ದುಃಖದಿಂದ ಪರಮಾನಂದದೆಡೆಗೆ ಬುದ್ಧೋಪದೇಶ

ದುಃಖದಿಂದ ಪರಮಾನಂದದೆಡೆಗೆ ಬುದ್ಧೋಪದೇಶ

ಅಜ್ಞಾನದಿಂದ ಜ್ಞಾನದೆಡೆಗೆ ಸಾಗುವುದೇ ಮುಕ್ತಿಯ ಮೊದಲ ಹೆಜ್ಜೆ.

ಬುದ್ಧರು ಲೋಕಕ್ಕೆ ನೀಡಿದ ಅನನ್ಯ ಕೊಡುಗೆ ಎಂದರೆ ; ದುಃಖ ಇದೆ, ದುಃಖಕ್ಕೆ ಕಾರಣ, ದುಃಖ ನಿವಾರಣೆ ಮತ್ತು ದುಃಖ ನಿವಾರಣೆ ಮಾರ್ಗಗಳು ಎಂಬ ನಾಲ್ಕು ನಿತ್ಯ ಸತ್ಯಗಳಾಗಿವೆ. ಇವುಗಳನ್ನು `ಆರ್ಯಸತ್ಯ’ವೆಂದು ಕರೆಯುತ್ತಾರೆ. ದುಃಖ ನಿವಾರಣೆಗೆ ಒಯ್ಯುವ ಮಾರ್ಗವನ್ನು ಅಷ್ಟಾಂಗ ಮಾರ್ಗವೆಂದು ಗುರುತಿಸಲಾಗಿದೆ. ಅವೆಂದರೆ ಸರಿಯಾದ ತಿಳುವಳಿಕೆ, ಸರಿಯಾದ ಯೋಚನೆ, ಸರಿಯಾದ ಮಾತು, ಸರಿಯಾದ ಕ್ರಮ, ಸರಿಯಾದ ಜೀವನೋಪಾಯ, ಸರಿಯಾದ ಪ್ರಯತ್ನ, ಸರಿಯಾದ ಜಾಗೃತಿ ಮತ್ತು ಸರಿಯಾದ ಧ್ಯಾನವೇ ಆಗಿದೆ. ಇವುಗಳನ್ನು ಅನುಷ್ಠಾನಕ್ಕೆ ತರುವ ಸಲುವಾಗಿ `ಪಂಚಶೀಲ’ವನ್ನು ಇದಕ್ಕೆ ಪೂರಕವಾಗಿ ಬೋಧಿಸುತ್ತಾರೆ. ಪ್ರಾಣ ಹತ್ಯೆ ಮತ್ತು ಕಳ್ಳತನವನ್ನು ಮಾಡದಿರುವುದು. ಅನೈತಿಕ ಸಂಬಂಧವನ್ನು ಹೊಂದದೇ ಇರುವುದು. ಸುಳ್ಳು, ಚಾಡಿ ಹೇಳದೇ ಇರುವುದು. ಹೆಂಡ, ಸುರೆ ಮುಂತಾದ ಮತ್ತು ಭರಿಸುವ ಪಾನೀಯಗಳನ್ನು ಸೇವಿಸದೇ ಇರುವುದಾಗಿದೆ.’ದುಃಖವನ್ನು ಕೊನೆಗಾಣಿಸುವುದಕ್ಕೆ ಒಂದು ದಾರಿಯುಂಟು’ ಎಂಬುದೇ ಗೌತಮನು ಕಂಡ ನಾಲ್ಕನೆಯ ಸತ್ಯ.

  • ಆಸೆಯನ್ನು ಹೋಗಲಾಡಿಸಬೇಕೆಂಬ ಮನಸ್ಸುಳ್ಳವನು ತನ್ನ ಮನಸ್ಸು, ಮಾತು, ನಡತೆಗಳನ್ನು ಶುದ್ಧವಾಗಿಟ್ಟುಕೊಳ್ಳಬೇಕು.
  • ಸ್ವಾರ್ಥದ ಮೇಲೆ ಆಸೆಯಿಡದೆ, ಪರೋಪಕಾರದಲ್ಲಿ ಗಮನವಿಡಬೇಕು.
  • ಇತರರಿಗೆ ಕಷ್ಟ ಬಂದಾಗ ಸಹಾಯ ಮಾಡಬೇಕು. ಸುಳ್ಳಾಡಬಾರದು, ಚಾಡಿ ಹೇಳಬಾರದು.
  • ಯಾವಾಗಲೂ ನಿಜವನ್ನೇ ಹೇಳುತ್ತಾ, ದಯಾವಂತನಾಗಿರಬೇಕು.
  • ಇರುವ ದುರ್ಗುಣಗಳನ್ನು ಹೋಗಲಾಡಿಸಬೇಕು. ಹೊಸ ದುರ್ಗುಣಗಳು ಬಾರದಂತೆ ನೋಡಿಕೊಳ್ಳಬೇಕು.
  • ಇರುವ ಸದ್ಗುಣಗಳನ್ನು ಕಾಪಾಡಿಕೊಳ್ಳಬೇಕು. ಹೊಸ ಸದ್ಗುಣಗಳನ್ನು ಸಂಪಾದಿಸಬೇಕು.

