ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ – 50ರ ಸಂಭ್ರಮ

ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ – 50ರ ಸಂಭ್ರಮ

ಶತ ಶತಮಾನಗಳ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಕನ್ನಡ ನಾಡು-ನುಡಿ, ಇತಿಹಾಸದ ಯಾವ ಕಾಲಘಟ್ಟದಲ್ಲಿಯೂ ಒಂದೇ ಪ್ರಭುತ್ವಕ್ಕೆ ಒಳಪಟ್ಟಿರಲಿಲ್ಲ. ರಾಷ್ಟ್ರಕೂಟರ ನೃಪತುಂಗನ ಕಾಲಕ್ಕೆ ದಕ್ಷಿಣದಲ್ಲಿ ಕಾವೇರಿ ನದಿಯಿಂದ ಉತ್ತರದ ಗೋದಾವರಿ ನದಿಯವರೆಗೆ ಕನ್ನಡ ನಾಡು ವ್ಯಾಪಿಸಿತ್ತು ಎಂಬುದಕ್ಕೆ ಆಧಾರಗಳಿವೆ. ನಂತರ ಕನ್ನಡ ನಾಡು 22 ಪ್ರಭುತ್ವಗಳಲ್ಲಿ ಹಂಚಿ ಹೋಗಿತ್ತು.

ನಾಡ ಪ್ರೇಮಿಗಳು, ಮಹನೀಯರ, ಕವಿಗಳ, ಸಾಹಿತಿಗಳ ಮತ್ತು ಸಂಘ-ಸಂಸ್ಥೆಗಳ ಹೋರಾಟದ ಪ್ರತಿಫಲವಾಗಿ ಹರಿದು-ಹಂಚಿ ಹೋಗಿದ್ದ ಕನ್ನಡ ನಾಡು ಏಕೀಕರಣ ಸಾಧಿಸಿ, ಭಾಷಾ ಮರು ಪ್ರಾಂತವಾಗಿ 1956ರ ನವೆಂಬರ್ 1ರಂದು ಮೈಸೂರು ರಾಜ್ಯವಾಗಿ ಉದಯವಾಯಿತು. ಆನಂತರ ಕನ್ನಡಿಗರ ಮನದಾಳದ ಅಪೇಕ್ಷೆಯಂತೆ 1973ರ ನವೆಂಬರ್ 1 ರಂದೇ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಲಾಯಿತು. ಅಂದಿನಿಂದ ರಾಜ್ಯೋತ್ಸವವನ್ನು ನಾಡಿನ ಜನತೆ ಸಂಭ್ರಮದಿಂದ ಆಚರಿಸುತ್ತಿದ್ದಾರೆ.

ಮೈಸೂರು ರಾಜ್ಯವು ಕರ್ನಾಟಕ ಎಂದು ಮರು ನಾಮಕರಣಗೊಂಡು ನವೆಂಬರ್ 1, 2023ಕ್ಕೆ 50 ವರ್ಷ ಪೂರ್ಣಗೊಳ್ಳಲಿದೆ. ಈ ಶುಭ ಸಂದರ್ಭದಲ್ಲಿ ಐದು ಕನ್ನಡ ಗೀತೆಗಳನ್ನು ಕಡ್ಡಾಯವಾಗಿ ಹಾಡುವ ಮೂಲಕ ನುಡಿ ನಮನ ಸಲ್ಲಿಸುವಂತೆ ರಾಜ್ಯ ಸರ್ಕಾರ ಆದೇಶಿಸಿದೆ. ಹಾಗೆಯೇ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂಬ ಹೆಸರಿನಲ್ಲಿ ಇಡೀ ವರ್ಷ ಕರ್ನಾಟಕ ಇತಿಹಾಸ, ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ನಾಡು-ನುಡಿಗೆ ಸಂಬಂಧಿಸಿದಂತೆ ಯುವ ಜನತೆಯಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕ ಅರಿವು ಮೂಡಿಸುವ ಯೋಜನೆ ಹಮ್ಮಿಕೊಳ್ಳುವಂತೆ ಸರ್ಕಾರ ಸೂಚಿಸಿದೆ.

