನ್ನರ್ಪಿಸಿದ ಶರಣ ಡಾ. ಫ.ಗು ಹಳಕಟ್ಟಿ ಮರಣವನ್ನಪಿದ ಮಹಾನವಮಿ ಅದು. ನಾಡಿನ ಸರ್ವತೋಮುಖ ಅಭಿವೃದ್ಧಿಗಾಗಿ ದುಡಿದ ಪುಣ್ಯಪುರುಷ ಶ್ರೀ ಹಳಕಟ್ಟಿ ಸ್ಮರಣಾರ್ಥ ಬಿ.ಎಲ್.ಡಿ.ಇ ಸಂಸ್ಥೆಯು ಅವರ ಸಮಗ್ರ ಸಾಹಿತ್ಯವನ್ನು 15 ಬೃಹತ್ ಗ್ರಂಥಗಳನ್ನಾಗಿ ಮರು ಮುದ್ರಣಗೊಳಿಸಿ ಓದುಗರಿಗೆ ಒದಗಿಸಿದೆ. ಕರ್ನಾಟಕ ರಾಜ್ಯ ಸರ್ಕಾರ ಶ್ರೀಯುತರ ಜನ್ಮ ದಿನವನ್ನು ವಚನ ಸಾಹಿತ್ಯ ಸಂರಕ್ಷಣಾ ದಿನವನ್ನಾಗಿ ಆಚರಿಸುತ್ತಿರುವುದು ಪ್ರಶಂಸನಾರ್ಹ. ಈ ಹಿನ್ನೆಲೆಯಲ್ಲಿ ಸತ್ಯ ನಮ್ಮ ನಡೆ ನುಡಿಯಾಗಬೇಕು. ಕಾಯಕ ಮತ್ತು ದಾಸೋಹ ನಮ್ಮ ಜೀವನ ಪದ್ಧತಿಯಾದಾಗ ಮಾತ್ರ ಇಂತಹ ಮಹನೀಯರಿಗೆ ಕೃತಜ್ಞತೆ ಸಲ್ಲಿಸಿದಂತಾಗುತ್ತದೆ.
– ಡಾ. ಹೆಚ್.ಎಸ್. ಮಂಜುನಾಥ ಕುರ್ಕಿ, ದಾವಣಗೆರೆ.