ಆಂಟಿಬಯೋಟಿಕ್‌ಗಳ ಬಳಕೆ – ಅಂದು, ಇಂದು, ಮುಂದೆ… ಬಳಸುವಾಗ ಜಾಗ್ರತೆ ಇರಲಿ!!

ಆಂಟಿಬಯೋಟಿಕ್‌ಗಳ ಬಳಕೆ – ಅಂದು, ಇಂದು, ಮುಂದೆ… ಬಳಸುವಾಗ ಜಾಗ್ರತೆ ಇರಲಿ!!

2015 ರಿಂದ ಪ್ರತಿವರ್ಷ ನವೆೆಂಬರ್ ತಿಂಗಳ 18 ರಿಂದ – 24ನೇ ತಾರೀಖಿನವರೆಗೆ ಒಂದು ವಾರ ವಿಶ್ವ ಆಂಟಿ ಮೈಕ್ರೋಬಿಯಲ್ ಪ್ರತಿರೋಧ ಜಾಗೃತಿ ವಾರ 

(WAAW–World Antimicrobial Resistance Awareness Week)

ನಮ್ಮ ಸುತ್ತಲಿನ ಪರಿಸರದಲ್ಲಿ ನಮ್ಮಂತೆ ಜೀವಿ ಸಿರುವ ಕಣ್ಣಿಗೆ ಕಾಣದ ಅನೇಕ ಸೂಕ್ಷ್ಮ ಜೀವಿ ಗಳಿವೆ. ಅವುಗಳು ಬ್ಯಾಕ್ಟೀರಿಯಾ, ವೈರಸ್, ಶಿಲೀಂಧ್ರ  ಮತ್ತು ಪರೋಪ ಜೀವಿಗಳು. ಮನುಷ್ಯ ಅಥವಾ ಪ್ರಾಣಿಗಳಲ್ಲಿ ಕಾಯಿಲೆಯನ್ನು ಉಂಟುಮಾಡುವ ಸೂಕ್ಷ್ಮ ಜೀವಿಗಳಿಗೆ ರೋಗಕಾರಕಗಳು ಎನ್ನುತ್ತೇವೆ. ಹೀಗೆ ಸೂಕ್ಷ್ಮಜೀವಿಗಳಿಂದ ಉಂಟಾಗುವ ಕಾಯಿಲೆಗಳನ್ನು ಸೋಂಕು ರೋಗ / ‘ನಂಜು’ ಎನ್ನಲಾಗುತ್ತದೆ. ರೋಗ ಕಾರಕಗಳು ಮನುಷ್ಯರಲ್ಲಿ ಒಬ್ಬರಿಂದ ಮತ್ತೊಬ್ಬರಿಗೆ, ಮನುಷ್ಯರಿಂದ ಪ್ರಾಣಿಗಳಿಗೆ, ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತವೆ. ಸೋಂಕು ಅಥವಾ ಸೂಕ್ಷ್ಮಜೀವಿಗಳನ್ನು ನಿಗ್ರಹಿಸಲು ಉಪಯೋಗಿಸುವ ಔಷಧಿಗಳೇ ಪ್ರತಿ ಜೀವಕಗಳು ಅಥವಾ ಆಂಟಿ ಮೈಕ್ರೋಬಿಯಲ್  (ಆಂಟಿಬಯೋಟಿಕ್ ಔಷಧಿಗಳು). ಇವುಗಳನ್ನು ಮಾತ್ರೆಗಳ ರೂಪದಲ್ಲಿ, ಇಂಜೆಕ್ಷನ್ ಗಳಾಗಿ, ಕಣ್ಣಿಗೆ ಹಾಕುವ ಹನಿ ಔಷಧಿ ಇತ್ಯಾದಿಯಾಗಿ ಬಳಸಲಾಗುತ್ತದೆ.

