ಅಕ್ಷರದೀಪ ಬೆಳಗಿದ ಅಕ್ಕರೆಯ ತಾಯಿ : ಸಾವಿತ್ರಿಬಾಯಿ ಫುಲೆ

ಅಕ್ಷರದೀಪ ಬೆಳಗಿದ ಅಕ್ಕರೆಯ ತಾಯಿ : ಸಾವಿತ್ರಿಬಾಯಿ ಫುಲೆ

(ಸೇವಾ ಮನೋಭಾವದಿಂದ ಸದ್ದಿಲ್ಲದೆ ಕೆಲಸ ಮಾಡಿ ಅರಿವಿನ ಆಗರವಾಗಿ, ಜ್ಞಾನದ ಕಣಜವಾಗಿ, ಸಾಮಾಜಿಕ ಹೋರಾಟಗಾರ್ತಿಯಾಗಿ. ಆಧುನಿಕ ಶಿಕ್ಷಣದ ಮಹಾತಾಯಿಯಾಗಿ, ಭಾರತದ ಮೊಟ್ಟಮೊದಲ ಶಿಕ್ಷಕಿಯಾಗಿ, ಹೆಣ್ಣುಮಕ್ಕಳ ಶಿಕ್ಷಣಕ್ಕೆ ಭದ್ರಬುನಾದಿ ಹಾಕಿದ ಶ್ರೇಷ್ಠ ಸಾಧಕಿ ಸಾವಿತ್ರಿಬಾಯಿ ಫುಲೆಯವರ ಜನ್ಮದಿನ ಜನವರಿ 3 ರಂದು ತನ್ನಿಮಿತ್ಯ ಈ ಲೇಖನ)

ತನ್ನ ನೋಡಲಿ ಎಂದು ಕನ್ನಡಿಯು ಕರೆವುದೆ

ತನ್ನಲ್ಲಿ ಜ್ಞಾನವುದಿಸಿದ ಮಹಾತ್ಮನು 

ಕನ್ನಡಿಯಂತೆ ಸರ್ವಜ್ಞ ||

ಎಂಬ ಕವಿ ನುಡಿಯು ಶಿಕ್ಷಣದ ಮಹತ್ವವನ್ನು ಸಾರುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವ ವಿಕಸನಕ್ಕೆ ಶಿಕ್ಷಣವೆಂಬ ಸಂಸ್ಕಾರ ಅಗತ್ಯ. ಕಲಿಕೆ ಒಂದು ನಿರಂತರ ಪ್ರಕ್ರಿಯೆಯಾಗಿದ್ದು, ಮಾನವ ಗರ್ಭದಿಂದ ಘೋರಿಯವರೆಗೆ ಪ್ರತಿಯೊಂದು ಹಂತದಲ್ಲೂ ಕಲಿಕೆಯಲ್ಲಿ ತೊಡಗಿರುತ್ತಾನೆ. ಈ ಹಿನ್ನೆಲೆಯಲ್ಲಿ ಮಗುವೊಂದು ಹೆಚ್ಚಿನ ಜ್ಞಾನ, ಸಂಸ್ಕಾರ ಪಡೆಯುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಇತಿಹಾಸವನ್ನು ಅವಲೋಕಿಸಿದಾಗ ಸಮಾಜದಲ್ಲಿ ಸಾಕಷ್ಟು ಅಸಮಾನತೆ ಇದ್ದು, ಎಲ್ಲರೂ ಶಿಕ್ಷಣದಿಂದ ವಂಚಿತರಾಗಿದ್ದಾಗ ನಿಸ್ವಾರ್ಥ ಸೇವಾಭಾವದಿಂದ ಎಲ್ಲರಿಗೂ ಶಿಕ್ಷಣ ದೊರಕಿಸುವ ಮುಖೇನ ಸಮ ಸಮಾಜದ ಕನಸು ಕಂಡು, ಅದನ್ನು ಸಾಕಾರ ಗೊಳಿಸಿದ ಅನೇಕ ದಾರ್ಶನಿಕರು ಕಂಡುಬರುತ್ತಾರೆ. ಅತ್ಯುತ್ತಮ ಸಂಸ್ಕೃತಿಯೆಂದು ಇಡೀ ಜಗತ್ತಿನ ಗಮನವನ್ನು ತನ್ನ ಕಡೆಗೆ ಸೆಳೆದ ಭಾರತೀಯ ಭವ್ಯ ಪರಂಪರೆಗೆ ಹೆಣ್ಣಿನ ಪಾತ್ರ ಅಗಾಧವಾಗಿದೆ.

