ಸಾವಿರಕ್ಕೊಬ್ಬ ಸತ್ಯ, ಲಕ್ಷಕ್ಕೊಬ್ಬ ಭಕ್ತ, ಕೋಟಿಗೊಬ್ಬ ಶಿವಯೋಗಿ

ಸಾವಿರಕ್ಕೊಬ್ಬ ಸತ್ಯ, ಲಕ್ಷಕ್ಕೊಬ್ಬ ಭಕ್ತ, ಕೋಟಿಗೊಬ್ಬ ಶಿವಯೋಗಿ

ಶ್ರೀ ಗುರು ಬಕ್ಕೇಶ್ವರ ಮಹಾಶಿವಯೋಗಿಗಳ ರಥೋತ್ಸವದ ಪ್ರಯುಕ್ತ ಈ ಲೇಖನ

ಶರಣರ ನೆನೆದರೆ ಸರಗೀಯ ಇಟ್ಟಾಂಗ, 

ಅರಳು ಮಲ್ಲಿಗಿ ಮುಡಿದಂಗೆ, 

ಅರಳು ಮಲ್ಲಿಗಿ ಮುಡಿದಂಗೆ, 

ಕಲ್ಯಾಣದ ಶರಣರ ನೆನೆಯೋ

ನನಮನವೇ !

ಹನ್ನೆರಡನೇಯ ಶತಮಾನದಲ್ಲಿ ವಿಶ್ವಗುರು, ಧರ್ಮಗುರು, ವಿಭೂತಿ ಪುರುಷ, ಶ್ರೀ ಜಗಜ್ಯೋತಿ ಬಸವೇಶ್ವರರು ಕ್ರಾಂತಿಯ ಕಹಳೆಯನ್ನೂದಿ, ಸಮ ಸಮಾಜವನ್ನು ಕಟ್ಟುವಲ್ಲಿ ಅಹರ್ನಿಷಿ ದುಡಿದಂತಹ ಸಂದರ್ಭದಲ್ಲಿ ಅನೇಕ ಶರಣ-ಶರಣೆಯರು ಕಲ್ಯಾಣ ಪಟ್ಟಣಕ್ಕೆ ಆಗಮಿಸಿ ಬಸವಣ್ಣನವರ ಮೂಲ ಮಂತ್ರ ವಾದ ಕಾಯಕ ಮತ್ತು ದಾಸೋಹದಲ್ಲಿ ತಮ್ಮನ್ನು ತೊಡಗಿಸಿ ಕೊಂಡು, ಅನುಭವ ಮಂಟಪದಲ್ಲಿ ತಮ್ಮ ತಮ್ಮ ಅನುಭವವ ಗಳನ್ನು ಹಂಚಿಕೊಳ್ಳುವಂತಹ ಸಂದರ್ಭದಲ್ಲಿ ಅವರಾಡಿದ ಮಾತುಗಳೇ ವಚನಗಳಾಗಿ ಮಾರ್ಪಟ್ಟು ಸರ್ವರಿಗೂ ಮಾರ್ಗದರ್ಶನ ಮಾಡುವಂತಹ ಮೈಲಿಗಲ್ಲುಗಳಾದವು. ಕಾಯಕ ಮಾಡುವುದು ಸರ್ವರಿಗೂ ಕಡ್ಡಾಯವಾಗಿತ್ತು. ಶರಣರು ಎಂದರೆ ಕಾಯಕ, ಕಾಯಕ ಎಂದರೆ ಶರಣರು ಎನ್ನುವಷ್ಟರ ಮಟ್ಟಿಗೆ ಕಾಯಕ ಪ್ರಾಧ್ಯಾನ್ಯತೆಯನ್ನು ಪಡೆದಿತ್ತು. ಶರಣರನ್ನು ಅವರು ಮಾಡುತ್ತಿದ್ದಂತಹ ಕಾಯಕದಿಂದಲೇ ಗಪರುತಿಸಲಾಗುತ್ತಿತ್ತು. ಉದಾಹರಣಗೆ ಹಡಪದ ಅಪ್ಪಣ್ಣ, ಮಾದಾರ ಚನ್ನಯ್ಯ, ಡೋಹರ ಕಕ್ಕಯ್ಯ, ,ಮಡಿವಾಳ ಮಾಚಯ್ಯ, ಅಂಬಿಗರ ಚೌಡಯ್ಯ, ಆಯ್ದಕ್ಕಿ ಮಾದಯ್ಯ, ಮೇದಾರ ಕೇತಯ್ಯ ಸಮಗಾರ ಹರಳಯ್ಯ, ಕುರುಬ ಗೊಲ್ಲಾಳೇಶ, ಅಂಬಿಗರ ಚೌಡಯ್ಯ, ಆಯ್ದಕ್ಕಿ ಲಕ್ಕಮ್ಮ, ಹಡಪದ ಲಿಂಗಮ್ಮ ಇತ್ಯಾದಿ ಇತ್ಯಾದಿ.