ವೈದ್ಯಕೀಯ ಇತಿಹಾಸ ದಾಖಲೆಗಳ ಪ್ರಕಾರ ಸೂಡಾನ್ ಮತ್ತು ಈಜಿಪ್ಟ್ ದೇಶಗಳಲ್ಲಿ ದೊರೆತಿರುವ ಮಾನವ ಅಸ್ಥಿಪಂಜರ ಮತ್ತು ಮೂಳೆಗಳ ಅವಶೇಷಗಳಲ್ಲಿ ಕಂಡುಬಂದಿರುವ ಟೆಟ್ರಾಸೈಕ್ಲಿನ್ ಆಂಟಿಬಯೋಟಿಕ್ ಅಂಶ,  ಜೋರ್ಡಾನ್ ದೇಶದಲ್ಲಿ ಪುರಾತನ ಕಾಲದಲ್ಲಿ ತೆರೆದ ಗಾಯಗಳಿಗೆ ಹಚ್ಚುತ್ತಿದ್ದ ಒಂದು ರೀತಿಯ ಕೆಂಪು ಮಣ್ಣು ಇವೆಲ್ಲವೂ ಪೂರ್ವ ಆಂಟಿಬಯೋಟಿಕ್ ಯುಗದಲ್ಲಿ ಇವುಗಳನ್ನು ಪರೋಕ್ಷವಾಗಿ ಬಳಸಲಾಗುತ್ತಿತ್ತೇ ಎನ್ನುವ ವಿಚಾರವನ್ನು ಹೊರಹಾಕಿವೆ.

ಆಧುನಿಕ ಆಂಟಿಮೈಕ್ರೋಬಿಯಲ್ ಯುಗದಲ್ಲಿ ಮೊದಲು ಬಳಕೆಯಾದದ್ದು ಸಲವರ್ಸಾನ್ ಮತ್ತು ನಿಯೋಸಲವರ್ಸಾನ್ ಎಂಬ ಸಿಂಥೆಟಿಕ್ ಆಂಟಿಬಯೋ ಟಿಕ್. 1910 ರಲ್ಲಿ ಪಾಲ್ ಎರ್ಲಿಚ್ ಎನ್ನುವ ವಿಜ್ಞಾನಿ ಅದನ್ನು ಸಿಫಿಲಿಸ್ ಕಾಯಿಲೆಗೆ ಬಳಸಿದರು. 1928 ರಲ್ಲಿ ಅಲೆಕ್ಸಾಂಡರ್ ಫ್ಲೆಮಿಂಗ್ ವಿಜ್ಞಾನಿ  ಪೆನ್ಸಿಲಿನ್ ನೈಸರ್ಗಿಕ ಆಂಟಿಬಯೋಟಿಕ್ ಕಂಡುಹಿಡಿದರು. ಇದು ಪೆನಿಸಿಲಿಯಂ ನೋಟಾಟಂ ಎಂಬ ಶಿಲೀಂಧ್ರದ ಉತ್ಪನ್ನ . ನಂತರ ಸಲ್ಫಾ ಡ್ರಗ್ ಗಳ  ಬಳಕೆ, ಪೆನ್ಸಿಲಿನ್‌ನ ವೈದ್ಯಕೀಯ ಬಳಕೆಯು 1945 ರಲ್ಲಿ ನಿಯಮಿತವಾಗಿ ಪ್ರಾರಂಭವಾಯಿತು. ಜಗತ್ತಿನಾದ್ಯಂತ ಇದು ಹೆಚ್ಚು ಸಮರ್ಪಕವಾಗಿ ಬಳಕೆಯಾಗುವಷ್ಟರಲ್ಲಿಯೇ ಅಲೆಕ್ಸಾಂ ಡರ್ ಫ್ಲೆಮಿಂಗ್ ಗೆ ಪೆನ್ಸಿಲಿನ್ ವಿರುದ್ಧವಾಗಿ ಬ್ಯಾಕ್ಟೀರಿ ಯಾಗಳು ಪ್ರತಿರೋಧತೆಯನ್ನು ಹೊಂದುವ ಸೂಕ್ಷ್ಮತೆ ಅದಾಗಲೇ ಸಿಕ್ಕಿತ್ತು!!  ನಂತರ ಅಮೈನೋಗ್ಲೈಕೋಸೈಡ್, ಮ್ಯಾಕ್ರೋಲೀಡ್ಸ್, ಕ್ವಿನೋಲೋನ್‌ಗಳು…… ಹೀಗೆ ಸಾಲು ಸಾಲು ಆಂಟಿಬಯೋಟಿಕ್‌ಗಳ  ಆವಿಷ್ಕಾರ ಮತ್ತು ಬಳಕೆ. ಆದ್ದರಿಂದ 1945 ರಿಂದ 1970ರ ವರೆಗೆ ಆಂಟಿಬಯೋಟಿಕ್‌ಗಳ ಸುವರ್ಣ ಯುಗ ಎನ್ನಲಾಗುತ್ತದೆ. ಅಲ್ಲಿಂದ ಈಚೆಗೆ ಹೊಚ್ಚ ಹೊಸ ಆಂಟಿ ಬಯೋಟಿಕ್ ಗಳ ಆವಿಷ್ಕಾರ ಗಣನೀಯವಾಗಿ ಕಡಿಮೆಯಾಗಿದೆ.

