ರೆಡ್ ಕ್ರಾಸ್ ಸಂಸ್ಥೆ ಆರಂಭ ಮತ್ತು ಸ್ಥಾಪಕರು : ವಿಶ್ವ ರೆಡ್ ಕ್ರಾಸ್ ಸಂಸ್ಥೆಯನ್ನು ಹೆನ್ರಿ ಡ್ಯೂನಾಂಟ್ ಎಂಬುವರು 1863ರಲ್ಲಿ ಹುಟ್ಟು ಹಾಕಿದರು. ಇದನ್ನು 1859 ಜೂನ್ 24ರಂದು ಇಟಲಿ, ಫ್ರಾನ್ಸ್ ಹಾಗೂ ಆಸ್ಟ್ರೀಯ ದೇಶಗಳ ನಡುವೆ ನಡೆದ `ಸಲ್ಫರಿನೊ’ ಯುದ್ಧದಲ್ಲಿ ಗಾಯಗೊಂಡ ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಸ್ವಯಂ ಸೇವಾ ಸಂಸ್ಥೆಯಾದ ರೆಡ್ ಕ್ರಾಸ್ ಅನ್ನು ಸ್ಥಾಪಿಸಿದರು.
ನಂತರ ಇದು ಅಂತರರಾಷ್ಟ್ರೀಯ ರೆಡ್ಕ್ರಾಸ್ ಸಂಸ್ಥೆ, ಅಂತರರಾಷ್ಟ್ರೀಯ ರೆಡ್ ಕ್ರಾಸ್ ಒಕ್ಕೂಟ ಹಾಗೂ ರಾಷ್ಟ್ರೀಯ ರೆಡ್ಕ್ರಾಸ್ ಸಂಸ್ಥೆಯಾಗಿ ಇಡೀ ಪ್ರಪಂಚದಾದ್ಯಂತ ಸ್ಥಾಪನೆಯಾಯಿತು. `ಹೆನ್ರಿ ಡೂನ್ಯಾಂಟ್ ಅವರ ಜನ್ಮ ದಿನವಾದ ಮೇ 8′ ಅನ್ನು ಪ್ರತಿವರ್ಷ ವಿಶ್ವ ರೆಡ್ ಕ್ರಾಸ್ ದಿನವಾಗಿ ಜಗತ್ತಿನಾದ್ಯಂತ ಆಚರಿಸಲಾಗುತ್ತದೆ.
ಈ ಸಂದರ್ಭದಲ್ಲಿ ಜಾಗತಿಕವಾಗಿ ಪ್ರತಿ ವರ್ಷ ಈ ರೆಡ್ ಕ್ರಾಸ್ ದಿನದ ಅಂಗವಾಗಿ ಒಂದು ಥೀಮನ್ನು ಗೊತ್ತು ಪಡಿಸುತ್ತದೆ. ಈ ವರ್ಷದ 2024ರ ಥೀಮ್ ಏನೆಂದರೆ `I give with joy, and the joy I give is a reward’. ಈ ಥೀಮ್ ಸಂತೋಷದ ಭಾವನೆಯೊಂದಿಗೆ ನೀಡುವ ಕಲ್ಪನೆಯನ್ನು ಉತ್ತೇಜಿಸುತ್ತದೆ ಮತ್ತು ನೀಡುವ ಕ್ರಿಯೆಯಲ್ಲಿ ಅನುಭವಿಸುವ ಸಂತೋಷವು ಪ್ರತಿಫಲದಾಯಕ ಫಲಿತಾಂಶವಾಗಿದೆ ಎಂದು ಗುರುತಿಸುತ್ತದೆ.