ಮನೆಯೆ ಮೊದಲ ಪಾಠಶಾಲೆ

ಜನನಿ ತಾನೆ ಮೊದಲ ಗುರುವು

ಜನನಿಯಿಂದ ಪಾಠ ಕಲಿತ ಜನರು ಧನ್ಯರು

ಎಂಬ ನುಡಿಯಂತೆ ಒಬ್ಬ ಹೆಣ್ಣು ಸುಶಿಕ್ಷಿತಳಾ ದರೆ ಮಕ್ಕಳಿಗೆ ಸಂಸ್ಕಾರ ಕೊಡುತ್ತಾ, ಚಲನಶೀಲ ಸಮಾಜಕ್ಕೆ ಮುನ್ನುಡಿ ಬರೆಯುತ್ತಾಳೆ. ಈ ಹಿನ್ನೆಲೆಯಲ್ಲಿ ಕನ್ನಡದ ಮೊಟ್ಟಮೊದಲ ಕವಯತ್ರಿ ಅಕ್ಕಮಹಾದೇವಿ ಕಂಗೊಳಿಸಿದರೆ, ಭಾರತದ ಮೊಟ್ಟಮೊದಲ ಶಿಕ್ಷಕಿಯಾಗಿ ಸಾವಿತ್ರಿಬಾಯಿ ಫುಲೆ ಪ್ರಮುಖರಾಗಿದ್ದಾರೆ. ‘ಸೇವಾ ಹಿ ಪರಮೋಧರ್ಮ’ ಎನ್ನುವ ಉಕ್ತಿಯಂತೆ ಅಂದು ಸಮಾಜದಲ್ಲಿ ಅಕ್ಷರದಿಂದ ವಂಚಿತಳಾಗಿದ್ದ ಹೆಣ್ಣಿಗೆ ಶಿಕ್ಷಣ ಒದಗಿಸಿಕೊಟ್ಟು, ಸ್ತ್ರೀ ವಿಮೋಚನೆಯ ಕನಸನ್ನು ನನಸು ಮಾಡಿದವರು ಇವರು.

ಮಹಾರಾಷ್ಟ್ರದ ಸತಾರ ಜಿಲ್ಲೆಯ ಒಂದು ಚಿಕ್ಕ ಹಳ್ಳಿ ನಾಯಗಾಂವಿನ ಖಂಡೋಜಿ ನೆವಶೆ ಪಾಟೀಲರ ಹಿರಿಯ ಮಗಳಾಗಿ 1831 ರಲ್ಲಿ ಜನಿಸಿದ ಸಾವಿತ್ರಿಯವರು ಅಂದು ಬಾಲ್ಯವಿವಾಹ ರೂಢಿಯಲ್ಲಿದ್ದ ಕಾಲವಾದ್ದರಿಂದ ತಮ್ಮ ಒಂಭತ್ತನೇ ವಯಸ್ಸಿನಲ್ಲಿ 13 ವರ್ಷದ ಜ್ಯೋತಿಬಾ ಫುಲೆ ಅವರೊಂದಿಗೆ ವಿವಾಹವಾದರು. ಆ ಕಾಲಘಟ್ಟದಲ್ಲಿ ಜ್ಯೋತಿಬಾ ಫುಲೆಯವರು ಪ್ರಗತಿಶೀಲ ಚಿಂತಕರಾಗಿ ದ್ದರಿಂದ ತಮ್ಮ ಮಡದಿಗೆ ತಾವೇ ಗುರುಗಳಾಗಿ ಅವರ ಸಾಧನೆಗೆ ನೀರೆರೆದು ಪೋಷಿಸಿದರು. ಅದರ ಪರಿಣಾಮವಾಗಿ ಸಾವಿತ್ರಿಬಾಯಿ ಫುಲೆ ಸಮಾಜ ದಲ್ಲಿದ್ದ ಅಸಮಾನತೆಯನ್ನು ಹೋಗಲಾಡಿಸುವ ಕ್ರಾಂತಿಯ ಕಿಡಿಯಾದರು. 1847 ರಲ್ಲಿ ಪತಿಯ ಸಹಕಾರದಿಂದ ಶ್ರೀಮತಿ ಮಿಚಲ್ ಅವರ ನಾರ್ಮಲ್ ಶಾಲೆಯಲ್ಲಿ ಶಿಕ್ಷಕರ ತರಬೇತಿ ಪಡೆದು, ಶ್ರೀಭಿಡೆಯವರ ಮನೆಯಲ್ಲಿ ಪ್ರಾರಂಭವಾದ ಹೆಣ್ಣುಮಕ್ಕಳ ಶಾಲೆಯ ಪ್ರಧಾನ ಶಿಕ್ಷಕಿಯಾದರು.

