ಏಕಾಂತವೇ ಸಾಧಕನ ಮೊದಲ ಪ್ರೇಯಸಿ !

ಏಕಾಂತವೇ ಸಾಧಕನ ಮೊದಲ ಪ್ರೇಯಸಿ !

ಒಂಟಿತನಕ್ಕೊಂದು ಬೆಳಕು

`ಏಕಾಂತವೇ ನನ್ನ ಮೊದಲ ಪ್ರೇಯಸಿ’ ಎಂಬ ರಾಷ್ಟ್ರಕವಿ ಕುವೆಂಪುರವರ ವಾಣಿಯಂತೆ ಏಕಾಂತವೆಂಬುದು ನಿಜಕ್ಕೂ ಶಾಪವಲ್ಲ, ಅದೊಂದು ವರ. ನಮ್ಮತನವನ್ನು ನಮ್ಮಲ್ಲಿರುವ ಅಂತಃಶಕ್ತಿ, ಸೃಜನಶೀಲತೆಯನ್ನು ಅನಾವರಣ ಗೊಳಿಸುವ ಸದಾವಕಾಶವೇ ಸರಿ. ನಿಜ ಬದುಕಿನಲ್ಲಿ ಆಗಿ ಹೋಗುವ ಕೆಲವು ಆಕಸ್ಮಿಕ ವಾದ ತಿರುವುಗಳು, ಘಟನೆಗಳು, ನೋವುಗಳು ಒಮ್ಮೊಮ್ಮೆ ನಮ್ಮನ್ನು ಸಮಾಜದಿಂದ ಸಮುದಾ ಯದಿಂದ ದೂರವಿರುವಂತೆ ಮಾಡಿಬಿಡುತ್ತವೆ. ಯಾರದೋ ಬಯಕೆಗೋ ಭಿನ್ನಾಣಕ್ಕೋ, ಅಥವಾ ಇನ್ನಾರದೋ ಹತಾಶೆಗೋ ನಿರಾಶೆಗೋ ಬದುಕು ಒಂಟಿತನಕ್ಕೆ ಜಾರಿ ಬಿಡುತ್ತದೆ.

ಬದುಕಿನಲ್ಲಿ ಉಂಟಾಗುವ ಈ ಒಂಟಿತನವನ್ನು ಏಕಾಂತವನ್ನಾಗಿ ಪರಿವರ್ತಿಸಿಕೊಳ್ಳುವವರೇ ನಿಜವಾದ ಸಾಧಕರು. ಒಂಟಿತನಕ್ಕೆ ಹಾಗೂ ಏಕಾಂತಕ್ಕೆ ಅಜಗಜಾಂತರ ವ್ಯತ್ಯಾಸವಿದೆ. ಒಂಟಿತನವು ನಮ್ಮನ್ನು ಮಾನಸಿಕವಾಗಿ, ದೈಹಿಕವಾಗಿ ಘಾಸಿಗೊಳಿಸಿ ಕುಗ್ಗಿಸಿದರೆ ಏಕಾಂತವು ನಮ್ಮೊಳಗಿನ ಅಂತಃಶಕ್ತಿ, ಸೃಜನಶೀಲತೆ, ಹೊಸತನವನ್ನು ಈ ಸುಂದರವಾದ ಜಗತ್ತಿಗೆ ಪರಿಚಯಿಸುವುದರ ಮೂಲಕ, ನಮ್ಮನ್ನು ಜಗತ್ತಿನ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೇ ಉಳಿದು ಬಿಡುವಂತೆ ಮಾಡುತ್ತದೆ.

