ಮಾದಕ ವಸ್ತುಗಳಿಗೆ ಕಡಿವಾಣ, ಸ್ವಾಸ್ಥ್ಯ ಬದುಕಿಗೆ ಸೋಪಾನ

ಮಾದಕ ವಸ್ತುಗಳಿಗೆ ಕಡಿವಾಣ, ಸ್ವಾಸ್ಥ್ಯ ಬದುಕಿಗೆ ಸೋಪಾನ

(ಜೂನ್-26 ರಂದು ಅಂತರ ರಾಷ್ಟ್ರೀಯ ಮಾದಕ ವಸ್ತುಗಳ ದುರ್ಬಳಕೆ ವಿರೋಧಿ ದಿನ ತನ್ನಿಮಿತ್ತ್ಯ ಈ ಲೇಖನ)

ಜಗತ್ತಿನಲ್ಲಿರುವ 84 ಕೋಟಿ ಜೀವರಾಶಿಗಳಲ್ಲಿ ಮಾನವ ಶ್ರೇಷ್ಟ ಪ್ರಾಣಿ. ಏಕೆಂದರೆ ಮಾತನಾಡುವ, ಆಲೋಚಿಸುವ, ಭಾವನೆಗಳನ್ನು ಅಭಿವ್ಯಕ್ತಿಸುವ ವಿಶೇಷವಾದ ಸಾಮರ್ಥ್ಯ ಅವನಿಗಿದೆ. ಈ ಶಕ್ತಿಯ ಮೂಲಕ ತುಂಬಾ ಶ್ರೇಷ್ಟನಾಗಬೇಕಾದ ಮಾನವ ನಗರೀಕರಣ, ಕೈಗಾರಿಕೀಕರಣ, ಪಾಶ್ಚಾತ್ಯೀಕರಣದ ಪ್ರಭಾವದಿಂದ ಪ್ರೇರಿತನಾಗಿ ಮೂಲ ಸಂಸ್ಕೃತಿಯನ್ನು ಮರೆತು ಮೃಗೀಯ ವರ್ತನೆಗೆ ದಾಸನಾಗಿದ್ದಾನೆ. ಪ್ರಸ್ತುತ ವೈಜ್ಞಾನಿಕವಾಗಿ, ತಾಂತ್ರಿಕವಾಗಿ ಎಷ್ಟೇ ಮುಂದುವರೆದಿದ್ದರೂ, 20ನೇ ಶತಮಾನದಿಂದೀಚೆಗೆ ಜಗತ್ತನ್ನೇ ತಲ್ಲಣಗೊಳಿಸುವ ಸಾಮಾಜಿಕ ಪಿಡುಗುಗಳಾದ ಬಡತನ, ಭಿಕ್ಷಾಟನೆ, ನಿರುದ್ಯೋಗ, ವರದಕ್ಷಿಣೆ, ಅಪರಾಧ, ಮಾದಕ ವಸ್ತು ವ್ಯಸನವು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿವೆ. ಈ ಸಮಸ್ಯೆಗಳನ್ನು ಪರಿಹರಿಸಬೇಕಾದ ಯುವಜನತೆ ಇಂತಹ ದುಶ್ಚಟಗಳ ಸೆಲೆಯಲ್ಲಿ ಸಿಕ್ಕು ತಮ್ಮ ಅಮೂಲ್ಯ ಬದುಕನ್ನು ಹಾಳು ಮಾಡಿಕೊಳ್ಳುತ್ತಿರುವುದು ಆತಂಕಕಾರಿ.

ಯುವಶಕ್ತಿಯೇ ದೇಶದ ಶಕ್ತಿಯಾಗಿದ್ದು, ಭವ್ಯ ಭಾರತ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಬೇಕಾದ ಯುವಜನತೆ ಮಾದಕ ವಸ್ತುಗಳ ದುಶ್ಚಟಕ್ಕೆ ಒಳಗಾಗಿ ಮಾನವೀಯ ಮೌಲ್ಯಗಳನ್ನು ಕಳೆದುಕೊಂಡು, ಅಂಧಕಾರದಲ್ಲಿ ಜೀವನ ನಡೆಸುತ್ತಾ ಚಿಕ್ಕ ವಯಸ್ಸಿನಲ್ಲಿಯೇ ಮರಣ ಹೊಂದುತ್ತಿರುವುದು ಆಘಾತದ ವಿಷಯ.

