ಡಾ|| ಬಿ.ಸಿ. ರಾಯ್‍ ಸ್ಮರಣೆ ; ಇಂದು `ರಾಷ್ಟ್ರೀಯ ವೈದ್ಯರ ದಿನಾಚರಣೆ’

ಡಾ|| ಬಿ.ಸಿ. ರಾಯ್‍ ಸ್ಮರಣೆ ; ಇಂದು `ರಾಷ್ಟ್ರೀಯ ವೈದ್ಯರ ದಿನಾಚರಣೆ’

ಮನುಷ್ಯನಿಗೆ ಆರೋಗ್ಯವೇ ಭಾಗ್ಯ, ಸಂಪತ್ತು ಎಂಬುದು ಸರ್ವಕಾಲಿಕ ಮಾತು ‘health is wealth’. 

ಆರೋಗ್ಯವನ್ನು ರಕ್ಷಿಸುವುದು, ಅನಾರೋಗ್ಯಕ್ಕೆ ಔಷಧಿ ನೀಡಿ, ಗುಣ ಪಡಿಸುವುದು ವೈದ್ಯರ ಕರ್ತವ್ಯವಾಗಿದೆ. `ವೈದ್ಯೋ ನಾರಾಯಣೋ ಹರಿಃ’ (ವೈದ್ಯ ದೇವರಿಗೆ ಸಮಾನ) ಎಂಬುದು ಭಾರತೀಯರ ನಂಬಿಕೆ. ಅನಾರೋಗ್ಯಕ್ಕೆ ತುತ್ತಾದ ರೋಗಿಯನ್ನು ಚಿಕಿತ್ಸೆ ಮೂಲಕ ಗುಣಪಡಿಸುವುದು ವೈದ್ಯರ ಮಹಾನ್ ಕಾಯಕ. ಅವರಿಗೆ ಗೌರವ, ಕೃತಜ್ಞತೆ ಸಲ್ಲಿಸುವುದು ಪ್ರತಿಯೊಬ್ಬರ ಕರ್ತವ್ಯ. ವೈದ್ಯರ ಸೇವೆ ಶ್ಲ್ಯಾಘನೀಯ. 

ಭಾರತದಲ್ಲಿ ವೈದ್ಯರು ಮತ್ತು ವೈದ್ಯರ ಪ್ರಮುಖ ಕೊಡುಗೆ ಗಳನ್ನು ಅಂಗೀಕರಿಸುವ, ಅವರ ಮಾನವೀಯತೆಯ ನಿರಂತರ ಸೇವೆ, ಕಾಳಜಿಗಾಗಿ ದೇಶದಲ್ಲಿ ದಿ|| ಪಿ.ವಿ. ನರಸಿಂಹ ರಾಯರು ಪ್ರಧಾನಿಯಾಗಿದ್ದಾಗ ಇನ್ನಿತರೆ ವೃತ್ತಿಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ದಿನಾಚರಣೆ ಅನುಸರಿಸುವಂತೆ ವೈದ್ಯ ವೃತ್ತಿಗೂ ಗೌರವ ಕೊಡುವ ಸಲುವಾಗಿ ಡಾ|| ಬಿಧನ್ ಚಂದ್ರರಾಯ್ ಅವರ ಜನ್ಮ ಮತ್ತು ಮರಣ ದಿನದ ಸ್ಮರಣೆಗಾಗಿ ಭಾರತದಲ್ಲಿ 1991 ಜುಲೈ 1ರಿಂದ `ರಾಷ್ಟ್ರೀಯ ವೈದ್ಯರ ದಿನಾಚರಣೆ’ಯನ್ನು ‘ವೈದ್ಯರ’ ದಿನವನ್ನಾಗಿ ಆಚರಿಸಲು ನಾಂದಿ ಹಾಡಿದರು. 

ವೈದ್ಯಕೀಯ ಕ್ಷೇತ್ರದ ಏಳುಬೀಳುಗಳನ್ನು ಆತ್ಮಾವಲೋಕನ ಮಾಡಿಕೊಂಡು, ಸವಾಲುಗಳನ್ನು ಮೆಟ್ಟಿನಿಂತು ವೈದ್ಯ ವೃತ್ತಿಯ ಪಾವಿತ್ರ್ಯತೆಯನ್ನು ಕಾಪಾಡಲು ಸಂಕಲ್ಪ ಮಾಡುವ ದಿನವಿದು.