ಫ್ರೆಂಚ್ ವಿಜ್ಞಾನಿಯಾದ ಲೂಯಿಸ್ ಪಾಶ್ಚರ್ ರವರು ಹುಚ್ಚು ನಾಯಿ ಕಡಿತದಿಂದ ಉಂಟಾಗುವ ರೇಬಿಸ್ ರೋಗಕ್ಕೆ ಚುಚ್ಚುಮದ್ದನ್ನು ಕಂಡುಹಿಡಿಯುವ ಛಲ ತೊಟ್ಟಿದ್ದರು. ಚುಚ್ಚುಮದ್ದು ಇಲ್ಲದ ಈ ರೋಗಕ್ಕೆ ಇಡೀ ಮಾನವ ಕುಲವೇ ನಲುಗಿತ್ತು. ಅಂತಹ ಸಂದರ್ಭದಲ್ಲಿ ಪ್ರಯೋಗಗಳಲ್ಲಿ ತೊಡಗಿದ್ದ ಪಾಶ್ಚರ್ ಬದುಕಿನಲ್ಲಿ ದುರಂತ ಒಂದು ನಡೆದು ಹೋಯಿತು. ತನ್ನ ಎರಡು ಮಕ್ಕಳು ಬ್ರೈನ್ ಟ್ಯೂಮರ್ ನಿಂದ ಮರಣ ಹೊಂದಿದರೆ, ಅದಾದ ಕೆಲದಿನಗಳ ತರುವಾಯ ತನ್ನ ಹೆಂಡತಿ ಟೈಫಾಯ್ಡ್ ಜ್ವರದಿಂದ ಮರಣಿಸುತ್ತಾಳೆ. ಅಲ್ಪ ಅವಧಿಯಲ್ಲಿ ತನ್ನ ಮುಂದೆ ಬೆಳೆದು ನಿಂತಿದ್ದ ಮಕ್ಕಳು ಮತ್ತು ಬಾಳ ಪಯಣದಲ್ಲಿ ಜೊತೆಯಾಗಿ ಕೈ ಹಿಡಿದು ನಿಂತಿದ್ದ ಸಂಗಾತಿಯನ್ನು  ಕಳೆದುಕೊಂಡ  ಪಾಶ್ಚರ್ ಅಕ್ಷರಶಃ  ದುಃಖದ ಮಡುವಿಗೆ ಬಿದ್ದಿದ್ದರು. ಪಾಶ್ಚರ್ ಬದುಕಿನ ಸಂತೋಷವೆಲ್ಲ ಕಳೆದುಕೊಂಡೆ ಎಂದು ಭಾವಿಸಿಕೊಂಡು ಒಬ್ಬಂಟಿಯಾಗಿದ್ದರು. ಕಾಲ ಕಳೆದಂತೆ ಆ ಒಬ್ಬಂಟಿತನವನ್ನು ಸುಮಧುರ ಏಕಾಂತವಾಗಿ ಪರಿವರ್ತಿಸಿಕೊಂಡ ಅವರು  ನಿರಂತರ ಪ್ರಯೋಗಗಳ ಮೂಲಕ ತನ್ನೊಳಗಿನ ಅನ್ವೇಷಣೆ, ಸಂಶೋಧನೆಯ ಹಸಿವು, ಏನನ್ನಾದರೂ ಸಾಧಿಸಬೇಕೆಂಬ ಹಪಾಹಪಿ ಮತ್ತು ತನ್ನೊಳಗಿನ ಸೃಜನಶೀಲತೆ ಬುದ್ಧಿವಂತಿಕೆಯಿಂದ ಇಡೀ ಮಾನವ ಕುಲವೇ ಬೆಚ್ಚಿಬಿದ್ದಿದ್ದ ರೇಬಿಸ್ ರೋಗಕ್ಕೆ ಚುಚ್ಚುಮದ್ದು ಕಂಡುಹಿಡಿಯುವಲ್ಲಿ ಯಶಸ್ವಿಯಾದರು. ಬದುಕಿನಲ್ಲಿ ಎಲ್ಲವನ್ನೂ ಕಳೆದುಕೊಂಡೆ ಎಂದು ಭಾವಿಸಿದ್ದ ಪಾಶ್ಚರ್ ಜೊತೆ ಅಂದು ಇಡೀ ಜಗತ್ತೇ ನಿಂತಿತ್ತು.!

ಭಾರತದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು ಹೇಳುವಂತೆ `ದಿನಕ್ಕೆ  ಹತ್ತು ನಿಮಿಷ ಏಕಾಂತದಲ್ಲಿ ನಿಮ್ಮ ಜೊತೆ ನೀವು ಮಾತನಾಡಿಕೊಳ್ಳಲಿಲ್ಲವೆಂದರೆ, ಪ್ರಪಂಚದ ಅದ್ಭುತವಾದ ವ್ಯಕ್ತಿಯೊಂದಿಗೆ ಮಾತನಾಡುವುದನ್ನು ನೀವು ಕಳೆದುಕೊಳ್ಳುತ್ತೀರಿ’ ಎಂಬಂತಹ ಮಾತುಗಳು ನಿಜಕ್ಕೂ ಪ್ರೇರಣದಾಯಕ, ಸ್ಫೂರ್ತಿದಾಯಕ. ನಿಜ, ಆ ಹತ್ತು  ನಿಮಿಷದ ಯೋಚನೆಗಳು ನಿಮ್ಮ ಬದುಕಿನ ಪಯಣವನ್ನು ಅದ್ಭುತವಾಗಿಸಬಲ್ಲದು, ಅಚ್ಚರಿಗೊಳಿಸಬಲ್ಲವು, ಅನನ್ಯಗೊಳಿಸಬಲ್ಲವು.!

ಏಕಾಂತವೆಂಬುದು ಮಧುವಿನಲ್ಲಿರುವ ಸಿಹಿಯಂತೆ ಅದನ್ನು ಸವಿಯಬೇಕಾದರೆ ಅದಕ್ಕೆ ತಾಳ್ಮೆ, ಶ್ರದ್ಧೆಯ ಜೊತೆಗೆ ಹೂವಿನಿಂದ ಮಕರಂದ ಹೀರಿ ಒಟ್ಟು ಮಾಡಿ ಜೇನುಗೂಡು ಕಟ್ಟುವ ದುಂಬಿಯ ನಿರಂತರವಾದ ಅವಿರತ ಪರಿಶ್ರಮದ ಮನಸ್ಸಿರಬೇಕು. ಆಗಿದ್ದಾಗ ಮಾತ್ರ ಏಕಾಂತವು ಹಿತವೆನಿಸುವುದು, ಸೊಗಸೆನಿಸುವುದು.