ಆಂಟಿ ಮೈಕ್ರೋಬಿಯಲ್ ಅಥವಾ ಪ್ರತಿಜೀವಕ ಔಷಧಗಳು ಬ್ಯಾಕ್ಟೀರಿಯಾ ವಿರುದ್ಧ, ವೈರಸ್ ನ ವಿರುದ್ಧ,  ಶಿಲೀಂಧ್ರಗಳ ವಿರುದ್ಧ,  ಪರೋಪ ಜೀವಿಗಳ ವಿರುದ್ಧ  ಬಲವಾದ ಆಯುಧದಂತೆ ಕೆಲಸ ಮಾಡುತ್ತವೆ. ಯಾವುದೇ ಸೂಕ್ಷ್ಮ ಜೀವಿ  ಈ ಔಷಧಿಗಳ ವಿರುದ್ಧ ಪ್ರತಿರೋಧಕ ಶಕ್ತಿಯನ್ನು ಪಡೆದುಕೊಂಡು ಔಷಧಿಗಳ ಕಾರ್ಯಕ್ಷಮತೆಯನ್ನು ಕುಗ್ಗಿಸಿದಾಗ ಅದನ್ನು ಆಂಟಿ ಮೈಕ್ರೋಬಿಯಲ್ ರೆಸಿಸ್ಟೆನ್ಸ್‌ ಅಥವಾ ಪ್ರತಿಜೀವಕ ಪ್ರತಿರೋಧ ಎನ್ನುತ್ತೇವೆ. ಇಂಥ ಸಂದರ್ಭದಲ್ಲಿ ರೋಗಿ ಔಷಧಗಳನ್ನು ಬಳಸಿದರೂ ಚೇತರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಸೋಂಕು ನಿವಾರಣೆ ಆಗುವುದಿಲ್ಲ. ಪ್ರತಿರೋಧ ಒಂದು ನೈಸರ್ಗಿಕ ಘಟನೆ. ಸೂಕ್ಷ್ಮಜೀವಿಗಳಲ್ಲಿ ಬದುಕುಳಿಯುವ ಪ್ರಯೋಜನ ವನ್ನು ಹೊಂದಿದೆ.   ಆದರೆ   ಮನುಷ್ಯ ಅಥವಾ ಪ್ರಾಣಿಗಳಲ್ಲಿ ಉಂಟಾಗುವ ಕೆಲವು ಅಂಶಗಳು ಆಂಟಿ ಮೈಕ್ರೋಬಿಯಲ್ ಪ್ರತಿರೋಧದ ಹೊರಹೊಮ್ಮುವಿಕೆ ಮತ್ತು ಹರಡುವಿಕೆಯನ್ನು ವೇಗಗೊಳಿಸುತ್ತವೆ.