ಈ ಪರಂಪರೆಯಲ್ಲಿ ಉಳವಿಯಲ್ಲಿ ನೆಲೆಸಿದ್ದ ರೇಚಿ ತಂದೆಗಳು ಒಬ್ಬರು, ಅವರು ಉಳವಿಯ ಮಹಾಮನೆಯಲ್ಲಿ ಚನ್ನಬಸವೇಶ್ವರ ಶಿಷ್ಯರಾಗಿ ಶ್ರೀ ಕ್ಷೇತ್ರಕ್ಕೆ ಆಗಮಿಸುವ ಭಕ್ತರು ಪ್ರಸಾದದ ಮಾಡಿದ ನಂತರ ಅವರಿಗೆ ತಾಂಬೂಲ ಕೊಡುವ ಕಾಯಕವನ್ನು ಮಾಡುತ್ತಲಿದ್ದರು.

ಇಂತಹ ಮಹಾಮಹಿಮಾ ಶಾಲಿಗಳ ಆಶೀರ್ವಾದದಿಂದ ಈ ಭೂಮಿಗೆ ಅವತರಿಸಿ ಬಂದವರು ಶ್ರೀಗುರು ಶಿವಯೋಗಿ ಬಕ್ಕೇಶ್ವರ ಮಹಾಸ್ವಾಮಿಗಳವರು. ದಾವಣಗೆರೆ ತಾಲ್ಲೂಕಿನ ಗುಮ್ಮನೂರು ಗ್ರಾಮದಲ್ಲಿ ಹಿರೇಮಠದ ಬಸವಲಿಂಗಯ್ಯನವರು ಗ್ರಾಮದ ವಿದ್ಯಾರ್ಥಿಗಳಿಗೆ ಪಾಠ ಪ್ರವಚನಗಳನ್ನು ಮಾಡುತ್ತಾ, ಊರಿನ ಎಲ್ಲಾ ಕಾರ್ಯಗಳನ್ನು ಮಾಡುತ್ತಲಿರುತ್ತಾರೆ. ಇವರ ಧರ್ಮಪತ್ನಿ ಪಾರ್ವತಮ್ಮನವರು ಸುಂದರವಾದಂತಹ ಸಂಸಾರ ಸತಿಪತಿಗಳೊಂದಾದ ಭಕ್ತಿ ಹಿತವಾಗಿರ್ಪುದು ಶಿವಂಗೆ, ಸತಿಪತಿ ಗಳೊಂದಾಗದ ಭಕ್ತಿ ಅಮೃತದೊಳಗೆ ವಿಷವ ಬೆರಸಿದಂತೆ ಕಾಣಾ ರಾಮನಾಥ ಎನ್ನುವ ಜೇಡರ ದಾಸಿಮಯ್ಯನವರ ವಚನ ದಂತೆ, ಸತಿಪತಿಗಳೊಂದಾಗಿ ಸಂಸಾರ ರಥವನ್ನು ಸಾಗಿಸುತ್ತಾ ಜೀವನವನ್ನು ನಡೆಸುತ್ತಿರುತ್ತಾರೆ.  ಆದರೆ, ಅವರ ಸಂಸಾರದಲ್ಲಿ ಒಂದು ಕೊರಗು ಕಾಡುತ್ತಿರುತ್ತದೆ. ಅದೇನೆಂದರೆ, ಮಕ್ಕಳ ಭಾಗ್ಯವಿಲ್ಲದೇ ಇರುವ ಚಿಂತೆ. ಎಲ್ಲಾ ಇದ್ದು, ಮಕ್ಕಳಿಲ್ಲದಿದ್ದರೆ ಮಾಡುವುದೇನಪ್ಪಾ ಎಂದು ಚಿಂತಾಕ್ರಾಂತಳಾದ ಪಾರ್ವತಮ್ಮ ನವರು ತಮ್ಮ ಮನದ ಇಂಗಿತವನ್ನು ಬಸವಲಿಂಗಯ್ಯನವರಲ್ಲಿ ನಿವೇದಿಸಿಕೊಳ್ಳುತ್ತಾರೆ. ನಮಗೆ ನಮ್ಮ ವಂಶವನ್ನು ಬೆಳಸುವ ವಂಶೋದ್ಧಾರಕ ಬೇಕು, ನಾನು ಬಂಜೆ ಅಂತ ಅನ್ನಿಸಿಕೊಳ್ಳಲು ಸಿದ್ಧಳಿಲ್ಲ. `ಬಾಲಕರಿಲ್ಲದ ಬಾಲಿದಾತರ ಜನ್ಮ  ಬಾಡಿಗೆ ಎತ್ತು ದುಡಿದಂಗೆ ಬಾಳೆಲೆಯ ಹಾಸುಂಡು ಬೀಸಿ ಒಗೆದಂಗ’ `ಕಂದನ ಕೊಡು ಶಿವನ ಬಂಧನ ಬಿಡಲಾರೆ, ಹಂಗೀನ ಕೂಳು ತಿನ್ನಲಾರೆ, ಬಂಜೆ ಎಂಬ ಶಬ್ಧ ಹೊರ ಲಾರೆ ಎಂದಾಗ, ಬಸವಲಿಂಗಯ್ಯ ನವರು ಇದಕ್ಕೆ ಏಕೆ ಇಷ್ಟೊಂದು ಚಿಂತೆ, ಗುರು ಅನು ಗ್ರಹಿಸಿದ ಇಷ್ಟಲಿಂಗ ನಮ್ಮಿಬ್ಬರ ಕೊರಳಲ್ಲಿದೆ. ಅದು ಇಷ್ಟಾರ್ಥಗಳನ್ನು ಈಡೇರಿಸುವುಂತಹ ಲಿಂಗ ಇಂತಹ ಲಿಂಗ ಕರುಣಿಸಿದ ಹೆಬ್ಬಾಳದ ಶ್ರೀ ರುದ್ರೇಶ್ವರ ಸ್ವಾಮಿಗಳ ದರ್ಶನ ಮಾಡಿ, ತಮ್ಮ ಮನದ ಇಂಗಿತವನ್ನು ಅವರಲ್ಲಿ ನಿವೇದಿಸಿಕೊಳ್ಳೋಣ, ಅವರು ಸೂಕ್ತ ಮಾರ್ಗದರ್ಶನ ಮಾಡುತ್ತಾರೆ ಎಂದು ಸಮಾಧಾನ ಮಾಡಿ ಅವರ ದರ್ಶನ ಪಡೆಯುತ್ತಾರೆ.