ಜೋಸೆಫ್ ಜ್ಯೂಲಿಯನ್ ರವರ ಪ್ರಕಾರ ಮಾದಕ ವಸ್ತುಗಳೆಂದರೆ ಯಾವುದೇ ರಾಸಾಯನಿಕ ವಸ್ತುವಾಗಿದ್ದು ಅದರ ಸೇವನೆಯಿಂದ ದೈಹಿಕ ಕಾರ್ಯ, ಮನಸ್ಥಿತಿ, ಗ್ರಹಣ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ಪದೇ ಪದೇ ಬಳಸುವುದರಿಂದ ವ್ಯಕ್ತಿ ಮಾದಕ ವಸ್ತು ವ್ಯಸನಿಯಾಗುತ್ತಾನೆ. ಮಾದಕ ವಸ್ತುವು ಮನಸ್ಸಿಗೆ ಗೊಂದಲವನ್ನು ತರುವ ಪದಾರ್ಥವಾಗಿದ್ದು ಅಮಲು ರೋಗವಾಗಿದೆ. ಭಾರತದ ನಗರ ಪ್ರದೇಶಗಳಲ್ಲಷ್ಟೇ ಅಲ್ಲದೆ ಹಳ್ಳಿ ಹಳ್ಳಿಗಳಲ್ಲಿಯೂ ಇದರ ಬಳಕೆ ಕಂಡುಬರುತ್ತದೆ. ಶ್ರೀಮಂತರು, ಮಧ್ಯಮ ವರ್ಗದವರು, ವಿದ್ಯಾವಂತರು, ಯುವಕರು, ಮಹಿಳೆಯರು ಎಂಬ ಭೇದವಿಲ್ಲದೆ ದುಶ್ಚಟಗಳಿಗೆ ಬಲಿಯಾಗಿ ತಮ್ಮ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯವರು ನಡೆಸಿದ ಸಮೀಕ್ಷೆಯ ಪ್ರಕಾರ ಭಾರತದ ವಿದ್ಯಾರ್ಥಿಗಳಲ್ಲಿ ಶೇ 10 ರಷ್ಟು ಒಂದಿಲ್ಲೊಂದು ದುಶ್ಚಟಕ್ಕೆ ಒಳಗಾಗಿದ್ದು ಅದರಲ್ಲಿ 14 ರಿಂದ 22 ರ ವಯೋಮಾನದವರು ಹೆಚ್ಚಿದ್ದಾರೆ. ಸ್ವಾತಂತ್ಯ್ರ ಪೂರ್ವದಲ್ಲಿ ಶೇ 2 ರಷ್ಟಿದ್ದ ವ್ಯಸನಿಗಳು ಪ್ರಸ್ತುತ ಶೇ 30 ಕ್ಕಿಂತ ಹೆಚ್ಚಿದ್ದಾರೆ. ಜಗತ್ತಿನ ಸುಮಾರು 20 ಕೋಟಿಯಷ್ಟು ಇರುವ ಮಾದಕ ವ್ಯಸನಿಗಳಲ್ಲಿ ಭಾರತದಲ್ಲಿ ಶೇ 7.5 ಕೋಟಿ ವ್ಯಸನಿಗಳಿದ್ದಾರೆಂದು ಅಂದಾಜಿಸಲಾಗಿದೆ. ನಶೆಯ ಅಲೆ ಸಾವಿನ ಬಲೆಯಾಗುತ್ತಿದ್ದರೂ ಕೂಡ ಈ ದೇಶದಲ್ಲಿ ಊಟವಿಲ್ಲದೆ ಸಾಯುವವರ ಸಂಖ್ಯೆಗಿಂತಲೂ ಚಟವನ್ನು ಬೆಳೆಸಿಕೊಂಡು ಸಾಯುವವರು ಹೆಚ್ಚಾಗಿದ್ದಾರೆ.

