ತಂಬಾಕು ಒಂದು ಮಾದಕ… ಆಗದಿರಲಿ ನಿಮಗಿದು ಮಾರಕ…

ತಂಬಾಕು ಒಂದು ಮಾದಕ… ಆಗದಿರಲಿ ನಿಮಗಿದು ಮಾರಕ…

ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ, ಆದರೂ ಅದರ ಸೇವನೆ ಮಾಡುವವರ ಸಂಖ್ಯೆಗೇನೂ ಕಡಿಮೆ ಇಲ್ಲ. ತಂಬಾಕು ಉತ್ಪನ್ನಗಳ ಮೇಲೆ ಈ ವಾಕ್ಯವನ್ನು  ಚಿತ್ರ ಸಹಿತ ನಮೂದಿಸಿದ್ದರೂ ಹಾಗೂ ಅದರಿಂದಾಗುವ ಪರಿಣಾಮಗಳ ಬಗ್ಗೆ ಅರಿವಿದ್ದರೂ ಮಕ್ಕಳು, ಯುವಕರು, ವಿದ್ಯಾವಂತರು ಮತ್ತು ಅವಿದ್ಯಾವಂತರೆನ್ನದೇ  ಬಹುತೇಕ ಜನ ತಂಬಾಕು ಸೇವನೆ ಮಾಡುತ್ತಲೇ ಇರುವರು ಹಾಗೂ  ಇದನ್ನು ದಿನನಿತ್ಯದ ಕಾಯಕವನ್ನಾಗಿಯೂ ಮಾಡಿಕೊಂಡಿರುವರು. ತಂಬಾಕು ಸೇವನೆಯಿಂದ   ದಿನಂಪ್ರತಿ ಅನೇಕ ಸಾವು-ನೋವುಗಳು  ಸಂಭವಿಸುತ್ತಲೇ ಇವೆ. ಈ ದಿಸೆಯಲ್ಲಿ ಧೂಮಪಾನ ಮಾಡುವುದರಿಂದ ಉಂಟಾಗುವ ತೊಂದರೆಗಳನ್ನು ಸಾರ್ವಜನಿಕರಿಗೆ ತಿಳಿಸುವ ಸಲುವಾಗಿ ಪ್ರತಿ ವರ್ಷ ಮೇ 31 ರಂದು `ವಿಶ್ವ ತಂಬಾಕು ರಹಿತ ದಿನ’ ವನ್ನಾಗಿ  ಆಚರಿಸಲಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ಸದಸ್ಯ ರಾಷ್ಟ್ರಗಳು 1987 ರಲ್ಲಿ ಮೊಟ್ಟ ಮೊದಲ ಬಾರಿಗೆ ತಂಬಾಕು ರಹಿತ  ದಿನದ ಆಚರಣೆಗೆ ಮುನ್ನುಡಿ ಬರೆದವು . 

ಪ್ರತಿ ವರ್ಷ ವಿಶ್ವ ಆರೋಗ್ಯ ಸಂಸ್ಥೆ ಒಂದು ಥೀಮ್ ಅನ್ನು  ಆಯ್ಕೆ ಮಾಡಿಕೊಂಡು ಅದರ ಹಿನ್ನೆಲೆಯಲ್ಲಿ  ಈ ದಿನವನ್ನು ಆಚರಿಸುವುದು. 2024 ರ  ವರ್ಷದ ವಿಶ್ವ ತಂಬಾಕು ರಹಿತ ದಿನದ  ಆಚರಣೆಯ ಉದ್ದೇಶ  “ತಂಬಾಕು ಉದ್ಯಮದ ಹಸ್ತಕ್ಷೇಪದಿಂದ ಮಕ್ಕಳನ್ನು ರಕ್ಷಿಸುವುದಾಗಿದೆ ” (protecting children from tobacco industry interference)ನಮ್ಮ ದೇಶದ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವು ದನ್ನು 22 ಅಕ್ಟೋಬರ್ 2002 ರಿಂದ ನಿಷೇಧಿಸಲಾಗಿದ್ದು, ಅದರಂತೆ ಧೂಮಪಾನವನ್ನು ನಿಯಂತ್ರಿಸಲು ಭಾರತ ಸರ್ಕಾರ  ಸಹಾಯವಾಣಿಯನ್ನು ಕೂಡ ಆರಂಭಿಸಿದೆ. ಚೀನಾ ಹೊರತು ಪಡಿಸಿದರೆ ಭಾರತದಲ್ಲಿ  ಅತಿ ಹೆಚ್ಚು ಧೂಮಪಾನ  ಮಾಡುವವರ ಸಂಖ್ಯೆ ಸರಿ ಸುಮಾರು 275  ಮಿಲಿಯನ್‌ನಷ್ಟಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ವಿಶ್ವದ ಧೂಮಪಾನಿಗಳಲ್ಲಿ ಭಾರತ ಪ್ರತಿಶತ 12 ರಷ್ಟನ್ನು  ಹೊಂದಿದೆ. ತಂಬಾಕು ಸಂಬಂಧಿತ ಕಾಯಿಲೆಗಳಿಂದ ಪ್ರತಿವರ್ಷ  ದೇಶವೊಂದರಲ್ಲಿ ಸುಮಾರು ಒಂದು ದಶಲಕ್ಷ ಜನ ಮರಣವನ್ನು ಹೊಂದುತ್ತಿರುವರು.

