ಆರೋಗ್ಯಕರ ಜೀವನಕ್ಕೆ ರುಚಿ ಕಲಿಯುವಿಕೆಯೇ ರಹದಾರಿ
ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಮಾತಿದೆ. ಆದರೆ, ಊಟವನ್ನು ಸರಿಯಾಗಿ ಅರಿತುಕೊಳ್ಳುವುದು ಹೇಗೆ ಎಂಬುದೇ ಆಧುನಿಕ ಕಾಲದ ದೊಡ್ಡ ಸಮಸ್ಯೆ. ರುಚಿಕಟ್ಟಾದ ಊಟವನ್ನು ಅತಿಯಾಗಿ ಸವಿದು ಅನೇಕ ರೀತಿಯ ಅನಾರೋಗ್ಯಕ್ಕೆ ಸಿಲುಕುವುದು ವ್ಯಾಪಕವಾಗುತ್ತಿದೆ.
ಈ ಹಿನ್ನೆಲೆಯಲ್ಲಿ ರುಚಿಕಟ್ಟಾದ ಊಟಕ್ಕಿಂತ ಪೌಷ್ಟಿಕ ಊಟವೇ ಆರೋಗ್ಯದ ರಹದಾರಿ. ಆದರೆ, ಆರೋಗ್ಯಕ್ಕೆ ಹಿತ ನೀಡುವ ಆಹಾರ ರುಚಿಯಾಗಿರುವುದಿಲ್ಲ ಎಂಬುದೇ ಸಾಕಷ್ಟು ಬಾರಿ ಸಮಸ್ಯೆಗೆ ಕಾರಣವಾಗುತ್ತದೆ.
ಹೀಗಾಗಿ ರುಚಿ ಎಂದರೆ ಏನು ಎಂಬುದನ್ನು ಮೊದಲು ಅರಿಯಬೇಕು ಎಂದು ಆಸ್ಟ್ರೇಲಿಯಾದ ಸಿ.ಎಸ್.ಐ.ಆರ್.ಒ. ವಿಜ್ಞಾನಿಗಳಾದ ನಿಕೊಲಸ್ ಆರ್ಚರ್ ಹಾಗೂ ಆಸ್ಟ್ರಿಡ್ ಪೋಲ್ಮಾನ್ ಅಭಿಪ್ರಾಯಪಡುತ್ತಾರೆ.
ರುಚಿ ಎಂಬುದು ಸಂಕೀರ್ಣ ವ್ಯವಸ್ಥೆ. ಹೆಚ್ಚು ಪೌಷ್ಟಿಕಾಂಶ ಇರುವ ಆಹಾರವನ್ನು ಆಯ್ಕೆ ಮಾಡಲು ಹಾಗೂ ಹಾನಿಕಾರಕ ಆಹಾರವನ್ನು ತಿರಸ್ಕರಿಸಲು ರುಚಿಯೇ ಮಾರ್ಗದರ್ಶಕ ಎಂದವರು ತಿಳಿಸುತ್ತಾರೆ.
ಆಹಾರದಲ್ಲಿ ಪ್ರೋಟೀನ್, ಸಕ್ಕರೆ, ಕೊಬ್ಬು ಸೇರಿದಂತೆ ಹಲವಾರು ಪೌಷ್ಟಿಕಾಂಶಗಳಿರುತ್ತವೆ. ಇಂತಹ ಪೌಷ್ಠಿಕ ಆಹಾರ ಸಹಜವಾಗಿಯೇ ರುಚಿಯಾಗಿರುತ್ತದೆ.
ರುಚಿ ಆಸ್ವಾದನೆಗೆ ನಾಲಿಗೆ ತುದಿಯೇ ಮೂಲ. ಆದರೆ, ಆಹಾರದ ಪರಿಮಳ, ಬಣ್ಣ, ಸ್ವರೂಪಗಳೂ ರುಚಿ ಹೆಚ್ಚಿಸುತ್ತವೆ. ಹೀಗಾಗಿ ರುಚಿ ನಿರ್ಧಾರದಲ್ಲಿ ಹಲವು ಅಂಶಗಳು ಭಾಗಿಯಾಗಿವೆ.