ಡಾ|| ಬಿ.ಸಿ. ರಾಯ್ ಅವರ ಹಿನ್ನೆಲೆ :

ಡಾ|| ಬಿಧನ್ ಚಂದ್ರರಾಯ್ ಮಾನವೀಯತೆ, ಸಾಮಾಜಿಕ ಕಳಕಳಿ, ಅದ್ವಿತೀಯ ವೈದ್ಯಕೀಯ ಜ್ಞಾನದ ಅರಿವು, ಶಿಕ್ಷಣ ತಜ್ಞ, ರಾಜಕಾರಣಿ, ಸ್ವಾತಂತ್ರ್ಯ ಹೋರಾಟಗಾರ, `ಭಾರತ ರತ್ನ’ ಪ್ರಶಸ್ತಿ ಪುರಸ್ಕೃತ ಹೀಗೆ ಬಹುಮುಖ ಪ್ರತಿಭೆಯುಳ್ಳ ಅಂತರರಾಷ್ಟ್ರೀಯ ಖ್ಯಾತಿಯ ಶ್ರೇಷ್ಠ ವೈದ್ಯರು. 

ದೇಶ ಪ್ರೇಮದ ಹಿನ್ನೆಲೆಯುಳ್ಳ ಸಾಮಾನ್ಯ ಕುಟುಂಬವೊಂದರಲ್ಲಿ 1882 ಜುಲೈ 1 ರಂದು ಪಾಟ್ನಾದಲ್ಲಿ ಜನಿಸಿದರು. 1962 ಜುಲೈ 1 ರಂದು ತಮ್ಮ 80ನೇ ವಯಸ್ಸಿನಲ್ಲಿ ಮರಣ ಹೊಂದಿದರು. ಹುಟ್ಟು ಮತ್ತು ಸಾವು ಒಂದೇ ದಿನಾಂಕವಾಗಿದ್ದ ವಿಶೇಷ ವ್ಯಕ್ತಿಯಾದ ವೈದ್ಯಲೋಕದ ಆದರ್ಶನೀಯ ಪ್ರಾತಃಸ್ಮರಣೀಯರು. ಸ್ವ-ಪ್ರತಿಭೆಯಿಂದ ಅವಕಾಶಗಳನ್ನು ಅನ್ವೇಷಿಸಿಕೊಂಡು, ಅವುಗಳನ್ನು ಗಿಟ್ಟಿಸಿಕೊಂಡು ತಾವು ಅಲಂಕರಿಸಿದ ಪ್ರತಿಯೊಂದು ಹುದ್ದೆಗೂ ಹೊಸಛಾಪನ್ನು ಮುದ್ರಿಸಿ, ಆ ಹುದ್ದೆಗಳಿಗೆ ಮತ್ತಷ್ಟು ಗೌರವ ತಂದರು. ಅವರು ಹುಟ್ಟಿದ ಮತ್ತು ಸಾವನ್ನಪ್ಪಿದ ಜುಲೈ 1 ರಂದು ರಾಷ್ಟ್ರೀಯ ವೈದ್ಯರ ದಿನಾಚರಣೆ ದಿನವನ್ನಾಗಿ 1991 ರಿಂದ ಭಾರತದಲ್ಲಿ ಆಚರಿಸಲಾಗುತ್ತದೆ. ಇಂದಿನ ವೈದ್ಯ ಪೀಳಿಗೆಗೆ ಡಾ|| ಬಿ.ಸಿ. ರಾಯ್ ಅವರ ಆದರ್ಶನೀಯ ವ್ಯಕ್ತಿತ್ವವನ್ನು ಪರಿಚಯಸುವುದಲ್ಲದೇ, ವೈದ್ಯಕೀಯ ಕ್ಷೇತ್ರದ ಬೆಳವಣಿಗೆಯ ಮೈಲುಗಲ್ಲುಗಳು ಮತ್ತು ಸವಾಲುಗಳ ಬಗ್ಗೆ ಬೆಳಕು ಚೆಲ್ಲಲು ಸಹಕಾರಿಯಾಗಿದೆ.

