79 ಸಂವತ್ಸರ ಕಳೆದು 80ಕ್ಕೆ ಪಾದಾರ್ಪಣೆ

79 ಸಂವತ್ಸರ ಕಳೆದು 80ಕ್ಕೆ ಪಾದಾರ್ಪಣೆ

ರಾಣೇಬೆನ್ನೂರಿನಲ್ಲಿ ಇಂದು ವಿಧಾನಸಭೆಯ ಮಾಜಿ ಅಧ್ಯಕ್ಷ ಕೋಳಿವಾಡ ಜನ್ಮ ದಿನಾಚರಣೆ

79 ಸಂವತ್ಸರಗಳನ್ನು ಪೂರ್ಣ ಗೊಳಿಸಿ, 80 ಕ್ಕೆ ಪಾದಾರ್ಪಣೆ ಮಾಡುತ್ತಿರುವ ವಿಧಾನಸಭೆಯ ಮಾಜಿ ಅಧ್ಯಕ್ಷ ಕೆ.ಬಿ. ಕೋಳಿವಾಡ ಅವರ ಜನ್ಮ ದಿನವನ್ನು ನವೆಂಬರ್‌ 1 ರಂದು ಅವರ ಅಭಿಮಾನಿಗಳು ಹಾಗೂ ಅವರ ಮಗ ಶಾಸಕ ಪ್ರಕಾಶ್‌ ನೇತೃತ್ವದ ಪಿಕೆಕೆ ಸಂಸ್ಥೆ ಜೊತೆಯಾಗಿ ವಿವಿಧ ಜನಪರ ಕಾರ್ಯಕ್ರಮಗಳೊಂದಿಗೆ ಎಪಿ ಎಂಸಿ ಸಮುದಾಯ ಭವನದಲ್ಲಿ   ಆಚರಿಸಲಿದ್ದಾರೆ.

ಬಾನೆತ್ತರದಲ್ಲಿ ಸ್ವಚ್ಛಂದವಾಗಿ ಹಾರುತ್ತಿದ್ದ ಪಾರಿವಾಳ ಗಳನ್ನು ಸಾಕಿ, ಸಲುಹುತ್ತಾ ಅವುಗಳ ಒಡನಾಡಿಯಾಗಿದ್ದ ಪುಟ್ಟ ಗ್ರಾಮ ಗುಡಗೂರಿನ ಪುಟ್ಟ ಹುಡುಗ ಕೃಷ್ಣಪ್ಪನೇ, ಸಂವಿಧಾನದ ಉನ್ನತ ಸ್ಥಾನ ಕರ್ನಾಟಕ ವಿಧಾನಸಭಾ ಅಧ್ಯಕ್ಷ ಪೀಠವನ್ನಲಂಕರಿಸಿದ ಕೆ.ಬಿ. ಕೋಳಿವಾಡರು.

ಹೇಮರಡ್ಡಿ ಮಲ್ಲಮ್ಮನ ಕೃಪಾ ಕಟಾಕ್ಷದ ಶ್ರೀಮಂತ ರಡ್ಡಿ ಸಮಾಜದ ಅವಿಭಕ್ತ ಕುಟುಂಬದ ವೆಂಕಪ್ಪನವರ ಮಗನಾಗಿ ದಿ.1.11.1944 ರಂದು ಬಾಯಲ್ಲಿ ಬಂಗಾರದ ಚಮಚವನ್ನೇ ಇಟ್ಟುಕೊಂಡು ಹುಟ್ಟಿದ ಕೃಷ್ಣಪ್ಪ   ಕೋಳಿವಾಡರು, ಅದೇ ಕುಟುಂಬದ ಇನ್ನೊಬ್ಬ ಸಿರಿವಂತ, ನೂರಾರು ಎಕರೆ ಜಮೀ ನಿನ ಒಡೆಯ ಭೀಮಪ್ಪನವರಿಗೆ ದತ್ತು ಪುತ್ರರಾಗುತ್ತಾರೆ.