ಭಾರತದ ಎಲ್ಲಾ ನಗರಗಳ ಪೈಕಿ ಕೋಲ್ಕೊತ್ತಾ ನಗರದಲ್ಲಿ ಶೇಕಡಾ 56.6 ರಷ್ಟು ಜನ ಧೂಮಪಾನ ಮಾಡಿದರೆ, ಅದರಲ್ಲಿ ಶೇಕಡಾ 82ರಷ್ಟು ಪುರುಷರು ಮತ್ತು ಶೇಕಡಾ 23 ರಷ್ಟು ಮಹಿಳೆಯರಾಗಿದ್ದಾರೆ. ಅದರಂತೆ ಅತ್ಯಧಿಕವಾಗಿ ಬೀಡಿಯನ್ನು ಸೇವಿಸುವ  ಜನರನ್ನು ಹೊಂದಿರುವ ರಾಜ್ಯ ಉತ್ತರಾಖಂಡವಾಗಿದೆ.

ಕ್ಯಾನ್ಸರ್ ಸೊಸೈಟಿಯ ಪ್ರಕಾರ ಆಲ್ಕೋಹಾಲ್ ಸೇವನೆ, ಅಪಘಾತ, ಕೊಲೆ, ಆತ್ಮಹತ್ಯೆ, ಏಡ್ಸ್, ಡ್ರಗ್ಸ್‌ಗೆ ಒಳಗಾಗುವವರಿ ಗಿಂತಲೂ  ಧೂಮಪಾನವನ್ನು ಯಾರು ಮಾಡುವರೋ ಅಂಥವರ ಸಾವಿನ  ಸಂಖ್ಯೆಯಲ್ಲಿ ಹೆಚ್ಚಳವನ್ನು  ಕಾಣಬಹು ದಾಗಿದೆ ಎಂದಿದೆ.

ಧೂಮಪಾನದಿಂದ ಅಡ್ಡ ಪರಿಣಾಮಗಳು :

  • ವ್ಯಕ್ತಿಗತವಾಗಿ ಆರ್ಥಿಕ ಕುಸಿತ ಉಂಟಾಗುವುದು
  • 14 ವರ್ಷದ ಒಳಗಿನ ಮಕ್ಕಳು ಧೂಮಪಾನ ಮಾಡುವುದರಿಂದ ಉಸಿರಾಟದ ತೊಂದರೆ  ಹಾಗೂ ಲಂಗ್ಸ್ ಬೆಳ ವಣಿಗೆಯ  ಮೇಲೆ ವ್ಯತಿರಿಕ್ತ ಪರಿಣಾಮ ಹಾಗೂ ದೇಹದಾರ್ಢ್ಯತೆ ಕಡಿಮೆಯಾಗುವುದು.
  • ವ್ಯಕ್ತಿ ದಿನದಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಸಿಗರೇಟು ಸೇದುವುದರಿಂದ ಆರೋಗ್ಯದಲ್ಲಿ  ಇಳಿಕೆ ಕಂಡುಬರುವುದು, ಇದರಿಂದಾಗಿ ಎಲುಬುಗಳ ಬೆಳವಣಿಗೆಯೂ ಸಹ ಕುಂಠಿತ ಗೊಳ್ಳುವುದು.
  • ಉಸಿರಾಟದ ತೊಂದರೆ ಉಂಟಾಗುವುದು.
  • ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗುವುದು.
  • ಶ್ವಾಸಕೋಶದ ಕ್ಯಾನ್ಸರ್ ಉಂಟಾಗುವುದು
  • ದೃಷ್ಟಿಹೀನತೆ ಕಂಡುಬರುವುದು.
  • ಕಿವುಡುತನ, ಅಸ್ತಮಾ, ಕಫ, ಶಕ್ತಿಹೀನತೆ ಮುಂತಾದ ಕಾಯಿಲೆಗಳು ಕಂಡುಬರುವುವು.
  • ಸೆರೆಬೋವಾಸ್ಕುಲರ್  ಕಾಯಿಲೆ ಉಂಟಾಗುವುದು.
  • ಹಲ್ಲುಗಳು ನಷ್ಟವಾಗುವುವು.
  • ಪಾರ್ಶ್ವವಾಯು ಉಂಟಾಗುವುದು.
  • ಬಾಯಿ ಮತ್ತು ಗಂಟಲು ಕ್ಯಾನ್ಸರ್ ಉಂಟಾಗುವುದು.
  • ಕಿಡ್ನಿ ಮತ್ತು ಯಕೃತ್‌ಗೆ  ತೊಂದರೆಯಾಗುವುದು.
  • colon ಕ್ಯಾನ್ಸರ್ ಉಂಟಾಗುವುದು.

