78ರ ಸಂಭ್ರಮದಲ್ಲಿ ಅಥಣಿ ಎಸ್. ವೀರಣ್ಣ

78ರ ಸಂಭ್ರಮದಲ್ಲಿ ಅಥಣಿ ಎಸ್. ವೀರಣ್ಣ

ದಾವಣಗೆರೆಯ ಪ್ರಮುಖರಲ್ಲೊಬ್ಬರೂ,  ವೀರಶೈವ ಲಿಂಗಾಯತ ಸಮಾಜದ ಹಿರಿಯ ಮುಖಂಡರೂ, ಲೆಕ್ಕ ಪರಿಶೋಧಕರೂ, ಕೈಗಾರಿಕೋದ್ಯಮಿಗಳೂ ಆದ ಡಾ. ಅಥಣಿ  ವೀರಣ್ಣ ಅವರಿಗೀಗ 78ನೇ ವರ್ಷದ ಸಂಭ್ರಮ.

ಜೀವನ ಸುಮಧುರವಾಗಿರಬೇಕು, ಸಾತ್ವಿಕ ವಾಗಿ ರಬೇಕು, ಕ್ರಿಯಾಶಾಲಿತ್ವದಿಂದ ಕೂಡಿರ ಬೇಕು, ಜೊತೆಗೆ ಸದಾ ಹುಡುಕಾಟವಿರಬೇಕು, ಹುಡುಕಾಟದಲ್ಲಿ ವಿಶೇಷತೆಯ ಗುರಿ ಇರಬೇಕು, ತಲುಪಿದ ಗುರಿ ನಾಲ್ಕು ಜನರಿಗೆ ಉಪಯುಕ್ತ ಮಾದರಿಯಾಗಿರಬೇಕು, ಬದುಕಲು ಒಂದು ವೃತ್ತಿ ಇರಬೇಕು, ಬದುಕಿನ ವಿಕಾಸಕ್ಕೆ ಏನಾದರೂ ಒಳ್ಳೆಯ ಪ್ರವೃತ್ತಿ ಇರಬೇಕು, ವೃತ್ತಿ-ಪ್ರವೃತ್ತಿಗಳನ್ನು ಸಮನ್ವಯಗೊಳಿಸಿಕೊಂಡರೆ ಬದುಕು ಬಂಗಾರವಾಗುತ್ತದೆ, ಹೀಗೆ ತಮ್ಮ ಬದುಕನ್ನು ಸಮನ್ವಯಗೊಳಿಸಿಕೊಂಡಿದ್ದಾರೆ. 

ವಿವಿಧ ಕ್ಷೇತ್ರಕ್ಕೆ ಒಳ್ಳೆಯ ಕೆಲಸ ಕಾರ್ಯಗ ಳನ್ನು ಮಾಡುತ್ತಿದ್ದಾರೆ. ಸದಾ ಏನಾದರೂ ನೂತನ-ನವ ಚೇತನ ಕೆಲಸಗಳನ್ನು ಮಾಡುತ್ತಲೇ ಇರುತ್ತಾರೆ. ಆದರೆ ಯಾವುದೇ ಅಬ್ಬರದ ಆಮಿಷಕ್ಕೆ ಒಳಗಾಗದೆ, ಪ್ರಚಾರ ಪ್ರಿಯತೆಯಿಂದ ದೂರವಿದ್ದು ತಮ್ಮಷ್ಟಕ್ಕೆ ತಾವು ಸ್ಥಿತಪ್ರಜ್ಞತೆಯ ಮನೋಭಾವನೆಯಿಂದ ಒಂದು ಸಣ್ಣ ಮುಗುಳು ನಗೆಯಿಂದ ಸರಳ ವ್ಯಕ್ತಿಯಾಗಿ ಬಿಡುತ್ತಾರೆ. ಇವರ ಯಶಸ್ಸಿನ ಹಿಂದೆ ಶ್ರೀಮತಿ ಶೀಲಾ ವೀರಣ್ಣ ಅಥಣಿ ಅವರ ಪರಿಶ್ರಮ ಅಪಾರವಾದದ್ದು. 