ಇದ್ದೊಬ್ಬ ಮಗ ಮನೆಯಲ್ಲಿಯೇ ಇದ್ದು ಇರುವ ಸಿರಿತನವನ್ನು ಉಳಿಸಿ, ಬೆಳೆಸಿಕೊಳ್ಳುವಷ್ಟು ಅಕ್ಷರ ಜ್ಞಾನ ಸಾಕು ಎನ್ನುವ ಹಿರಿಯರ ಆಸೆಯನ್ನು ಬದಿಗಿರಿಸಿ, ಸೋದರ ಮಾವ ಒಡೆಯರಹಳ್ಳಿ ವಕೀಲರ ಪ್ರೋತ್ಸಾಹದೊಂದಿಗೆ ಕಾಲೇಜು ಮೆಟ್ಟಿಲೇರಿ, ಧಾರವಾಡ ಕರ್ನಾಟಕ  ವಿಶ್ವ ವಿದ್ಯಾಲಯದಲ್ಲಿ ಬಂಗಾರ ಪದಕದ ಜೊತೆ ಪದವಿ ಪಡೆಯುತ್ತಾರೆ. ಕಾನೂನು ಪದವಿ ಪಡೆದರೂ ಸಹ ವಕೀಲಿ ವೃತ್ತಿ ಮಾಡಲು ಒಪ್ಪದ ಹಿರಿಯರ ಮಾತುಗಳನ್ನು ನಿರಾಕರಿಸಿ, ರಾಣೇಬೆನ್ನೂರಿನ ನ್ಯಾಯಾಲಯದಲ್ಲಿ ಖ್ಯಾತನಾಮರಾಗಿದ್ದ ನೇಕಾರ ಸಮಾಜದ ಎಂ. ಎಂ. ಬೆನ್ನೂರ ವಕೀಲರ ಬಳಿ ಕಿರಿಯ ವಕೀಲರಾಗಿ ಸೇರಿ ಅವರ ಮಾರ್ಗ ದರ್ಶನದಲ್ಲಿ  ಸಾಕಷ್ಟು ಪರಿಣಿತಿ ಪಡೆಯುತ್ತಾರೆ.

ತಂದೆ ವೆಂಕಟಪ್ಪ ಮಾಡುತ್ತಿದ್ದ ನ್ಯಾಯ ಪಂಚಾಯಿತಿ ಹಾಗೂ ಹುಲುಕೋಟಿಯ ಹುಲಿ ಎಂದು ಪ್ರಚಲಿತರಾಗಿದ್ದ ಬಂಧುಗಳಾದ ಗದಗಿನ ಕೆ.ಹೆಚ್. ಪಾಟೀಲರ ಪ್ರೋತ್ಸಾಹದೊಂದಿಗೆ ಎಪಿ ಎಂಸಿ ನಿರ್ದೇಶಕರಾಗಿ ರಾಜಕೀಯ ಪ್ರವೇಶಿಸಿ, 1972 ರಲ್ಲಿ ನಡೆದ ತಮ್ಮ ಮೊದಲ ಅಸೆಂಬ್ಲಿ ಚುನಾವಣೆಯಲ್ಲಿಯೇ ಜಯ ಗಳಿಸಿ, ವಿಧಾನಸಭೆ ಪ್ರವೇಶಿಸಿದ ಕೋಳಿವಾಡರು, ಅಂದಿನ ಆ ಮನೆಯ ಅತ್ಯಂತ ಕಿರಿಯ ಸದಸ್ಯರಾಗುತ್ತಾರೆ.