ಅವರು ನಿಮ್ಮ ಇಷ್ಟಾರ್ಥವು ಸಿದ್ಧಿಯಾಗುವ ಕಾಲ ಬಂದಿದೆ. ಬಸವಲಿಂಗಯ್ಯನವರೇ ನೀವು ಉಳವಿಗೆ ಹೋಗಿ ಅಲ್ಲಿ ರೇಚಿ ತಂದೆಗಳ ದರ್ಶನ ಮಾಡಿ ಅವರ ಆಶೀರ್ವಾದ ಪಡೆಯಿರಿ. ಅವರ ಆಶೀರ್ವಾದದ ಫಲದಿಂದ ನಿಮಗೆ ಸಂತಾನ ಪ್ರಾಪ್ತಿಯಾಗುತ್ತದೆ ಎಂದು ಹಾರೈಸುತ್ತಾರೆ. ಗುರುಗಳ ಅಪ್ಪಣೆಯಂತೆ ಉಳವಿಗೆ ಬಸವಲಿಂಗಯ್ಯನವರು ಪ್ರಯಾಣಿಸಿ ಮಹಾಮನೆಯ ಮುಂದಿರುವ ನೀರಿನ ಕೊಳದಲ್ಲಿ ಸ್ನಾನವನ್ನು ಮಾಡಿ ಚನ್ನಬಸವೇಶ್ವರ ದರ್ಶನವನ್ನು ಮಾಡುತ್ತಾರೆ. ರೇಚಿ ತಂದೆಗಳು ಇವರಿಗೆ ಉಳವಿಯ ಮಹಾಮನೆಯ ವೈಭವನ್ನೆಲ್ಲಾ ಅರುಹಿ, ಅಲ್ಲಿರುವ ಪ್ರೇಕ್ಷಣೀಯ ಸ್ಥಳಗಳ ದರ್ಶನ ಮಾಡಿಸಿ, ಉಪಚರಿಸಿ, ನಿಮ್ಮಿಂದ ಒಬ್ಬ ಕಾರಣಿಕ ಶಿಶು ಉದಯವಾಗುವುದು ಎಂದು ಆಶೀರ್ವದಿಸಿ ಕಳಿಸುತ್ತಾರೆ. ಊರಿಗೆ ವಾಪಸ್ ಬಂದು ಬಸವಲಿಂಗಯ್ಯನವರು ನಡೆದ ಘಟನೆಗಳನ್ನೆಲ್ಲಾ ಮಡದಿಗೆ ತಿಳಿಸಿ ರೇಚಿ ತಂದೆಗಳು ಆಶೀರ್ವದಿಸಿ ಪ್ರಸಾದವನ್ನು ನೀಡುತ್ತಾರೆ. ಅದರ ಫಲದಂತೆ ಪಾರ್ವತಮ್ಮನವರು ಗರ್ಭ ಧರಿಸಿ ಗಂಡು ಮಗುವಿಗೆ ಜನ್ಮ ನೀಡುತ್ತಾರೆ.

ಮಗುವಿಗೆ ನಾಮಕರಣ ಮಾಡುವ ಸಮಯದಲ್ಲಿ ಕೂಸಿನ ಬಲಗಿವಿಯ ಮೇಲಿರುವ ಬಕ್ಕೆಯನ್ನು ನೋಡಿ ತಲೆಯ ಮೇಲಿರುವ ಗಂಟನ್ನು ನೋಡಿ ಅವನಿಗೆ ಬಕ್ಕೇಶ ಎಂದು ನಾಮಕರಣ ಮಡುತ್ತಾರೆ.