ಆ ಸಂದರ್ಭದಲ್ಲಿ ಸ್ತ್ರೀಯೊಬ್ಬಳು ಶಿಕ್ಷಕಿಯಾಗುವುದೆಂದರೆ ಧರ್ಮ ಮತ್ತು ಸಮಾಜಕ್ಕೆ ಅಪಚಾರವೆಸಗಿದಂತೆ ಎಂಬ ಮೌಢ್ಯತೆ ಆಳವಾಗಿ ಬೇರೂರಿದ್ದರಿಂದ, ಅವರು ಶಾಲೆಗೆ ಹೊರಟಾಗ ಕೆಲವರು ಅಪಹಾಸ್ಯ ಮಾಡಿ ಅವರ ಮೇಲೆ ಸಗಣಿ, ಕೆಸರನ್ನು ಎರಚಿ, ಕಲ್ಲು ತೂರಿ ತೊಂದರೆ ಕೊಡುತ್ತಿದ್ದರು. ಇದರಿಂದ ಧೃತಿಗೆಡದೆ ತಮಗೆ ಬಂದ ಟೀಕೆ, ತೊಂದರೆಗಳನ್ನೇ ಧನಾತ್ಮಕವಾಗಿ ಸ್ವೀಕರಿಸಿ, ಎಲ್ಲಾ ಸವಾಲುಗಳನ್ನು ಮೆಟ್ಟಿನಿಂತು ಸಮಾಜಸೇವಾ ಕೈಂಕರ್ಯಕ್ಕೆ ತಮ್ಮನ್ನು ತಾವೇ ಸಮರ್ಪಿಸಿಕೊಂಡರು.

