ನಾರಿ ಶಕ್ತಿ ಸಂಗಮ – ನವ ಚೈತನ್ಯದ ಉಗಮ

ನಾರಿ ಶಕ್ತಿ ಸಂಗಮ – ನವ ಚೈತನ್ಯದ ಉಗಮ

ಮಹಿಳೆ, ಹೆಂಗಸು, ಸ್ತ್ರೀ ಎಂದು ಕರೆಯಲ್ಪಡುವ ನಾರಿಗೆ, ಅನಾದಿ ಕಾಲದಿಂದಲೂ ಭಾರತೀಯ ಸಂಸ್ಕೃತಿಯಲ್ಲಿ ಒಂದು ವಿಶಿಷ್ಟ ಸ್ಥಾನಮಾನ. ಒಂದು ಹೆಣ್ಣು ಮಗು ಮಗಳಾಗಿ, ಸಹೋದರಿಯಾಗಿ, ಮಡದಿಯಾಗಿ, ಸೊಸೆಯಾಗಿ, ತಾಯಿಯಾಗಿ ಹೀಗೆ ಜೀವನದಲ್ಲಿ ಕುಟುಂಬದ ಬೇರೆ ಬೇರೆ ಆಯಾಮಗಳಲ್ಲಿ ಪ್ರೀತಿ, ಪ್ರೇಮ ಹಾಗೂ  ವಾತ್ಸಲ್ಯಗಳ ಸುಧೆಯನ್ನೇ ಹರಿಸುತ್ತಾಳೆ. ಇನ್ನು ಪುರಾಣಗಳಲ್ಲಿ ನೋಡಿದರೆ ಬ್ರಹ್ಮಾಂಡದ ಉಗಮದ ಮೂಲ ಶಕ್ತಿಯೇ ಆದಿ ಮಾಯೆ. 

ಈಕೆಯೇ ತ್ರಿಮೂರ್ತಿಗಳ ಮಾತೆ ಎನ್ನುವುದು ನಿತ್ಯಸತ್ಯ. ಅಂದರೆ ಈ ಜೀವನ ಚೈತನ್ಯದ ಉಗಮವೇ ಈಕೆಯ ಗರ್ಭ. 

ಇದರಿಂದಲೇ ನಮ್ಮ ಭೂಮಿಯನ್ನು ಮಾತೆಗೆ ಹೋಲಿಸಿ, ಎಲ್ಲದರಲ್ಲೂ, ಎಲ್ಲರಲ್ಲೂ ವಾತ್ಸಲ್ಯ ಮಯಿ ತಾಯಿ ರೂಪವನ್ನೇ ಕಂಡು ಎಲ್ಲವನ್ನೂ ಮಾತೆ ಎಂದು ವಾಚಿಸುವುದು ನಮ್ಮ ಭವ್ಯ ಭಾರತ ಸಂಸ್ಕೃತಿಯ ಒಂದು ಪರಿ. ಅಂತೆಯೇ ನಾರಿಯೇ ಇಚ್ಛಾ ಶಕ್ತಿ , ಜ್ಞಾನ ಶಕ್ತಿ ಹಾಗೂ ಕ್ರಿಯಾ ಶಕ್ತಿಗಳ ಆಗರ. ಇವುಗಳ ಪ್ರಮಾಣ ಒಬ್ಬೊಬ್ಬರಲ್ಲೂ ಬೇರೆ ಬೇರೆಯಾಗಿರುತ್ತದೆ ವಿನಃ ಯಾರೂ ಶಕ್ತಿ ರಹಿತ ರಾಗಿರುವುದಿಲ್ಲ. ಅದಕ್ಕೆ ನಮ್ಮ ಸುಭಾಷಿತದಲ್ಲಿ “ಗೃಹಿಣಿ ಗೃಹಮುಚ್ಯತೇ “ಎಂದು ವರ್ಣಿಸಿದ್ದಾರೆ. ಅಂದರೆ ಒಂದು ಕಟ್ಟಡ ಗೃಹ ಅನಿಸಬೇಕಾದರೆ ಅಲ್ಲಿ ಗೃಹಿಣಿ ಇರಬೇಕು. ಅದೇ ರೀತಿ ನಮ್ಮ ಸಂಸ್ಕೃತಿಯಲ್ಲಿ ಧರ್ಮಪತ್ನಿಯ ಬಗ್ಗೆ ಹೇಳುವಾಗ  

ಕಾರ್ಯೇಷು ದಾಸಿ, ಕರಣೇಷು ಮಂತ್ರಿ;
ಭೋಜೇಷು ಮಾತಾ, ಶಯನೇಷು ರಂಭ;
ರೂಪೇಷು ಲಕ್ಷ್ಮಿ, ಕ್ಷಮಯೇಷು ಧರಿತ್ರಿ

ಸತ್ಕರ್ಮ ನಾರಿ, ಎಂದು ಒಂದು ಸ್ತ್ರೀ ಯ ಎಲ್ಲ ದಕ್ಷತೆಗಳ ಬಗ್ಗೆ ನಮಗೆ ಅರಿವು ಮೂಡಿಸುತ್ತದೆ.