ಬಕ್ಕೇಶನು ತನ್ನ ಬಾಲ ಲೀಲೆಗಳೊಂದಿಗೆ ಬೆಳೆದು ಎಂಟು ವರ್ಷದವನಾದ ಆತನಿಗೆ ಜಂಗಮ ಮೂರ್ತಿಗಳಿಂದ ಶಿವದೀಕ್ಷೆಯನ್ನು ಮಾಡಿಸುತ್ತಾರೆ. ಪ್ರತಿದಿನ ತಪ್ಪದೇ ಸ್ನಾನ, ಪೂಜಾದಿ ನಿತ್ಯನೇಮಗಳನ್ನು ಮಾಡುತ್ತಾ ಹೆತ್ತವರ ಹಾಗೂ ಗ್ರಾಮದವರ ಕಣ್ಮಣಿಯಾಗಿ ಬಾಲ ಬಕ್ಕೇಶನು ಬೆಳೆಯುತ್ತಾನೆ. ಹನ್ನೆರಡು ವರ್ಷಗಳಾದಾಗ ತಂದೆ-ತಾಯಿಗಳಿಗೆ ನಮಸ್ಕರಿಸಿ ನಾನು ನನ್ನ ಇಷ್ಟಲಿಂಗಯ್ಯನ ಪ್ರೇರೇಪಣೆಯಂತೆ ದೇಶ ಸಂಚಾರಕ್ಕೆ ಹೊರಡುತ್ತೇನೆ. ನನ್ನ ಸ್ವಯದ ಜಂಗಮಾವಸ್ಥೆಯು ತೀರಿದೆ. ಇನ್ನು ಮುಂದೆ ಚರಜಂಗಮನಾಗಿ ಧರ್ಮಪ್ರಚಾರಕ್ಕೆ ಹೊರಡುತ್ತಿದ್ದೇನೆ. ಅಜ್ಞಾನದ ಅಂಧಕಾರದಲ್ಲಿರುವ ಸಮಾಜವನ್ನು ಸುಜ್ಞಾನದ ಬೆಳಕಿನಡೆಗೆ ಕೊಂಡೊಯ್ಯುವ ಪ್ರಯತ್ನ ಮಾಡುವಲ್ಲಿ ಗ್ರಾಮಕ್ಕೆ ಏಕರಾತ್ರಿ ಪಟ್ಟಣಕ್ಕೆ ಪಂಚರಾತ್ರಿಗಳಂತೆ ವಾಸ್ತವ್ಯ ಮಾಡಿ ಪಂಚಚಾರ, ಷಟ್‌ಸ್ಥಲ, ಅಷ್ಟಾವರಣಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಅಹರ್ನಿಷಿ ದುಡಿಯಬೇಕಿದೆ ಎಂದು ಹೇಳಿ ತೆರಳುತ್ತಾರೆ.

ದೇಶ ಸಂಚಾರ ಮಡುತ್ತಾ ಮಾಡುತ್ತಾ ಗೋಕರ್ಣ, ಕಂಚಿ, ಕಾಳಹಸ್ತಿ, ಶ್ರೀಶೈಲ, ಕಾಶಿ ನಗರಗಳ ದರ್ಶನ ಮಾಡುತ್ತಾರೆ. 

ತದನಂತರದಲ್ಲಿ ಮಲೆಮಹದೇಶ್ವರ, ನಂಜನಗೂಡು, ಎಡೆಯೂರು ಸಿದ್ಧಗಂಗಾ ಕ್ಷೇತ್ರಗಳನ್ನು ನೋಡಿಕೊಂಡು, ಕಲುಬರ್ಗಿಯ ಮಾರ್ಗದಿಂದ ಕಲ್ಯಾಣ ಪಟ್ಟಣವನ್ನು ಸೇರುತ್ತಾರೆ. ಅಲ್ಲಿ ಮೂರು ತಿಂಗಳುಗಳುವರೆಗೆ ವಾಸ್ತವ್ಯ ಮಾಡಿ ಹಾಳು ಬಿದ್ದಿರುವ ಮಹಾಮನೆ ನೋಡಿ ದುಃಖಿತರಾಗಿ ಕೂಡಲಸಂಗಮಕ್ಕೆ ಬಂದು ಬಸವಣ್ಣನವರು ಐಕ್ಯರಾದ ಸ್ಥಳವನ್ನು ದರ್ಶಿಸಿ ಮರಳಿ ಉಳವಿಗೆ ಬರುತ್ತಾರೆ. ಅಲ್ಲಿ ರೇಚಿ ತಂದೆಗಳ ಕೃಪಾಶೀರ್ವಾದದಲ್ಲಿ ಮೂರು ವರ್ಷಗಳವರೆಗೆ ತಂಗಿದ್ದು, ಅವರ ಅಪ್ಪಣೆಯಂತೆ ನೀನಿನ್ನು ಒಂದು ಕಡೆ ನೆಲೆಸು ಎಂಬುದನ್ನು ಪಾಲಿಸಲು ಅರಣ್ಯ ಮಾರ್ಗವಾಗಿ ಐರಣಿ ಕ್ಷೇತ್ರದ ಮೂಲಕ ಹರಿಹರ ಕ್ಷೇತ್ರಕ್ಕೆ ಬಂದು ಹೊಳೆಯ ದಡದಲ್ಲಿರುವ ಹಳೆಯ ಅರಳಿ ಮರವನ್ನೇ ಆಶ್ರಯವನ್ನಾಗಿಸಿಕೊಳ್ಳುತ್ತಾರೆ. ಅಲ್ಲಿಯೇ ಶಿವ ಪೂಜೆ ಸಾಯಂಕಾಲ ಹರಿಹರೇಶ್ವರನ ಸನ್ನಿಧಿಯಲ್ಲಿ ಭಜನೆ ಶಿವಾನುಭವ ನಡೆಯುತ್ತಿತ್ತು. 