ಗಂಡ-ಹೆಂಡಿರಿಬ್ಬರ ಮನಸ್ಸು ಒಂದಾಗಿದ್ದರೆ ದೇವರ ಮುಂದೆ ನಂದಾದೀವಿಗೆ ಮೂಡಿಸಿದಂತೆ  ಎಂಬ ಶರಣರ ವಾಣಿಯಂತೆ ದಂಪತಿಗಳಿಬ್ಬರು ಸಮಚಿತ್ತತೆ, ಸಮಭಾವ, ಸೇವಾಭಾವ ರೂಢಿಸಿಕೊಂಡು ಸಮಾಜದ ಅನಿಷ್ಟ ಪದ್ದತಿಗಳಾದ ಬಾಲ್ಯವಿವಾಹ, ಸತಿಸಹಗಮನ ಪದ್ದತಿ, ಕೇಶಮುಂಡನೆ ಪದ್ದತಿಗಳ ವಿರುದ್ಧ ಹೋರಾಟ ಮಾಡಿದರು. ಪರಿಪೂರ್ಣ ಶಿಕ್ಷಣ ಸಂಘಟನೆಗೆ ಮೂಲ, ಸಂಘಟನೆಯಾದಾಗ ಹೋರಾಟ ಸಾಧ್ಯ ಎಂಬುದನ್ನು ಅರಿತು ಕರುಣೆ, ವಿನಯ, ಸಹನೆಯನ್ನು ರೂಢಿಸಿಕೊಂಡು, ಶೋಷಿತರ ವಿಮೋಚನೆಯನ್ನು ಮಾಡಿಸಿದ ಕೀರ್ತಿ ಫುಲೆ ದಂಪತಿಗಳಿಗೆ ಸಲ್ಲುತ್ತದೆ. ಅಜ್ಞಾನ ವಿಮೋಚನೆಗೆ ಅಕ್ಷರ ಕ್ರಾಂತಿಯನ್ನು ಆರಂಭಿಸಿ 1848 ರಲ್ಲಿ ತಮ್ಮ ಮನೆಯಲ್ಲಿಯೇ ಶಾಲೆಯನ್ನು ತೆರೆದು, ಶೋಷಿತರು ಮತ್ತು ಮಹಿಳೆಯರಿಗೆ ಅಕ್ಷರ ಜ್ಞಾನದೀಕ್ಷೆ ನೀಡಿ ಹೊಸ ಬೆಳಕಿನ ಶಿಕ್ಷಣ, ಸಂಸ್ಕಾರ ಕೊಟ್ಟರು. 1848ರಿಂದ 1852ರ ಅ ವಧಿಯಲ್ಲಿ 18 ಪಾಠಶಾಲೆಗಳನ್ನು ತೆರೆದು ಅದರ ಸಂಪೂರ್ಣ ಜವಾಬ್ದಾರಿ ಹೊತ್ತು, ಶಿಕ್ಷಕಿಯಾಗಿ, ಸಂಚಾಲಕಿ ಯಾಗಿ, ಮುಖ್ಯೋಪಾಧ್ಯಾಯಿನಿಯಾಗಿ ಕೆಲಸ ನಿರ್ವಹಿಸಿದರು. ಮುಂದೆ ಸಮಾಜಸೇವೆಗಾಗಿ ತಮ್ಮನ್ನು ಸಂಪೂರ್ಣ ಮುಡಿಪಾಗಿಟ್ಟು, ಸಾಮಾಜಿಕ ಬದಲಾವಣೆ ಮೂಲದಿಂದಲೇ ಪ್ರಾರಂಭವಾಗಬೇಕೆಂದು ಬಯಸಿ ಜಡ್ಡುಗಟ್ಟಿದ ಸಂಪ್ರದಾಯಗಳಿಗೆ ಅಂತ್ಯ ಹಾಡಿ ಅಂತರ್ಜಾತಿ ವಿವಾಹವನ್ನು ಮಾಡಿಸಿದರು. ಸಮಾಜದಲ್ಲಿ ಅವರಿಗೆ ತೊಂದರೆಯಾದಾಗ ಅಂತಹ ದಂಪತಿಗಳಿಗೆ ಅವರೇ ಆಶ್ರಯ ನೀಡಿದರಲ್ಲದೆ ಅಬಲಾಶ್ರಮಗಳನ್ನು ಸ್ಥಾಪನೆ ಮಾಡಿದರು. ಶಾಲೆಯನ್ನು ತೊರೆಯದಂತೆ ವಿದ್ಯಾರ್ಥಿಗಳು ಶಿಕ್ಷಣವನ್ನು ಪೂರೈಸಿಕೊಳ್ಳಲು ಸ್ಟೈಫಂಡ್ ಕೊಡುವ ಯೋಜನೆ ಜಾರಿಗೊಳಿಸಿದ ಇವರು ಕೂಲಿ ಕಾರ್ಮಿಕರಿಗಾಗಿ ರಾತ್ರಿ ಪಾಳೆಯದ ಶಾಲೆ ಪ್ರಾರಂಭಿಸಿದರು.

ಒಬ್ಬ ಉತ್ತಮ ಶಿಕ್ಷಕಿಯಾಗಿದ್ದು ನಿರಂತರ ಹೋರಾಟ ಮಾಡಿ ಸಮಸಮಾಜದ ಕಲ್ಪನೆಗೆ ನಾಂದಿ ಹಾಡಿದರಲ್ಲದೆ, ಸೃಜನಶೀಲ ಕವಯತ್ರಿಯೂ ಆಗಿದ್ದು ಸೂಕ್ಷ್ಮ ಸಂವೇದನೆಯನ್ನು ಒಳಗೊಂಡಂತೆ ಕೆಲವು ಕಾವ್ಯಕೃತಿಗಳನ್ನು ರಚಿಸಿದ್ದಾರೆ. 1854 ರಲ್ಲಿ ಕಬ್ಯಾಪುಲೆ (ಕಾವ್ಯ ಹೂವು)ಎಂಬ ಕವನ ಸಂಕಲನವನ್ನು ಪ್ರಕಟಿಸಿದ್ದಾರೆ, ಇದರಲ್ಲಿ ಸಾಮಾಜಿಕ ಕಳಕಳಿಯುಳ್ಳ 41 ಕವಿತೆಗಳಿವೆ. ಅವರ 2ನೇ ಕೃತಿ ಭವನಕಾಶಿ ಸುಬೋಧ ರತ್ನಾಕರ (ಅಪ್ಪಟ ಮುತ್ತುಗಳ ಸಾಗರ) 1891ರಲ್ಲಿ ಪ್ರಕಟಗೊಂಡರೆ, ಜ್ಯೋತಿಬಾ ಅವರ ಭಾಷಣಗಳ ಸಂಗ್ರಹ ಸಂಪಾದನಾ ಕೃತಿ 1892ರಲ್ಲಿ ಪ್ರಕಟಗೊಂಡಿವೆ.