ಅನಾದಿ ಕಾಲದಿಂದಲೂ ಪುರಾಣದಲ್ಲಿ ಲಕ್ಷ್ಮಿ, ಸರಸ್ವತಿ, ಪಾರ್ವತಿಯರಿಂದ ಹಿಡಿದು ಗಾಯತ್ರಿ, ಕಾಳಿ, ದುರ್ಗೆ ಹೀಗೆ ವಿವಿಧ ಶಕ್ತಿಗಳ ದೇವತೆಗಳು ಹೆಣ್ಣಿನ ರೂಪವೇ. ಇನ್ನು ಐತಿಹಾಸಿಕವಾಗಿ ನೋಡಿ ದರೂ ರೂಪದಲ್ಲಿ, ವಿದ್ಯೆಯಲ್ಲಿ, ಶೌರ್ಯದಲ್ಲಿ, ಆಡಳಿತದಲ್ಲಿ ಸೈ ಅನಿಸಿಕೊಂಡೇ ಬಂದಿರುವುದು ಮಹಿಳೆ. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಭಾರ ತೀಯ ನಾರಿ ಹೇಗಿದ್ದಾಳೆ? ಎಂಬ ಒಂದು ಚಿತ್ರಣ ಮುಂದಿಡೋಣ. 

ನಾರಿ, `ಶಕ್ತಿ ಸ್ವರೂಪಿಣಿ’ ಎಂದು ವರ್ಣಿಸಿರು ವುದು ನಮ್ಮ ಹಿಂದೂ ಸನಾತನ ಸಂಸ್ಕೃತಿಯಲ್ಲಿ ಮಾತ್ರ. ವಿವಿಧತೆಯಲ್ಲಿ ಏಕತೆ ಕಾಣುವ ನಮ್ಮ ಭಾರತ ದಲ್ಲಿಯ ವಿವಿಧ ಭಾಷೆ ವೇಷ  ಭೂಷಣ, ಸಂಪ್ರದಾಯ ,ಆಹಾರ ವಿಹಾರವಿದ್ದರೂ ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ನಮ್ಮ ಜೀವನ ಮೌಲ್ಯ, ಭವ್ಯ ಪರಂಪರೆಯನ್ನು ಜಗತ್ತಿಗೇ ತೋರಿಸಬೇಕಿದೆ. ಭಗವದ್ಗೀತೆ, ವಚನ ಪುರಾಣಗಳಲ್ಲಿನ ಅಧ್ಯಾತ್ಮಿಕ ಚಿಂತನೆ, ವೇದ, ಉಪನಿಷತ್ತು, ವಚನ ಹಾಗೂ ಸರ್ವಜ್ಞನ ವಚನಗಳಲ್ಲಿ ಅಡಗಿರುವ ವೈಜ್ಞಾನಿಕತೆ, ಊಹೆಗೆ ನಿಲುಕದ ಅಗಾಧ ಜ್ಞಾನ ವೈಶಿಷ್ಟ್ಯತೆಗಳನ್ನು ಉಳಿಸಿ, ಬೆಳೆಸಿ ಮುಂದಿನ ಪೀಳಿಗೆಗೆ ಕೊಂಡೊಯ್ಯುವುದು ನಾರಿಯರಾದ ನಮ್ಮೆಲ್ಲರ ಕರ್ತವ್ಯವಾಗಿದೆ. ಮನೆಯೇ ಮೊದಲ ಪಾಠ ಶಾಲೆ ತಾಯಿಯೇ ಮೊದಲ ಗುರು, ಒಲಿದರೆ ನಾರಿ ಮುನಿದರೆ ಮಾರಿ, ನಾರಿ ವಜ್ರದಂತೆ ಕಠೋರ ಆದರೆ ಕುಸುಮದಷ್ಟೇ ಕೋಮಲ ಅನ್ನುವ ಈ ನಾಣ್ಣುಡಿಗಳೆಲ್ಲ ಕಟುಸತ್ಯ. ಆಕೆಯ ಮನಸ್ಸನ್ನು ಅರ್ಥ ಮಾಡಿಕೊಂಡ ಒಂದು ಕುಟುಂಬ ಸಕಲ ಸೌಭಾಗ್ಯ ಗಳನ್ನು ಪಡೆಯುವುದು. 

