ಪ್ರೇಮಿಗಳ ದಿನ…ಸೈನಿಕನದೊಂದು ಸಂದೇಶ…

ಪ್ರೇಮಿಗಳ ದಿನ…ಸೈನಿಕನದೊಂದು ಸಂದೇಶ…

ತಮ್ಮ ಉಸಿರನ್ನು ಪಣಕ್ಕಿಟ್ಟು ರಣರಂಗದಲ್ಲಿ ಕೆಚ್ಚದೆಯಿಂದ ಹೋರಾಡುವ ಯೋಧರು ನಮ್ಮ ಸುಖ ನಿದ್ರೆಯ ನೆಮ್ಮದಿಗೆ ಕಾರಣಕರ್ತರು…

ದಿನಗಳು ಕಳೆಯುತ್ತಿವೆ… ಮಾಸಗಳು ಉರುಳುತ್ತಿವೆ… ವರ್ಷಗಳು ಮಾಯವಾಗುತ್ತಿವೆ. ಫೆ. 14 ಕಪ್ಪು ದಿನ ಮೌನವಾಗಿ ಉಳಿದಿದೆ. ಇಂದು ಪ್ರೇಮಿಗಳ ದಿನವೇ?…, ಅಲ್ಲಾ, 40 ಕುಟುಂಬಗಳ ಪ್ರೇಮಾಘಾತವಾದ ದಿನ. ಫೆ. 07 ಗುಲಾಬಿ ದಿನದಂದು ಪ್ರೇಮಿಗಳಿಗೆ ಗುಲಾಬಿ ಕೊಡುವ ಬದಲು ಹುತಾತ್ಮರಾದ ಸೈನಿಕರಿಗೆ ಸಲ್ಲಿಸಿ, ಅದು ಅವರ ಕೊರಳಿಗೆ ಹಾರವಾಗಿ ಬದಲಾಯಿತು… ಫೆ. 08 ಪ್ರೊಪೋಸ್ ದಿನದಂದು ಐ ಲವ್‌ ಯು ಎಂದು ಹೇಳುವ ಬದಲು ಹುತಾತ್ಮರಾದ ಯೋಧರಿಗೆ `ಜೈ ಹಿಂದ್’ ಎಂದು ಹೇಳಿದರೆ ಆ ಯೋಧರ ಆತ್ಮಕ್ಕೆ ಶಾಂತಿ ಸಿಕ್ಕಿತು.

ಫೆ. 09 ಚಾಕಲೇಟಿನ ದಿನದಂದು ಬಾಯಿ ಸಿಹಿ ಮಾಡಿಕೊಳ್ಳುವ ಮೊದಲು ಆ ವೀರಯೋಧರ ಕುಟುಂಬದ ಪರಿಸ್ಥಿತಿಯನ್ನು ಯೋಚಿಸಿ… ಫೆ. 10 ಗೊಂಬೆಯ (Teddy Day) ದಿನವನ್ನು ಆಚರಿಸುವ ಮೊದಲು ಗೊಂಬೆಯಂತಹ ತನ್ನ ಮಕ್ಕಳನ್ನು ಲೆಕ್ಕಿಸದೆ ದೇಶದ ರಕ್ಷಣೆಗೆ ಪ್ರಾಣ ತೆತ್ತ ವೀರ ಯೋಧನ ಸಾಹಸ ನೆನೆದರೆ ನೀವೇ ಸೈನಿಕನಾಗಬೇಕೆಂಬ ಛಲ ಉದ್ಭವಿಸುವುದು. ಫೆ. 11 ವಚನ (Promise) ದಿನದಂದು ಪ್ರೀತಿ, ಪ್ರೇಮಗಳ ವಚನ ಸ್ವೀಕರಿಸುವುದಕ್ಕಿಂತ ಒಬ್ಬ ಭಾರತೀಯ ಯೋಧನಾಗಿ ಎಂತಹ ಸಂಕಷ್ಟದಲ್ಲೂ ದೇಶಕ್ಕಾಗಿ ನಾನು ಪ್ರಾಣ ಕೊಡಲು ಸಿದ್ದನಾಗಿ ರುತ್ತೇನೆ ಎಂದು ಭರವಸೆದಾಯಕ ವಚನ ನೀಡುವ ಆ ಯೋಧನ ವಚನ ಸರ್ವಶ್ರೇಷ್ಠವಾದದ್ದೆಂದು ಮನದಟ್ಟು ಮಾಡಿಕೊಳ್ಳಿ.

