ಜಗತ್ತಿನ ಮುಕ್ತಿಯ ತವರುಮನೆ ಎಂದು ಕರೆಯಲ್ಪಡುವ ಶ್ರೀ ಪಂಡರೀ ಕ್ಷೇತ್ರ ಸಂತಮಣಿಗಳಿಂದ, ದಾಸಮಣಿಗಳಿಂದ ಭಕ್ತ ಜನರಿಂದ ತುಂಬಿ ತುಳುಕುತ್ತಾ ರಾರಾಜಿಸುವ ವೈಭವದ ಕ್ಷೇತ್ರ. ಶ್ರೀ ಪಾಂಡುರಂಗ ರುಕ್ಮಿಣಿದೇವಿಯವರ ವಾಸ್ತವ್ಯದಲ್ಲಿ ಭಕ್ತಿಯ ವೈಭವ ಮುಗಿಲು ಮುಟ್ಟಿರುತ್ತದೆ. ವಾರಕರೀ ಸಂಪ್ರದಾಯದ, ಭಾಗವತ ಧರ್ಮದ ಶ್ರೀಕ್ಷೇತ್ರ ದೇಶ, ವಿದೇಶಗಳಲ್ಲಿ ಪ್ರಸಿದ್ಧಿ ಪಡೆದ ನಂದಗೋಕುಲ ಕ್ಷೇತ್ರ. ಶ್ರೀ ಪಾಂಡುರಂಗ ವಿಠ್ಠಲನನ್ನು ಭಕ್ತ ಜನರು ಭಕ್ತಿಯಿಂದ ವಿಠಾಮಾವಲಿ (ವಿಠ್ಠಲ ನಮ್ಮ ತಾಯಿ) ಎಂದು ಕರೆಯುತ್ತಾರೆ. ಯಾವ ಜಾತಿ ಭೇದವಿಲ್ಲದೆ ತನ್ನ ಭಕ್ತರನ್ನು ಬರಮಾಡಿಕೊಂಡು ಬೇಡಿದ ವರವ ನೀಡುವ ಮತ್ತು “ಪ್ರತಿದಿನ ಬೆಳಿಗ್ಗೆ ಬಾಲಕ, ಮಧ್ಯಾಹ್ನ ಯುವಕ, ಸಂಜೆ ವಯಸ್ಸಾದವರಂತೆ ಕಾಣುವ ಜಗದೊಡೆಯನ ರೂಪ ಪರಿವರ್ತನೆ” ಎಂತವರನ್ನು ಒಂದುಕ್ಷಣ ದಂಗುಬಡಿಸುತ್ತದೆ. ನೀಲವರ್ಣ ಮೇಘ-ಶ್ಯಾಮನ ರೂಪವೇ ಒಂದು ವಿಸ್ಮಯ. ಕಪ್ಪು ವರ್ಣದವ, ಶ್ವೇತ ವರ್ಣದವ, ನೀಲವರ್ಣದವ ಎಂದು ಹೆಸರು ಪಡೆದವ. ಸದಾ ನಗುಮುಖ. ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಕಾಣುವ ಕೌತುಕ ಮತ್ತು ಭಕ್ತರನ್ನು ತನ್ನಡೆಗೆ ಬರಮಾಡಿಕೊಳ್ಳುವ ಹಂಬಲ. ಇವಿಷ್ಟೂ ಒಂದು ಅಂಶವಾದರೆ,