ದಾವಣಗೆರೆಯ ನಾಗರಿಕ ಬದುಕಿನ ಕಾರ್ಯಕ್ಷೇತ್ರಗಳಲ್ಲಿ ತಮ್ಮನ್ನು ಸಮರ್ಪಣಾ ಭಾವದಿಂದ ಅರ್ಪಿಸಿಕೊಂಡು, ದುಡಿಯುತ್ತಿರುವ ಪ್ರಮುಖ ಮಹಾನ್ ವ್ಯಕ್ತಿಗಳ ಸಾಲಿನಲ್ಲಿ ಅಥಣಿ  ವೀರಣ್ಣ ಅವರು ಒಬ್ಬರಾಗಿ ದ್ದಾರೆ. ಅವರು ಎಲ್ಲರಿಗೂ ಪರಿಚಿ ತರು, ಅವರೊಂದು ವಿಶಾಲವಾದ ಆಲದ ಮರ, ಸಾವಿರಾರು ಜನರ ಬಾಳಿಗೆ ಬೆಳಕಾಗಿ ಮಾನವೀಯತೆಯಿಂದ ಸೇವೆ ಸಲ್ಲಿಸುವ ಹಾಗೂ ಎಲ್ಲಾ ಕ್ಷೇತ್ರಗಳಲ್ಲಿ ಅನುಭವ ಪಡೆದಿದ್ದಾರೆ. ಸರಳ ಸಜ್ಜನಿಕೆಗೆ ಹೆಸರಾದ ಇವರು ಎಲ್ಲರ ಜೊತೆಯಲ್ಲೂ ಸ್ನೇಹ, ಅಭಿಮಾನ ಹೊಂದಿರುವವರು, `ಸೋಲು ಗೆಲುವಿಗೆ ನಾಂದಿ’ ಎಂದು ಎಲ್ಲರಲ್ಲೂ ಚೈತನ್ಯ ತುಂಬುತ್ತಾರೆ, ತಮ್ಮ ಬಳಿ ಬಂದು ಕಷ್ಟ ಸುಖಗಳನ್ನು ಹೇಳಿಕೊಂಡವರಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡುತ್ತಾ, ತಮ್ಮ ಕೈಲಾದ ಸಹಾಯ ಮಾಡುತ್ತಾ ಬರುತ್ತಿದ್ದಾರೆ. ನಮ್ಮವರು ಎತ್ತರಕ್ಕೆ ಬೆಳೆಯಬೇಕು, ಉನ್ನತ ಸ್ಥಾನ ಪಡೆಯಬೇಕು ಎಂದು ಬಯಸುತ್ತಾರೆ.

ಬಹುಮುಖ ಪ್ರತಿಭೆಯ ವೀರಣ್ಣನವರು ಪ್ರಖ್ಯಾತ ಲೆಕ್ಕಪರಿಶೋಧಕರಾಗಿದ್ದು, ಪ್ರವೃತ್ತಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಮಾಜ ಸೇವಕರಾಗಿದ್ದು, ಧಾರ್ಮಿಕ ಕ್ಷೇತ್ರದಲ್ಲೂ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಗುಡ್ಡಾಪುರ ಶ್ರೀ ದಾನಮ್ಮ ದೇವಿಯ ಪರಮ ಭಕ್ತರು. ನಗರದ ಶ್ರೀ ಗುರು ಬಕೇಶ್ವರ ಸ್ವಾಮಿಯ, ದುರ್ಗಾ ಮಾತೆಯ ಭಕ್ತರು, ಶ್ರೀ ವೀರಭದ್ರೇಶ್ವರನಲ್ಲಿ ಅಪಾರ ಭಕ್ತಿ ಹೊಂದಿದ್ದು ವಾರಕ್ಕೊಮ್ಮೆಯಾದರೂ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡುತ್ತ ಆಗಾಗ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುತ್ತಾ ಧಾರ್ಮಿಕ ಶ್ರದ್ಧೆಯುಳ್ಳವರಾಗಿದ್ದಾರೆ. ಇವರ ಧಾರ್ಮಿಕ ಪ್ರತಿಭೆಗೆ ದಾರಿದೀಪವಾಗಿದ್ದಾರೆ. 