  • ಅಂಟಿ ಬಯೋಟಿಕ್‌ಗಳ ದುರ್ಬಳಕೆ : ಅಂದರೆ ಅತಿಯಾದ ಬಳಕೆ ಅಥವಾ ಅನುಚಿತ ಬಳಕೆ; ಸೂಕ್ಷ್ಮಾಣುವಿಗೆ ತಕ್ಕದಲ್ಲದ ಆಂಟಿಬಯೋಟಿಕ್ ಸೇವನೆ, ವೈದ್ಯರ ಸೂಚನೆ ಇಲ್ಲದೆ ಆಂಟಿ ಬಯೋಟಿಕ್ ಸೇವಿಸುವುದು, ಅರ್ಧದಲ್ಲಿಯೇ ಆಂಟಿ ಬಯೋಟಿಕ್ ಚಿಕಿತ್ಸೆ ನಿಲ್ಲಿಸುವುದು, ಆಂಟಿ ಬಯೋಟಿಕ್ ಸೇವನೆಯ ಪ್ರಮಾಣದಲ್ಲಿ (ಡೋಸೇಜ್ ನಲ್ಲಿ) ಹೆಚ್ಚು ಕಡಿಮೆ ಆಗುವುದು, ದೀರ್ಘಾವಧಿಯವರೆಗೆ  ಅಥವಾ ಪದೇ ಪದೇ ಅಂಟಿಬಯೋಟಿಕ್ ಚಿಕಿತ್ಸೆ, ಸೂಕ್ತ ಕಾರಣ ಇಲ್ಲದೆ  ಹೆಚ್ಚಿನ ಶ್ರೇಣಿಯ ಅಥವಾ ‘ಬ್ರಾಡ್ ಸ್ಪೆಕ್ಟ್ರಮ್ ಆಂಟಿಬಯೋಟಿಕ್’ ಗಳನ್ನು ಸೇವಿಸುವುದು.
  • ಶುದ್ಧ ನೀರಿನ ಕೊರತೆ, ನೈರ್ಮಲ್ಯದಲ್ಲಿ ಕೊರತೆ, ಸರಿಯಾಗಿ ಕೈ ತೊಳೆಯದೇ ಇರುವುದು.
  • ಆಸ್ಪತ್ರೆಗಳಲ್ಲಿ, ಪಶು ಮತ್ತು ಕೋಳಿ ಸಾಕಾಣಿಕೆ ಕೇಂದ್ರ ಗಳಲ್ಲಿ ಕಳಪೆ ಮಟ್ಟದ ಸೋಂಕು ಮತ್ತು
    ರೋಗ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಸೌಲಭ್ಯ.
  • ಗುಣಮಟ್ಟದ  ಔಷಧಿ/ಲಸಿಕೆ/ಪರೀಕ್ಷಾ ಕೇಂದ್ರಗಳ ಕೊರತೆ 
  • ಆಸ್ಪತ್ರೆ ಸಿಬ್ಬಂದಿ ಮತ್ತು ಸಾರ್ವಜನಿಕರಲ್ಲಿ ಆಂಟಿ ಮೈಕ್ರೋಬಿಯಲ್ ಪ್ರತಿರೋಧದ ಬಗ್ಗೆ ಅರಿವು ಮತ್ತು ಜ್ಞಾನದ ಕೊರತೆ.

ಆಂಟಿ ಬಯೋಟಿಕ್ ಪ್ರತಿರೋಧವು ಅತಿ ಮುಖ್ಯ ವಾದ ಜಾಗತಿಕ ಸಾರ್ವಜನಿಕ ಆರೋಗ್ಯ ಬೆದರಿಕೆಗಳಲ್ಲಿ ಒಂದಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ. ಇದು ಯಾವುದೇ ದೇಶದಲ್ಲಿ ಯಾವುದೇ ವಯಸ್ಸಿನ ಜನರಲ್ಲಿ ಕಾಣಿಸಿಕೊಳ್ಳಬಹುದು. ಇತ್ತೀಚಿಗೆ ಹೆಚ್ಚುತ್ತಿರುವ ನ್ಯುಮೋನಿಯಾ, ಕ್ಷಯ, ಗೊನೇರಿಯಾ, ಮಲೇರಿಯಾ, ಟೈಫಾಯಿಡ್ ಜ್ವರ ಇವುಗಳ ಚಿಕಿತ್ಸೆ ಕಷ್ಟ ಸಾಧ್ಯವಾಗಿದೆ. ಜಾಗತಿಕ ಆರೋಗ್ಯ ಮತ್ತು ಅಭಿವೃದ್ಧಿಗೆ ದೊಡ್ಡ ಬೆದರಿಕೆ ಯಾಗಿದೆ. ಆಂಟಿ ಬಯಾಟಿಕ್ ಪ್ರತಿರೋಧತೆಯಿಂದ ಆಸ್ಪತ್ರೆಯಲ್ಲಿ ದೀರ್ಘಾವಧಿ ಉಳಿಯಬೇಕಾಗಿ, ಚಿಕಿತ್ಸೆ ದುಬಾರಿಯಾಗಿ ಖರ್ಚು-ವೆಚ್ಚಗಳು ಮೇಲೇರಿ, ಮರಣದ ಸಂಖ್ಯೆ ಹೆಚ್ಚಿದೆ. ಜಗತ್ತಿನಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಆಂಟಿ ಮೈಕ್ರೋಬಿಯಲ್ ಔಷಧಿಗಳನ್ನು ಬಳಸುವ ದೇಶ ಎಂದರೆ ಭಾರತ. ಪರಿಣಾಮಕಾರಿ ಆಂಟಿ ಮೈಕ್ರೋಬಿಯಲ್ ಚಿಕಿತ್ಸೆ ಇಲ್ಲದಂತಾಗಿ ಯಾವುದೇ ಸಾಧಾರಣ ಸೋಂಕು ನಿವಾರಣೆ, ಇತರೆ ಶಸ್ತ್ರಚಿಕಿತ್ಸೆಗಳು ಮತ್ತು ಕ್ಯಾನ್ಸರ್ ಕೀಮೋಥೆರಪಿ, ಅಂಗಾಂಗ ಕಸಿ ಚಿಕಿತ್ಸೆ ವಿಫಲವಾಗಬಹುದು.