ಪ್ರಾಧ್ಯಾಪಕರಾಗಿ, ಕುಲಪತಿಗಳಾಗಿದ್ದ ಡಾ|| ಬಿ.ಸಿ. ರಾಯ್ :

ಡಾ|| ರಾಯ್ ಪಾಟ್ನಾದಲ್ಲಿ ಜನಿಸಿದರೂ ಪಶ್ಚಿಮ ಬಂಗಾಳವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿಸಿಕೊಂಡು ದೂರದ ಊರಿನಲ್ಲೂ ಪ್ರೀತಿ, ವಿಶ್ವಾಸ, ನಂಬಿಕೆ, ಹಾಗೂ ಜನಮೆಚ್ಚುಗೆ ಗಳಿಸಿದರು. ಕಲ್ಕತ್ತಾದಲ್ಲಿ 1905ರಲ್ಲಿ ವೈದ್ಯಕೀಯ ಪದವಿ ಪಡೆದು ನಂತರ ವೈದ್ಯಶಾಸ್ತ್ರದ ಅತ್ಯುನ್ನತ ಪದವಿಯಾದ ಎಂ.ಆರ್.ಸಿ.ಪಿ. ಮತ್ತು ಶಸ್ತ್ರಕ್ರಿಯಾ ಶಾಸ್ತ್ರದ ಅತ್ಯುನ್ನತ ಪದವಿಯಾದ ಎಫ್.ಆರ್.ಸಿ.ಪಿ. ಗಳೆರಡೂ ಪದವಿಗಳನ್ನು ಎರಡೇ ವರ್ಷಗಳಲ್ಲಿ ಏಕಕಾಲಕ್ಕೆ ಇಂಗ್ಲೆಡಿನ ಪ್ರತಿಷ್ಠಿತ ರಾಯಲ್ ಕಾಲೇಜಿನಲ್ಲಿ ಪಡೆದ ಅಪ್ರತಿಮ ಪ್ರತಿಭಾವಂತರು. 1911ರಲ್ಲಿ ಭಾರತಕ್ಕೆ ಹಿಂದುರುಗಿ ಕಲ್ಕತ್ತಾ ಮೆಡಿಕಲ್ ಕಾಲೇಜಿನಲ್ಲಿ ಬೋಧಕರಾಗಿ ಕೆಲಸಕ್ಕೆ ಸೇರಿದರು. ನಂತರ ಕ್ಯಾಂಪ್‍ಬೆಲ್ ಮೆಡಿಕಲ್ ಸ್ಕೂಲ್, ಕಾರ್ ಮೆಡಿಕಲ್ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ, ವಿಶ್ವವಿದ್ಯಾನಿಲಯಗಳ ಕುಲಪತಿಗಳಾಗಿ ಸಾವಿರಾರು ವೈದ್ಯರ ಪರಂಪರೆಯ ಸೃಷ್ಟಿಗೆ ನಾಂದಿಯಾದವರು.

ವೈದ್ಯಕೀಯ ಕ್ಷೇತ್ರಕ್ಕೆ ಡಾ|| ಬಿ.ಸಿ. ರಾಯ್‍ ಕೊಡುಗೆ:  

ವೈದ್ಯಕೀಯ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕಾಗಿ 1928ರಲ್ಲಿ ಭಾರತೀಯ ವೈದ್ಯಕೀಯ ಸಂಘ (IMA). ವೈದ್ಯ ಕೀಯ ಶಿಕ್ಷಣದ ಗುಣಮಟ್ಟ ಮತ್ತು ಸೇವೆ ಹೆಚ್ಚಿಸಲು 1934 ರಲ್ಲಿ ಭಾರತೀಯ ವೈದ್ಯಕೀಯ ಪರಿಷತ್ತು (IMC)  ರಾಷ್ಟ್ರೀಯ ವೈದ್ಯಕೀಯ ಪರಿಷತ್ತು (NMC) ಸ್ಥಾಪಿಸಿದರು.