ಈ ಸಂದರ್ಭದಲ್ಲಿ ಕನ್ನಡಿಗರು ಮತ್ತು ಕನ್ನಡ ಭಾಷೆ ಎದುರಿಸುತ್ತಿರುವ ಸಮಸ್ಯೆಗಳನ್ನು ಚಿಂತಿಸುವ ಮತ್ತು ಪರಿಹಾರ ಕಂಡುಕೊಳ್ಳುವ ಅನಿವಾರ್ಯತೆ ಇದೆ. ಅಂತೆಯೇ ಶಾಲಾ-ಕಾಲೇಜುಗಳಲ್ಲಿ ನಾಳಿನ ನಾಡಿನ ಕಣ್ಮಣಿಗಳಾದ ಯುವ ಜನಾಂಗಕ್ಕೆ ಐತಿಹಾಸಿಕ ಹಿನ್ನೆಲೆಯನ್ನು ತಿಳಿಸುವ, ಅವರಲ್ಲಿ ಮಾತೃಭಾಷೆಯ ಬಗ್ಗೆ ಅಭಿಮಾನ ಮೂಡಿಸಿ, ಕನ್ನಡ ನಾಡು-ನುಡಿ, ಸಾಹಿತ್ಯ-ಸಂಸ್ಕೃತಿಯನ್ನು ಸಂರಕ್ಷಣೆ ಮಾಡಿ ಸಂವರ್ಧನೆಗೊಳಿಸುವ ಜವಾಬ್ದಾರಿಯ ಅರಿವನ್ನು ಮೂಡಿಸುವ ಅವಶ್ಯಕತೆ ಇದೆ ಎನ್ನುವ ಭಾವ ನನ್ನದು.

ಭಾರತದ ಸ್ವಾತಂತ್ರ್ಯ ಚಳುವಳಿಯಷ್ಟೇ ಕರ್ನಾಟಕದ ಏಕೀಕರಣ ಚಳುವಳಿ ರೋಚಕ ಮತ್ತು ಭಾವನಾತ್ಮಕ ವಾದುದು. ಕನ್ನಡದ ಮನಸ್ಸುಗಳನ್ನು ಭೌಗೋಳಿಕವಾಗಿ ಐಕ್ಯಗೊಳಿಸಲು ಸಂಘ-ಸಂಸ್ಥೆಗಳು, ಕನ್ನಡ ಸಾಹಿತ್ಯ, ಸಾಹಿತಿಗಳು, ಪತ್ರಿಕೆಗಳು, ಸಮ್ಮೇಳನ ಮತ್ತು ಸಮಾವೇಶ ಗಳು ಹಾಗೂ ಕೆಲವು ಬ್ರಿಟಿಷ್ ಅಧಿಕಾರಿಗಳಿಂದ ಕೈಗೊಂಡ ಕ್ರಮಗಳು ಏಕೀಕರಣಕ್ಕೆ ಪೂರಕವಾಗಿದ್ದವು.