ಇನ್ನು ಎರಡನೇ ಅಂಶ ಶ್ರೀ ಪಾಂಡುರಂಗ ವಿಠ್ಠಲ ಮೂರ್ತಿಯು ಇಟ್ಟಿಗೆಯ ಸ್ಪರ್ಷವಿಲ್ಲದೆ ಅಂತರದಲ್ಲಿ ನಿಂತಿರುವುದನ್ನು ನೋಡಿದರೆ ಒಂದು ಕ್ಷಣ ಆಶ್ಚರ್ಯಚಿಕಿತಗೊಳಿಸುತ್ತದೆ ಎಂದರೆ ತಪ್ಪಾಗಲಾರದು. ಶ್ರೀ ಪಾಂಡುರಂಗ ವಿಠ್ಠಲ ತನ್ನೊಡಲ ಅನಂತ ಬ್ರಹ್ಮಾಂಡದಲ್ಲಿ ತುಂಬಿಕೊಂಡಿರುವ ವಿಸ್ಮಯಕಾರಿ ಅಂಶಗಳನ್ನು ನೋಡುವುದಾದರೆ,
ಭಕ್ತ ಪುಂಡಲೀಕನು ತನ್ನ ತಂದೆ-ತಾಯಿಯ ಸೇವೆ ಮಾಡುವುದನ್ನು ನೋಡಲು ಬಂದ ಪಾಂಡುರಂಗ ಅವನ ಭಕ್ತಿಗೆ ಮೆಚ್ಚಿ ವರವನ್ನು ನೀಡಿದಾಗ ಸ್ವಾಮಿ ನನಗೇನೂ ಬೇಕಾಗಿಲ್ಲ. ಇನ್ನು ನೀನು ಇಲ್ಲಿಯೇ ನೆಲೆಸಿ ಬೇಡಿ ಬಂದ ಭಕ್ತರಿಗೆ ಬೇಡಿದ ವರವ ನೀಡು ಎಂದಾಗ ಅವನ ಕೋರಿಕೆಯನ್ನು ಮುನಿಸಿ ಕಲ್ಲಾಗುತ್ತಾನೆ.
ಶ್ರೀ ಪಾಂಡುರಂಗ ವಿಠ್ಠಲನ ಮೂರ್ತಿ ಹೇಗೆ ನಿರ್ಮಾಣವಾಯಿತು : ಮರಳಿನ ಕಣಗಳು ಏಕತ್ರಿಕವಾಗಿ ಶ್ರೀ ವಿಷ್ಣುವಿನ ಸ್ಥಿತಿಯ ಬಗೆಗಿನ ಕ್ರಿಯಾ ಶಕ್ತಿಯಿಂದ ಕಟ್ಟಲ್ಪಟ್ಟು ಅವುಗಳ ಘನೀಕರಣವಾಗಿ ಕಪ್ಪಬಣ್ಣದ `ಸ್ವಯಂಭೂ ಮೂರ್ತಿ’ ನಿರ್ಮಾಣವಾಗಿದೆ.
ಈ ಮೂರ್ತಿಯು ಸೊಂಟದ ಮೇಲೆ ಕೈಯಿಟ್ಟು ನಿಂತಿದ್ದಾನೆ. ಇತರ ದೇವರ ಮೂರ್ತಿಯ ಕೈಯ್ಯಲ್ಲಿ ಶಸ್ತ್ರವಿರುತ್ತದೆ ಮತ್ತು ಆಶೀರ್ವಾದ ಮಾಡುವ ಕೈಗಳಿರುತ್ತವೆ. ಆದರೆ ಈ ಮೂರ್ತಿ ಎಲ್ಲವನ್ನು ಸಾಕ್ಷಿಭಾವದಿಂದ ನೋಡುವುದಾಗಿದೆ. ಸೊಂಟದ ಮೇಲೆ ಜ್ಞಾನೇಂದ್ರಿಯಗಳಿದ್ದರೆ ಸೊಂಟದ ಕೆಳಗೆ ಕರ್ಮೇಂದ್ರಿಯಗಳಿವೆ. ಅಂದರೆ ಸೊಂಟದ ಮೇಲಿನ ಎರಡು ಕೈಗಳು ಪಂಚೇತಂದ್ರೀಯಗಳ ಮೇಲೆ ನಿಯಂತ್ರಣ ಪಡೆದಿದ್ದಾನೇ. ಶ್ರೀ ವಿಠ್ಠಲನ ಕೈಗಳ ಸಮೀಪ ಅಡ್ಡರೇಖೆಗಳಿವೆ. ಇದು ವಿಷ್ಣುವಿನ ಪ್ರಕಟ ಶಕ್ತಿಯು ಏಕತ್ರಿತವಾಗಿದೆ.