ಇಂತಹ ಮಹತ್ವದ ಸಂಸ್ಥೆಗಳನ್ನು ಹುಟ್ಟುಹಾಕಿ, ಆ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷರಾಗಿ ವೈದ್ಯಕೀಯ ಕ್ಷೇತ್ರದ ಬೆಳವಣಿಗೆಗೆ ಭದ್ರವಾದ ಬುನಾದಿ ಹಾಕಿದ ವೈದ್ಯ ಸಂಘಟನೆಗಳ ಪಿತಾಮಹರು. ಜಾಧವ್‍ಪುರ್ ಟಿ.ಬಿ. ಆಸ್ಪತ್ರೆ, ಚಿತ್ರರಂಜನ್ ಸೇವಾಸದನ, ಕಮಲಾ ನೆಹರು ಮೆಮೋರಿಯಲ್ ಆಸ್ಪತ್ರೆ, ವಿಕ್ಟೋರಿಯಾ ಇನ್‌ಸ್ಟಿಟ್ಯೂಷನ್, ಚಿತ್ತರಂಜನ್ ಕ್ಯಾನ್ಸರ್ ಆಸ್ಪತ್ರೆಗಳ ಸ್ಥಾಪನೆಯಲ್ಲಿ ಡಾ|| ಬಿ.ಸಿ. ರಾಯ್‍ ಪಾತ್ರ ಪ್ರಮುಖವಾಗಿದೆ. 1946ರಲ್ಲಿ ಭಾರತೀಯ ವೈದ್ಯಕೀಯ ಸಂಘ, ವಿಶ್ವ ವೈದ್ಯಕೀಯ ಸಂಘದ ಸಂಘಟನೆಯಲ್ಲಿ (ಡಬ್ಲ್ಯೂ.ಎಂ.ಎ) ಸಹಾಯ ಮಾಡಿತು. ಅದರ ಸ್ಥಾಪಕ ಸದಸ್ಯರು ಡಾ|| ಬಿ.ಸಿ. ರಾಯ್ ಅವರು. ಇದರ ಕೇಂದ್ರ ಕಛೇರಿ ಫ್ರಾನ್ಸ್‍ನಲ್ಲಿದೆ.  ಐ.ಎಂ.ಎ. ಕಛೇರಿ ನವದೆಹಲಿಯಲ್ಲಿದೆ.

ಡಾ|| ಬಿ.ಸಿ. ರಾಯ್ ಮುಖ್ಯಮಂತ್ರಿಯಾಗಿ ಸೇವೆ : 