ಏಕೀಕರಣದ ವಿವಿಧ ಮಜಲುಗಳು : ಕನ್ನಡ ನುಡಿಯನ್ನಾಡುವ ಜನರು ಒಂದೇ ಪ್ರಭುತ್ವಕ್ಕೆ ಒಳಪಡಬೇಕೆಂಬ ಕನಸನ್ನು 1825ರಲ್ಲಿ ಸರ್ ಥಾಮಸ್ ಮನ್ರೋ ಎಂಬ ಬ್ರಿಟಿಷ್ ಅಧಿಕಾರಿ ಇಟ್ಟುಕೊಂಡು ಕಾರ್ಯೊನ್ಮುಖನಾಗಿದ್ದ. 1856ರಲ್ಲಿ ಸಂಸದ ಜಾನ್ ಬ್ರೈಟ್ ಭಾಷಾವಾರು ಪ್ರಾಂತ ರಚಿಸಲಿ ಎಂದು ಬ್ರಿಟಿಷ್ ಪಾರ್ಲಿಮೆಂಟ್‌ನಲ್ಲಿ ಬೇಡಿಕೆ ಇಟ್ಟಿದ್ದ. ಆದರೆ ಆಂಗ್ಲರ ಒಡೆದು ಐಳುವ ನೀತಿಯಿಂದ ಮಾನ್ಯತೆ ದೊರೆಯಲಿಲ್ಲ.  1858ರಲ್ಲಿ ಡೆಪ್ಯೂಟಿ ಚನ್ನಬಸಪ್ಪ ಎಂಬ ಶಿಕ್ಷಣಾಧಿಕಾರಿ ಉತ್ತರ ಕರ್ನಾಟಕದಲ್ಲಿ ಮೊದಲ ಬಾರಿಗೆ ಏಕೀಕರಣದ ಡಿಂಡಿಮ ಭಾರಿಸಿದರು. 1980ರಲ್ಲಿ ಧಾರವಾಡದಲ್ಲಿ ದೇಶಪಾಂಡೆ ನೇತೃತ್ವದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘವನ್ನು ಕರ್ನಾಟಕದ ಸಮಗ್ರತೆ ಮತ್ತು ಅಖಂಡತೆ ಕಾಪಾಡಲಿ  ಸ್ಥಾಪಿಸಿದರು. 

1915ರಲ್ಲಿ ರಾಜಶ್ರೀ ನಾಲ್ವಡಿ ಕೃಷ್ಣ ದೇವರಾಯರ ಪ್ರೋತ್ಸಾಹದಿಂದ ಕನ್ನಡ ಸಾಹಿತ್ಯ ಪರಿಷತ್‌ ಸ್ಥಾಪನೆಯಾಯಿತು. 1924ರಲ್ಲಿ ಬೆಳಗಾವಿಯಲ್ಲಿ ಕರ್ನಾಟಕ ಏಕೀಕರಣದ ಪ್ರಥಮ ಸಮ್ಮೇಳನ ಸಿದ್ದಪ್ಪ ಕಂಬಳಿಯವರ ಅಧ್ಯಕ್ಷತೆಯಲ್ಲಿ ಜರುಗಿತು. ಅದೇ ವರ್ಷ  ಗಾಂಧೀಜಿಯವರು ಕಾಂಗ್ರೆಸ್ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ಅದೇ ಸಂದರ್ಭದಲ್ಲಿ ಕರ್ನಾಟಕ ಏಕೀಕರಣಕ್ಕೆ ಬೆಂಬಲದ ಮುದ್ರೆ ಒತ್ತಿದ್ದರು. ಇದೇ ಅಧಿವೇಶನದಲ್ಲಿ ಹುಯಿಲಗೋಳ ನಾರಾಯಣರಾಯರು ರಚಿಸಿದ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಗೀತೆಯನ್ನು ಮೊದಲ ಬಾರಿಗೆ ಹಾಡಲಾಯಿತು. ಪ್ರಚೋದನಾತ್ಮಕ ಸಾಹಿತ್ಯ ರಚನೆಯೂ ಕೂಡ ಕರ್ನಾಟಕಕ ಏಕೀಕರಣಕ್ಕೆ ವೇದಿಕೆಯಾಗಿತ್ತು. ಆಲೂರು ವೆಂಕಟರಾಯರ ಕರ್ನಾಟಕ ಗತ ವೈಭವ, ಬಿ.ಎಂ. ಶ್ರೀರವರ ಹಾರಿಸಿ, ಹಾರಿಸಿ, ಕನ್ನಡ ಬಾವುಟ, ಮಂಗೇಶ್ ಪೈ ಅವರ ತಾಯೆ ಬಾರೆ ಮೊಗವ ತೊರೆ, ಕುವೆಂಪುರವರ ಜಯಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ, ಕಯ್ಯಾರ ಕಿಞ್ಞಣ್ಣರೈ ಅವರ ಬೆಂಕಿ ಬಿದ್ದಿದೆ ಮನೆಗೆ ಒ ಬೇಗನೆ ಬನ್ನಿ, ಪತ್ರಿಕೆಗಳು ಕನ್ನಡಿಗರಲ್ಲಿ ಭಾಷಾಭಿಮಾನವನ್ನು ಉಕ್ಕಿಸಿದವು ಮತ್ತು ಬರಹಗಳು ಕನ್ನಡಿಗರಲ್ಲಿ ಭಾವನಾತ್ಮಕ ಐಕ್ಯತೆ ಮತ್ತು ಸಾಂಸ್ಕೃತಿಕ ಪುನರ್ ನಿರ್ಮಾಣಕ್ಕೆ ಸ್ಫೂರ್ತಿಯಾಗಿ ಏಕೀಕರಣಕ್ಕೆ ವೇದಿಕೆ ನಿರ್ಮಿಸಿದವು. 