ಹೆಣ್ಣೊಂದು ಕಲಿತರೆ  ಶಾಲೆಯೊಂದು ತೆರೆದಂತೆ, ತೊಟ್ಟಿಲು ತೂಗುವ ಕೈಗಳು ದೇಶವನ್ನು ಅಳ ಬಲ್ಲವು.  ಈ ಎಲ್ಲ ನಾಣ್ನುಡಿಗಳು ಈ ನಾರಿಯ ಜ್ಞಾನದ, ಆಕೆಯ ನಾಯಕತ್ವದ ಆಳವನ್ನು ತೋರಿ ಸುತ್ತದೆ. ಒಟ್ಟಿನಲ್ಲಿ ಇಷ್ಟೆಲ್ಲ ಗುಣ ಸಾಮರ್ಥ್ಯಗಳನ್ನು ಹೊಂದಿರುವ ಮಹಿಳೆ ಭೂಮಿಯಿಂದ ಅಂತರಿಕ್ಷದವರೆಗೆ, ವೈದ್ಯಕೀಯ, ತಾಂತ್ರಿಕ ಶೈಕ್ಷಣಿಕ ರಾಜಕೀಯ  ಸಂಗೀತ ನೃತ್ಯ ಸಾಹಿತ್ಯ ಅಲ್ಲದೆ ಅಂತರಿಕ್ಷದಲ್ಲಿಯೂ ತನ್ನ ಸಾಧನೆ ಮೆರೆದಿದ್ದಾಳೆ.

ಆದರೆ ಈ ತರಹ ಸಾಧನೆ ಮಾಡಿದ ಸ್ತ್ರೀಯರ ಸಂಖ್ಯೆ 3 ರಿಂದ 5 ಪ್ರತಿ ಶತ ಮಾತ್ರ ಎಂದರೆ ತಪ್ಪಾಗಲಾರದು. ನಮ್ಮ ದೇಶದಲ್ಲಿ ಇಂದಿಗೂ ನಮ್ಮ ಸುತ್ತ ಮುತ್ತಲೇ ಇರುವ ಎಷ್ಟೊಂದು ಮಹಿಳೆಯರು ದೌರ್ಜನ್ಯ,  ಶೋಷಣೆಗಳಿಗೆ ಬಲಿಯಾಗುತ್ತಾ ಬಂದಿದ್ದಾರೆ. ಬಡತನ ಶಿಕ್ಷಣದ ಕೊರತೆ, ಅಂಧಾನುಕರಣೆ, ಮೂಢನಂಬಿಕೆಗಳು, ಎಲ್ಲಕ್ಕಿಂತ ಹೆಚ್ಚಾಗಿ ಅನಾ ರೋಗ್ಯ ಆಹಾರ. ಅಪೌಷ್ಟಿಕತೆ ಜೀವನ ಹೈರಾಣಾಗಿಸಿದೆ.

ಇದಕ್ಕೆ ಪೂರಕ ಎನ್ನುವಂತೆ ಅವರ ದೌರ್ಬಲ್ಯ ಗಳನ್ನು ಅರಿತು ಅವರಿಗೆ ಆಸೆ ಆಮಿಷಗಳನ್ನು ಒಡ್ಡಿ, ತಪ್ಪು ದಾರಿಗೆ ಎಳೆಯುವ ದುಷ್ಟ ಶಕ್ತಿಗಳು ನೂರಾರು ನಮ್ಮ ಸುತ್ತಲೂ ಹರಡಿವೆ. ಇನ್ನೊಂದೆಡೆ  ಆರ್ಥಿಕ ವಾಗಿ ಮುಂದಿದ್ದರೂ ಸಂಸ್ಕಾರದ ಕೊರತೆಯಿಂದ ಜೀವನ ಮೌಲ್ಯಗಳನ್ನು ಕಳೆದು ಕೊಂಡು, ಜೀವನೋತ್ಸಾಹವಿಲ್ಲದೆ, ದುಶ್ಚಟಗಳಿಗೆ ಬಲಿಯಾಗುತ್ತಿರುವ ಯುವ ಸ್ತ್ರೀ ಸಮೂಹ ಇನ್ನೊಂದು. ಈ ಪುರಾತನ ಆಧುನಿಕ ಎನ್ನುವ ಎರಡು ದ್ವಂದ್ವಗಳ ನಡುವೆ ಸಿಲುಕಿರುವ ಗುಂಪು ಮಗದೊಂದು. 