ಎಡಗೈಯ್ಯಲ್ಲಿ ಹಿಡಿದ ಶಂಖ : ಈ ಶಂಖವು ಅಪ್ರಕಟ ಅನಹತನಾದದ ಪ್ರತೀಕವಾಗಿದೆ. ಬ್ರಹ್ಮಾಂಡದ ಕ್ರಿಯಾಶಕ್ತಿಯನ್ನು ಸತತವಾಗಿ ಸೃಷ್ಠಿಯ ಕಾರ್ಯದಲ್ಲಿ ಈ ನಾದವನ್ನು ಉಪಯೋಗಿಸಲಾಗುತ್ತದೆ.
ಬಲಗೈಯ್ಯಲ್ಲಿರುವ ಕಮಲದ ಮೊಗ್ಗು : ಬಲಗೈಯಲ್ಲಿರುವ ಕಮಲದ ಮೊಗ್ಗು ಮತ್ತು ಅದರ ತೊಟ್ಟು ಪಾತಾಳದೊಂದಿಗೆ ಆತ್ಮೀಯತೆಯನ್ನು ಬೆಳಸುವುದಾಗಿದೆ. ಈ ಕಮಲದ ತೊಟ್ಟಿನಿಂದ ಹರಿಯುವ ಸೂಕ್ಷ್ಮ-ಚೈತನ್ಯ ನಾದವು ಪಾತಾಳದ ಪ್ರಾಸದಾಯಕ ಸ್ಪಂದನಗಳನ್ನು ದೂರಕ್ಕೆ ಎಸೆಯುವಂತಾಗಿದೆ. ಕಮಲವು ಆನಂದಮಯ ಉತ್ಪತ್ತಿಯ ದರ್ಶಕವಾಗಿದೆ. ಈ ಕಮಲದ ಮೊಗ್ಗಿನ ಗರ್ಭದಲ್ಲಿ ಸುಪ್ತವಾಗಿರುವ ದಿವ್ಯ ಪರಿಮಳವು ಸಂಪೂರ್ಣ ಬ್ರಹ್ಮಾಂಡದ ಇಚ್ಚಾಶಕ್ತಿತ ತತ್ವಾತ್ಮಕ ನಿರ್ಮಿತಿ ಕ್ಷಮತೆಯನ್ನು ಜಾಗೃತಗೊಳಿಸು ವುದಾಗಿದೆ.
ಈ ಮೂರ್ತಿಯ ಎರಡೂ ಕಾಲುಗಳು ಸಂಪೂರ್ಣವಾಗಿ ಇಟ್ಟಿಗೆಗೆ ಸ್ಪರ್ಶವಾಗಿಲ್ಲ : ಕಾರಣ ಕಾಲ ಕೆಳಗಿರುವ ಇಟ್ಟಿಗೆಯ ಮಹತ್ವ. ಈ ಮೂರ್ತಿಯು ಆಧಾರವಿಲ್ಲದೇ ಅಂದರೆ ಕೇವಲ ಪಾದದ ಮುಂದಿನ ಬೆರಳುಗಳು ಇಟ್ಟಿಗೆಗೆ ತಾಗಿಕೊಂಡಿರುವ ಸ್ಥಿತಿಯಲ್ಲಿದೆ. ಈ ಮೂರ್ತಿಯು ವಾಯುತತ್ವ ಸ್ವರೂಪ ಕಾರ್ಯವನ್ನು ಮಾಡುತ್ತದೆ. ವಿಠ್ಠಲನ ಮೇಲೆತ್ತಿದ ಹಿಮ್ಮಡಿಗಳು ವಾಯುತತ್ವ ಸ್ವರೂಪ ಕ್ರಿಯೆಯ ಸ್ತರದಲ್ಲಿ ಅತಿ ಹೆಚ್ಚು ಕಾರ್ಯ ಮಾಡುವ ಸಾಮರ್ಥ್ಯವು ಇರುವುದನ್ನು ತೋರಿಸುತ್ತದೆ. ನೀವು ಪಾಂಡುರಂಗ ಮೂಲಮೂರ್ತಿಯ ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಮೇಲೆತ್ತಿದ ಹಿಮ್ಮಡಿಗಳನ್ನು ಕಾಣಬಹುದು. ಚರಣದ ಹಿಂದಿನ ಟೊಳ್ಳುಗಳಿಂದ ಅಷ್ಠ ಮಹಾಸಿದ್ಧಿಗಳು ಪ್ರಾಪ್ತವಾಗುತ್ತದೆ. ಕಾಲಿನ ಕೆಳಗಿರುವ ಇಟ್ಟಿಗೆಯ ಮೇಲೆ ಧ್ಯಾನ ತಗಲಿಸಿದಾಗ ದೇಹಕ್ಕೆ ಕೃತಿಶೀಲತೆಯು ಪ್ರಾಪ್ತವಾಗುತ್ತದೆ. ಮೂರ್ತಿಯ ಬಣ್ಣ ಕಪ್ಪಾಗಿದ್ದು ವಿಠ್ಠಲನು ಶಿವಸ್ವರೂಪ ಅಂತರಂಗದಲ್ಲಿ ಬಿಳಿಬಣ್ಣದಿಂದ ಕೂಡಿದೆ ಶ್ರೀ ವಿಠ್ಠಲನ ಅಧೋದೃಷ್ಟಿಯು ಅವನ ನಾಭಿಕಮಲದ ಟೊಳ್ಳಿಗೆ ಧ್ಯಾನ ತಗುಲಿ ಅದರಿಂದ ಹೊರಡುವ ಪರವಾಣಿ ಸ್ವರೂಪನಾದ ಚೈತನ್ಯವು ಇಡೀ ಬ್ರಹ್ಮಾಂಡಕ್ಕೆ ಚೈತನ್ಯ ನೀಡುತ್ತವೆ.
ಶ್ರೀ ಪಾಂಡುರಂಗ ವಿಠ್ಠಲ ಪತ್ನಿಯರು : ರಾಯಿ ಮತ್ತು ರುಕ್ಮಿಣಿ. ಇವರು ಶ್ರೀ ವಿಠ್ಠಲನ ಪತ್ನಿಯರಾಗಿದ್ದಾರೆ. ಇವರು ವಿಠ್ಠಲನ ಶಕ್ತಿಯಾಗಿ ತಾರಕ ಮತ್ತು ಮಾರಕ ಹೀಗೆ ಎರಡು ವಿಧದಲ್ಲಿದ್ದು ಉತ್ಪತ್ತಿ, ಸ್ಥಿತಿ ಮತ್ತು ಲಯ ಇವುಗಳ ಪೈಕಿ ಸ್ಥಿತಿಯ ದೇವನಾಗಿರುವುದರಿಂದ ಉತ್ಪತ್ತಿ ಸ್ಥಿತಿಗೆ ಸಂಬಂಧಿಸಿದ್ದಾರೆ.
ಏಕಾದಶಿ ಆಚರಣೆ : ತಿಂಗಳಿನ ಎರಡು ಏಕಾದಶಿಗಳಲ್ಲಿ ಮೊದಲನೆಯದ್ದನ್ನು `ಶ್ರೀ ವಿಠ್ಠಲನ’ ಹೆಸರಿನಲ್ಲಿ, ಎರಡನೆ ಏಕಾದಶಿಯನ್ನು `ಶ್ರೀ ಪಾಂಡುರಂಗನ’ ಹೆಸರಿನಲ್ಲಿ ಆಚರಿಸುತ್ತಾರೆ.
ಶ್ರೀ ವಿಠ್ಠಲನಿಗೆ ಕುಂಕು ಹಚ್ಚಿದ ಬುಕ್ಕಾ ಏಕೆ ಹಚ್ಚುತ್ತಾರೆ ? : ಕುಂಕುಮವು ಪ್ರತ್ಯಕ್ಷ ಕಾರ್ಯನಿರತ ಆದಿಶಕ್ತಿಯ ಪ್ರತೀಕವಾಗಿದೆ. ಶ್ರೀ ವಿಠ್ಠಲನು ಶಿವನ ವೈರಾಗ್ಯ ಭಾವದವ. ಅಂದರೆ ಸಾಕ್ಷಿ ಭಾವದವ. ಆದ್ದರಿಂದ ಬುಕ್ಕಾವನ್ನು ಹಚ್ಚುತ್ತಾರೆ. ಈ ರೀತಿಯಾಗಿ ತನ್ನೊಡಲ ಅಂತರಂಗದಲ್ಲಿ ಅನೇಕ ಬ್ರಹ್ಮಾಂಡಗಳನ್ನು ಧರಿಸಿ ಬೇಡಿದ ವರಗಳನ್ನು ನೀಡುತ್ತಾ ಭಕ್ತರಿಗಾಗಿ ಕಾಯುತ್ತಾ ನಿಂತಿದ್ದಾನೆ.