ಮಾದಕ ವಸ್ತು ಬಳಸುವ ಆತಂಕದ ರಾಷ್ಟ್ರಗಳಲ್ಲಿ ಭಾರತ ಪ್ರಥಮ ಸ್ಥಾನದಲ್ಲಿದೆ. ಅಮಲು ಪದಾರ್ಥಗಳಿಗೆ ಬಲಿಯಾಗುತ್ತಿರುವವರಲ್ಲಿ ವಿದ್ಯಾರ್ಥಿಗಳನ್ನೂ ಒಳಗೊಂಡಂತೆ ಯುವಜನತೆ ಹೆಚ್ಚಾಗಿದ್ದು, ಇದು ದೇಶದ ಭವಿಷ್ಯಕ್ಕೆ ಮಾರಕವಾಗಿದೆ. 

ದುಶ್ಚಟಗಳ ಆರಂಭಕ್ಕೆ ಕಾರಣಗಳು:

* ಕ್ಷಣಕಾಲ ಸುಖ ಅನಂತಕಾಲ ದು:ಖಕ್ಕೆ ಕಾರಣ ಎನ್ನುವುದು ಗೊತ್ತಿದ್ದೂ ಅಫೀಮು, ಹೆರಾಯಿನ್, ಬೀಡಿ, ಸಿಗರೇಟು, ಮದ್ಯಪಾನ ಮುಂತಾದ ದುಶ್ಚಟಗಳಿಗೆ ವಿದ್ಯಾವಂತ ಯುವಕರೇ ಬಲಿಯಾಗುತ್ತಿದ್ದಾರೆ.

* ಉಲ್ಲಾಸಕ್ಕಾಗಿ, ಫ್ಯಾಷನ್‍ಗಾಗಿ, ದುರ್ಬಲ ಮನಸ್ಸು, ಏಕಾಂಗಿತನ, ಒತ್ತಡ ನಿವಾರಣೆ ಮಾಡಿಕೊಳ್ಳಲು

* ನೋವು, ದು:ಖಕ್ಕೆ ಪರಿಹಾರವೆಂಬ ಭ್ರಮೆಗೆ ಒಳಗಾಗಿ ತನಗೆ ಅರಿವಿಲ್ಲದಂತೆ ದೊಡ್ಡ ಕಂದಕಕ್ಕೆ ಬಿದ್ದು ನರಳಾಡುವಂತಹ ಸಂದರ್ಭ ತಂದುಕೊಂಡು ಮಾದಕ ವಸ್ತುಗಳ ಮಾಯಾ ಜಾಲಕ್ಕೆ ಒಳಗಾಗುತ್ತಿದ್ದಾರೆ. ತೆರಣಿಯ ಹುಳು ತಾನು ಸುತ್ತಿದ ಬಲೆಯಲ್ಲಿ ತಾನೇ ಬಿದ್ದು ಹೊರಳಾಡುವಂತೆ ಅವರ ಪರಿಸ್ಥಿತಿಯಾಗಿದೆ.

ದುಶ್ಚಟಗಳಿಂದಾಗುವ ಪರಿಣಾಮಗಳು:

* ದೇಹ ಮತ್ತು ಮನಸ್ಸಿನ ಸಮತೋಲನ ಕಳೆದುಕೊಳ್ಳುವುದು.

* ವ್ಯಕ್ತಿ ತನ್ನನ್ನು ದಹಿಸಿಕೊಳ್ಳುವುದರ ಜೊತೆಗೆ ಕುಟುಂಬದ ನೆಮ್ಮದಿಗಿ ಭಂಗ ತರುತ್ತಾನೆ.

* ಕುಟುಂಬ, ಸಮಾಜದಿಂದ ನಿಂದನೆಗೆ ಒಳಗಾಗುವನು. 