ದಿನಾಂಕ 10.01.1946ರಂದು ಮುಂಬೈನಲ್ಲಿ ನಡೆದ ಏಕೀಕರಣ ಸಮಾವೇಶ ಉದ್ಘಾಟಿಸಿದ ಸರ್ದಾರ್ ವಲ್ಲಭಭಾಯಿ ಪಟೇಲರು ಭಾಷಾವಾರು ಪ್ರಾಂತ್ಯಗಳ ರಚನೆಯನ್ನು ತಿಳಿಸಿದರು. ಇದೇ ವರ್ಷ  ದಾವಣಗೆರೆಯಲ್ಲಿ 31.08.1946ರಂದು ಅಖಿಲ ಕನ್ನಡಿಗರ ಪ್ರಥಮ ಮಹಾಧಿವೇಶನಗೊಂಡಿತು. ಇದರ ಪ್ರೇರಕ ಶಕ್ತಿ ಎಸ್. ನಿಜಲಿಂಗಪ್ಪನವರಾಗಿದ್ದರು. ಅಧ್ಯಕ್ಷತೆಯನ್ನು ಮುಂಬಯಿ ಮಂತ್ರಿ ಎಂ.ಪಿ. ಪಾಟೀಲರು, ಉದ್ಘಾಟನೆಯನ್ನು ಮದ್ರಾಸ್ ಸರ್ಕಾರದ ಮಂತ್ರಿ ಕೆ.ಆರ್. ಕಾರಂತರು ನೆರವೇರಿಸಿದ್ದರು. ಈ ಸಮಾವೇಶಕ್ಕೆ ರಾಜ್ಯದ ಎಲ್ಲಾ ಘಟಾನುಘಟಿಗಳು ಭಾಗವಹಿಸಿದ್ದರು. ಸ್ವಾತಂತ್ರ್ಯದ ನಂತರ ನಿರಂತರ ಹೋರಾಟದ ಪ್ರತಿಫಲವಾಗಿ, ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿ ಶ್ರೀ ಎಸ್.ಫಜಲ್ ಅಲಿ ನೇತೃತ್ವದಲ್ಲಿ 29 ಡಿಸೆಂಬರ್ 1953ರಂದು ರಾಜ್ಯ ಪುನರ್ವಿಂಗಡಣಾ ಸಮಿತಿ ರಚನೆ ಮಾಡಿತು. ಸದರಿ ಸಮಿತಿ/ಆಯೋಗ ತನ್ನ ವರದಿಯನ್ನು 30 ಸೆಪ್ಟೆಂಬರ್ 1955ರಂದು ಸಲ್ಲಿಸಿತು. ಈ ಸಮಿತಿಯ ಆದೇಶದಂತೆ 19 ಜಿಲ್ಲೆಗಳೊಡನೆ ಮೈಸೂರು ರಾಜ್ಯ ನವೆಂಬರ್ ಒಂದು, 1956 ರಂದು ಉದಯವಾಯಿತು. ನಂತರ ಮೈಸೂರು ರಾಜ್ಯಕ್ಕೆ 1973 ನವೆಂಬರ್ ಒಂದರಂದು  ಕರ್ನಾಟಕ ಎಂದು ಅಂದಿನ ಮುಖ್ಯಮಂತ್ರಿ ಡಿ. ದೇವರಾಜ್ ಅರಸ್ ನಾಮಕರಣ ಮಾಡಿದರು. ಅಂದೇ ಹೆಸರಾಯಿತು ಕನ್ನಡ, ಉಸಿರಾಗಲಿ ಕನ್ನಡ ಎಂದು ಚನ್ನವೀರ ಕಣವಿಯವರ ಕವಿ ಹೃದಯ ಹಾಡಿತ್ತು.