ರೆಡ್ಕ್ರಾಸ್ ಲಾಂಛನ : ಬಿಳಿ ಬಣ್ಣದ ಹಿನ್ನೆಲೆಯ ಮೇಲೆ ಕೆಂಪು ಕ್ರಾಸ್ ಹೊಂದಿರುವ ಲಾಂಛನವು ರೆಡ್ ಕ್ರಾಸ್ ಸಂಸ್ಥೆಯ ಸಂಕೇತ ಚಿಹ್ನೆಯಾಗಿದೆ. ಕ್ರಾಸ್ನ ಎಲ್ಲ ಬಾಹುಗಳು ಪರಸ್ಪರ ಸಮವಾಗಿವೆ. ಈ ಚಿಹ್ನೆಯನ್ನು ‘ಯುದ್ಧ ತಟಸ್ಥ ಸಂಕೇತ’ ವೆಂದು ಸಾರ್ವತ್ರಿಕವಾಗಿ ಗುರುತಿಸಲಾಗುತ್ತದೆ. ವೈದ್ಯಕೀಯ ಸೇವೆಗಾಗಿ ಬಳಸುವ ಉಪಕರಣಗಳ ಮೇಲೆ ಮತ್ತು ಧ್ವಜದ ಮೇಲೆ ಈ ಲಾಂಛನವನ್ನು ಬಳಸಬಹುದಾಗಿದೆ. ಯುದ್ಧಕಾಲದಲ್ಲಿ, ಸೇನಾ ದಂಗೆಯ ಸಮಯದಲ್ಲಿ, ಅಗತ್ಯವಿರುವ ಸೇವೆ, ಉಪಕಾರ ಮತ್ತು ತುರ್ತು ವೈದ್ಯಕೀಯ ನೆರವು ಇತ್ಯಾದಿಗಳನ್ನು ಒದಗಿಸುವಾಗ, ಈ ಸೇವಾ ಕಾರ್ಯದಲ್ಲಿ ತೊಡಗಿರುವವರು, `ಯುದ್ಧದಿಂದ ಹೊರತಾದವರು’ ಎಂಬ ಸಂಕೇತವನ್ನು ಈ ಲಾಂಛನದಿಂದ ಸೂಚಿಸುತ್ತದೆ.
ರೆಡ್ಕ್ರಾಸ್ನ ಪ್ರಮುಖ ಕಾರ್ಯಗಳು : ಶಾಂತಿ ಸಮಯದ ಚಟುವಟಿಕೆಗಳಾದ ಮಾನವೀಯ ತತ್ವ ಮತ್ತು ಮೌಲ್ಯಗಳನ್ನು ಬೆಳೆಸುವುದು, ಜನರ ಆರೋಗ್ಯ ವೃದ್ಧಿಸುವ ಕಾರ್ಯ ನಿರ್ವಹಿಸುವುದು, ಪ್ರಾಕೃತಿಕ ವಿಕೋಪಗಳ ಸಮಯದಲ್ಲಿ ಮಾನವೀಯ ನೆರವು ನೀಡುವುದು, ಆರೋಗ್ಯ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವುದು ಮತ್ತು ಸಮಾಜದ ಸ್ಥಾನವನ್ನು ಹೆಚ್ಚಿಸುವ ಕಾರ್ಯ ಚಟುವಟಿಕೆಗಳಿಗೆ ಒತ್ತು ನೀಡುವುದಾಗಿದೆ.
ರೆಡ್ಕ್ರಾಸ್ನ ಮೂಲತತ್ವಗಳು : `ಮಾನವೀಯತೆಯಿಂದ ಶಾಂತಿಯ ಕಡೆಗೆ’ ಎಂಬ ಧ್ಯೇಯವಾಕ್ಯದೊಂದಿಗೆ ಕಾರ್ಯಾಚರಣೆ ನಡೆಸುವ ರೆಡ್ಕ್ರಾಸ್ ಸಂಸ್ಥೆಯ ಮೂಲ ಧ್ಯೇಯಗಳೆಂದರೆ ಮಾನವೀಯತೆ, ನಿಷ್ಪಕ್ಷಪಾತ, ತಟಸ್ಥತೆ, ಸ್ವಾತಂತ್ರ್ಯ, ಸ್ವಯಂಸೇವೆ, ಐಕ್ಯ ಮತ್ಯ, ವಿಶ್ವ ವ್ಯಾಪಕತೆ.
ಭಾರತದಲ್ಲಿ ರೆಡ್ಕ್ರಾಸ್ನ ಸ್ಥಾಪನೆ : ಭಾರತದಲ್ಲಿ ಶಾಸನಸಭೆಯ ವಿಧೇಯಕದ ಪ್ರಕಾರ 1920ರಲ್ಲಿ ರೆಡ್ಕ್ರಾಸ್ ಸಂಸ್ಥೆ ಆರಂಭವಾಯಿತು. ಇದರ ಕೇಂದ್ರ ಕಛೇರಿ ಹೊಸದಿಲ್ಲಿಯಲ್ಲಿದ್ದು, ದೇಶಾದ್ಯಂತ ಎಲ್ಲಾ ರಾಜ್ಯಗಳಲ್ಲೂ ಶಾಖೆಗಳನ್ನು ಹೊಂದಿದೆ.