ವೈದ್ಯರು, ಶಿಕ್ಷಣ ತಜ್ಞರು, ಪ್ರಾಧ್ಯಾಪಕರಾಗಿ ತಮ್ಮ ವೈದ್ಯಕೀಯ ಸೇವೆಯ ಜನಪ್ರಿಯತೆಯಿಂದಲೇ ಸಾಮಾಜಿಕ ರೋಗಗಳಿಗೂ ವೈದ್ಯರಾಗುವ ಅವಕಾಶವನ್ನು ಗಳಿಸಿಕೊಂಡು ಜನರ ಉನ್ನತಿಗೆ ಅವರಲ್ಲಿದ್ದ ಕಾಳಜಿ, ಮಾನವೀಯ ಗುಣಗಳು ಮತ್ತು ಸೇವೆಯಲ್ಲಿ ಅವರಿಗಿದ್ದ ಪ್ರೀತಿಯಿಂದ ಅವರು ರಾಜ ಕೀಯವಾಗಿ ಗುರುತಿಸಿಕೊಂಡರು. ಭಾರತೀಯ ಕಾಂಗ್ರೆಸ್ ಸದಸ್ಯರಾದರು. ಕೊಲ್ಕತ್ತಾ ನಗರಸಭೆಯ ಮೇಯರ್ ಆಗಿ ಕಾರ್ಯನಿರ್ವಹಿಸಿದರು. ತಮ್ಮ ಜನಪ್ರಿಯತೆಯಿಂದ ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿಯಾಗಿ ಸುದೀರ್ಘವಾಗಿ 1948–1962ರ ವರೆಗೆ 14 ವರ್ಷಗಳ ಕಾಲ ಜನ ಸೇವೆ ಮಾಡುವ ಮೂಲಕ ಅನೇಕ ಅಭಿವೃದ್ದಿ ಕಾರ್ಯಗಳನ್ನು, ಸುಧಾರಣೆಗಳನ್ನು ಜಾರಿಗೆ ತಂದರು. ವೈದ್ಯನೊಬ್ಬ ತನ್ನ ಸೇವೆಯ ಶ್ರದ್ಧೆಯಿಂದ, ಗಳಿಸುವ ಪ್ರೀತಿ-ಪಾತ್ರದಿಂದಲೇ ಯಾವ ಬಗೆಯ ಉನ್ನತ ಅಧಿಕಾರದ ಮನ್ನಣೆಯನ್ನು ಪಡೆಯಬಹುದು ಎಂಬುದಕ್ಕೆ ಡಾ|| ಬಿ.ಸಿ.ರಾಯ್ ಜ್ವಲಂತ ಸಾಕ್ಷಿಯಾಗಿದ್ದಾರೆ. ಅವರು ಮುಖ್ಯಮಂತ್ರಿಯಾಗಿದ್ದಾಗಲೂ ಪ್ರತಿ ನಿತ್ಯ ಒಂದು ಗಂಟೆ ಕೊಳಗೇರಿಗಳಲ್ಲಿ ರೋಗಿಗಳನ್ನು ಪರೀಕ್ಷಿಸಿ, ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದರು. ದೇಶದ ಸೇವೆಗಾಗಿ ಬ್ರಹ್ಮಚಾರಿಯಾಗಿಯೇ ಉಳಿದ ಅವರು, ತಮ್ಮ ಕೊನೆಯ ದಿನಗಳಲ್ಲಿ ತಾವು ಸಂಪಾದಿಸಿದ ಆಸ್ತಿ-ಪಾಸ್ತಿಗಳನ್ನು ಸಾರ್ವಜನಿಕ ಸಂಸ್ಥೆಗೆ ದಾನ ಮಾಡಿದ ಆದರ್ಶನೀಯರು.

ಮಹಾತ್ಮ ಗಾಂಧೀಜಿಗೆ ವೈದ್ಯರಾಗಿದ್ದ ಡಾ|| ರಾಯ್ : 

ಮಹಾತ್ಮ ಗಾಂಧೀಜಿಯವರೊಂದಿಗೆ ಆತ್ಮೀಯರಾಗಿದ್ದ ಇವರು 1930ರಲ್ಲಿ ಅಸಹಕಾರ ಚಳವಳಿಯ ನೇತೃತ್ವ ವಹಿಸಿ ದ್ದರು. 1942ರಲ್ಲಿ ಕ್ವಿಟ್ ಇಂಡಿಯಾ (ಭಾರತ ಬಿಟ್ಟು ತೊಲಗಿ) ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಮಹಾತ್ಮ ಗಾಂಧೀಜಿಯವರಿಗೆ ವೈಯಕ್ತಿಕ ವೈದ್ಯರಾಗಿದ್ದ ಅಪ್ರತಿಮ ದೇಶಭಕ್ತರಿವರು. ಬ್ರಹ್ಮ ಸಮಾಜದ ಅನುಯಾಯಿಗಳಾಗಿದ್ದರು.

`ಭಾರತ ರತ್ನ’ ಪ್ರಶಸ್ತಿ ಪಡೆದ ಡಾ|| ರಾಯ್ :  

ಮಾನವೀಯ ಮೌಲ್ಯವುಳ್ಳ ಶ್ರೇಷ್ಠ ವೈದ್ಯರಾಗಿ, ಜ್ಞಾನದಾಹಿ, ಶಿಕ್ಷಣ ತಜ್ಞರಾಗಿ, ಸಂಘಟನಾ ಚತುರರಾಗಿ, ರಾಷ್ಟ್ರಪ್ರೇಮವುಳ್ಳ ರಾಜಕಾರಣಿಯಾಗಿ, ಸರಳ ಜೀವಿಯಾಗಿ, ಮುಖ್ಯಮಂತ್ರಿಯಾಗಿ, ವೈದ್ಯಕೀಯ ಕ್ಷೇತ್ರದಲ್ಲಿ ನೀಡಿದ ಕೊಡುಗೆಗಳನ್ನು ಪರಿಗಣಿಸಿ, ಭಾರತ ಸರ್ಕಾರ ಫೆಬ್ರವರಿ 4, 1961ರಲ್ಲಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ’ವನ್ನು ನೀಡಿ ಗೌರವಿಸಲಾಯಿತು. ಈ ಗೌರವಕ್ಕೆ ಪಾತ್ರರಾದ ಭಾರತದ ಮೊದಲನೇ ವೈದ್ಯರು ಇವರಾಗಿದ್ದಾರೆ. ಭಾರತೀಯ ವೈದ್ಯಕೀಯ ಸಂಘವು 1973 ರಿಂದ ಡಾ|| ಬಿ.ಸಿ.ರಾಯ್ ಹೆಸರಿನಲ್ಲಿ ಪ್ರತಿಭಾವಂತ ವೈದ್ಯರಿಗೆ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಮೊದಲನೆ ಪ್ರಶಸ್ತಿಯನ್ನು ಡಾ|| ಸಂದೀಪ್ ಮುಖರ್ಜಿ ಯವರಿಗೆ ನೀಡಲಾಯಿತು. 

ವೈದ್ಯಕೀಯ ಶಿಕ್ಷಣದಲ್ಲಿ ವಿಜ್ಞಾನದ ಸೌಲಭ್ಯಗಳು :

ಡಾ|| ಬಿ.ಸಿ. ರಾಯ್ ಕಾಲದಲ್ಲಿ ವೈದ್ಯಕೀಯ ವಿಜ್ಞಾನ ಸೌಲಭ್ಯಗಳು ಇಂದಿನಷ್ಟು ಬೆಳೆಯದೇ ಇದ್ದರೂ ಮತ್ತು ಆಧುನಿಕ ರೋಗ ಪತ್ತೆಯ ತಂತ್ರಜ್ಞಾನದ (ಸಿ.ಟಿ., ಎಂ.ಆರ್.ಐ., ಪೆಟ್, ಕ್ಯಾಥ್ ಲ್ಯಾಬ್ ಇತ್ಯಾದಿ) ಸೌಲಭ್ಯಗಳು ಲಭ್ಯವಿಲ್ಲದಿದ್ದರೂ ರೋಗಿ ನೀಡುವ ಮಾಹಿತಿ ಮತ್ತು ದೈಹಿಕ ಪರೀಕ್ಷೆಗಳಾಧಾರಿತ ಕ್ಲಿನಿಕಲ್ ಜ್ಞಾನದಿಂದಲೇ ರೋಗ ಪತ್ತೆಯನ್ನು ಮಾಡಿ ಸಮರ್ಥವಾಗಿ ಚಿಕಿತ್ಸೆ ನೀಡುತ್ತಿದ್ದ ಕಾಲವದು. ಇಂದು ಕ್ಲಿನಿಕಲ್ ಜ್ಞಾನ ಕಡಿಮೆಯಾಗಿ, ಆಧುನಿಕ ತಂತ್ರಜ್ಞಾನದ ಸಲಕರಣೆಗಳಿಂದ ನಿರ್ದಿಷ್ಟವಾಗಿ ರೋಗ ಪತ್ತೆ ಮಾಡುವ ವಿಧಾನಗಳು ಮೇಲುಗೈ ಪಡೆದಿವೆ. ಉತ್ಕೃಷ್ಟ ಸೂಕ್ಷ್ಮಜೀವಿ ನಿರೋಧಕಗಳ, ರೋಬಾಟಿಕ್ ಶಸ್ತ್ರಕ್ರಿಯೆ, ಸೈಬರ್‍ನೈಪ್, ಲೆಪ್ರೋಸ್ಕೋಪಿ, ಒಳಾಂಗ ದರ್ಶನ ಶಸ್ತ್ರಕ್ರಿಯೆ, ಲೇಸರ್ ಚಿಕಿತ್ಸೆ, ಬ್ರೇಕಿಥೆರಪಿ, ರೇಡಿಯೇಷನ್‍ ಥೆರಪಿ ಇತ್ಯಾದಿ ಹೊಸ ಹೊಸ ಆತ್ಯಾಧುನಿಕ ಚಿಕಿತ್ಸಾ ವಿಧಾನಗಳ ಅನ್ವೇಷಣೆಯಿಂದ ರೋಗಗಳನ್ನು ನಿಯಂತ್ರಿಸಿ ಜೀವಾವಧಿಯನ್ನು ಮುಂದೂಡಲಾಗಿದೆ.

