ಸಿರಿಗೆರೆಯ ಟಿ. ನೀಲಾಂಬಿಕೆ ಅವರಿಗೆ ಕದಳಿಶ್ರೀ ಪ್ರಶಸ್ತಿ

ಸಿರಿಗೆರೆಯ ಟಿ. ನೀಲಾಂಬಿಕೆ ಅವರಿಗೆ ಕದಳಿಶ್ರೀ ಪ್ರಶಸ್ತಿ

ದಾವಣಗೆರೆ ಕದಳಿ ಮಹಿಳಾ ವೇದಿಕೆಯು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಂಗ ಸಂಸ್ಥೆಯಾಗಿದ್ದು, ಕಳೆದ 15 ವರ್ಷಗಳಿಂದ ದಾವಣಗೆರೆಯಲ್ಲಿ ವಚನ ಸಾಹಿತ್ಯ, ಶರಣ ಸಂಸ್ಕೃತಿಯ ಅನುಷ್ಠಾನ ಕ್ಕಾಗಿ ವೈವಿಧ್ಯಮಯ ಕಾರ್ಯಕ್ರಮ ಗಳನ್ನು, ದತ್ತಿ ಉಪನ್ಯಾಸಗಳನ್ನು ವಚನಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ವೇದಿಕೆಯು ಪ್ರತಿ ವರ್ಷ ಸಮಾಜದ ಓರ್ವ ಅಪೂರ್ವ ಸಾಧಕಿಯನ್ನು ಗುರುತಿಸಿ `ಕದಳಿ’ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಾ ಬಂದಿದೆ.

ಅನ್‌ಮೋಲ್ ವಿದ್ಯಾಸಂಸ್ಥೆಯ ಸಂಸ್ಥಾಪಕರಾದ ಯಶಾ ದಿನೇಶ್ ಹಾಗೂ ದಿನೇಶ್ ಸಿ. ಜಿ. ದಂಪತಿಗಳು ಈ ದತ್ತಿಯ ಸ್ಥಾಪಕರಾಗಿದ್ದಾರೆ. ಯಶಾರವರು ತಮ್ಮ ತಂದೆ ಪ್ರೊ. ಬಿ. ಕೆ. ಸಿದ್ದಪ್ಪ ಬಾಡ ಮತ್ತು ತಾಯಿ ಸಾವಿತ್ರಮ್ಮ ಸಿದ್ದಪ್ಪ ದಂಪತಿ ಹೆಸರಿನಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನಲ್ಲಿ ಒಂದು ಲಕ್ಷ ರೂ.ಗಳ `ಕದಳಿಶ್ರೀ’ ಪ್ರಶಸ್ತಿಯ ಶರಣ ದತ್ತಿಯನ್ನು ಸ್ಥಾಪಿಸಿದ್ದಾರೆ.

ಈ ಬಾರಿ `ಕದಳಿ’ ಪ್ರಶಸ್ತಿಗೆ ಸಿರಿಗೆರೆಯ ಎಂ.ಬಿ.ಆರ್. ಕಾಲೇಜಿನ ನಿವೃತ್ತ ಪ್ರಾಚಾರ್ಯರೂ, ಗಾಯಕರೂ, ವಾಗ್ಮಿಗಳೂ,  ಕರ್ನಾಟಕ ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರೂ ಆದ ಪ್ರೊ|| ಟಿ. ನೀಲಾಂಬಿಕೆ ಅವರು ಭಾಜನರಾಗಿದ್ದಾರೆ. ಇವರು   ಟಿ. ಈಶ್ವರಯ್ಯ ಹಾಗೂ ಗಂಗಮ್ಮ ದಂಪತಿ ಪುತ್ರಿ, 1953 ಫೆಬ್ರವರಿ 13 ರಂದು ಶಿವಮೊಗ್ಗ ಜಿಲ್ಲೆಯ ಸೂಗೂರಿನಲ್ಲಿ ಜನಿಸಿದರು. ಇವರು ಸೂಗೂರಿನಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣವನ್ನು ಪೂರೈಸಿ, ಸಿರಿಗೆರೆಯಲ್ಲಿ ಪ್ರೌಢಶಾಲೆ, ಪಿಯುಸಿ ಮುಗಿಸಿ, ಬಿ.ಎ. ಪದವಿಯನ್ನು ಪಡೆದಿರುತ್ತಾರೆ.

ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ವೀಣಾ ಪಾಂಡಿತ್ಯವನ್ನು ಪಡೆದಿದ್ದಾರೆ. ಸಿರಿಗೆರೆಯ ಎಂ.ಬಿ.ಆರ್. ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಪ್ರಾಚಾರ್ಯರಾಗಿ ನಿವೃತ್ತರಾಗಿದ್ದಾರೆ. ಕುವೆಂಪು ವಿಶ್ವವಿದ್ಯಾಲಯದ ಪರೀಕ್ಷಾ ಮಂಡಳಿಯ ಸದಸ್ಯರಾಗಿ, ಕನ್ನಡ ಅಧ್ಯಾಪಕರ ವೇದಿಕೆಯ ಉಪಾಧ್ಯಕ್ಷರಾಗಿ, ದಾವಣಗೆರೆ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಮಂಡಳಿಯ ಸದಸ್ಯರಾಗಿದ್ದರು. ಇವರು ಕದಳಿ ಮಹಿಳಾ ವೇದಿಕೆಯ ಸಲಹಾ ಸಮಿತಿಯ ಸದಸ್ಯರಾಗಿದ್ದಾರೆ. 

ಇವರು ಚಿಕ್ಕ ವಯಸ್ಸಿನಿಂದಲೇ ರಂಗಾಸಕ್ತಿಯನ್ನು ಬೆಳೆಸಿಕೊಂಡು ಕಲಾಸಂಘದಲ್ಲಿ ಕಲಾವಿದೆಯಾಗಿ ಅಭಿನಯ ಪ್ರಾರಂಭಿಸಿದರು. ಅಭಿನಯ, ಗಾಯನದಲ್ಲಿ ಆಸಕ್ತಿ ಹೊಂದಿದ್ದು, ಅಶೋಕ ಬಾದರದಿನ್ನಿಯವರ ಶಿಬಿರಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಸಿರಿಗೆರೆಯ ತರಳಬಾಳು ಕಲಾ ಸಂಘದಲ್ಲಿ ಸೇವೆ ಸಲ್ಲಿಸಿದ್ದಾರೆ. 

ತರಳಬಾಳು ತ್ರೈಮಾಸಿಕ ಪತ್ರಿಕೆಯ ಸಂಪಾದಕ ಮಂಡಳಿಯ ಲೇಖಕಿ ಮತ್ತು ಸದಸ್ಯೆಯಾಗಿದ್ದರು. ಸಿರಿಗೆರೆಯ ಅಕ್ಕನ ಬಳಗದ ಅಧ್ಯಕ್ಷೆ, ಉಪಾಧ್ಯಕ್ಷೆ, ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ, ಈಗ ಹಾಲಿ ಸದಸ್ಯೆಯಾಗಿದ್ದಾರೆ.

ತರಳಬಾಳು ಕಲಾ ಸಂಘದ ಎಲ್ಲಾ ನಾಟಕಗಳಿಗೂ ಬೇಕಾಗುವ ಸ್ತ್ರೀ ಪಾತ್ರಗಳಿಗೆ ಹಿನ್ನೆಲೆ ಗಾಯಕರನ್ನು ಸಂಘಟಿಸಿ ತರಬೇತಿ ನೀಡುತ್ತಿದ್ದರು. ವಿದ್ಯಾರ್ಥಿಗಳಿಗೆ ರಂಗ ಗೀತೆಗಳನ್ನು ಕಲಿಸಿ, ಕೆಲವು ರೂಪಕಗಳನ್ನು ಸಿದ್ಧಪಡಿಸುತ್ತಿದ್ದರು. ‘ಶೂನ್ಯ ಸಂಪಾದನೆ’ ಕೃತಿಯನ್ನು ರಂಗಕ್ಕೆ ಸ್ವತಃ ಇವರೇ ಪಾತ್ರಗಳನ್ನು ಸಿದ್ಧಗೊಳಿಸಿ ಪ್ರದರ್ಶನ ನೀಡುವಲ್ಲಿ ಅಳವಡಿಸಿ ಯಶಸ್ವಿಯಾಗಿದ್ದಾರೆ.

ಸಿರಿಗೆರೆಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ರಚಿಸಿರುವ ‘ಮರಣವೇ ಮಹಾನವಮಿ’, ‘ವಿಶ್ವಬಂಧು ಮರುಳಸಿದ್ದ, ‘ಶರಣಸತಿ ಲಿಂಗಪತಿ’, ನಾಟಕಗಳಲ್ಲಿ ಪ್ರಧಾನ ಪಾತ್ರ ವಹಿಸಿ, ಹಿನ್ನಲೆ ಗಾಯಕಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಕಂಬಳಿ ನಾಗದೇವ, ಮೃಚ್ಛಕಟಿಕ, ತಲೆದಂಡ, ಉದ್ಭವ, ಜಲಗಾರ, ತಾಮ್ರಪತ್ರ, ಸುಲ್ತಾನ್ ಟಿಪ್ಪು, ಮಹಾಬೆಳಗು ನಾಟಕಗಳಲ್ಲಿಯೂ, ಶರಣ ಸಂಕುಲ ವಚನಾಂಜಲಿ, ಶಿವಸ್ವರದಲ್ಲಿನ ಗೀತ ರೂಪಕದಲ್ಲಿ ಮತ್ತು ಧ್ವನಿಸುರುಳಿಗಳಲ್ಲಿ ಹಾಡಿದ್ದಾರೆ. ಇವರ ಅಭಿನಯದ ‘ಮರಣವೇ ಮಹಾನವಮಿ’ ನಾಟಕ ಹಾಗೂ ಇತರೆ ನಾಟಕಗಳು ದೇಶಾದ್ಯಂತ ಸಾವಿರಕ್ಕೂ ಹೆಚ್ಚು ಪ್ರದರ್ಶನ ಕಂಡಿವೆ. ಧಾರವಾಡ, ಚಿತ್ರದುರ್ಗ ಆಕಾಶವಾಣಿಗಳಲ್ಲಿ ಮರಣವೇ ಮಹಾನವಮಿ ನಾಟಕ ಬಿತ್ತರಗೊಂಡಿದೆ. ಬೆಂಗಳೂರು ಮತ್ತು ಭದ್ರಾವತಿ ಆಕಾಶವಾಣಿಯಲ್ಲಿ ವಚನ ಗಾಯನ,  ಚರ್ಚೆ, ನುಡಿ, ಚಿಂತನ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.