ಒಂದು ಹೆಣ್ಣು ಕುಟುಂಬದ ಕಣ್ಣು, ಒಂದು ಸುಸಂಸ್ಕೃತ ಕುಟುಂಬ ಒಂದು ಆರೋಗ್ಯಕರ
ಸಮಾಜದ ಬುನಾದಿಯಾ ಗಬಲ್ಲದು. ಒಂದು
ಸ್ವಸ್ಥ ಹಾಗೂ ಸುಸಂಸ್ಕೃತ ಸಮಾಜ ಮಾತ್ರವೇ ಒಂದು ಬಲಿಷ್ಠ  ರಾಷ್ಟ್ರ ನಿರ್ಮಾಣಕ್ಕೆ ಅಡಿಪಾಯ. ಇಂತಹ ಸದೃಢ ರಾಷ್ಟ್ರ ಮಾತ್ರವೇ ವಿಶ್ವ ಗುರುವಾಗಿ ವಸುದೈವ ಕುಟುಂಬಕಮ್ ಎಂಬ ಶಾಂತಿ ಮಂತ್ರದಿಂದ ಜಗತ್ತನ್ನು ಮುನ್ನಡೆಸುವುದು. ಈ ಶಕ್ತಿ ಇರುವುದು ಮಾತೃತ್ವ ಸೆಲೆ ಇರುವ ನಾರಿ ಶಕ್ತಿಗೆ ಮಾತ್ರವೇ. 

ಇಂತಹ ನಾರಿಯರ ಶಕ್ತಿಗಳು ಸಂಗಮ ವಾದರೆ? ಈ ಶಕ್ತಿಯ ಸಂಗಮ ಎಲ್ಲ ನಾರಿಮಣಿಗಳ ಉನ್ನತ ಚಿಂತನೆಗಳಿಂದ. ಭಾರತೀಯ ಚಿಂತನೆ ಯಲ್ಲಿ ಮಹಿಳೆ,  ಈಗಿನ ಪರಿಸ್ಥಿಯಲ್ಲಿ ಗ್ರಾಮಾಂತರ ಹಾಗೂ ನಗರ ಪ್ರದೇಶದ ಮಹಿಳೆಯರ ಸವಾಲು ಗಳೇನು?
ಅದಕ್ಕೆ ಪರಿಹಾರಗಳೇನು? ನಮ್ಮೆಲ್ಲರ ಕನಸಾಗಿರುವ  ವಿಶ್ವ ಗುರು  ಭವ್ಯ ಭಾರತದ  ವಿಕಾಸದಲ್ಲಿ ನಾರಿಯರ ಪಾತ್ರವೇನು? ಇಂತಹ ಚಿಂತನ ಮಂಥನ ಕಾರ್ಯವನ್ನು  ಒಂದೇ ಚಿತ್ತ ದಿಂದ ಎಲ್ಲ ನಾರಿಯರು ಸೇರಿ ಮಾಡಬೇಕಿದೆ. ಬನ್ನಿ ಸಹೋದರಿಯರೇ ಇದೇ ಬರುವ ಡಿಸೆಂಬರ್ 3 ರೇಣುಕಾ ಮಂದಿರದಲ್ಲಿ ನಡೆಯುವ ನಾರಿ ಶಕ್ತಿ ಸಂಗಮಕ್ಕೆ ಸೇರೋಣ ನವ ಚೈತನ್ಯದ ಉಗಮಕ್ಕೆ ನಾಂದಿ
ಹಾಡಿ ಪೂಜನೀಯ ಭಾರತ ಮಾತೆಯ ಮುಡಿಯ
ಕೀರ್ತಿ ಕಿರೀಟವನ್ನು ಭದ್ರವಾಗಿಸಲು ಕಂಕಣ ತೊಡೋಣ. ಜನನಿ ಜನ್ಮ ಭೂಮಿಶ್ಚ್ ಸ್ವರ್ಗಾದಪಿ ಗರಿಯಸಿ ಎಂಬ ಮಾತನ್ನು ಸತ್ಯವಾಗಿಸೋಣ. 

– ಡಾ. ಆರತಿ ಸುಂದರೇಶ್, ದಾವಣಗೆರೆ.

error: Content is protected !!