ಕರ್ನಾಟಕ ರಾಜ್ಯ ಆದದ್ದು ಕನ್ನಡ-ಕನ್ನಡಿಗ-ಕರ್ನಾಟಕ ಬದುಕಬೇಕು, ಬೆಳೆಯಬೇಕೆಂಬುದು. ಆದರೆ ಇಂದು, ಉದಾರೀಕರಣ, ಖಾಸಗೀಕರಣ, ಜಾಗತೀಕರಣ ಮತ್ತು ನಗರೀಕರಣ, ಆಧುನೀಕರಣದಿಂದಾಗಿ ಹಾಗೂ ಕನ್ನಡಿಗರ ತಾತ್ಸಾರ ಮನೋಭಾವನೆಯಿಂದಾಗಿ ನಮ್ಮ ನುಡಿ-ಸಾಂಸ್ಕೃತಿಕ ಪರಂಪರೆ ಅಳಿವು – ಉಳಿವಿನ ಬಗ್ಗೆ ನಮಗೆ ಆತಂಕವಿದೆ. ಅತಿಥಿ ದೇವೋಭವದ ಉದಾರ ಭಾವನೆಯಿಂದ ವಿವಿಧ ಭಾಷಿಗರನ್ನು ಮಡಿಲಲ್ಲಿಟ್ಟುಕೊಂಡು ನೀಡುತ್ತಿರುವ ಅವಕಾಶಗಳು, ತೋರುತ್ತಿರುವ ಸೌಜನ್ಯಗಳು, ವಿದೇಶಿ ಕಂಪನಿಗಳ ಆಗಮನ, ಬೃಹತ್ ಶಾಪಿಂಗ್ ಮಾಲ್‌ಗಳು, ಮೋರ್‌ಗಳು, ಬಿಗ್‌ ಬಜಾರ್‌ಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡಿವೆ. ಗ್ರಾಮಗಳಲ್ಲಿ ಇಂಗ್ಲಿಷ್ ಕಾನ್ವೆಂಟ್ ಸಂಸ್ಕೃತಿ, ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುವ ಸ್ಥಿತಿಗೆ ಬಂದಿರುವುದು ದುರಂತವೇ ಸರಿ. ಆದ್ದರಿಂದ ಸಾಯುತಿದೆ ನಿಮ್ಮ ನುಡಿ ಓ ಕನ್ನಡದ ಕಂದರಿರಾ ಹೊರ ನುಡಿಯ ಹೊರೆಯಿಂದ ಕುಸಿದು ಕುಗ್ಗಿ ಎಂದು ಕುವೆಂಪುರವರು ಎಂದೋ ಎಚ್ಚರಿಸಿದ್ದಾರೆ.

ಆಧುನಿಕ ಭರಾಟೆಯಲ್ಲಿ ಧಾರಾವಾಹಿಗಳು, ರಿಯಾಲಿಟಿ ಶೋಗಳು ಜನರನ್ನು ಆಕರ್ಷಿಸಿ ಅಕ್ಷರ ಕ್ರಾಂತಿಗೆ ಬದಲಾಗಿ ವೀಕ್ಷಣ ಕ್ರಾಂತಿಯಿಂದಾಗಿ ಕನ್ನಡ ನುಡಿಯ ಬಳಕೆ ಕುಗ್ಗಿದೆ.