ಪ್ರಶಸ್ತಿಗಳು : 1971ರಲ್ಲಿ ಚಿಕ್ಕಮಗಳೂರಿನಲ್ಲಿ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಲಿಂ. ಶ್ರೀ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರಿಂದ `ವಾಣಿಶ್ರೀ’ ಬಿರುದಾಂಕಿತ ಚಿನ್ನದ ಪದಕ ಪಡೆದಿದ್ದಾರೆ.

2010ರಲ್ಲಿ ರಂಗಭೂಮಿಯ ಸೇವೆಗಾಗಿ ಚಿತ್ರದುರ್ಗ ಜಿಲ್ಲಾಡಳಿತ ನೀಡಿದ ಕನ್ನಡ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ. 2011-12ರಲ್ಲಿ ಕರ್ನಾಟಕ ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ. 2017-18ರಲ್ಲಿ ಕದಳಿ ಮಹಿಳಾ ವೇದಿಕೆ ಇವರಿಂದ ‘ಕಾಯಕಶ್ರೀ’ ಪ್ರಶಸ್ತಿ.

ರಾಜ್ಯಮಟ್ಟದ ಚರ್ಚಾ ಸ್ಪರ್ಧೆ, ವಚನ ಗಾಯನ, ಶಾಸ್ತ್ರೀಯ ಸಂಗೀತ, ಜಾನಪದ ಗೀತೆ, ನಾಟಕಗಳಲ್ಲಿ ಅನೇಕ ಬಹುಮಾನಗಳನ್ನು ಪಡೆದಿರುತ್ತಾರೆ. ಉತ್ತಮ ಲೇಖಕಿಯಾಗಿರುವ ಶರಣೆ ನೀಲಾಂಬಿಕೆಯವರು `ಲಿಂಗವಂತ ಧರ್ಮ ಮತ್ತು ಯುವಕರು’ ಮತ್ತು `ಡೋಹರ ಕಕ್ಕಯ್ಯ’ ಕೃತಿಗಳನ್ನು ರಚಿಸಿದ್ದಾರೆ.

ಹಬ್ಬ-ಹರಿದಿನಗಳು, ತರಳಬಾಳು ತ್ರೈಮಾಸಿಕ, ಸ್ಮರಣ ಸಂಚಿಕೆ, ಜೀವದ ಉಳಿವಿಗಾಗಿ ಅಳಿಲು ಸೇವೆ ಇವುಗಳಲ್ಲಿ ಬಿಡಿ ಲೇಖನಗಳನ್ನು ಬರೆದಿದ್ದಾರೆ. ಇವರ ಎಲ್ಲಾ ಕಾರ್ಯಚಟು ವಟಿಕೆಗಳಿಗೆ ಇವರ ಪತಿ ನಿವೃತ್ತ ಪ್ರಾಚಾರ್ಯರಾದ  ಕುಮಾರಸ್ವಾಮಿ ಅವರು ಬೆಂಬಲ ನೀಡುತ್ತಿದ್ದಾರೆ. ಇವರ ಮಗಳು  ವತ್ಸಲಾ ಉಮೇಶ್ ಬೆಂಗಳೂರಿ ನಲ್ಲಿದ್ದಾರೆ.  ಪುತ್ರ ಗಿರಿನಾಥಾನಂದ ಅವರು ಸನ್ಯಾಸ ದೀಕ್ಷೆ ಪಡೆದು ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸೌಮ್ಯ ಸತೀಶ್‌,

ಸಹ ಕಾರ್ಯದರ್ಶಿ, ಜಿಲ್ಲಾ ಘಟಕ, ಕದಳಿ ಮಹಿಳಾ ವೇದಿಕೆ, ದಾವಣಗೆರೆ.

error: Content is protected !!