68ರ ಸಂಭ್ರಮದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳು

68ರ ಸಂಭ್ರಮದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳು

ಭಾರತದಲ್ಲಿ ಮಹಾಪುರುಷ  ರೆನಿಸಿಕೊಂಡವರು ಅವರ ಜೀವನಶೈಲಿ ನುಡಿದ ಧರ್ಮಬೋಧನೆಗಳು ಆದರ್ಶಪ್ರಾಯ ಹಾಗೂ ಪ್ರಸ್ತುತವಾಗಿವೆ. ನಾವು ಧೃತಿಗೆಟ್ಟಾಗ, ಸಂಕಷ್ಟದಲ್ಲಿರುವಾಗ ಆ ಮಹಾಪುರುಷರ ತತ್ವಗಳೇ ನಮಗೆ ದಾರಿದೀಪವಾಗಿ ಆದರ್ಶ ಜೀವನ ನಡೆಸಲು ಮಹಾಪುರುಷರು ಮಹಾಗುರುಗಳಾಗಿ ನಮಗೆ ಗೋಚರಿಸುತ್ತಾರೆ. ಇಂತಹ ಪವಿತ್ರ ಸಾಲಿನಲ್ಲಿ ರಾಷ್ಟ್ರೀಯ ಗುರುಪೀಠವಾಗಿ ಪಂಚಪೀಠಗಳಲ್ಲೊಂದಾದ ಬಾಳೇ ಹೊನ್ನೂರು ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನಾ ಮಹಾಪೀಠವು ಅಸಂಖ್ಶಾತ ಮಹಿಮಾನ್ವಿತರನ್ನು ಶಿವಯೋ ಗಿಗಳನ್ನು, ಮಹಾತಪಸ್ವಿಗಳನ್ನು, ಪರಮಾಚಾ ರ್ಯರನ್ನು ಪಡೆದ ಪುಣ್ಯಭೂಮಿಯಾಗಿ ಸೃಷ್ಟಿ ಸೌಂದರ್ಯದ ಮಡಿಲು ಮಲಯಾಚಲ ತಪೋಭೂಮಿಯಾಗಿ ಅಧ್ಯಾತ್ಮಿಕ ಕೇಂದ್ರವಾಗಿ ನೆಲೆ ನಿಂತಿದೆ.

ಪ್ರಸ್ತುತ ಶ್ರೀ ರಂಭಾಪುರಿ ಮಹಾಪೀಠದ ಒಡೆಯರಾದ ಶ್ರೀ ಡಾ.ವೀರಸೋಮೇಶ್ವರ ಜಗದ್ಗುರುಗಳು ಕ್ರಿಯಾಶೀಲ ಶ್ರೇಷ್ಠ ಧಾರ್ಮಿಕ ಮಹಾಪುರುಷರಾಗಿದ್ದಾರೆ. 

ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಹಳ್ಯಾಳ ಗ್ರಾಮದ ಪ್ರಸಿದ್ಧ ಹಿರೇಮಠದ ವೇ. ಚನ್ನಬಸವಾರ್ಯರು ಮತ್ತು ಸೌಭಾಗ್ಯವತಿ ಶ್ರೀಮತಿ ಚನ್ನಬಸವಾಂಬೆಯರ ಪುಣ್ಯಗರ್ಭದಲ್ಲಿ ದಿನಾಂಕ  07-01-1956 ರಲ್ಲಿ ಜನಿಸಿದರು.

ಪ್ರಾಥಮಿಕ ಶಿಕ್ಷಣ ಹಳ್ಯಾಳದಲ್ಲಿ ಮಾಧ್ಶಮಿಕ ಶಿಕ್ಷಣ ಗದಗ ನಗರದಲ್ಲಿ ಹಾಗೂ ಉನ್ನತ ಶಿಕ್ಷಣ ರಾಜಧಾನಿ ಬೆಂಗಳೂರಿನಲ್ಲಿ ಪೂರೈಸಿದರು.

