ಇಂದು ಕುಟುಂಬದಲ್ಲಿರುವ ಒಂದೋ – ಎರಡೋ ಹೆಣ್ಣು ಮಗುವನ್ನು ಪೋಷಿಸುವುದಕ್ಕೆ, ಶಿಕ್ಷಣ ನೀಡುವುದಕ್ಕೆ ಅನೇಕರು ಹಿಂದೆ ಮುಂದೆ ನೋಡುತ್ತಿದ್ದಾರೆ. ಆದರೆ ಇಲ್ಲೊಂದು ಸಂಸ್ಥೆ ಕಳೆದ 24 ವರ್ಷಗಳಿಂದ ಪ್ರತಿ ವರ್ಷ ಸರಿ ಸುಮಾರು 250 ಬಾಲಕಿಯರಿಗೆ ಆಶ್ರಯ, ಆಹಾರ, ಬಟ್ಟೆ ಮತ್ತು ಶಿಕ್ಷಣ ಇವೆಲ್ಲವನ್ನೂ ಉಚಿತವಾಗಿ ಕೊಟ್ಟು ಪೋಷಿಸುತ್ತಿದೆ. ಅದುವೇ ದಾವಣಗೆರೆ ನಗರದ ಸಮೀಪದಲ್ಲಿರುವ ‘ರಶ್ಮಿ’ ಬಾಲಕಿಯರ ಸಂಪೂರ್ಣ ಉಚಿತ ವಸತಿಯುತ ಶಾಲೆ. ಇಂದು ರಶ್ಮಿ ಎಂಬುದು ಒಂದು ಕಟ್ಟಡವಾಗಿ ಅಥವಾ ಶಾಲೆಯಾಗಿ ಮಾತ್ರ ಗುರುತಿಸಲ್ಪಡದೇ ಸೌಲಭ್ಯ ವಂಚಿತ, ಶಿಕ್ಷಣ ವಂಚಿತ ಬಾಲಕಿಯರ ಪಾಲಿನ ಆಶಾಕಿರಣವಾಗಿದೆ, ಸ್ಪೂರ್ತಿ ಕಿರಣವಾಗಿದೆ.
ಡಾ. ಡಿ. ಪರ್ವತಪ್ಪ ಮೆಮೋರಿಯಲ್ ಟ್ರಸ್ಟ್ ಈ `ರಶ್ಮಿ’ ಎಂಬ ವಸತಿ ಶಾಲೆಯನ್ನು ಪ್ರಾರಂಭಿಸಿ, ಅದಕ್ಕೆ ಬೇಕಾದ ಕಟ್ಟಡ ಹಾಗೂ ಇತ್ಯಾದಿ ಸೌಲಭ್ಯಗಳನ್ನು ನಿರ್ಮಿಸಿ, ಸಂಪೂರ್ಣ ಉಚಿತವಾಗಿ ಕಳೆದ 25 ವರ್ಷಗಳಿಂದ ಯಶಸ್ವಿಯಾಗಿ ನಿರ್ವಹಿಸುತ್ತಿದೆ. ಸಾವಿರಾರು ಬಾಲಕಿಯರು ಈಗಾಗಲೇ ಇದರ ಪ್ರಯೋಜನ ಪಡೆದಿದ್ದಾರೆ. ಈಗ ರಶ್ಮಿಗೆ ಬೆಳ್ಳಿ ಹಬ್ಬದ ಸಂಭ್ರಮ. 2023, ಡಿಸೆಂಬರ್ 24 ರಂದು ಈ ಶಾಲೆಯ ರಜತ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿತು.
1993ರ ನವೆಂಬರ್‌ನಲ್ಲಿ ಡಾ. ಡಿ.ಪರ್ವತಪ್ಪನವರ ಜೇಷ್ಠ ಪುತ್ರ ಸುರೇಂದ್ರ ಅವರ ಪುತ್ರಿ ರಶ್ಮಿ ಅಪಘಾತದಿಂದ ದುರ್ಮರಣಕ್ಕೀಡಾ ದಳು. ರಶ್ಮಿಯ ತಂದೆಯವರಿಗೆೆ ಅಗಲಿದ ಮಗಳ ನೆನಪಿನಲ್ಲಿ ಮತ್ತು ಹೆಸರಿನಲ್ಲಿ ಶಿಕ್ಷಣ ವಂಚಿತ, ಮೂಲಭೂತ ಸೌಲಭ್ಯ ವಂಚಿತ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿ, ಅವರನ್ನು ಮುಖ್ಯವಾಹಿನಿಗೆ ತಂದು ಸ್ವಾವಲಂಬಿಗಳನ್ನಾಗಿ ಮಾಡಬೇಕು. ಆ ಮೂಲಕ ಸಮಾಜದ ಋಣ ತೀರಿಸಬೇಕು ಎಂಬ ಬಯಕೆಯುಂಟಾಯಿತು. ತಮ್ಮ ತಾಯಿಯೊಂದಿಗೆ ಚರ್ಚಿಸಿ, ಸಹೋದರ ಹಾಗೂ ಸಹೋದರಿಯರೊಡನೆ ಸೇರಿ 1997ರಲ್ಲಿ ಡಾ. ಡಿ. ಪರ್ವತಪ್ಪ ಮೆಮೋರಿಯಲ್ ಟ್ರಸ್ಟ್ ಅನ್ನು ಸ್ಥಾಪಿಸಿದರು.