ಅಸಾಧಾರಣ ದಿಟ್ಟತನ, ಬದ್ಧತೆ, ಕಷ್ಟಸಹಿ ಷ್ಣುತೆಗಳನ್ನು ಸಹಿಸಿಕೊಂಡು ಸೇವಾಮನೋಭಾ ವದಿಂದ ಸದ್ದಿಲ್ಲದೆ ಕೆಲಸ ಮಾಡಿ ಅರಿವಿನ ಆಗರವಾಗಿ, ಜ್ಞಾನದ ಕಣಜವಾಗಿ, ಸಾಮಾಜಿಕ ಹೋರಾಟಗಾರ್ತಿಯಾಗಿ. ಆಧುನಿಕ ಶಿಕ್ಷಣದ ಮಹಾತಾಯಿಯಾಗಿ, ಭಾರತದ ಮೊಟ್ಟಮೊದಲ ಶಿಕ್ಷಕಿಯಾಗಿ, ಹೆಣ್ಣುಮಕ್ಕಳ ಶಿಕ್ಷಣಕ್ಕೆ ಭದ್ರಬುನಾದಿ ಹಾಕಿದ ಶ್ರೇಷ್ಟ ಸಾಧಕಿ ಸಾವಿತ್ರಿಬಾಯಿ ಫುಲೆ. ಇವರ ಸಾಧನೆಯನ್ನು ಗುರುತಿಸಿ ಬ್ರಿಟಿಷ್ ಸರ್ಕಾರ ಇಂಡಿಯಾಸ್ ಫಸ್ಟ್ ಲೇಡಿ ಟೀಚರ್ ಎಂದು ಕರೆದು ಗೌರವಿಸಿರುವುದು ಶ್ಲ್ಯಾಘನೀಯ. ಇದುವರೆಗೂ ಅವರನ್ನು ಕುರಿತು ಮರಾಠಿಯಲ್ಲಿ 200 ಕ್ಕೂ ಹೆಚ್ಚು ಪುಸ್ತಕಗಳು ಬಂದಿವೆ.

ಪ್ರಸ್ತುತ ಸಂದರ್ಭದಲ್ಲಿ ಅವಕಾಶಗಳಿದ್ದರೂ ಕೂಡ ಹೆಣ್ಣು ಸಾಧನೆಯ ಕಡೆಗೆ ತನ್ನನ್ನು ತೊಡಗಿಸಿಕೊಳ್ಳಲಾಗದೆ, ಸಂದಿಗ್ಧತೆಯಲ್ಲಿದ್ದಾಳೆ. ಆದರೆ ತುಂಬಾ ಹಿಂದೆ ಅಂಧಕಾರವೇ ತುಂಬಿದ್ದ ಕಾಲಘಟ್ಟದಲ್ಲಿ ಇಂತಹದ್ದೊಂದು ಸಾಧನೆ ಮಾಡಿ ಸ್ತ್ರೀ ಸಮೂಹಕ್ಕೆ ಚೈತನ್ಯದ ಚಿಲುಮೆಯಾಗಿ ಕಂಗೊಳಿಸುತ್ತಿರುವ ಸಾವಿತ್ರಿಬಾಯಿ ಫುಲೆಯವರ ಜನ್ಮ ದಿನ ಇದೇ ಜನವರಿ 3 ರಂದು. ಬದುಕಿನಲ್ಲಿ ನೋವನ್ನೆಲ್ಲಾ ತಾನುಂಡು ನಲಿವನ್ನು ನೀಡುತ್ತಾ ಮಹಿಳೆಯರು ಮತ್ತು ಮಕ್ಕಳ ಬದುಕಿಗೆ ನೆಲೆಯೊ ದಗಿಸಿ ಸ್ಫೂರ್ತಿಯ ಸೆಲೆಯಾಗಿರುವ ತಾಯಿಯ ಜೀವನ ನಮ್ಮೆಲ್ಲರಿಗೂ ಸ್ಫೂರ್ತಿಯಾಗಲಿ.


ಅಕ್ಷರದೀಪ ಬೆಳಗಿದ ಅಕ್ಕರೆಯ ತಾಯಿ : ಸಾವಿತ್ರಿಬಾಯಿ ಫುಲೆ - Janathavani– ಡಾ. ಗೀತಾ ಬಸವರಾಜು, ಉಪನ್ಯಾಸಕರು, ಎ.ವಿ.ಕೆ.ಕಾಲೇಜು, ದಾವಣಗೆರೆ.

error: Content is protected !!