ವೈದ್ಯರು ಸಾಧಾರಣವಾಗಿ ಸೂಚಿಸುವ ಮೊದಲನೇ ಸಾಲಿನ ಆಂಟಿಮೈಕ್ರೋಬಿಯಲ್ ಗಳಿಗೆ ಪ್ರತಿರೋಧತೆ ಉಂಟಾದಾಗ, ಎರಡನೇ ಸಾಲಿನ ಅಥವಾ ಉನ್ನತ ಶ್ರೇಣಿಯ ಆಂಟಿಬಯೋಟಿಕ್ ಚಿಕಿತ್ಸೆ ನೀಡುತ್ತಾರೆ. ಅವುಗಳಿಗೂ ಪ್ರತಿರೋಧತೆ ಉಂಟಾದರೆ ಮುಂದೆ ಸೋಂಕಿಗೆ ಮದ್ದು ಇಲ್ಲದಂತಾಗುತ್ತದೆ. ಆದ್ದರಿಂದ ಔಷಧ ನಿರೋಧಕತೆಯನ್ನು ತಡೆಗಟ್ಟುವುದು ಮತ್ತು ನಿಯಂತ್ರಣ ಕ್ರಮಗಳನ್ನು ಪಾಲಿಸುವುದು ಪ್ರಧಾನವಾಗಿದೆ. 