ಒಂದು ದಿವಸ ಬೆಳಿಗ್ಗೆ ಶಿವಪೂಜೆಯನ್ನು ಮುಗಿಸಿಕೊಂಡು ಭಜನೆ ಮಾಡುತ್ತಾ ಕುಳಿತಿದ್ದಾಗ ಆ ಊರಿನ ಗಣ್ಯರಾದ ಸತ್ಯಪ್ಪ ಶೆಟ್ಟಿಯು ಪ್ರತಿ ದಿವಸದಂತೆ ಬಕ್ಕಪ್ಪನವರ ದರ್ಶನವನ್ನು ಮಾಡಿ, ನಮ್ಮ ಮನೆಗೆ ದಯ ಮಾಡಿಸಿ ಮಧ್ಯಾಹ್ನ ಪೂಜೆ, ಪ್ರಸಾದಗಳು ನಮ್ಮ ಮನೆಯಲ್ಲಿಯೇ ನಡೆಯಬೇಕು ಎಂದು ಬಿನ್ನಹ ಮಾಡಿದಾಗ, ಬಕ್ಕಪ್ಪನವರು ನಿಮ್ಮ ವಂಶವು ವೃದ್ಧಿಯಾಗಲಿ ಆಗ ಬರುತ್ತೇವೆ ಎಂದು ಅಪ್ಪಣೆ ಕೊಡಿಸುತ್ತಾರೆ. ನಂತರ ಮತ್ತೆ ಗದಗ, ಐಹೊಳೆ, ಪಟ್ಟದಕಲ್ಲಿನ ಕಡೆಗೆ ಸಂಚಾರ ಹೊರಡುತ್ತಾರೆ, ಮುಂದೆ ಒಂದೆರಡು ವರ್ಷಗಳಲ್ಲಿಯೇ ಶೆಟ್ಟರಿಗೆ ಗಂಡು ಮಗುವಿನ ಜನನವಾಗುತ್ತದೆ. 

ಕೊಟ್ಟ ವಚನದಂತೆ ಬಕ್ಕೇಶ್ವರರು ಸತ್ಯಪ್ಪ ಶೆಟ್ಟರಿಗೆ ದರ್ಶನವನ್ನು ಕೊಡುತ್ತಾರೆ. ಆಗ ಶೆಟ್ಟರು ಪೂಜ್ಯರೇ ಬೆಳಗಿನ ಪೂಜೆ ಇಲ್ಲಿ ನಡಿತಾ ಇದೆ ನಿಜ. ಆದರೆ ಮುಂದೆ ಮಳೆಗಾಲದಲ್ಲಿ ತಮಗೆ ಬಹಳ ತೊಂದರೆಯಾಗುತ್ತದೆ. ಹೊಳೆಯು ತುಂಬಿ ಹರಿಯುತ್ತದೆ. ಅದಕ್ಕಾಗಿ ತಮ್ಮ ಪೂಜೆಗೆಂದು ತಾವು ತೋರಿದಲ್ಲಿ ಮಠವನ್ನು ಕಟ್ಟಿಸುತ್ತೇನೆ ಎಂದು ಭಿನ್ನವಿಸಿಕೊಳ್ಳುತ್ತಾರೆ. 