ಬದಲಾದ ವೈದ್ಯರ ಮನೋವೃತ್ತಿ : 

ವೈದ್ಯಕೀಯ ಕ್ಷೇತ್ರವೂ ಸಮಾಜದ ಒಂದು ಅಂಗವಾಗಿದ್ದು, ಆಯಾಮ ಕಾಲಘಟ್ಟದಲ್ಲಿ ಆದ ಬದಲಾವಣೆಗಳು ವೈದ್ಯಕೀಯ ಕ್ಷೇತ್ರದ ಮೇಲೂ ಬೀರಿರುವ ಪರಿಣಾಮಗಳನ್ನು ಅಲ್ಲಗಳೆಯುವಂತಿಲ್ಲ. ಮಾನವೀಯತೆ ಮತ್ತು ಸೇವಾದೃಷ್ಟಿಗಳು ಮೇಲುಗೈ ಪಡೆದಿದ್ದ ಅಂದಿನ ವೈದ್ಯಕೀಯ ಕ್ಷೇತ್ರ ಇಂದು ವಾಣಿಜ್ಯಮಯವಾಗಿ, ವ್ಯವಹಾರಿಕವಾದ ಸೇವೆಯಾಗಿ ಪರಿವರ್ತನೆಗೊಂಡಿದೆ.  ‘ಯಮಹರತಿ ಪ್ರಾಣವೈದ್ಯ ಧನಾನಿಚ’ ಯಮ ಪ್ರಾಣವನ್ನು ಮಾತ್ರ ಕಸಿದರೆ ವೈದ್ಯ ಪ್ರಾಣದ ಜೊತೆಗೆ ಹಣ ಕಸಿಯುತ್ತಾನೆ ಎಂಬ ಅಭಿಪ್ರಾಯ ಇಂದು ಮೇಲುಗೈ ಪಡೆಯುತ್ತಿದೆ. ಇದಕ್ಕೆ ಸಮಾಜದ ವ್ಯವಸ್ಥೆಯೇ ಹೊಣೆಯೇ ವಿನಃ ಯಾರೊಬ್ಬರನ್ನು ಬೊಟ್ಟುಮಾಡಿ ತೋರಿಸುವಂತಿಲ್ಲ. ಭೌತಿಕ ಸುಖಾಕರ್ಷಣೆಯ ಮನೋಸ್ಥಿತಿ, ದುಬಾರಿಯಾದ ಆಧುನಿಕ ವೈದ್ಯ ತಂತ್ರಜ್ಞಾನದ ಸಲಕರಣೆಗಳು ವ್ಯಾಪಾರೀಕರಣಗೊಂಡ ವೈದ್ಯಕೀಯ ಶಿಕ್ಷಣ, ವೈದ್ಯ-ರೋಗಿಯ ನಡುವಿನ ಆತ್ಮವಿಶ್ವಾಸದ ಕೊರತೆ, ವೈದ್ಯಕೀಯ ಜ್ಞಾನ, ಅಂಗಾಂಗಳ ವಿಶೇಷ ತಜ್ಞತೆಯ ಜ್ಞಾನವಾಗಿ ವಿಂಗಡಣೆಗೊಂಡು ಅಂಗಾಂಗಕ್ಕೊಬ್ಬ ವಿಶೇಷ ತಜ್ಞರು ಹುಟ್ಟಿಕೊಂಡಿದ್ದು, ಸಮಗ್ರ ದೃಷ್ಟಿಯಿಂದ ರೋಗಿಯನ್ನು ನೋಡದಿರುವುದು ಪ್ರಮುಖ ಕಾರಣಗಳು. ಈ ವಿಷಮ ಸ್ಥಿತಿಯ ಕುರಿತು ಆತ್ಮಾವಲೋಕನ ಅತ್ಯಗತ್ಯ.