  • ವೈದ್ಯರು ಸೂಚಿಸಿದಾಗ ಮಾತ್ರ ಆಂಟಿ ಮೈಕ್ರೋಬಿಯಲ್ ಔಷಧಗಳನ್ನು ಬಳಸಿ.
  • ನಿಮ್ಮ ವೈದ್ಯರು ಅವುಗಳ ಅಗತ್ಯವಿಲ್ಲ ಎಂದಾಗ ಅವುಗಳನ್ನು ಒತ್ತಾಯಿಸಬೇಡಿ.
  • ಔಷಧಿ ಅಂಗಡಿಯಲ್ಲಿ ಇವುಗಳನ್ನು ಪ್ರಿಸ್ಕ್ರಿಪ್ಷನ್ ಇಲ್ಲದೆ ನೀವಾಗಿ ತೆಗೆದುಕೊಳ್ಳಬೇಡಿ.
  • ಒಮ್ಮೆ ಉಪಯೋಗಿಸಿ ಉಳಿದಿರುವ ಆಂಟಿಮೈಕ್ರೋಬಿಯಲ್ ಗಳನ್ನು ಮತ್ತೆ ಬಳಸಬೇಡಿ ಅಥವಾ ಹಂಚಿಕೊಳ್ಳಬೇಡಿ
  • ಆಂಟಿಬಯಾಟಿಕ್ ಚಿಕಿತ್ಸೆಯನ್ನು ಬಳಸುವಾಗ ಸರಿಯಾದ ಪ್ರಮಾಣದಲ್ಲಿ ಸರಿಯಾದ ಅವಧಿಯವರೆಗೆ ತೆಗೆದುಕೊಳ್ಳಿ. ಅರ್ಧದಲ್ಲಿಯೇ ನಿಲ್ಲಿಸದಿರಿ. ಪದೇ ಪದೇ ಅವುಗಳನ್ನು ಉಪಯೋಗಿಸಬಾರದು.
  • ಸೋಂಕು ನಿಯಂತ್ರಣ ಕ್ರಮಗಳನ್ನು ಅನುಸರಿಸಿ: ನಿಯಮಿತವಾಗಿ ಕೈ ತೊಳೆಯಿರಿ. 
  • ಸೀನುವಾಗ ಮೂಗು ಮತ್ತು ಬಾಯಿಗೆ ಕರವಸ್ತ್ರ/ಟಿಶ್ಯೂ ಪೇಪರ್ ಮುಚ್ಚಿ ಹಿಡಿಯಬೇಕು.
  • ಅನಾರೋಗ್ಯದವರೊಂದಿಗೆ ನಿಕಟ ಸಂಪರ್ಕವನ್ನು ತಪ್ಪಿಸಿ. 
  • ಕೆಮ್ಮು, ಕಫ ಇದ್ದರೆ ಮಾಸ್ಕ್ ಬಳಸಿ.
  • ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು, ರಸ್ತೆ ಬದಿಯಲ್ಲಿ ಮೂತ್ರ ವಿಸರ್ಜಿಸುವುದು ಮಾಡದಿರಿ.
  • ಸುರಕ್ಷಿತ ಲೈಂಗಿಕತೆಯನ್ನು ರೂಢಿಸಿಕೊಳ್ಳಿ.
  • ಕಾಲಕಾಲಕ್ಕೆ ಲಸಿಕೆ ತೆಗೆದುಕೊಳ್ಳುವುದು.
  • ಸುತ್ತಲಿನ ಪರಿಸರದ ಸ್ವಚ್ಛತೆ ಮತ್ತು ನೈರ್ಮಲ್ಯತೆಯನ್ನು ಕಾಪಾಡಿಕೊಳ್ಳುವುದು.
  • ಆರೋಗ್ಯಕರ ಆಹಾರ ತಯಾರಿಕೆಗಾಗಿ ವಿಶ್ವ ಆರೋಗ್ಯ ಸಂಸ್ಥೆಯ ಐದು ಮುಖ್ಯ ಅಂಶಗಳನ್ನು ಅನುಸರಿಸಿ:
  • ಸುರಕ್ಷಿತ ನೀರು ಮತ್ತು ಕಚ್ಚಾ ವಸ್ತುಗಳನ್ನು ಬಳಸುವುದು, ಆಹಾರವನ್ನು ತಯಾರಿಸಿ ಶುದ್ಧವಾಗಿರಿಸು ವುದು, ಕಚ್ಚಾ ಮತ್ತು ಬೇಯಿಸಿದ ಆಹಾರವನ್ನು ಪ್ರತ್ಯೇಕಿಸು ವುದು, ಆಹಾರವನ್ನು ಸಂಪೂರ್ಣವಾಗಿ ಬೇಯಿಸುವುದು, ಸುರಕ್ಷಿತ
    ತಾಪಮಾನದಲ್ಲಿ ಆಹಾರವನ್ನು ಇರಿಸುವುದು.
  • ಮಾಂಸಾಹಾರ ಬಳಸುವಾಗ  ಆಂಟಿ ಮೈಕ್ರೋಬಿಯಲ್‌ಗಳನ್ನು ಬಳಸದೇ ಉತ್ಪಾದಿಸಲಾದ ಆಹಾರವನ್ನು ಆರಿಸಿ.
  • ಆಂಟಿಮೈಕ್ರೋಬಿಯಲ್  ಪ್ರತಿರೋಧವನ್ನು ನಿಭಾಯಿಸಲು ದೃಢವಾದ ರಾಷ್ಟ್ರೀಯ ಯೋಜನೆಯನ್ನು  ಜಾರಿಯಲ್ಲಿ ಇಡಬೇಕು; ಔಷಧ ನಿರೋಧಕ ಸೋಂಕುಗಳ ಮೇಲೆ ಕಣ್ಗಾವಲು, ನಿಯಂತ್ರಣ ಕ್ರಮಗಳ ಅನುಷ್ಠಾನವನ್ನು
    ಬಲಪಡಿಸುವುದು, ಗುಣಮಟ್ಟದ ಔಷಧಿಗಳ ಸೂಕ್ತ ಬಳಕೆ ಮತ್ತು ನಿಯಂತ್ರಿತ ವಿಲೇವಾರಿ ಮಾಡುವುದು ಅಗತ್ಯ.
  • ಆಂಟಿ ಮೈಕ್ರೋಬಿಯಲ್ ಪ್ರತಿರೋಧದ ಪ್ರಭಾವದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಕೊಡುವುದು.
  • ಹೊಸ ಆಂಟಿ ಮೈಕ್ರೋಬಿಯಲ್ ಔಷಧಿಗಳು / ಲಸಿಕೆಗಳು / ರೋಗ ನಿರ್ಣಾಯಕ ಪರೀಕ್ಷೆಗಳು ಮತ್ತು ಇತರ ವೈದ್ಯಕೀಯ ಹೊಸ ಪರ್ಯಾಯ ಚಿಕಿತ್ಸೆಗಳ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹೂಡಿಕೆಯನ್ನು ಹೆಚ್ಚಿಗೆ ಮಾಡುವುದು ಅಗತ್ಯ.
  • ಕೃಷಿ ಮತ್ತು ಪಶು ವಲಯದಲ್ಲಿ ಪ್ರಾಣಿಗಳಿಗೆ ಅವಶ್ಯಕತೆ ಇದ್ದಲ್ಲಿ, ಪಶು ವೈದ್ಯರ ಮೇಲ್ವಿಚಾರಣೆಯಲ್ಲಿ ಮಾತ್ರ ಆಂಟಿಬಯೋಟಿಕ್ ಗಳನ್ನು ನೀಡಬೇಕು. ಆರೋಗ್ಯಕರ ಪ್ರಾಣಿಗಳಲ್ಲಿ ಬೆಳವಣಿಗೆಯ ವೃದ್ಧಿಗಾಗಿ ಅಥವಾ ರೋಗ
    ತಡೆಗಟ್ಟಲು ಇವುಗಳನ್ನು ಬಳಸಬಾರದು. ಪ್ರಾಣಿಗಳಲ್ಲಿ ಸೋಂಕನ್ನು ಕಡಿಮೆ ಮಾಡಲು ಶುಚಿತ್ವ, ನೈರ್ಮಲ್ಯ ಇವುಗಳನ್ನು ಕಾಪಾಡಿಕೊಂಡು ನಿಯಮಿತವಾಗಿ ಲಸಿಕೆ ಹಾಕಿಸಿ.