ಹಿಂದೆ ಉಳವಿಯಲ್ಲಿ ರೇಚಿ ತಂದೆಗಳು ಒಂದು ಕಡೆ ನಿಂತು ಪರಜಂಗಮಾವಸ್ಥೆಯನ್ನು ಕೈಗೊಳ್ಳಿ ಎಂದು ಹೇಳಿದ ಮಾತು ನೆನಪಿಗೆ ಬಂದು ಶೆಟ್ಟರೇ ಮಠ ನಮಗೆ ಇಲ್ಲಿ ಬೇಡ `ದೇವನಗರಿ’ ಯೇ (ದಾವಣಗೆರೆ) ಶ್ರೇಷ್ಠವಾದ ಸ್ಥಾನ, ಅಲ್ಲಿ ಆಗಾಗ ಚಿನ್ಮೂಲಾದ್ರಿಯ ಮಹಾಸನ್ನಿಧಿಯವರು ಬಂದು ಆ ಸ್ಥಾನವನ್ನು ಸುಕ್ಷೇತ್ರವನ್ನಾಗಿ ಮಾಡಿದ್ದಾರೆ. ಅಲ್ಲಿಯೇ ನಮ್ಮ ಪರಜಂಗಮಾವಸ್ಥೆಯು ಆಗಬೇಕೆಂದು ತಿಳಿಸುತ್ತಾರೆ. 

ಅದಕ್ಕೆ ಒಪ್ಪಿದ ಶೆಟ್ಟರನ್ನು ದಾವಣಗೆರೆಗೆ ಕರೆದುಕೊಂಡು ಬಂದು ದುರ್ಗಾಂಬಿಕಾ ದೇವಸ್ಥಾನದ ಹತ್ತಿರದಲ್ಲಿ ಒಂದು ಜಾಗವನ್ನು ತೋರಿಸಿದ ಪ್ರಕಾರ ಅಲ್ಲಿ ಮಠವನ್ನು ಕಟ್ಟಲಿಕ್ಕೆ ಭಕ್ತ ಜನರು ಪ್ರಾರಂಭಿಸುತ್ತಾರೆ. 

ಶ್ರೀ ಮಠದಲ್ಲಿ ಪ್ರತಿನಿತ್ಯ ಪೂಜಾ, ಭಜನೆ, ಶಿವಚಿಂತನೆ, ಶಿವಕೀರ್ತನೆಗಳು ತಪ್ಪದೇ ನಡೆಯುತ್ತಾ ಬರುತ್ತಿದ್ದು ಶ್ರೀಗುರು ಬಕ್ಕೇಶ್ವರರ ಕೀರ್ತಿ ಎಲ್ಲಾ ಕಡೆಗೂ ಹರಡಿತು. ಆಗಿಂದಾಗ್ಗೆ ಶಿವಾನುಭವ ಗೋಷ್ಠಿಗಳು, ಹೆಬ್ಬಾಳು ಶ್ರೀರುದ್ರೇಶ್ವರ ಸ್ವಾಮಿ ಗಳು ಚಿತ್ರದುರ್ಗದ ಶ್ರೀ ರಾಜವಟ್ಟೀ ಮುರುಘರಾಜೇಂದ್ರ ಮಹಾ ಸ್ವಾಮಿಗಳವರು ದಯಮಾಡಿ ಸರ್ವ ಭಕ್ತರಿಗೆ ಲಿಂಗಾಂಗ ಸಾಮರಸ್ಯ ಸುಜ್ಞಾನವನ್ನು ಬೀರುತ್ತಿದ್ದರು. ಅಂದಿನಿಂದ ಜ್ಞಾನದ ಕೇಂದ್ರವಾಗಿ ದಾವಣಗೆರೆ ಪ್ರಸಿದ್ಧಿಯನ್ನು ಪಡೆಯಿತು. 

ಆ ಕಾಲದಲ್ಲಿ ಮೈಸೂರು ದೇಶಕ್ಕೆ ಮುಮ್ಮಡಿ ಕೃಷ್ಣರಾಜ ಒಡೆಯರು ಮಹಾರಾಜರಾಗಿ ಧರ್ಮದಿಂದ ರಾಜ್ಯವನ್ನಾಳುತ್ತಿದ್ದರು. ಕಾರಣಾಂತರದಿಂದ ಇವರಿಂದ ಬ್ರಿಟೀಷರು ರಾಜ್ಯವನ್ನು ಕಸಿದುಕೊಂಡರು. ಕಂದಾಯವನ್ನು ಹೆಚ್ಚಾಗಿ ವಿಧಿಸಿದರು. ಅದು ಸಾಮಾನ್ಯ ಜನರಿಗೆ ತುಂಬಾ ಹೊರೆಯಾಗಿತ್ತು. ಆಗ ಊರಿನ ಜನರೆಲ್ಲಾ ಸಭೆ ಸೇರಿ ಮೈಸೂರಿಗೆ ನಿಯೋಗ ಹೊರಟರು, ತಿಂಗಳಾದರೂ ನಿಯೋಗಕ್ಕೆ ತೆರಳಿದ್ದ ಜನರಿಗೆ ಮಹಾರಾಜರ ದರ್ಶನ ಭಾಗ್ಯವೇ ಲಭಿಸಲಿಲ್ಲ. ಆಗ ದಾವಣಗೆರೆಯ ಭಕ್ತರೆಲ್ಲರೂ ಬಕ್ಕೇಶ್ವರರಲ್ಲಿಗೆ ವಿಷಯವನ್ನು ತಿಳಿಸಿದಾಗ, ಅವರು ಅಲ್ಲಿ ಸುಖವಾಗಿ ಇದ್ದಾರೆ, ಮಹಾರಾಜರ ದರ್ಶನ ಭಕ್ತರಿಗೆ ಲಭಿಸಿಲ್ಲ, ನಮ್ಮ ದುರ್ಗೆ (ದಾವಣಗೆರೆಯ ದುಗ್ಗಮ್ಮ) ಯನ್ನು ಕಳಿಸಿ ಆ ಕೆಲಸ ನೆರವೇರಿಸಿ ಕೊಡುವುದಾಗಿ ಅಪ್ಪಣೆ ಮಾಡುತ್ತಾರೆ. 