* ಜ್ಞಾನೇಂದ್ರಿಯಗಳ ಮೇಲೆ ಹತೋಟಿ ಕಳೆದುಕೊಳ್ಳುವನು

* ಸಮಾಜ ಬಾಹಿರ ಚಟುವಟಿಕೆಗಳಾದ ಕಳ್ಳತನ, ಅತ್ಯಾಚಾರ, ಕೊಲೆ ಇಂತಹ ದುಷ್ಕೃತ್ಯಗಳನ್ನು ಮಾಡುವನು.

* ದಾಂಪತ್ಯದಲ್ಲಿ ವಿರಸವುಂಟಾಗಿ ವಿಚ್ಚೇದನಗಳಾಗುವ ಸಾಧ್ಯತೆ.

* ರಸ್ತೆ ಅಪಘಾತಗಳಲ್ಲಿ ಶೇ 1/3 ರಷ್ಟು ಮದ್ಯಪಾನ ಮತ್ತು ಮಾದಕ ವಸ್ತು ಸೇವನೆಯಿಂದಾಗುತ್ತದೆ. ಈ ಹಿನ್ನೆಲೆಯಲ್ಲಿ ಮಹಾತ್ಮ ಗಾಂಧೀಜಿಯವರು ಬೆಂಕಿ ದೇಹವನ್ನು ನಾಶ ಮಾಡಿದರೆ ಕುಡಿತ ದೇಹ ಮತ್ತು ಆತ್ಮಗಳೆರಡನ್ನೂ ನಾಶ ಮಾಡುತ್ತದೆ ಎಂದಿದ್ದಾರೆ. 

ಪರಿಹಾರ ಕ್ರಮಗಳು:

* ಮಾದಕ ವಸ್ತುಗಳ ಹಿಡಿತಕ್ಕೆ ಸಿಲುಕದೇ ಅದರಿಂದ ದೂರವಿರುವುದು.

* ಮಾದಕ ವಸ್ತು ಸೇವಿಸುವುದಿಲ್ಲವೆಂದು ಪ್ರತಿಜ್ಞೆ ಮಾಡುವುದು. 

* ಸಹೋದ್ಯೋಗಿ, ಸ್ನೇಹಿತರಿಗೆ ತಿಳುವಳಿಕೆ ನೀಡುವುದು. 

* 18 ವರ್ಷ ವಯಸ್ಸಿನವರೆಗೂ ಪೋಷಕರು ಮಕ್ಕಳ ಬಗ್ಗೆ ಗಮನ ನೀಡಿ ಮಾರ್ಗದರ್ಶನ ಮಾಡುವುದು.

* ಶಾಲೆ-ಕಾಲೇಜುಗಳಲ್ಲಿ ಶಿಕ್ಷಕರು ಮಕ್ಕಳಲ್ಲಿ ಜೀವನ ಕೌಶಲ್ಯಗಳನ್ನು ಬೆಳೆಸುವ ರಾಯಭಾರಿಗಳಾಗಿ ಕಾರ್ಯನಿರ್ವಹಿಸುವುದು.

* ವಿದ್ಯಾರ್ಥಿಗಳನ್ನು ಸಹಪಠ್ಯ ಚಟುವಟಿಕೆಗಳಲ್ಲಿ ತೊಡಗಿಸಿ ಆರೋಗ್ಯಕರವಾದ ಹವ್ಯಾಸಗಳನ್ನು ಬೆಳೆಸುವುದು.

ಭಾರತ ಸರ್ಕಾರವು 1951ರಲ್ಲಿ ಅಪಾಯಕಾರಿ ವಸ್ತುಗಳ ಕಾಯ್ದೆಯನ್ನು ಜಾರಿಗೆ ತಂದಿತು. ಈ ಕಾಯ್ದೆ ಮಾದಕ ವಸ್ತು ತಯಾರಿಕೆ, ಸಾಗಾಣಿಕೆ, ಮಾರಾಟ ಮತ್ತು ಬಳಕೆಯ ಮೇಲೆ ನಿರ್ಬಂಧ ಹೇರಿದೆ. 1985 ರಲ್ಲಿ ಡ್ರಗ್ಸ್ ಆಕ್ಟ್ ಜಾರಿಗೊಳಿಸಿದೆ. ಈ ಕಾಯ್ದೆ ಮಾದಕ ವಸ್ತುಗಳ ಕಳ್ಳ ವ್ಯಾಪಾರದಲ್ಲಿ ತೊಡಗಿದ ಅಪರಾಧಿಗಳಿಗೆ ಕನಿಷ್ಠ 10 ರಿಂದ 20 ವರ್ಷ ಕಠಿಣ ಶಿಕ್ಷೆ, 1 ರಿಂದ 2 ಲಕ್ಷದವರೆಗೆ ದಂಡ ಘೋಷಿಸಿದೆ.