ಸಾಮಾನ್ಯವಾಗಿ ಮಕ್ಕಳು ಮತ್ತು ಯುವಕರು ಧೂಮಪಾನಕ್ಕೆ ಒಳಗಾಗಲು ಮುಖ್ಯವಾದ ಕಾರಣಗಳೆಂದರೆ :

  • ಪೋಷಕರು  ಮಕ್ಕಳಿಂದಲೇ ತಂಬಾಕು ಉತ್ಪನ್ನಗಳನ್ನು ತರಿಸಿಕೊಳ್ಳುವುದು   
  • ಕೆಟ್ಟ ಸ್ನೇಹಿತರ  ಸಹವಾಸ,
  • ಸಮೂಹ ಮಾಧ್ಯಮಗಳಲ್ಲಿ ಬಿತ್ತರವಾಗುವ ಆಕರ್ಷಕ  ಜಾಹೀರಾತುಗಳು,
  • ವಂಶವಾಹಿನಿ ಅಂಶಗಳು,
  • ಅತಿಯಾದ ಒತ್ತಡ
  • ಸ್ವಯಂ ಔಷಧಿಗಳನ್ನು ತೆಗೆದುಕೊಳ್ಳುತ್ತಿರುವುದು.

      ಧೂಮಪಾನದಿಂದ ಉಂಟಾಗುವ ಅಡ್ಡ ಪರಿಣಾಮಗಳನ್ನು ತಡೆಗಟ್ಟಲು ಮೊದಲು ತಂಬಾಕು ಉತ್ಪನ್ನಗಳನ್ನು ಸರ್ಕಾರಗಳು  ನಿಷೇಧಿಸಬೇಕು. ಹಾಗೊಮ್ಮೆ ಸಾರ್ವಜನಿಕ ಸ್ಥಳದಲ್ಲಿ ಸೇವನೆ ಮಾಡುವುದು ಮತ್ತು ಉಗುಳುವುದು  ಮಾಡಿದಲ್ಲಿ ಹೆಚ್ಚಿನ ದಂಡ ವಸೂಲಿ ಮಾಡಬೇಕು. ಇದಲ್ಲದೆ ಪ್ರತಿಯೊಬ್ಬರೂ ನಮ್ಮ ಆರೋಗ್ಯದ ದೃಷ್ಟಿಯಿಂದ ಧೂಮಪಾನ ಮಾಡುವುದಿಲ್ಲವೆಂಬ ಶಪಥ ಮಾಡಬೇಕು, ಆಗ ಮಾತ್ರ ಧೂಮಪಾನ ರಹಿತ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ. ನಾವುಗಳು ಕೇವಲ ಪ್ರತಿ ವರ್ಷ ಮೇ  31 ರಂದು ಮಾತ್ರ ತಂಬಾಕು ರಹಿತ ದಿನವನ್ನು ಆಚರಣೆ ಮಾಡಿದರೆ ಸಾಲದು, ಪ್ರತಿ ದಿನವೂ ತಂಬಾಕು ರಹಿತ ದಿನವನ್ನಾಗಿಸಬೇಕು.ಆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಯೋಚಿಸಿ ತಂಬಾಕು ಮುಕ್ತ  ಸಮಾಜ ನಿರ್ಮಾಣದ ಕಡೆ ಹೆಜ್ಜೆ ಹಾಕಿ ದೇಶವನ್ನು ಮುನ್ನಡೆಸಲು ಪಣ ತೊಡಬೇಕು.


  ಡಾ. ಶಿವಯ್ಯ, ವಿಶ್ರಾಂತ ಪ್ರಾಧ್ಯಾಪಕರು, ದಾವಣಗೆರೆ.   [email protected]

error: Content is protected !!