1998ರಲ್ಲಿ ಒಂದು ಬಾಡಿಗೆ ಕಟ್ಟಡದಲ್ಲಿ ರಶ್ಮಿ ಶಾಲೆ ಪುಟ್ಟದಾಗಿ ಪ್ರಾರಂಭವಾಯಿತು. ಮುಂದೆ 1999ರಲ್ಲಿ ಕುಂದವಾಡದ ಸಮೀಪ ಈಗ ಇರುವ ನಿವೇಶನದಲ್ಲಿ ಸ್ವಂತ ಕಟ್ಟಡದ ಕೆಳಮಹಡಿಯನ್ನು ನಿರ್ಮಿಸಿ, ಒಂದನೇ ತರಗತಿಯನ್ನು ಪ್ರಾರಂಭಿಸ ಲಾಯಿತು. ನಂತರ ಹಂತ-ಹಂತವಾಗಿ ತರಗತಿಗಳನ್ನು ಮತ್ತು ಅದಕ್ಕೆ ತಕ್ಕಂತೆ ಕೊಠಡಿಗಳನ್ನು ವಿಸ್ತರಿಸಲಾಯಿತು. ಮಕ್ಕಳ ಸಂಖ್ಯೆ ಹೆಚ್ಚಾಗುತ್ತಾ ಬಂದಂತೆ, 2010ರಲ್ಲಿ ಪ್ರತ್ಯೇಕ ಶಾಲಾ ಕಟ್ಟಡವನ್ನು ನಿರ್ಮಿಸಲಾಯಿತು.
ಶಿಕ್ಷಣ ಹಾಗೂ ಮೂಲಭೂತ ಸೌಲಭ್ಯ ವಂಚಿತ ಬಡ / ಅನಾಥ ಬಾಲಕಿಯರನ್ನು ಒಂದನೇ ತರಗತಿಗೆ ದಾಖಲು ಮಾಡಿಕೊಂಡು, ಅವರಿಗೆ ಸಂಪೂರ್ಣ ಉಚಿತವಾಗಿ ಆಹಾರ, ಶಿಕ್ಷಣ, ಬಟ್ಟೆ, ಆರೈಕೆ, ಇವುಗಳೊಂದಿಗೆ ಉತ್ತಮ ಸಂಸ್ಕಾರ ನೀಡಿ, ಅವರನ್ನು ಸುಶಿಕ್ಷಿತರನ್ನಾಗಿಸುವ ಉನ್ನತ ಧ್ಯೇಯದೊಂದಿಗೆ ಈ ರಶ್ಮಿಯು ಕಳೆದ 25 ವರ್ಷಗಳಿಂದ ಸಮಾಜಮುಖಿಯಾಗಿ ಕಾರ್ಯೋನ್ಮುಖವಾಗಿದೆ. ಕಳೆದ 25 ವರ್ಷಗಳಲ್ಲಿ 1500ಕ್ಕೂ ಹೆಚ್ಚು ಬಾಲಕಿಯರಿಗೆ `ರಶ್ಮಿ’ ಬೆಳಕಾಗುತ್ತಿದೆ. ಒಂದು ವರ್ಷದಲ್ಲಿ ಗರಿಷ್ಠ 250 ಮಕ್ಕಳು ಇಲ್ಲಿರುತ್ತಾರೆ. ಪ್ರಸ್ತುತ 13ಕ್ಕೂ ಹೆಚ್ಚು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಇಲ್ಲಿ ಮಮತೆಯಿಂದ ಮತ್ತು ಶ್ರದ್ಧೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇಲ್ಲಿ ಪ್ರವೇಶಾತಿಗೆ ಜಾತಿ, ಮತ, ಧರ್ಮ, ಭಾಷೆ, ಪ್ರಾಂತ್ಯ ಯಾವುದೇ ತಾರತಮ್ಯವಿಲ್ಲದೇ ಸಮಾನತೆಗೆ ಒತ್ತು ನೀಡಲಾಗಿದೆ. ದಾವಣಗೆರೆ ಮಾತ್ರವಲ್ಲದೇ, ಹಾವೇರಿ, ವಿಜಯನಗರ, ಶಿವಮೊಗ್ಗ, ಬಳ್ಳಾರಿ, ಚಿತ್ರದುರ್ಗ, ಧಾರವಾಡ, ಮೈಸೂರು, ಗದಗ, ಬೆಂಗಳೂರು, ಉತ್ತರ ಕನ್ನಡ, ಹುಬ್ಬಳ್ಳಿ, ತುಮಕೂರು, ಬಾಗಲಕೋಟೆ, ಕೊಪ್ಪಳ ಹೀಗೆ 16ಕ್ಕೂ ಹೆಚ್ಚು ಜಿಲ್ಲೆಗಳ ಮಕ್ಕಳು ಇಲ್ಲಿದ್ದಾರೆ. ಪ್ರವೇಶ ಬಯಸಿ, ಬಂದವರನ್ನು ಸಂದರ್ಶನ ನಡೆಸಿ, ಅವರಲ್ಲಿ ಅತ್ಯಂತ ಸೌಲಭ್ಯ ವಂಚಿತ ಅರ್ಹ ಮಕ್ಕಳನ್ನು ದಾಖಲು ಮಾಡಿಕೊಳ್ಳಲಾಗುತ್ತದೆ.
ವಸತಿಯುತ ಶಾಲೆಯಾಗಿರುವುದರಿಂದ ಹೆಣ್ಣು ಮಕ್ಕಳ ಸಂರಕ್ಷಣೆ, ಪೋಷಣೆ ಮತ್ತು ಆರೋಗ್ಯಕ್ಕೆ ಇಲ್ಲಿ ಮೊದಲ ಆದ್ಯತೆ ನೀಡಲಾಗುತ್ತಿದೆ. ಕರ್ನಾಟಕದ ಪಠ್ಯಕ್ರಮದ ಶಾಲಾ ಶಿಕ್ಷಣದೊಂದಿಗೆ ಪೌಷ್ಠಿಕ ಆಹಾರ, ಆಟ, ಮನರಂಜನೆ, ಸಂಗೀತ, ಯೋಗ, ಕಂಪ್ಯೂಟರ್ ಸೇರಿದಂತೆ ವೃತ್ತಿಪರ ಕೌಶಲ್ಯಗಳು ಮತ್ತು ಅಧ್ಯಾತ್ಮಿಕತೆಗೂ ಇಲ್ಲಿ ಮಹತ್ವ ನೀಡಲಾಗುತ್ತಿದೆ. ಶಾಲಾ ಆವರಣದಲ್ಲಿ ಬೆಳೆದಿರುವ ಸಾವಯವ ತರಕಾರಿ, ಸೊಪ್ಪು ಮೊದಲಾದವುಗಳನ್ನು ಮಕ್ಕಳಿಗೆ ಸಮೃದ್ಧವಾಗಿ ಬಳಸಲಾಗುತ್ತಿದ್ದು, ಮಕ್ಕಳೂ ಈ ಕೃಷಿ ಚಟುವಟಿಕೆಯಲ್ಲಿ ಉತ್ಸಾಹದಿಂದ ಭಾಗವಹಿಸುತ್ತಾರೆ.
ಪರಿಶುದ್ದ ಕುಡಿಯುವ ನೀರು, ಸೋಲಾರ್ ವಾಟರ್ ಹೀಟರ್, ಪರ್ಯಾಯ ವಿದ್ಯುತ್ ವ್ಯವಸ್ಥೆ, ಸಮರ್ಪಕ ವೈದ್ಯಕೀಯ ಸೌಲಭ್ಯ ಹೀಗೆ ಮಕ್ಕಳ ಆರೋಗ್ಯಕ್ಕೆ ಬೇಕಾದ ಎಲ್ಲಾ ಸೌಲಭ್ಯಗಳೂ ಇಲ್ಲಿವೆ. ಮಕ್ಕಳ ಭದ್ರತೆಗಾಗಿ 8 ಅಡಿ ಎತ್ತರದ ಮುಳ್ಳು ತಂತಿ ಸಹಿತ ಕಾಂಪೌಂಡ್ ಗೋಡೆ ಮತ್ತು ಸಿ.ಸಿ. ಟಿವಿಯೂ ಇಲ್ಲಿದೆ. ಆಗಾಗ್ಗೆ ಶೈಕ್ಷಣಿಕ ಚಲನಚಿತ್ರಗಳನ್ನು ಮಕ್ಕಳಿಗೆ ಪ್ರದರ್ಶಿಸಲಾಗುತ್ತದೆ. ಗ್ರಂಥಾಲಯ ಸೌಲಭ್ಯವೂ ಇದೆ. ಹೀಗೆ ಯಾವ ಕೊರತೆಯೂ ಆಗದಂತೆ, ಆ ಮಕ್ಕಳಲ್ಲಿ ಯಾವುದೇ ಕೀಳರಿಮೆಗೆ ಅವಕಾಶವಿಲ್ಲದಂತೆ ಮಕ್ಕಳನ್ನು ರೂಪಿಸಲಾಗುತ್ತಿದೆ.