ಒಟ್ಟಿನಲ್ಲಿ ಹೇಳುವುದಾದರೆ, ಮನಸ್ಸನ್ನು ಪರಿಶುದ್ಧವಾಗಿ ಇಟ್ಟುಕೊಳ್ಳಬೇಕು. ಯಾವ ತರಹ ಕೆಡುಕನ್ನೂ ಯೋಚಿಸಬಾರದು ಆಡಬಾರದು, ಮಾಡಬಾರದು. ಮೂರು ಹೊತ್ತು ಒಳ್ಳೆಯದನ್ನೇ ಯೋಚಿಸಬೇಕು, ಮಾಡಬೇಕು. ಆ ರೀತಿ ನಡೆದರೆ ಆಸೆ ನಾಶವಾಗುತ್ತದೆ, ದುಃಖ ಮಾಯವಾಗುತ್ತದೆ.

ಬುದ್ಧ ಕ್ರಿ.ಪೂ. 566 ರಲ್ಲಿ ಹುಣ್ಣಿಮೆಯಂದು ಜನಿಸಿದರು. ಹುಣ್ಣಿಮೆಯಂದೇ ಜ್ಞಾನೋದಯವನ್ನು ಪಡೆದರು, ಇವರ ಪರಿನಿರ್ವಾಣದ ಕಾಲ ಕ್ರಿ.ಪೂ. 486 ಹುಣ್ಣಿಮೆಯಂದೇ ಆಗಿರುತ್ತದೆ. ಇದು ಕಾಕತಾಳಿಯವೋ, ಪವಾಡವೋ ತಿಳಿಯದು.

ಬೋಧಿಸತ್ವ ಎಂದರೆ ಸತ್ಯಾನ್ವೇಷಕ. ಕೇಡಿನಿಂದ ಒಳಿತಿನತ್ತ ಸಾಗುವ, ಸ್ವಯಂ ತನ್ನನ್ನೇ ಅರಿತು ನದಿಯಂತೆ ಪರಿಶುದ್ಧಗೊಳಿಸಿಕೊಳ್ಳುತ್ತಾ ಮುನ್ನಡೆಯುವ ದೀರ್ಘ ಪಯಣಿಗ.

ಸಾಧನೆಗೆ ಸಾಧಕಗಳು : ಸತ್ಯ, ಧರ್ಮ, ಅಹಿಂಸೆ, ಪ್ರೀತಿ ಮತ್ತು ಕರುಣೆ. ನಿರ್ಭಯ, ನಿಶ್ಚಿತತೆ, ನಿಶ್ಚಿಂತೆ, ವಿನಮ್ರತೆ, ದೃಢ ಮನಸ್ಸು, ಸಂಕಟ-ಸವಾಲುಗಳಲ್ಲಿ ವಿಚಲಿತವಾಗದ ಮನಸ್ಥಿತಿ.

ಸಾಧನೆಗೆ ಬಾಧಕಗಳು: ದುರಭಿಮಾನ, ಎಲ್ಲೆಲ್ಲಿಯೋ ಚದುರಿ ಹೋಗುವ ಮನಸ್ಸು, ಅಜ್ಞಾನಗಳಾದ `ನಾನು, ಸ್ವಾರ್ಥ, ದುರಾಸೆ, ಭೋಗ ಲಾಲಸೆ ಮತ್ತು ಮೌಢ್ಯ’.

ಜೀವ ಕಲ್ಯಾಣಕ್ಕೆ ಬೇಕು ಗಾಳಿ, ನೀರು, ಅನ್ನ, ಒಳ್ಳೆಯ ಮಾತುಗಳು ಅತ್ಯಗತ್ಯ. ಮುಕ್ತ ಮನ, ಜೀವ ಕಲ್ಯಾಣ ಭಾವನೆಗಳು, ಆನಂದಭಾವದಿಂದ ಕಾಯಕ ಮಾಡುವುದು, ಮನೋವಿಕಾರಗಳಾದ ಕಾಮ, ಕ್ರೋಧ, ಮೋಹ, ಮದ, ಮತ್ಸರಗಳಿಗೆ ನಾವೇ ಅಂಟಿಕೊಳ್ಳದೆ ಬಿಡಿಸಿಕೊಳ್ಳಬೇಕು.