ಡಿಸೆಂಬರ್-7, 1987 ರ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾದಕ ವಸ್ತುಗಳ ದುರ್ಬಳಕೆಯನ್ನು ತಡೆಗಟ್ಟುವ ನಿಯಮಾವಳಿಗಳ ಅಂಗೀಕಾರವನ್ನು ಹಲವಾರು ರಾಷ್ಟ್ರಗಳು ಒಪ್ಪಿಕೊಂಡು ವಿಶ್ವದಾದ್ಯಂತ ಮಾದಕ ವಸ್ತುಗಳ ದುರ್ಬಳಕೆ ನಿಯಂತ್ರಿಸುವ ತೀರ್ಮಾನವನ್ನು ಮಾಡಿದವು. 

ಜೂನ್-26 ವಿಶ್ವಸಂಸ್ಥೆಯು ಮಾದಕ ವಸ್ತು ದುರ್ಬಳಕೆ ಮತ್ತು ಕಳ್ಳಸಾಗಣೆ ವಿರುದ್ಧದ ಅಂತರರಾಷ್ಟ್ರೀಯ ದಿನವನ್ನು ಆಚರಿಸಿ ಈ ಸಮಸ್ಯೆಯ ನಿಯಂತ್ರಣ ಮತ್ತು ಪರಿಹಾರದ ಕುರಿತು ನಿವಾರಣೆಯಲ್ಲಿ ಸಮುದಾಯ, ಸಮವಯಸ್ಕರು, ಕುಟುಂಬ, ಸಂಘ-ಸಂಸ್ಥೆಗಳವರು ಪ್ರಮುಖ ಪಾತ್ರ ವಹಿಸಬೇಕಾಗಿದೆ ಎಂದು ಮನವರಿಕೆ ಮಾಡಿತು. ಮಾದಕ ವಸ್ತು ದುರ್ಬಳಕೆ ಒಂದು ಮಾನಸಿಕ, ಸಾಮಾಜಿಕ ಸಮಸ್ಯೆಯಾಗಿದ್ದು, ಇಡೀ ಸಮುದಾಯವೇ ಇದರ ನಿವಾರಣೋಪಾಯದಲ್ಲಿ ಪಾಲ್ಗೊಳ್ಳಬೇಕೆಂದು ಸೂಚಿಸಿತು. 

ವ್ಯಕ್ತಿ ಒಮ್ಮೆ ಈ ಚಕ್ರವ್ಯೂಹದಲ್ಲಿ ಸಿಲುಕಿಕೊಂಡರೆ ಹೊರಬರುವುದು ಕಷ್ಟಸಾಧ್ಯ. ಆರೋಗ್ಯಕರ ಜೀವನ ನಡೆಸಲು ಮಾದಕ ವಸ್ತುಗಳನ್ನು ತ್ಯಜಿಸಿ ಸುಂದರ ಜೀವನ ನಡೆಸಿ ಎಂಬ ಸಂದೇಶ ಸಾರುತ್ತಾ, ನಾವೆಲ್ಲರೂ ಸಂಘಟಿತರಾಗಿ ಸಮಾಜದಲ್ಲಿ ಜಾಗೃತಿ ಮೂಡಿಸಿದಾಗ ದುಶ್ಚಟ ಮುಕ್ತ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ.

– ಡಾ. ಗೀತಾ ಬಸವರಾಜು, 

ಉಪನ್ಯಾಸಕರು, ಎ.ವಿ.ಕೆ ಮಹಿಳಾ ಕಾಲೇಜು, ದಾವಣಗೆರೆ

error: Content is protected !!