ದುಗ್ಗಮ್ಮನನ್ನು ಕುರಿತು ಬಕ್ಕೇಶ್ವರರು ಈ ಊರಿನ ಗ್ರಾಮದೇವತೆ ನೀನು, ನಿನ್ನ ಮಕ್ಕಳನ್ನು ಕಾಪಾಡುವ ಶಕ್ತಿ ನಿನ್ನಲ್ಲಿದೆ. ಈ ಕೆಲಸವನ್ನು ಪೂರೈಸುವ ಹೊಣೆ ನಿನ್ನದಾಗಿದೆ ಎಂದು ಅಪ್ಪಣೆ ಮಾಡುತ್ತಾರೆ.

ಅಂದೇ ರಾತ್ರಿ ಮಹಾರಾಜರ ಕನಸಿನಲ್ಲಿ ಚಾಮುಂಡೇಶ್ವರಿ ದೇವಿಯು ಪ್ರತ್ಯಕ್ಷಳಾಗಿ, ನಾನೇ ದಾವಣಗೆರೆಯಲ್ಲಿ ದುಗ್ಗಮ್ಮನೆಂಬ ಹೆಸರಿನಿಂದ ಗ್ರಾಮ ದೇವತೆಯಾಗಿರುವೆ, ಕೂಡಲೇ ಅವರ ಮನವಿಯನ್ನು ಮನ್ನಿಸಿ ದಾವಣಗೆರೆಗೆ ಕಳುಹಿಸಿಕೊಡಬೇಕೆಂದು ಆದೇಶಿಸಿದ ಪ್ರಕಾರ ಮಹಾರಾಜರು ಅದರಂತೆ ನಡೆದುಕೊಂಡರು. 

ಹೀಗೆ ಅನೇಕ ಲೀಲೆಗಳನ್ನು ತೋರುತ್ತಾ ಶ್ರೀ ಗುರು ಬಕ್ಕೇಶ್ವರರು ಒಂದು ದಿವಸ ಮಠದಲ್ಲಿ ಎಲ್ಲಾ ಭಕ್ತರನ್ನು ಸೇರಿಸಿ ಈ ಅವತಾರವನ್ನು ಮುಗಿಸಿ ತಮ್ಮ ಬಳಿ ಬರಬೇಕೆಂದು ತಿಳಿಸಿರುವ ಪರಶಿವನ ಅಪ್ಪಣೆಯನ್ನು ಎಲ್ಲರಿಗೂ ತಿಳಿಸಿದರು. ಭಕ್ತಗಣಗಳವರು ಶೋಕಸಾಗರದಲ್ಲಿ ಮುಳುಗಿ ಇನ್ನೂ ಕೆಲ ವರ್ಷಗಳ ಕಾಲ ನಮ್ಮನ್ನು ಉದ್ಧರಿಸಬೇಕೆಂದು ಪಾದಕ್ಕೆ ಬಿದ್ದು ಬೇಡಿಕೊಂಡಾಗ ಶ್ರೀಗಳು ಶಿವನ ಅಪ್ಪಣೆಯನ್ನು ಯಾರೂ ಮೀರಬಾರದು. ಆತ ಇರಿಸಿದಲ್ಲಿ ಇರಬೇಕು ಎಂದು ಸಮಾಧಾನ ಮಾಡುತ್ತಾರೆ.

ಭಕ್ತ ಜನಸಾಗರ ದುಃಖದಿಂದ ಇದೇ ಮಠದಲ್ಲಿಯೇ ತಮ್ಮ ಗದ್ದುಗೆಯಾಗಲಿ ಎಂದಾಗ ಅದಕ್ಕೆ ಬಕ್ಕಪ್ಪಗಳು ಒಪ್ಪದೇ ತಮ್ಮ ಗದ್ದುಗೆಯ ಈ ಮಠದ ಆಗ್ನೇಯ   ದಿಕ್ಕಿನಲ್ಲಿರುವ ಸುಂದರವಾದ ತೋಟದಲ್ಲಿ ನಿರ್ಮಿಸಿರಿ ಎಂದಾಗ, ಜಾಗ ಸುಂದರವಾಗಿದೆ. ಆದರೆ, ಊರಿಗೆ ದೂರವಾಗುವುದರಿಂದ ಭಕ್ತರಿಗೆ ಹೋಗಿ ಬರಲು ತೊಂದರೆಯಾಗುತ್ತದೆ ಎಂದಾಗ ಬಕ್ಕೇಶ್ವರರು ನೋಡಿ ಅದು ಮುಂದಿನ ಶತಮಾನದಲ್ಲಿ ಬೆಳೆದು ಚೌಕಿಪೇಟೆಯೆಂಬ ಹೆಸರಿನಿಂದ ಪ್ರಸಿದ್ಧವಾಗಿ ಊರಿನ ಮಧ್ಯದಲ್ಲಿ ಆಗುವುದು ಎಂದು ತಿಳಿಸುತ್ತಾರೆ.