ಮಕ್ಕಳಿಗೆ ಇಲ್ಲಿ ಹತ್ತನೇ ತರಗತಿಯವರೆಗೆ ಅವಕಾಶವಿದೆ. ಹಾಗೆಂದು ಇವರ ಸೇವೆ ಇಲ್ಲಿಗೆ ನಿಂತಿಲ್ಲ. ಪಾಲಕರಿಲ್ಲದ ಅದೆಷ್ಟೋ ಬಾಲಕಿಯರಿಗೆ ಮುಂದಿನ ಶಿಕ್ಷಣಕ್ಕೂ ಈ ಟ್ರಸ್ಟ್ ದಾರಿಮಾಡಿಕೊಟ್ಟಿದೆ. ಇಲ್ಲಿಯ ಬಾಲಕಿಯರಿಗೆ ದಾವಣಗೆರೆಯ ಕೆಲವು ಕಾಲೇಜುಗಳು ಕಡಿಮೆ ವೆಚ್ಚದಲ್ಲಿ ಶಿಕ್ಷಣ ನೀಡುತ್ತಿವೆ. ಆ ಶುಲ್ಕವನ್ನು ಟ್ರಸ್ಟ್ ಭರಿಸುತ್ತಿದೆ.
ರಶ್ಮಿಯ ಮಡಿಲಿನಲ್ಲಿ ಬೆಳೆದ ಎಷ್ಟೋ ಬಾಲಕಿಯರು ಇಂದು ಇಂಜಿನಿಯರ್ ಆಗಿದ್ದಾರೆ. ಒಬ್ಬಳು ಜರ್ಮನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದಾಳೆ. ಇನ್ನು ಕೆಲವರು ಇಂಜಿನಿಯರಿಂಗ್ ಅಧ್ಯಯನ ಮಾಡುತ್ತಿದ್ದಾರೆ. ಕೆಲವರು ಬ್ಯಾಂಕ್‌ನಲ್ಲಿ ನೌಕರಿ ಮಾಡುತ್ತಿದ್ದಾರೆ. ಇನ್ನು ಕೆಲವರು ಬಿ.ಎಸ್ಸಿ ಅಗ್ರಿ, ನರ್ಸಿಂಗ್ ಮೊದಲಾದವುಗಳನ್ನು ಮುಗಿಸಿ ಸ್ವಾವಂಲಂಬಿಗಳಾಗಿದ್ದಾರೆ.
ಸರ್ಕಾರದ ಅನುದಾನ / ದೇಣಿಗೆ ಯನ್ನು ಬಯಸದೇ ಡಾ.ಪರ್ವತಪ್ಪನವರ ಕುಟುಂಬ ವರ್ಗ, ಅದರಲ್ಲೂ ಸುರೇಂದ್ರ ಅವರ ಉದಾರ ಕೊಡುಗೆಯಿಂದ ಈ ಶಾಲೆಯನ್ನು ನಿರ್ಮಿಸಲಾಗಿದೆ. ಕ್ರಮೇಣ ಆ ಕುಟುಂಬದ ಇತರರು ಕೂಡಾ ಕೈ ಜೋಡಿಸ ಲಾರಂಭಿಸಿದರು. ಒಂದು ಮನೆತನ ಇಂತಹ ಒಂದು ಸಂಸ್ಥೆಯನ್ನು ನಡೆಸುತ್ತಿರುವ ನಿದರ್ಶನಗಳು ಅತ್ಯಂತ ವಿರಳ. ಇವರ ಬದ್ಧತೆ ಹಾಗೂ ಪಾವಿತ್ರ್ಯತೆಯನ್ನು ನೋಡಿದ ಕೆಲ ಸಾರ್ವಜನಿಕರು ತಮ್ಮ ದೇಣಿಗೆಯ ಮೂಲಕ ಈ ಸಂಸ್ಥೆಯ ಬೆಳವಣಿಗೆಗೆ ಪೂರಕರಾಗಿದ್ದಾರೆ.