ಕರ್ನಾಟಕ ಏಕೀಕರಣಗೊಂಡು 67 ಸಂವತ್ಸರಗಳು ಕಳೆದರೂ ಇನ್ನೂ ಜ್ವಲಂತ ಸಮಸ್ಯೆಗಳು ಕನ್ನಡಿಗರನ್ನು ಕಂಗೆಡಿಸುವೆ. ಗಡಿ ಸಮಸ್ಯೆಗಳು, ಕಾವೇರಿ – ಕೃಷ್ಣಾ ನದಿ ಜಲ ವಿವಾದಗಳು, ವಿಭಜನೆಯ ಕೂಗು, ಮಹಾಜನ ವರದಿ ಅನುಷ್ಠಾನ ಆಗದಿರುವುದು, ಮೇ 6, 2014ರ ಸುಪ್ರೀಂ ಕೋರ್ಟ್ ಕರ್ನಾಟಕ ಸರ್ಕಾರದ ಭಾಷಾ ಮಾಧ್ಯಮ ನೀತಿಯನ್ನು ರದ್ದುಪಡಿಸಿರುವುದು, ಒಗ್ಗಟ್ಟಿನ ಕೊರತೆ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಮಾನ ದೊರೆತಿದ್ದರೂ ಕನ್ನಡ ಭಾಷೆ ಇನ್ನೂ ಅತಂತ್ರ ಸ್ಥಿತಿಯಲ್ಲಿರುವುದು. ಇನ್ನೂ ಮುಂತಾದ ಸಮಸ್ಯೆಗಳು ಸವಾಲುಗಳಾಗಿವೆ. ಮಾತೃಭಾಷೆ ಉಳಿವಿಗಾಗಿ ಸರ್ಕಾರ ಕನ್ನಡ ಭಾಷೆಯನ್ನು ವೈಜ್ಞಾನಿಕವಾಗಿ, ತಾಂತ್ರಿಕವಾಗಿ ಅಭಿವೃದ್ಧಿಪಡಿಸಬೇಕು. ಕನ್ನಡ ಭಾಷೆ ತುತ್ತಿನ ಚೀಲ ತುಂಬುವ ಭಾಷೆಯಾಗುವಂತೆ ಕನ್ನಡಿಗರಿಗೆ ಉದ್ಯೋಗಾವಕಾಶಗಳನ್ನು ನೀಡಬೇಕು. ಕೇವಲ ಸರ್ಕಾರ, ಸಾಹಿತ್ಯ ಪರಿಷತ್ತು, ಕನ್ನಡ ಪರ ಸಂಘ-ಸಂಸ್ಥೆಗಳಿಂದ ಕನ್ನಡದ ಭಾಷೆ ಉಳಿಸಲು ಸಾಧ್ಯವಿಲ್ಲ. ಇದಕ್ಕಾಗಿ ಕನ್ನಡ ಮನಸ್ಸುಗಳು ಒಂದಾಗಿ ನುಡಿ ಬೀಜ ಬಿತ್ತುವ ಕಾರ್ಯದಲ್ಲಿ ನಿರತರಾಗಬೇಕು.  ಏಕೆಂದರೆ ಕನ್ನಡ ಉಳಿಯಬೇಕಾದದ್ದು ಜನರಿಂದಲೇ, ಜನರ ನಾಲಿಗೆಯ ಮೇಲೆ ಸದಾ ಜೀವಂತವಾಗಿರಬೇಕು. 

ಪ್ರತಿ ನವೆಂಬರ್ ಒಂದರಂದು ಆಚರಿಸುತ್ತಿರುವ ಕರ್ನಾಟಕ ರಾಜ್ಯೋತ್ಸವ ಕೇವಲ ಭಾಷಣ, ಘೋಷಣೆ ಗಳಿಗೆ ಸೀಮಿತವಾಗದೇ ಈ ನಾಡಿನ ನೆಲದ, ಜಲದ, ಸಂಸ್ಕೃತಿಯ ಭಾಷೆಯ ಉಳಿವಿಗಾಗಿ ಸರ್ಕಾರ ಮತ್ತು ಕನ್ನಡಿಗರೆಲ್ಲಾ ಬದ್ಧರಾಗಬೇಕಾಗಿದೆ.

ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ - 50ರ ಸಂಭ್ರಮ - Janathavani– ಡಾ. ಹೆಚ್.ಎಸ್. ಮಂಜುನಾಥ ಕುರ್ಕಿ.

error: Content is protected !!