ಶರಣರ ವಚನ ಸಂಗ್ರಹಿಸಿದ ಸಂತ ಫ.ಗು.ಹಳಕಟ್ಟಿ

ಶರಣರ ವಚನ ಸಂಗ್ರಹಿಸಿದ ಸಂತ ಫ.ಗು.ಹಳಕಟ್ಟಿ

ಹನ್ನೆರಡನೇ ಹಾಗೂ ಪೂರ್ವ ಶತಮಾನದ ಶರಣರ ವಚನಗಳನ್ನು ಸಂಗ್ರಹಿಸಿ ಜನಮಾನಸದಲ್ಲಿ ಸಮಾನತೆಯ ಅರಿವು ಮೂಡಿಸುವ ಬೃಹತ್ ಕಾರ್ಯ ಮಾಡಿದ ವಚನಗಳ ಪಿತಾಮಹ ಫ.ಗು.ಹಳಕಟ್ಟಿ ಅವರ ಜನ್ಮ ದಿನ.  

ಹಳಕಟ್ಟಿ ಧಾರವಾಡದ ಲಿಂಗಾಯತ ನೇಕಾರ (ಹಠಗಾರ) ಸಮಾಜದ  ಗುರುಬಸಪ್ಪ ದಾನಮ್ಮ ದಂಪತಿಯ ಉದರದಲ್ಲಿ 1880 ಜುಲೈ 2ರಂದು ಜನಿಸಿದರು. ಇವರ ಪೂರ್ವಜರು ಪರಸಗಡ, ಈಗಿನ ಸವದತ್ತಿ ತಾಲ್ಲೂಕಿನ ಹಳಕಟ್ಟಿ ಗ್ರಾಮದಿಂದ ವಲಸೆ ಬಂದು ಧಾರವಾಡದಲ್ಲಿ ನೆಲೆಸಿದ್ದರು.

ತಮ್ಮ 16ನೇ ವಯಸ್ಸಿನಲ್ಲಿ ಸೋದರ ಮಾವ ತಮ್ಮಣ್ಣಪ್ಪ ಚಿಕ್ಕೋಡಿ ಅವರ ಮಗಳು ಭಾಗೀರಥಿಯೊಂದಿಗೆ ಮದುವೆಯಾಗುತ್ತಾರೆ. ಮಾವನ ಆಣತಿಯಂತೆ ಬಿಜಾಪುರದಲ್ಲಿ ವಕೀಲ ವೃತ್ತಿಯಲ್ಲಿ ನಿರತರಾದ ಫ.ಗು.ಹಳಕಟ್ಟಿ ಅವರಿಗೆ ರಬಕವಿ ಮಂಚಾಲೆ ಅವರ ಮನೆಯಲ್ಲಿ ಕಂಡ ತಾಡೋಲೆ ಕಟ್ಟುಗಳಲ್ಲಿದ್ದ ಶರಣರ ವಚನಗಳನ್ನು ಓದಿ, ಅವುಗಳಲ್ಲಿನ ಧಾರ್ಮಿಕ ಹಾಗೂ ವೈಚಾರಿಕ ಚಿಂತನೆಗಳನ್ನು ಜಗತ್ತಿಗೆ ಸಾದರಪಡಿಸಲು ಅವುಗಳ  ಸಂಗ್ರಹಕ್ಕೆ ತಮ್ಮ ಬದುಕನ್ನು ಮೀಸಲಾಗಿರಿಸಿಕೊಂಡು ಮನೆ, ಮಠ- ಮಂದಿರಗಳನ್ನು ಅಲೆಯುತ್ತಾರೆ.