ರಶ್ಮಿಯ ಸಾಧನೆಗಳು
2010-11 ರಲ್ಲಿ ಈ ಶಾಲೆಯ ಹತ್ತನೇ ತರಗತಿಯ ಮೊದಲ ಬ್ಯಾಚ್ ಪ್ರಾರಂಭವಾಯಿತು. ಅಂದಿನಿಂದ ಇಲ್ಲಿಯವರಗೆ ಪ್ರತಿ ವರ್ಷ ಎಸ್ಸೆಸ್ಸೆಲ್ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಇಲ್ಲಿಯ ಮಕ್ಕಳು ಶೇ.100 ರಷ್ಟು ಫಲಿತಾಂಶ ಪಡೆದು, ಶಾಲೆಯು `ಸಾಧಕ ಶಾಲೆ’ ಎಂಬ ಪುರಸ್ಕಾರವನ್ನು ಪಡೆಯುತ್ತಿದೆ.
2017-18ನೇ ಸಾಲಿನಲ್ಲಿ ಈ ಶಾಲೆಯ ಪರಿಸರ ಅಂದರೆ ಇಲ್ಲಿಯ ಮರ, ಗಿಡ, ಹಸಿರು ಎಲ್ಲವನ್ನು ನೋಡಿದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಜಂಟಿಯಾಗಿ ‘ಪರಿಸರ ಮಿತ್ರ ಶಾಲೆ’ ಎಂಬ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಡಾ.ಪಿ.ಸುರೇಂದ್ರ, ಡಾ.ಪಿ.ನಾಗರಾಜ್, ಶ್ರೀಮತಿ ನಂಜಮ್ಮ ಪರ್ವತಪ್ಪ, ಶ್ರೀಮತಿ ನಿರ್ಮಲಾ ಚಂದ್ರಶೇಖರ್, ಶ್ರೀಮತಿ ಕುಸುಮಾ ಪಾಟೀಲ್, ಶ್ರೀಮತಿ ಅರುಣಾ ಪರಮೇಶ್ವರಪ್ಪ, ಶ್ರೀಮತಿ ಪ್ರೇಮಾನಾಗರಾಜ್ ಇವರೆಲ್ಲರೂ ರಶ್ಮಿಯ ಆಧಾರಸ್ತಂಭಗಳು. ಅದರಲ್ಲೂ ಡಾ.ಪಿ.ನಾಗರಾಜ್ ಮತ್ತು ಶ್ರೀಮತಿ ಪ್ರೇಮಾ ನಾಗರಾಜ್ ಇವರಿಬ್ಬರೂ ತಮ್ಮ ದಿನದ ಬಹುಪಾಲು ಸಮಯವನ್ನು ಈ ಮಕ್ಕಳೊಂದಿಗೇ ಕಳೆಯುತ್ತಿದ್ದಾರೆ.
ಮಾತಾಜಿ ಯೋಗಾನಂದಮಯಿ, ಚಾರ್ಟೆಡ್ ಅಕೌಂಟೆಂಟ್ ಗಿರೀಶ್ ನಾಡಿಗ್, ಶ್ರೀಮತಿ ನಳಿನಿ ಅಚ್ಯುತ್, ಜಯಣ್ಣ, ಶಂಭುಲಿಂಗಪ್ಪ ಇವರಂತಹ ಅನೇಕರು ಭಾವನಾತ್ಮಕ, ನೈತಿಕ, ಅಧ್ಯಾತ್ಮಿಕ ಮತ್ತು ಶೈಕ್ಷಣಿಕವಾಗಿ ಈ ರಶ್ಮಿಗೆ ಬೆಂಬಲವಾಗಿ ನಿಂತಿದ್ದಾರೆ. ಈ ಸತ್ಕಾರ್ಯ ಇನ್ನೂ ಯಶಸ್ವಿಯಾಗಿ ಸಾಗಲಿ ಎಂದು ಹಾರೈಸೋಣ. ಸತ್ಕಾರ್ಯದಲ್ಲಿ ನಿರತರಾದ ವರನ್ನು ಮನಸಾರೆ ಅಭಿನಂದಿಸೋಣ.
– ಜಗನ್ನಾಥ್ ನಾಡಿಗೇರ್