ಈ ರೆಡ್ ಕ್ರಾಸ್ ಸಂಸ್ಥೆಗೆ ಕೇಂದ್ರದಲ್ಲಿ ಗೌರವಾನ್ವಿತ ರಾಷ್ಟ್ರಪತಿಗಳು, ರಾಜ್ಯದಲ್ಲಿ ಗೌರವಾನ್ವಿತ ರಾಜ್ಯಪಾಲರು, ಜಿಲ್ಲೆಯಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು, ತಾಲ್ಲೂಕುಗಳಲ್ಲಿ ಮಾನ್ಯ ತಹಶೀಲ್ದಾರರು ಅಧ್ಯಕ್ಷರಾಗಿರುತ್ತಾರೆ.
1921ರಲ್ಲಿ ಕರ್ನಾಟಕದಲ್ಲಿ ರಾಜ್ಯ ಶಾಖೆಯು ಆರಂಭವಾಯಿತು. ಈ ಸಂಸ್ಥೆಯು ಪ್ರಕೃತಿ ವಿಕೋಪ, ಆರೋಗ್ಯ ಕಾರ್ಯ ಕ್ರಮಗಳಲ್ಲಿ ಸಕ್ರಿಯವಾಗಿ ಸೇವೆ ಒದಗಿಸುತ್ತಿದೆ.
ಜಿಲ್ಲಾ ಶಾಖೆ ದಾವಣಗೆರೆ : ದಾವಣಗೆರೆ ಜಿಲ್ಲಾ ಶಾಖೆಯಲ್ಲೂ ಕೂಡ ಮಾನವೀಯ ಸೇವಾಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಅದರಲ್ಲಿ ಮುಖ್ಯವಾಗಿ ರಕ್ತನಿಧಿ ಕೇಂದ್ರದ ನಿರ್ವಹಣೆ, ಆಂಬ್ಯುಲೆನ್ಸ್ ಸೇವೆಗಳು, ಆಕ್ಸಿಜನ್ ಕಾನ್ಸಂಟ್ರೇಟರ್ ಸೇವೆಗಳು, ಕಿರಿಯ ರೆಡ್ ಕ್ರಾಸ್ ಕಾರ್ಯಚಟುವಟಿಕೆಗಳು, ಯುವ ರೆಡ್ ಕ್ರಾಸ್ ಕಾರ್ಯಚಟುವಟಿಕೆಗಳು, ಪ್ರಥಮ ಚಿಕಿತ್ಸೆ ಜಾಗೃತಿ ಕಾರ್ಯಕ್ರಮಗಳು, ಕಾನ್ಸರ್ ಅರಿವು ಮತ್ತು ಜಾಗೃತಿ, ಜಾಥಾ ಕಾರ್ಯಕ್ರಮಗಳು, ರಕ್ತದಾನ ಶಿಬಿರಗಳು, ಉಚಿತ ರಕ್ತದ ಗುಂಪಿನ ತಪಾಸಣಾ ಶಿಬಿರಗಳು, ಉಚಿತ ಕಿವಿ, ಮೂಗು, ಗಂಟಲು ತಪಾಸಣಾ ಶಿಬಿರಗಳು, ಉಚಿತ ಕಣ್ಣಿನ, ಕಿವಿಯ ತಪಾಸಣಾ ಶಿಬಿರಗಳು, ಉಚಿತ ದಂತ ತಪಾಸಣಾ ಶಿಬಿರಗಳು, ಉಚಿತ ಜನರಲ್ ತಪಾಸಣಾ ಶಿಬಿರಗಳು, ವಿದ್ಯಾರ್ಥಿಗಳಿಗೆ ಪ್ರಥಮ ಚಿಕಿತ್ಸೆ ಜಾಗೃತಿ ಕಾರ್ಯಕ್ರಮಗಳು, ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಯ ಚಟುವಟಿಕೆಗಳು, ಜಾಥಾ ಕಾರ್ಯಕ್ರಮಗಳು ಹಾಗೂ ಇತರೆ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳುತ್ತಾ ಬಂದಿದೆ.
– ಶಿವಕುಮಾರ ಎನ್.ಜಿ., ಸಂಯೋಜಕರು ಮತ್ತು ಆಪ್ತ ಸಮಾಲೋಚಕರು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಜಿಲ್ಲಾ ಶಾಖೆ, ದಾವಣಗೆರೆ.