ಕಾಂಗ್ರೆಸ್ ಪಕ್ಷದ ನಿಷ್ಠಾವಂತರಾದ  ಕೋಳಿವಾಡರು 11 ಚುನಾವಣೆ ಗಳನ್ನು ಎದುರಿಸಿ ಸೋಲು-ಗೆಲುವು ಗಳನ್ನು ಸಮನಾಗಿ ಸ್ವೀಕರಿಸಿದರು. ಕ್ಷೇತ್ರದಲ್ಲಿ ತಮ್ಮ ಸಮಾಜದ ಅತ್ಯಂತ ಕಡಿಮೆ ಮತದಾರರನ್ನು ಪ್ರತಿನಿಧಿಸಿದರೂ, ಸಹ, ಅಂದಿನ ಜಾತಿ ಹಾಗೂ ಹಣ ರಹಿತ ಆರೋಗ್ಯ ಕರ ವಾತಾವರಣವನ್ನು ಸದುಪಯೋಗಪಡಿಸಿ ಕೊಂಡು,  ಪಕ್ಷದ ಸಂಘಟನೆ ಜೊತೆಗೆ ತಮ್ಮದೇ ಆದ ಬೆಂಗಾವಲು ಪಡೆಯನ್ನು  ಬಲವಾಗಿಸಿಕೊಂಡ ನುರಿತ, ಚಾಣಾಕ್ಷ ರಾಜಕಾರಣಿಯಾಗಿ ಬೆಳೆದರು.  ಬಣ್ಣದ ಗೀಳು… ತಂದೆ ವೆಂಕಪ್ಪನವರಿಂದ ರಕ್ತಗತವಾಗಿ ಬಂದ ನಾಟಕದ ಗೀಳು ಇವರಿಗೂ ಬಣ್ಣ ಹಚ್ಚಿಸಿತ್ತು. ರಕ್ತರಾತ್ರಿ, ಕುರುಕ್ಷೇತ್ರ ಮತ್ತು ಸಂಸಾರ ನಾಟಕಗಳಲ್ಲಿ ಅಭಿನಯಿಸಿದ ಕೋಳಿವಾಡರು, ಹೆಣ್ಣಿನ ಪಾತ್ರ ದಿಂದ ಮಾವ ಒಡೇರಹಳ್ಳಿ ವಕೀಲರ ಶಹಬ್ಬಾಸಗಿರಿ ಪಡೆದವರು.

ಒಂದು ರಾಜಕೀಯ ಘಟನೆ:  ಪ್ರಥಮ ಅಂದರೆ 1972 ರ ವಿದಾನಸಭೆ ಚುನಾವಣೆ ಸಂದರ್ಭದಲ್ಲಿ ದೆಹಲಿಗೆ ತೆರಳಿ ಇಂದಿರಾಗಾಂಧಿ ಅವರಿಂದ ಕಾಂಗ್ರೆಸ್ ಟಿಕೆಟ್ ತಂದು ತಮಗೆ ಆತ್ಮೀಯರಾಗಿದ್ದ ಹಲಗೇರಿಯ ಡಾ: ಬಿ.ಜಿ.ಪಾಟೀಲ (83 ರಲ್ಲಿ ಶಾಸಕರು,  85 ರಲ್ಲಿ ಧಾರವಾಡ ಜಿಲ್ಲಾ ಪರಿಷತ್ ಅಧ್ಯಕ್ಷರು)ರೊಡನೆ ಚರ್ಚಿಸಿ ಬೆಳಿಗ್ಗೆ ನಾಮಪತ್ರ ಸಲ್ಲಿಸಲು ತಹಶೀಲ್ದಾರ್‌ ಕಛೇರಿಗೆ ತೆರಳಿದ ಕೋಳಿವಾಡರ ವಿರುದ್ದ ಕೆಲ ಮುಖಂಡರು ಸೇರಿ, ಅದೇ ಬಿ.ಜಿ.ಪಾಟೀಲರನ್ನು  ಪ್ರತಿಸ್ಪರ್ಧಿಯನ್ನಾಗಿಸಿದ್ದರು.   ದೃತಿಗೆಡದ ಕೋಳಿ ವಾಡರು ಏಕಾಂಗಿಯಾಗಿ ಚುನಾವಣೆ ಎದುರಿಸಿ ಮೊದಲ ಇನ್ನಿಂಗ್ಸ್ ನಲ್ಲಿಯೇ ಜಯ ಗಳಿಸುತ್ತಾರೆ. 5 ದಶಕಗಳ ಕಾಲ ತಮ್ಮ ರಾಜಕೀಯ ಪಯಣದಲ್ಲಿ ಈ ಬಾರಿ ಚುನಾವಣೆಯಿಂದ ದೂರ ಉಳಿದಿದ್ದು ಬೆಂಗಾವಲು ಪಡೆಯ ಸನಿಹದಲ್ಲಿದ್ದಾರೆ.

– ಮನೋಹರ ಮಲ್ಲಾಡದ

error: Content is protected !!