ನಾವು ಒಳಿತನ್ನು ಆಚರಿಸುವುದರಿಂದ ಒಳಿತಾಗುತ್ತದೆಯೇ ಹೊರತು, ನಂಬಿಕೆ, ಮೌಢ್ಯ ಸಂಪ್ರದಾಯಗಳಿಂದಲ್ಲ.

ಸರಿ, ತಪ್ಪು, ಒಳಿತು, ಕೆಡುಕಗಳ ಮೂಲ `ದೇಹ ಮತ್ತು ಮನಸ್ಸು’, ದೇಹ ಮತ್ತು ಮನಸ್ಸಿನ ಶಕ್ತಿ ಅರಿತು ವಿವೇಕದಿಂದ ಬಾಳಬೇಕು.

ಬುದ್ಧನ 10 ಪರಿಪೂರ್ಣ ಮಾರ್ಗಗಳು : ದಾನ, ಧ್ಯಾನ, ಶೀಲ, ತ್ಯಾಗ, ಪ್ರಜ್ಞೆ, ಪ್ರಯತ್ನಶೀಲತೆ, ತಾಳ್ಮೆ, ಸತ್ಯ, ದೃಢಸಂಕಲ್ಪ, ಮೈತ್ರಿ ಮತ್ತು ಉಪೇಕ್ಷೆ.

ಬುದ್ಧನ ಜೀವನಾನಂದದ ಸೂತ್ರಗಳು

  • ಪ್ರತ್ಯೇಕತೆ, ವಿಭಜನೆ ಪ್ರಪಂಚದ ಎಲ್ಲಾ ಸಂಕಷ್ಟಗಳ ಮೂಲ. ಕರುಣೆ, ಮೈತ್ರಿ ಬಲವರ್ಧಕಗಳು, ಸಕಲ ಸಂಕಷ್ಟಗಳಿಗೆ ಅಮೃತ.
  • ನಿನಗೆ ನಿನ್ನ ಆಲೋಚನೆಗಳೇ ಬೆಳಕು. ನಿನ್ನ ದುಃಖ ಪರಿಹಾರ ನಿನ್ನಿಂದಲೇ ಪರಮಾನಂದವೂ ನಿನ್ನಿಂದಲೇ.
  • ಉದಾರ ಹೃದಯ, ಮೃದು ಮಧುರ ಮಾತು, ಸೇವೆಯ ಜೀವನ ಅತ್ಯುತ್ತಮ. ಆನಂದದ ಜೀವನಕ್ಕೆ ಭದ್ರ ಬುನಾದಿ.
  • ಹೆಚ್ಚೆಚ್ಚು ಒಳಿತನ್ನು ಮಾಡುತ್ತಿರಿ, ಖಂಡಿತಾ ಹೆಚ್ಚೆಚ್ಚು ಆನಂದ ಪಡೆಯುತ್ತೀರಿ. ಆನಂದ ನಮ್ಮ ಜನ್ಮಸಿದ್ಧ ಹಕ್ಕು.
  • ನಿನ್ನನ್ನು ದ್ವೇಷಿಸುವವರಿಗಿಂತ, ನಿನ್ನ ಶತ್ರುಗಳಿಗಿಂತ ನಿನ್ನ ಶಿಸ್ತಿಲ್ಲದ ದಶದಿಕ್ಕುಗಳಿಗೆ ಹರಿಯುವ ನಿನ್ನ ಮನಸ್ಸೇ ಹಿತಶತ್ರು.

ಮೇಲಿನ ಬುದ್ಧೋಪದೇಶಗಳನ್ನು ನಮ್ಮ ನಮ್ಮ ಜೀವನಗಳಲ್ಲಿ ಅನುಸರಿಸಿದರೆ, ಈ ಬದುಕನ್ನು ಆನಂದಮಯವಾಗಿಸಬಹುದು. ಇಲ್ಲದಿದ್ದರೆ, ದುಃಖ ಕಟ್ಟಿಟ್ಟ ಬುತ್ತಿ. ಅದರಿಂದ ಎಂದೂ ಬಿಡುಗಡೆ ದೊರೆಯದು.


ಶಿವನಕೆರೆ ಬಸವಲಿಂಗಪ್ಪ, ಕರುಣಾ ಜೀವ ಕಲ್ಯಾಣ ಟ್ರಸ್ಟ್, ದಾವಣಗೆರೆ.

error: Content is protected !!