ವಯಸ್ಸು, ವಂಶವಾಹಿ ಹಾಗೂ ಪರಿಸರಗಳೂ ಆಹಾರದ ಆದ್ಯತೆ ಬದಲಿಸುತ್ತವೆ. ನಮ್ಮಲ್ಲಿ ಪ್ರತಿಯೊಬ್ಬರ ಸಂವೇದನೆಯೂ ಬೇರೆ ಬೇರೆ ಆಗಿರುತ್ತದೆ. ಊಟದ ವಿಷಯಕ್ಕೆ ಬಂದರೆ ಒಬ್ಬರ ಅಭಿರುಚಿ ಇನ್ನೊಬ್ಬರನ್ನು ಹೋಲುವುದಿಲ್ಲ.
ಮಕ್ಕಳು ಹಾಗೂ ಹದಿಹರೆಯದವರು ಸಿಹಿ ಹಾಗೂ ಉಪ್ಪಿನ ಅಂಶಗಳನ್ನು ಇಷ್ಟಪಡುತ್ತಾರೆ. ಆದರೆ, ಕಹಿ
ಆಹಾರ ಬಯಸುವುದಿಲ್ಲ. ವಯಸ್ಸಾ ದಂತೆ
ಕಹಿ ಆಹಾರಗಳ ಕಡೆ ಒಲವು ಹೆಚ್ಚಾಗುತ್ತದೆ ಎಂದು ಹಲವಾರು ಅಧ್ಯಯನಗಳು ತಿಳಿಸಿವೆ.
ಲಾಲಾರಸದಲ್ಲಿ ಕಂಡು ಬರುವ ಕಿಣ್ವಗಳು ಆಹಾರದ ರುಚಿಯ ಮೇಲೆ ಪರಿಣಾಮ ಬೀರುತ್ತವೆ. ಹೂಕೋಸು ಸೇವಿಸುವಾಗ ಲಾಲಾರಸದಲ್ಲಿ ಗಂಧಕ ಬಿಡುಗಡೆಯಾಗುತ್ತದೆ. ಹೆಚ್ಚು ಗಂಧಕ ಬಿಡುಗಡೆಯಾದಷ್ಟೂ ಮಕ್ಕಳು ಹೂಕೋಸು ತಿನ್ನಲು ಇಷ್ಟಪಡುವುದಿಲ್ಲ ಎಂದು ಅಧ್ಯಯನವೊಂದು ತಿಳಿಸಿದೆ.
ವಂಶವಾಹಿ ಹಾಗೂ ಪರಿಸರ ಎರಡೂ ಆಹಾರದ ರುಚಿಯ ಮೇಲೆ ಪರಿಣಾಮ ಬೀರುತ್ತವೆ. ವಂಶವಾಹಿಯು ಆಹಾರದ ಆಯ್ಕೆ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಮಕ್ಕಳು, ಹದಿಹರೆಯದವರು ಹಾಗೂ ವಯಸ್ಕರಲ್ಲಿ ನಡೆಸಲಾದ ಎರಡು ಅಧ್ಯಯನಗಳು ತಿಳಿಸಿವೆ.
ಆದರೆ, ನಮ್ಮ ಸಾಂಸ್ಕೃತಿಕ ಪರಿಸರ ಹಾಗೂ ನಾವು ಸೇವಿಸುವ ಆಹಾರಗಳೂ ನಮ್ಮ ಆದ್ಯತೆಯ ಮೇಲೆ ಪರಿಣಾಮ ಬೀರುತ್ತವೆ. ಹೀಗಾಗಿ ರುಚಿಯನ್ನು ನಮ್ಮ ನಾಲಿಗೆಗೆ ಕಲಿಸಿ ಕೊಡುವ ಮಾರ್ಗವೂ ಇದೆ.
ಜನರು ರುಚಿ ಕಲಿತುಕೊಳ್ಳುವುದಕ್ಕೆ ಕಾಫಿ ಹಾಗೂ ಬಿಯರ್ಗಳು ಉದಾಹರಣೆಯಾಗಿವೆ. ಈ ಎರಡೂ ಆರಂಭಿಕ ಹಂತದಲ್ಲಿ ಇಷ್ಟವಾಗದು. ಆದರೆ, ಹಲವು ದೇಶಗಳಲ್ಲಿ ಹದಿಹರೆಯಕ್ಕೆ ಕಾಲಿಡುತ್ತಿದ್ದಂತೆ ಈ ಪಾನೀಯಗಳ ಸೇವನೆ ಆರಂಭ ವಾಗುತ್ತದೆ. ಇದರ ಜೊತೆಗೆ, ಕಾಫಿಯಲ್ಲಿರುವ ಕೆಫೇನ್ ಹಾಗೂ ಬಿಯರ್ನಲ್ಲಿರುವ ಆಲ್ಕೋಹಾಲ್ ಗಳು ಬೀರುವ ಮಾನಸಿಕ ಪರಿಣಾಮಗಳು ಈ ಪೇಯಗಳು ಇಷ್ಟವಾಗಲು ಕಾರಣವಾಗುತ್ತವೆ.