ಫೆ. 12 ತಬ್ಬಿಕೊಂಡು ಮುದ್ದಾಡುವ ಪ್ರೇಮಿಗಳೇ ಒಮ್ಮೆ ವೀರ ಮರಣ ಹೊಂದಿದ ಸೈನಿಕನನ್ನು ತಬ್ಬಿ ರೋಧಿಸುತ್ತಿರುವ ಅವರ ಕುಟುಂಬದ ನೋವನ್ನು ಅರಿಯಿರಿ… ತಬ್ಬಿದ ಎರಡು ಹೃದಯಗಳ ಕುಗ್ಗಿ ಸಿಡಿಮದ್ದಿನಂತೆ ಸ್ಫೋಟಗೊಳ್ಳುವುದು. ಫೆ. 13 ಮುತ್ತಿನ ದಿನವೆಂದು ನೀವು ಭಾವಿಸಿದರೆ ತಪ್ಪು. ಆತಂಕವಾದಿಗಳು ನಮ್ಮ ಯೋಧರ ಮೇಲೆ ಮುತ್ತಿಗೆ ಹಾಕಿದ ದಿನ. ಫೆ .14 ಪ್ರೇಮಿಗಳ ದಿನವೆಂದು ನೀವು ತಿಳಿದರೆ ಅಂದು ತಮ್ಮ ಪ್ರಾಣಕ್ಕಿಂತ ಹೆಚ್ಚು ದೇಶ ಪ್ರೇಮವನ್ನೊಳಗೊಂಡ ಯೋಧರು ಹುತಾತ್ಮರಾದ ದಿನ. ಜಗತ್ತಿನಲ್ಲಿ ತಂದೆ, ತಾಯಿಯ ಪ್ರೇಮಕ್ಕಿಂತಲೂ ಶ್ರೇಷ್ಠವಾದ ಪ್ರೇಮ ಇನ್ನೊಂದಿಲ್ಲ ಎಂದು ಭಾವಿಸಿದರೆ ದೇಶಪ್ರೇಮ ಅದಕ್ಕೂ ಮಿಗಿಲಾದದ್ದು.

ಒಬ್ಬ ತಾಯಿ ತನ್ನ ಮಕ್ಕಳನ್ನು ಒಂಬತ್ತು ತಿಂಗಳು ಸಲಹಿದರೆ ಜೀವನ ಪರ್ಯಂತ ನಮ್ಮೆಲ್ಲರನ್ನೂ ಸಲಹಿ ಸಾಕುತ್ತಿರುವವಳು ಭಾರತಾಂಬೆ, ದೇಶದ ರಕ್ಷಣೆ ನಮ್ಮೆಲ್ಲರ ಹೊಣೆ. ಸ್ನೇಹಿತರೇ ಪ್ರೇಮಿಗಳ ದಿನವನ್ನು ಆಚರಿಸಲು ನಾವು ಗಳಿಸಿದ್ದು ಪ್ರೀತಿಯನ್ನಲ್ಲ, ಸಾವು ನೋವುಗಳು, ಯುವಕ – ಯುವತಿಯರೇ ಪ್ರೇಮಿಗಳ ದಿನದಂದು ದೇಶಪ್ರೇಮ ಹೆಚ್ಚಬೇಕೇ ವಿನಃ ನಮ್ಮಲ್ಲಿರುವ ಕಾಮ, ಕ್ರೋಧ, ಮೋಹವಲ್ಲ. ಪ್ರೇಮಿಗಳ ಪ್ರೇಮ ಸಾಯು ವವರೆಗೆ ಆದರೆ ದೇಶಪ್ರೇಮ ಹುತಾತ್ಮನಾದರೂ ಅನೇಕ ಜನ ಮನಗಳಲ್ಲಿ ಹಸಿರಲ್ಲಿ ಉಸಿರಾಗಿ ರಾರಾಜಿಸುತ್ತದೆ. 

– ವೀರಭದ್ರ ಸ್ವಾಮಿ ಕೆ. ವಿ.

(ಭಾರತೀಯ ನೌಕಾಪಡೆ) ಕಮ್ಯುನಿಕೇಟರ್

error: Content is protected !!