ತಮ್ಮ 20ನೇ ವಯಸ್ಸಿನಲ್ಲೇ 1976ರಲ್ಲಿ ಹಳ್ಳಿಯಾಳ ಹಳೇಹುಬ್ಬಳ್ಳಿ ಪಂಚಗೃಹ ಹಿರೇಮಠದ ಪಟ್ಟಧ್ಯಕ್ಷರಾಗಿ ನಂತರ 1985 ರಲ್ಲಿ ಇತಿಹಾಸ ಪ್ರಸಿದ್ಧ ಶಿವಗಂಗಾ ಕ್ಷೇತ್ರದ ಮೇಲಣ ಗವಿಮಠದ ಪಟ್ಟಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ಶಿವಪೂಜಾ ದುರಂಧರ ಲಿಂ. ಶ್ರೀ ವೀರಗಂಗಾಧರ ಜಗದ್ಗುರುಗಳವರ ಮತ್ತು ಚತುರ್ಭಾಷಾ ವಿಶಾರದ ಲಿಂ. ಶ್ರೀ ವೀರರುದ್ರಮುನಿ ಜಗದ್ಗುರುಗಳವರ ಅಂತರಂಗದ ಅನುಗ್ರಹಕ್ಕೆ ಪಾತ್ರರಾಗಿ, ಆದಿ ಜಗದ್ಗುರು ಶ್ರೀ ರೇಣುಕಾಚಾರ್ಯರು ಪ್ರಾದುರ್ಭಸಿದ ಕೊಲ್ಲಿಪಾಕಿ ಶ್ರೀ ಸೋಮೇಶ್ವರ ಮಹಾಲಿಂಗದ ಮೂಲ ನಾಮಾಂಕಿತವನ್ನು ಹೊಂದುವ ಮೂಲಕ ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳವರು ಶ್ರೀ ಪೀಠದ 121ನೇ ಜಗದ್ಗುರುಗಳಾಗಿ ಪೀಠಾರೋಹಣ ಹೊಂದುವ ಮೂಲಕ ಸಂಕ್ರಾಂತಿಯನ್ನೇ ಮಾಡಿದ್ದಾರೆ.

ಪರಮಪೂಜ್ಯರು ಪೀಠಾರೋಹಣ ಹೊಂದಿದ ಪ್ರಥಮ ದಿನವೇ ಲೋಕಕಲ್ಯಾಣಕ್ಕಾಗಿ ಯೋಜನಾಷ್ಠಕ ಬಿಡುಗಡೆ ಮಾಡಿ ಸಾಹಿತ್ಯ – ಸಂಸ್ಕೃತಿ ಸಂವರ್ಧಿಸಲಿ | ಶಾಂತಿ – ಸಮೃದ್ಧಿ ಸರ್ವರಿಗಾಗಲೀ ಎಂಬ ಅಮೋಘ ಸಂದೇಶವನ್ನು ನಾಡಿಗೆ ನೀಡಿದ ದಿವ್ಯಾತ್ಮರಾಗಿದ್ದಾರೆ. ಪೂಜ್ಯರು ಬರೀ ಮಾತನಾಡುವವರಲ್ಲ ಕೃತಿಯಲ್ಲಿ ಮಾಡಿತೋರಿಸುವ ಛಲದಂಕ ಮಲ್ಲರೆಂಬುದನ್ನು ತೋರಿಸಿ ಇತಿಹಾಸ ನಿರ್ಮಿಸಿದ್ದಾರೆ. ಅವರ ಯೋಜನೆಗಳ ಸಂಕಲ್ಪಗಳು ಕಾಮಧೇನು ಕಲ್ಪವೃಕ್ಷವಿದ್ದಂತೆ. ಶ್ರೀ ಪೀಠದ ಸರ್ವಾಂಗೀಣ ಅಭಿವೃದ್ಧಿಯ ಜೊತೆಗೆ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯ, ಸಂಗೀತ, ಕಲೆ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಅದ್ವಿತೀಯ ಅಭೂತ ಪೂರ್ವ ಸಾಧನೆ ಮಾಡುವ ಮೂಲಕ ಸುವರ್ಣಾಕ್ಷರಗಳಲ್ಲಿ ದಾಖಲಿಸುವಂತೆ ಸಾಧನೆಯ ಸಹ್ಯಾದ್ರಿಯಾಗಿ ವಿಜೃಂಭಿಸಿದ್ದಾರೆ. ಪೂಜ್ಯರ ಮಹಾಕರ್ತೃತ್ವ ಶಕ್ತಿಯಿಂದ ಶ್ರೀಪೀಠವು ಜ್ಞಾನ ಗಂಗೋತ್ರಿಯಾಗಿ ಆಕರ್ಷಕ ಪ್ರವಾಸಿತಾಣವಾಗಿ, ಬೃಹದಾಕಾರವಾಗಿ ಬೆಳೆದು ಪೂರ್ವಾಚಾರ್ಯರ ಶೇಷ ಕನಸುಗಳನ್ನು ನನಸು ಮಾಡುವ ಮೂಲಕ ಶ್ರೀಮಂತಗೊಳಿಸಿ, ಶ್ರೀಪೀಠಕ್ಕೆ ಆಧುನಿಕ ಸ್ಪರ್ಶ ನೀಡಿದ್ದಾರೆ.

ಶ್ರೀಪೀಠದ ಪರಿಸರದಲ್ಲಿ ಹಾಗೂ ನಾಡಿನಾದ್ಯಾಂತ ಅರ್ಥಪೂರ್ಣ ರಚನಾತ್ಮಕ ಮಹತ್ತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಜೊತೆಗೆ ತೆಲಂಗಾಣ ರಾಜ್ಯದ ಕೊಲ್ಲಿಪಾಕಿಯಲ್ಲಿ ಪರಶಿವನ ಸದ್ಯೋಜಾತ ಮುಖಸಂಜಾತ ಶ್ರೀ ಸೋಮೇಶ್ವರ ಮಹಾಲಿಂಗದಿಂದ ಅವತರಿಸಿದ ಆದಿಜಗದ್ಗುರು ಶ್ರೀ ರೇಣುಕಾಚಾರ್ಯರ ಮೂಲ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಹಲವು ವರ್ಷಗಳಿಂದ ತಮ್ಮ ಜನ್ಮ ದಿನವನ್ನು ಆಚರಿಸಿಕೊಳ್ಳುವ ಮೂಲಕ ಶ್ರೀಕ್ಷೇತ್ರದ ಸರ್ವಾಂಗೀಣ ಪ್ರಗತಿಗೆ ಸದ್ಭಕ್ತರ ಸಹಕಾರದಿಂದ ಅವಿರತ ಶ್ರಮಿಸುತ್ತಿದ್ದಾರೆ. 