ವಿಶ್ವ ಆರೋಗ್ಯ ಸಂಸ್ಥೆಯು ಆಂಟಿಬಯೋಟಿಕ್ ಪ್ರತಿರೋಧವನ್ನು ಗಂಭೀರವಾಗಿ ಪರಿಗಣಿಸಿದ್ದು, ಜಾಗತಿಕ ಮಟ್ಟದಲ್ಲಿ ಯೋಜನೆಯನ್ನು ಹಾಕಿಕೊಂಡಿದೆ.

`ಗೋ ಬ್ಲ್ಯೂ’ ಪರಿಕಲ್ಪನೆಯೊಂದಿಗೆ (ಆಸ್ಪತ್ರೆಗಳಲ್ಲಿ ಸಾಧಾರಣವಾಗಿ ಬಳಸಲಾಗುವ ಆಕಾಶ ನೀಲಿ ಬಣ್ಣದ ಉಡುಪು ಧರಿಸುವುದರೊಂದಿಗೆ) ಆಚರಿಸಲಾಗುತ್ತಿದೆ.  ‘ಆಂಟಿ ಮೈಕ್ರೋಬಿಯಲ್‌ಗಳು: ಕಾಳಜಿಯಿಂದ ಬಳಸಿ ‘ಪ್ರಿವೆಂಟಿಂಗ್ ಆಂಟಿಮೈಕ್ರೋಬಿಯಲ್ ರೆಸಿಸ್ಟನ್ಸ್ ಟುಗೆದರ್ ಎಂಬ ಘೋಷ ವಾಕ್ಯದೊಂದಿಗೆ ಈ ವರ್ಷ ಆಚರಿಸಲಾಗುತ್ತಿದೆ.

ಇದನ್ನು ಪಾಲಿಸುವುದು  ನಮ್ಮ ನಿಮ್ಮೆಲ್ಲರ ಕರ್ತವ್ಯ. ಬನ್ನಿ ಕೈ ಜೋಡಿಸೋಣ.


ಆಂಟಿಬಯೋಟಿಕ್‌ಗಳ ಬಳಕೆ – ಅಂದು, ಇಂದು, ಮುಂದೆ... ಬಳಸುವಾಗ ಜಾಗ್ರತೆ ಇರಲಿ!! - Janathavani– ಡಾ. ಉಷಾ. ಎಂ.ಜಿ., ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಮೈಕ್ರೋ ಬಯಾಲಜಿ ವಿಭಾಗ, ಜೆ.ಜೆ.ಎಂ. ಮೆಡಿಕಲ್ ಕಾಲೇಜು, ದಾವಣಗೆರೆ.

error: Content is protected !!