ಕೊನೆಯದಾಗಿ ದಾಸಮಣಿಗಳು ಮನುಷ್ಯನ ದೇಹಕ್ಕೆ ಏನು ಭೂಷಣ ಎಂದು ಹೇಳಿದ್ದಾರೆ. ಕಾಲಿಗೆ ಭೂಷಣ ಹರಿಯಾತ್ರೆಯು ದಾನವೇ ಭೂಷಣ. ಎರಡು ಕೈಗಳಿಗೆ ನಾಲಿಗೆಗೆ ಭೂಷಣ-ಹರಿನಾಮವು ವಿಶಾಲಕರ್ಣಿಕ ಭೂಷಣ – ಹರಿಕೀರ್ತನೆ ಶೃಂಗಾರ ತುಳಸಿಮಣಿ ಕೊರಳಿಗೆ ಭೂಷಣ ರಂಗನ ನೋಡುವುದೇ ಕಂಗಳಿಗೆ ಭೂಷಣ. ಪಾಂಡುರಂಗನ ನೋಡುವುದೇ ಕಂಗಳಿಗೆ ಭೂಷಣ. ರಂಗನ ನೋಡುವುದೇ ಕಂಗಳಿಗೆ ಭೂಷಣ. ಪಾಂಡುರಂಗನ ನೋಡುವುದೇ ಕಂಗಳಿಗೆ ಭೂಷಣ, ರಂಗ ವಿಠ್ಠಲ ನಿನ್ನ ನಾಮವೇ ಭೂಷಣ ಎಂದಿದ್ದಾರೆ.
ಆದ್ದರಿಂದ ನೀವೇಕೆ ಶ್ರೀ ಪಾಂಡುರಂಗನ ದರುಶನ ಮಾಡಬಾರದು? ಭವ ರೋಗ ವೈದ್ಯನ ಊರಿಗೆ ಹೋಗಿ ನಮ್ಮ ಪಾದ ಸ್ಪರ್ಶ ಮಾಡಲು ಅನೇಕ ಜನ್ಮಗಳ ಪುಣ್ಯಬೇಕು ಎಂದಿದ್ದಾರೆ. ಬರೀ ನಾಮ ಸ್ಮರಣೆಯಿಂದ ಮನುಷ್ಯನ ಎಲ್ಲಾ ಕಾಯಿಲೆಗಳನ್ನು ಅದರನ್ನೂ ಹೃದಯದ ಎಲ್ಲಾ ಕಾಯಿಲೆಗಳಿಂದ ಮುಕ್ತಿಯನ್ನು ಪಡೆಯಬಹುದು. ಈಗ ಪ್ರತಿನಿತ್ಯ ಪಂಡರೀಪುರಕ್ಕೆ ನೇರವಾಗಿ ರೈಲು ಸಂಚಾರದ ವ್ಯವಸ್ಥೆ ಇರುವಾಗ ಹೊಸದಾಗಿ ಹೋಗುವ ಭಕ್ತರು ನಮ್ಮನ್ನು ಸಂಪರ್ಕಿಸಿದರೆ ಶುಲ್ಕ ಸಹಿತ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗುತ್ತದೆ. ಇದು ರುಕ್ಮಿಣಿರಮಣ ಶ್ರೀ ಪಾಂಡುರಂಗ ವಿಠಲನ ಚರಣಕ್ಕೆ ಭಕ್ತಿಯಿಂದ ಅರ್ಪಿಸುವ ತುಳಸಿ ಪುಷ್ಪಮಾಲೆ.
ಇನ್ನಷ್ಟು ವಿವರಗಳು ಮುಂದಿನ ಲೇಖನದಲ್ಲಿ.
– ಬಾಗೂರು ಜಿ. ಪರಪ್ಪ ಸೇಲ್ಕರ್, ನಿವೃತ್ತ ಶಿಕ್ಷಕರು, ದಾವಣಗೆರೆ. ಮೊ: 6363965282