ನಂತರ ಚೈತ್ರಶುದ್ಧ ಪಂಚಮಿಯ ಸೋಮವಾರ ದಿವಸ ಶಿವಾನುಭವ ಗೋಷ್ಠಿಯನ್ನು ಪೂರೈಸಿ ಮಹಾಲಿಂಗವನ್ನು ನೋಡುತ್ತಾ ಲಿಂಗದಲ್ಲಿ ಮುಳುಗಿ ಹರಹರ ಮಹಾದೇವ ಶಂಭೋ ಬಸವೇಶ ಎನ್ನುತ್ತಾ ತಮ್ಮ ಮಹಾಲಿಂಗದಲ್ಲಿ ಬೆರೆಯುತ್ತಾರೆ.

ಶ್ರೀ ಶ್ರೀಗಳವರ ಇಚ್ಛೆಯಂತೆ ಅವರು ತೋರಿಸಿದ ಸ್ಥಳದಲ್ಲಿ ಕ್ರಿಯಾಸಮಾಧಿಯನ್ನು ಸಿದ್ಧಗೊಳಿಸಿದರು. ಚಿತ್ರದುರ್ಗದ ಮಹಾಸನ್ನಿಧಿಯವರು ಬಕ್ಕೇಶ್ವರ ಶ್ರೀಗಳವರ ಕಳೇಬರಕ್ಕೂ ವಿಭೂತಿ, ಪತ್ರೆ, ಪುಷ್ಪಾದಿಗಳನ್ನು ಧರಿಸಿ ಪೂಜಿಸುತ್ತಾ ಬಕ್ಕೇಶನ ಮಹಾಲಿಂಗ ಕಳೇಬರವನ್ನು ವಿಭೂತಿಯಿಂದ ಸಮಾಧಿಗೊಳಿಸುತ್ತಾರೆ.

ಗದ್ದುಗೆಯ ಕಟ್ಟಳೆಯ ಕ್ರಿಯೆಯನ್ನು ಪೂರೈಸಿ ಗದ್ದುಗೆ ಮತ್ತು ಮಠವನ್ನು ಸುಂದರವಾಗಿ ನಿರ್ಮಾಣ ಮಾಡುತ್ತಾರೆ. ಅಂದಿನಿಂದ ಇಂದಿನವರೆಗೂ ಬಕ್ಕೇಶ್ವರರ ಗದ್ದುಗೆಗೆ ನಿರಂತರವಾಗಿ ಪೂಜೆ, ಶ್ರಾವಣ ಮಾಸದಲ್ಲಿ ಹಾಗೂ ಧನುರ್ಮಾಸದಲ್ಲಿ ವಿಶೇಷ ಪೂಜೆ, ಕಾರ್ತಿಕೋತ್ಸವ ಹಾಗೂ `ಚೈತ್ರ ಶುದ್ಧ ಪಂಚಮಿ’ (ಯುಗಾದಿ ನಂತರದ 5ನೇ ದಿವಸ)ಯಂದು ಮಹಾರಥೋತ್ಸವವು ವಿಜೃಂಭಣೆಯಿಂದ ನಡೆದು ಕೊಂಡು ಬರುತ್ತಿದೆ. ಹೀಗೆ ಭಕ್ತಕೋಟಿಯ ಮನೆದೇವರಾಗಿ, ಮನದ ದೇವರಾಗಿ, ಆರಾಧ್ಯ ದೇವರಾಗಿ, ಶ್ರೀ ಗುರು ಬಕ್ಕೇಶ್ವ ರರು ಸಲಹುತ್ತಾ ಬರುತ್ತಿದ್ದಾರೆ. ಉಣುವಾಗ, ಉಡುವಾಗ, ದೀಪ ಹಚ್ಚುವಾಗ ಶ್ರೀ ಗುರು ಬಕ್ಕೇಶ್ವರರನ್ನು ನೆನೆಯುವ ಮನೆತನಗಳು ದಿನೇ ದಿನೇ ಪ್ರವರ್ಧಮಾನಕ್ಕೇರುತ್ತಿರುವುದೇ ಬಕ್ಕೇಶ್ವರರ ಆಶೀರ್ವಾದ ಫಲ.

ಎಂ.ಕೆ. ಬಕ್ಕಪ್ಪ, ದಾವಣಗೆರೆ

ಮೊ : 99162 42588

error: Content is protected !!