ಖ್ಯಾತ ಲೇಖಕ ರವಿ ಬೆಳಗೆರೆ ಅವರು ಹೇಳುವಂತೆ `ಯಾರು ತಮ್ಮ ಏಕಾಂತವನ್ನು ಸುಮಧುರವಾಗಿ, ಸುಂದರವಾಗಿಟ್ಟುಕೊಳ್ಳು ತ್ತಾರೋ ಅಂತಹವರು ಎಷ್ಟೇ ಬಹುಕಾಂತೆಯರ
ನಡುವೆ ಇದ್ದರೂ ಕೆಡಲಾರರು’ ನಿಮ್ಮ ಈ ಸುಮಧುರ ಏಕಾಂತಕ್ಕೆ ಕಲ್ಲನ್ನೆಸೆಯುವ ಅನೇಕ ಅಡೆತಡೆಗಳು, ಕಂಟಕಗಳು,
ಕಳಂಕಗಳು ಬರಬಹುದು. ಆದರೆ ಅವನ್ನೆಲ್ಲ ಮೆಟ್ಟಿ ನಿಂತಾಗ ನಮ್ಮ ಬದುಕನ್ನು ಇತರರಿಗಿಂತ ಭಿನ್ನವಾಗಿ,
ವಿಶೇಷವಾಗಿ ಕಟ್ಟಿಕೊಂಡು ಮುನ್ನಡೆಸಿ ಅಮೂಲ್ಯವಾಗಿಸಿಕೊಳ್ಳಬಹುದು.

ಜಗತ್ತಿನ ಸಾಧಕರ ಚರಿತ್ರೆಯನೊಮ್ಮೆ ನೋಡಿದಾಗ ಎಲ್ಲರೂ ಜಗತ್ತಿಗೆ, ಬಂದ ಸಮಸ್ಯೆಗಳಿಗೆ, ಆದ ಅವಮಾನಗಳಿಗೆ, ತಿರಸ್ಕಾರಗಳಿಗೆ, ಸೆಡ್ಡು ಹೊಡೆದು ಏಕಾಂಗಿಯಾಗಿ ನಿಂತವರೇ ಹೊರತು, ಕುರಿ ಮಂದೆಯಲ್ಲಿ ತಲೆ ಅಲ್ಲಾಡಿಸಿದವರಲ್ಲ. ಸಾಧಕರಿಗೆ ಏಕಾಂತವೇ ಮೊದಲ ಪ್ರೇಯಸಿ, ಹಿತೈಷಿಯಾಗಬೇಕು. ಯಾವುದು ಜಗತ್ತು ನಮ್ಮಿಂದ ಆಗುವುದಿಲ್ಲ ಎಂದು ಕೈ ಚೆಲ್ಲಿರುತ್ತೋ, ನಿರ್ಲಕ್ಷಿಸಿರುತ್ತೋ, ಅಂತಹದ್ದನ್ನು ಕೈಗೆತ್ತಿಕೊಂಡು ನಾನೊಬ್ಬನೇ ಮಾಡಬಲ್ಲೆ ಎಂಬ ದೃಢ ಮನಸ್ಸಿನಿಂದ ಹೊರಡಿ ಹಿಡಿದ ಕೆಲಸವನ್ನು ಇತರರಿಗಿಂತ ಭಿನ್ನವಾಗಿ, ವಿಶೇಷವಾಗಿ, ಅಂತಃ ಶ್ರದ್ಧೆಯಿಂದ ಇನ್ನಾರು ಇದಕ್ಕಿಂತ ಉತ್ತಮವಾಗಿ ಮಾಡಲಾರರು ಎನ್ನುವಂತೆ ಮಾಡಿ ಆಗ ಬಹುಶಃ ನಮ್ಮೊಳಗೂ ಒಬ್ಬ ಜಗತ್ತಿನ ಅದೆಷ್ಟು ಜೀವಿಗಳನ್ನು ಭಯಾನಕ ರೇಬಿಸ್ ಪಾರು ಮಾಡಿದ ಪಾಶ್ಚರ್ ನಂತಹ ವಿಜ್ಞಾನಿಗಳು ಹುಟ್ಟಬಹುದು. ಮನುಕುಲಕ್ಕೆ ಸವಾಲಾದ ಸಮಸ್ಯೆಗಳನ್ನು ಬಗೆಹರಿಸಬಹುದು.!


– ಬಸವರಾಜ ಕರುವಿನ, ಬಸವನಾಳು.

error: Content is protected !!