ಹಳಕಟ್ಟಿ ಅವರಿಗಿಂತ ಮೊದಲು ಕವಿಗಳು, ಚರಿತ್ರೆಕಾರರು ಕೇವಲ 50 ವಚನಕಾರರನ್ನು ಗುರುತಿಸಿದ್ದರು. ಫ.ಗು. ಹಳಕಟ್ಟಿ ಅವರು ತಮ್ಮ ಸ್ವಹಿತವನ್ನು ಬದಿಗಿಟ್ಟು ಹರಕಂಗಿ-ಮುರುಕ ಸೈಕಲ್ ಮೇಲೆ ಸಂಚರಿಸಿ 250 ವಚನಕಾರರನ್ನು ಮತ್ತು ಅವರ ವಚನಗಳನ್ನು ಬೆಳಕಿಗೆ ತರುತ್ತಾರೆ.  ಜೊತೆಗೆ  42 ಹರಿಹರನ ರಗಳೆಗಳನ್ನು ಸಂಶೋಧನೆ ಮಾಡಿ ಪ್ರಕಟಿಸುತ್ತಾರೆ. ತನ್ನದೆಲ್ಲವನ್ನೂ ಕಳೆದುಕೊಂಡರೂ, ಈ ಕಾರ್ಯಕ್ಕೆ ತಮ್ಮನ್ನು ಸಂಪೂರ್ಣ ಅರ್ಪಿಸಿಕೊಂಡ ಸಂತ.

 1926 ಬಸವೇಶ್ವರ , 1927 ಮಹಾದೇವಿಯಕ್ಕನ, 1929 ಸಕಲೇಶ ಮಾದರಸನ, 1931 ಪ್ರಭುದೇವರ, 1932 ಸಿದ್ದರಾಮೇಶ್ವರರ, 1930 ಆದಯ್ಯನ, 1933, 1939 ದೇವರ ದಾಸೀಮಯ್ಯ ಅವರ ವಚನಗಳು,1935 ಹಾಗೂ1940 ಎರಡು ಭಾಗಗಳಲ್ಲಿ ಹರಿಹರನ ರಗಳೆಗಳನ್ನು ಪ್ರಕಟಿಸುತ್ತಾರೆ. ‘ವಚನಶಾಸ್ತ್ರಸಾರ’ ಎಂಬ ಬೃಹತ್ ವಚನ  ಸಂಕಲನ  ಹಾಗೂ ವಚನಗಳ ಪ್ರಕಟಣೆಗೆ ‘ಶಿವಾನುಭವ’  ಪತ್ರಿಕೆ ಪ್ರಾರಂಭಿಸುತ್ತಾರೆ. 

ಸಂಸ್ಥೆಗಳನ್ನು ಹುಟ್ಟುಹಾಕಿ, ನಗರಸಭೆ ಸದಸ್ಯರಾಗಿ, ಮುಂಬೈ ವಿಧಾನಸಭೆ ಸದಸ್ಯರಾಗಿದ್ದ ಹಳಕಟ್ಟಿ ಅವರ ಹೆಸರು ಬಿಜಾಪುರದ ರಸ್ತೆಯೊಂದಕ್ಕೆ ನಾಮಕರಣ ಮಾಡಲು ನಗರಸಭೆ ಪ್ರಯತ್ನಿಸಿದಾಗ, ಸೂಕ್ತವಾದ ರಸ್ತೆಯೊಂದು ಸಿಗದೇ ಪರದಾಟ ನಡೆದಿದೆ. ನಿಸ್ವಾರ್ಥಿ ಫ.ಗು.ಹಳಕಟ್ಟಿ ಅವರು ಮನೆಯ ಬಾಡಿಗೆ ಕಟ್ಟಲಾಗದೆ ತಿಂಗಳಗೊಮ್ಮೆ ಮನೆ ಬದಲಾಯಿಸುತ್ತಿದ್ದುದರಿಂದ  ಹೆಚ್ಚು ದಿನವಾಸವಿದ್ದ ರಸ್ತೆ ಪುರಸಭೆಗೆ ಸಿಗದ್ದರಿಂದ ಹೆಸರಿಡಲು ಪರದಾಟ ಉಂಟಾಗಿದೆಯಂತೆ.

(ಸಂಗ್ರಹ)

ಮನೋಹರ ಮಲ್ಲಾಡದ, ರಾಣೇಬೆನ್ನೂರು.

error: Content is protected !!