ವಿವಿಧ ದೇಶಗಳನ್ನು ಸುತ್ತಿ ಅಪಾರ ಜ್ಞಾನ ಸಂಪಾದನೆ ಮಾಡಿದ್ದಾರೆ. ಇವರ ಸಾಧನೆಗೆ `ಗೌರವ ಡಾಕ್ಟರೇಟ್’ ಪದವಿ, `ವಾಣಿಜ್ಯ ರತ್ನ’ ಪ್ರಶಸ್ತಿ ಪುರಸ್ಕಾರ, `ವೀರಶೈವ ಸಿರಿ’ ಪ್ರಶಸ್ತಿ ಹೀಗೆ ಹತ್ತಾರು ಉನ್ನತ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. 

ಅಥಣಿ ವೀರಣ್ಣ ಕುರಿತು ಎಂ.ಕೆ.ಬಕ್ಕಪ್ಪ ಅವರು ರಚಿಸಿರುವ ಅಥಣಿ ವೀರಣ್ಣನವರ ಜೀವನದ ಯಶೋಗಾಥೆ `ಹಸನ್ಮುಖಿ’ ಎಂಬ ಕೃತಿ ಪ್ರಕಟಿಸಿರುವುದು ದಾವಣಗೆರೆಯ ಸಾಹಿತ್ಯ ವಲಯದಲ್ಲಿ ಒಂದು ವಿಶೇಷ ಪ್ರಯೋಗ. ಈ ಕೃತಿ ಯುವ ಜನತೆಗೆ, ಸಮಾಜಕ್ಕಾಗಿ ದುಡಿಯುವ ಮಹನೀಯರಿಗೆ ತ್ಯಾಗ, ಕರ್ತವ್ಯ, ಪರತೆಗಳಿಗೆ ಸಾಕ್ಷಿಯಾಗಿ, ಭವಿಷ್ಯತ್ತಿನಲ್ಲಿ ಮಾತನಾಡುವ ಮೈಲಿಗಲ್ಲುಗಳಾಗುತ್ತವೆ. ಈ ಕೃತಿಯನ್ನು ಕೂಡ ಎಲ್ಲಿ ಪ್ರಚಾರ ಮಾಡದೇ ಸಾರ್ವಜನಿಕವಾಗಿ ಬಿಡುಗಡೆಗೊಳಿಸದೇ ಪ್ರಚಾರದಿಂದ ಬಹು ದೂರವಿದ್ದು, ನಿರ್ಲಿಪ್ತ ಸ್ವಭಾವ ಹಾಗೂ ತೂಕಬದ್ಧ ವ್ಯಕ್ತಿತ್ವ ರೂಢಿಸಿಕೊಂಡಿದ್ದಾರೆ. 

ವೃತ್ತಿ ಜೀವನ, ಕೌಟುಂಬಿಕ ಜೀವನ, ಧಾರ್ಮಿಕ ಜೀವನ ಹಾಗೂ ಸಾಮಾಜಿಕ ಜೀವನ ಎಲ್ಲದರಲ್ಲಿಯೂ ಸಂತೃಪ್ತಿ ಜೀವನ ಅಥಣಿ ವೀರಣ್ಣ ಅವರದು, ಅಲ್ಲದೇ ಶೈಕ್ಷಣಿಕ, ಕೈಗಾರಿಕಾ ಕ್ಷೇತ್ರಗಳಲ್ಲೂ ಅವರು ಸಲ್ಲಿಸುತ್ತಿರುವ ಸೇವೆ ಅನುಪಮವಾದದ್ದು. 


ಜೆಂಬಿಗಿ ಮೃತ್ಯುಂಜಯ, ಕನ್ನಡ ಉಪನ್ಯಾಸಕರು, ದಾವಣಗೆರೆ.

error: Content is protected !!