ವೈದ್ಯ – ರೋಗಿಯ ಸಂಬಂಧ :

ರೋಗ ಬಾರದಂತೆ ಆರೋಗ್ಯ ವೃದ್ಧಿಸಿ, ರೋಗವನ್ನು ವಾಸಿ ಮಾಡುವಲ್ಲಿ ವೈದ್ಯ-ರೋಗಿಯ ನಡುವಿನ ವಿಶ್ವಾಸಾರ್ಹತೆ ಮಹತ್ವದ್ದು. ವೈದ್ಯ-ರೋಗಿಗೆ ತೋರುವ ಬದ್ಧತೆ, ಪ್ರೀತಿ, ಮಾನವೀಯ ಕಾಳಜಿಗಳು ಅವರಿಬ್ಬರ ನಡುವಿನ ವಿಶ್ವಾಸಾರ್ಹತೆಯನ್ನು ವೃದ್ಧಿಸುತ್ತದೆ. ಇವಿಲ್ಲದೆ ವೈದ್ಯ ಪರಿಣಾಮಕಾರಿಯಾದ ಚಿಕಿತ್ಸೆ ನೀಡಿದರೂ ಅಪೇಕ್ಷಿತ ಫಲ ಸಿಗದು. ಇಂದು ಈ ವಿಶ್ವಾಸಾರ್ಹತೆ ಸಡಿಲಗೊಳ್ಳಲು ನುರಿತ ವೈದ್ಯರುಗಳ ಕೊರತೆ, ವಾಣಿಜ್ಯಮಯವಾದ ವೈದ್ಯಕೀಯ ಶಿಕ್ಷಣ ಮತ್ತು ವೃತ್ತಿ, ಮೂಲಭೂತ ಶಿಕ್ಷಣ ಸೌಲಭ್ಯವಿಲ್ಲದ ವೈದ್ಯಕೀಯ ಕಾಲೇಜುಗಳು, ಖಾಸಗಿಯವರಿಂದ ಆರಂಭವಾಗಿ ಅದಕ್ಷ ವೈದ್ಯರು ಹೊರ ಬರುತ್ತಿರುವುದನ್ನು ತಳ್ಳಿ ಹಾಕುವಂತಿಲ್ಲ.  ಹೀಗಾಗಿ ವೈದ್ಯಕೀಯ ವೃತ್ತಿಯ ಸೇವಾಗುಣ ಮತ್ತು ಲೋಪದೋಷಗಳನ್ನು ಕಾನೂನಿನಲ್ಲಿ ತಂದು ಪರಿಹಾರ ನೀಡುವ ಮತ್ತು ಶಿಕ್ಷಿಸುವ ಕಾನೂನುಗಳು ಸಬಲಗೊಂಡಿರುವುದನ್ನು ಗಮನಿಸಬಹುದು.

ಈ ಎಲ್ಲಾ ಸವಾಲುಗಳ ಹಿನ್ನೆಲೆಯಲ್ಲೂ ವೈದ್ಯರುಗಳು ಡಾ|| ಬಿ.ಸಿ. ರಾಯ್ ಅವರ ವ್ಯಕ್ತಿತ್ವ, ಸೇವಾಗುಣ, ಜನಪ್ರಿಯತೆ, ಅವರಿಗಿದ್ಧ ಕಾಳಜಿ-ಕಳಕಳಿಗಳನ್ನು ಪಾಲಿಸುವ ಪ್ರತಿಜ್ಞೆ ಮಾಡಬೇಕಲ್ಲವೆ? ಅಂದಾಗ ಸುಸ್ಥಿರ ಆರೋಗ್ಯವಂತ ಸಮಾಜ ನಿರ್ಮಾಣ ವಾಗಬಲ್ಲದು.

ಡಾ|| ಬಿ.ಸಿ. ರಾಯ್‍ ಸ್ಮರಣೆ ; ಇಂದು `ರಾಷ್ಟ್ರೀಯ ವೈದ್ಯರ ದಿನಾಚರಣೆ' - Janathavani– ಡಾ. ಗಂಗಾಧರಯ್ಯ ಹಿರೇಮಠ, ನಿವೃತ್ತ ಪ್ರಾಧ್ಯಾಪಕರು, ದಾವಣಗೆರೆ. ಮೊ: 9880093613

error: Content is protected !!