ಆದರೆ, ಆರೋಗ್ಯಕ್ಕಾಗಿ ನಾವು ಬಯಸುವ ಆಹಾರಗಳು ಈ ರೀತಿಯ ಭಾವನೆಗಳನ್ನು ಮೂಡಿಸಲು ಸಾಧ್ಯವಾಗದೇ ಇರಬಹುದು. ಹಾಗಲಕಾಯಿ ಬಾಯಿ ರುಚಿ ನೀಡದೇ ಇರಬಹುದು.
ಹೀಗಾದಾಗ ರುಚಿ ದಕ್ಕಿಸಿಕೊಳ್ಳಲು ಕೆಲ ಸೂತ್ರಗಳನ್ನು ಅನುಸರಿಸಬೇಕಾಗುತ್ತದೆ :
1. ಮೊದಲ ಸೂತ್ರವೇ ಪದೇ ಪದೇ ಆಹಾರ ಸೇವಿಸುವುದು. ಆರಂಭಿಕ ಹಂತದಲ್ಲಿ ಸ್ವಲ್ಪದರಿಂದಲೇ ಆರಂಭಿಸಬೇಕು. 10-15 ಪ್ರಯತ್ನಗಳ ನಂತರ ರುಚಿ ದಕ್ಕಬಹುದು.
2. ಉಪ್ಪು ಇಲ್ಲವೇ ಸಕ್ಕರೆಯನ್ನು ಇತರೆ ಆಹಾರ ಪದಾರ್ಥದ ಜೊತೆ ಬೆರೆಸಿ ನಿಭಾಯಿಸುವುದು.
3. ಈ ಆಹಾರ ಸೇವಿಸುವಾಗ ಇಷ್ಟಾಗುವ ಆಟ ಇಲ್ಲವೇ ಕಾರ್ಯಕ್ರಮ ನೋಡುವುದು. ಈಗಾಗಲೇ ಇಷ್ಟವಿರುವ ತರಕಾರಿ ಜೊತೆ ಸೇವಿಸುವುದು.
4. ಹಸಿದಾಗಲೇ ಊಟ ಮಾಡಬೇಕು. ಹಸಿದಾಗ ರುಚಿ ಇರದ ಆಹಾರವೂ ಸುಲಭವಾಗಿ ಸೇರುತ್ತದೆ.
5. ಪಥ್ಯ ಇಲ್ಲವೇ ಜೀವನ ಶೈಲಿ ಬದಲಾವಣೆ, ಇಲ್ಲವೇ ಆರೋಗ್ಯದ ಕಾರಣದಿಂದಾಗಿ ಆಹಾರ ಪದ್ಧತಿಯಲ್ಲಿ ಬದಲಾವಣೆ ತರುತ್ತಿರಬಹುದು. ಈ ಬಗ್ಗೆ ಪದೇ ಪದೇ ನೆನಪಿಸಿಕೊಳ್ಳುತ್ತಿರಬೇಕು.
6. ಬಾಲ್ಯದಲ್ಲೇ ಉತ್ತಮ ಆಹಾರ ಪದ್ಧತಿ ರೂಢಿಸಿಕೊಂಡಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚಿನ ಸಮಸ್ಯೆ ಬಾರದು.
ವಿವಿಧ ರೀತಿಯ ಆಹಾರ ಸೇವನೆಯು ಆರೋಗ್ಯಕ್ಕೆ ನೆರವಾಗುತ್ತದೆ. ಕೆಲವೇ ಪದಾರ್ಥಗಳನ್ನು ಇಷ್ಟಪಡುವುದು ವಿಟಮಿನ್ ಹಾಗೂ ಮಿನರಲ್ ಕೊರತೆಗೆ ಕಾರಣವಾಗುತ್ತದೆ. ಹೀಗಾಗಿ ಆಹಾರದ ರುಚಿ ಒಗ್ಗಿಸಿಕೊಳ್ಳುವ ಕಲೆ ಕರಗತ ಮಾಡಿಕೊಳ್ಳುವುದು ಆದ್ಯತೆಯಾಗಬೇಕು.
– ಎಸ್.ಎ. ಶ್ರೀನಿವಾಸ್