ಬಾಳೇಹೊನ್ನೂರು ಶ್ರೀಪೀಠದ ಪರಿಸರದಲ್ಲೂ ಕೂಡಾ 51 ಅಡಿ ಎತ್ತರದ ಆದಿಜಗದ್ಗುರು ಶ್ರೀ ರೇಣುಕಾಚಾರ್ಯರ ಲಿಂಗೋದ್ಭವ ಶಿಲಾಮೂರ್ತಿಯನ್ನು ಪ್ರತಿಷ್ಠಾಪಿಸುವ ನಿಮಿತ್ತ ಈಗಾಗಲೇ ಭರದಿಂದ ಕಾರ್ಯ ಸಾಗುತ್ತಿರುವುದು ಹರ್ಷದ ಸಂಗತಿಯಾಗಿದೆ. ಪ್ರತಿನಿತ್ಶವೂ ಲೋಕಕಲ್ಯಾಣ ಹಾಗೂ ವಿಶ್ವಶಾಂತಿಗಾಗಿ ಇಷ್ಠಲಿಂಗ ಮಹಾಪೂಜೆ ನೆರವೇರಿಸುವ ಮೂಲಕ ಬಂದ ಭಕ್ತಾದಿಗಳ ಸಕಲ ಸಂಕಷ್ಠಗಳ ಪರಿಹಾರಕ್ಕೆ ಪ್ರಾಂಜಲ ಮನಸ್ಸಿನಿಂದ ಸ್ಪಂದಿಸಿ, ಮಾತೃ ವಾತ್ಸಲ್ಶ ಕರುಣಿಸುತ್ತಿದ್ದಾರೆ. ಸದಾ ಹಸನ್ಮುಖಿಯಾಗಿ ಪ್ರಸನ್ನಮುಖಿಯಾಗಿ ಸಭೆ ಸಮಾರಂಭಗಳಲ್ಲಿ ಗಾಂಭೀರ್ಯವದನರಾಗಿ ವೈರಾಗ್ಯ ಮತ್ತು ವೈಭವಕ್ಕೂ ಹೆಸರಾದ ಶ್ರೀ ಪೀಠಕ್ಕೆ ಘನತೆ ಗೌರವ ತರುವ ಮೂಲಕ ವೀರಶೈವ ಧರ್ಮದ ಪ್ರಾಚೀನ ಪರಂಪರೆಯನ್ನು ಸಂರಕ್ಷಿಸಲು ಹಗಲಿರುಳೆನ್ನದೇ ಅವಿರತ ಶ್ರಮಿಸುವ ಧರ್ಮಧೂತರಾಗಿದ್ದಾರೆ. 

ತೆಲಂಗಾಣ ರಾಜ್ಯದ ಕೊಲನುಪಾಕ (ಕೊಲ್ಲಿಪಾಕಿ) ಪವಿತ್ರ ತಾಣ ಶ್ರೀ ಜಗದ್ಗುರು ರೇಣುಕಾಚಾರ್ಯರು ಆವಿರ್ಭವಿಸಿದ ಶ್ರೀ ಚಂಡಿಕಾಂಬಾ ಸಮೇತ ಸ್ವಯಂಭೂ ಶ್ರೀ ಸೋಮೇಶ್ವರಸ್ವಾಮಿ ದೇಗುಲದ ಸುಂದರ ಪ್ರಾಂಗಣದಲ್ಲಿ ಶ್ರೀ ಮದ್ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀ   1008 ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ 68ನೇ ಜನ್ಮದಿನೋತ್ಸವವು ದಿನಾಂಕ 7ರ ಭಾನುವಾರ (ಇಂದು) ಶ್ರದ್ಧಾ – ಭಕ್ತಿಯೊಂದಿಗೆ ಜರುಗಲಿದೆ.   


– ಶ್ರೀ ಮಲ್ಲಿಕಾರ್ಜುನಸ್ವಾಮಿ ಕಲ್ಮಠ, `ಆಚಾರ್ಯ ಸೇವಾಸಂಜೀವಿನಿ’, ಪ್ರಶಸ್ತಿ ಪುರಸ್ಕೃತರು, ಚಿರಸ್ತಹಳ್ಳಿ, ಹರಪನಹಳ್ಳಿ ತಾಲ್ಲೂಕು.

error: Content is protected !!