ಸರಳ – ಸಜ್ಜನಿಕೆಯ ವ್ಯಕ್ತಿತ್ವದ ಎ.ಹೆಚ್. ಶಿವಮೂರ್ತಿಸ್ವಾಮಿ

ಸರಳ – ಸಜ್ಜನಿಕೆಯ ವ್ಯಕ್ತಿತ್ವದ ಎ.ಹೆಚ್. ಶಿವಮೂರ್ತಿಸ್ವಾಮಿ

ವೀರೇಶ್ವರ ಪುಣ್ಯಾಶ್ರಮದಲ್ಲಿ ಇಂದು ನುಡಿನಮನ

ದಾವಣಗೆರೆ ಮಹಾನಗರದಲ್ಲಿ ಅನೇಕ ಮನೆತನಗಳು ತಮ್ಮ ಸತ್ಕಾರ್ಯಗಳಿಂದ ಜನಮೆಚ್ಚುಗೆ ಗಳಿಸಿವೆ. ಇಂತಹ ಮನೆತನಗಳಲ್ಲಿ ಎ.ಹೆಚ್. ತಿಪ್ಪಯ್ಯನವರ ಮನೆತನವೂ ಒಂದು. ದಾನ – ಧರ್ಮಕ್ಕೆ ಹೆಸರಾದ ಎ.ಹೆಚ್. ತಿಪ್ಪಯ್ಯ ಮತ್ತು ಎ.ಹೆಚ್. ಶಾರದಮ್ಮ ದಂಪತಿಗೆ 05.08.1949 ರಂದು ಬಸವ ಜಯಂತಿ ಶುಭ ದಿವಸ ಜನಿಸಿದ ಎ.ಹೆಚ್. ಶಿವಮೂರ್ತಿ ಸ್ವಾಮಿ ಅವರು, ಪ್ರಾಥಮಿಕ ಶಿಕ್ಷಣವನ್ನು ದಾವಣಗೆರೆಯಲ್ಲಿ, ಪ್ರೌಢಶಿಕ್ಷಣವನ್ನು ಸಿರಿಗೆರೆಯ ತರಳಬಾಳು ಬೃಹನ್ಮಠದ ವಿದ್ಯಾರ್ಥಿನಿಲಯದಲ್ಲಿ ಮುಗಿಸಿದರು. ಮುಂದೆ ಬಿ.ಎ. ಮತ್ತು ಎಂ.ಎ. ವ್ಯಾಸಂಗವನ್ನು ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ಪೂರೈಸಿದರು. 

ನಂತರ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಕಾರ್ಯನಿರ್ವಹಿಸುತ್ತಲೇ ಎಲ್.ಎಲ್.ಬಿ. ಮುಗಿಸಿದರು. ಕೆಲಸಕ್ಕೆ ಸ್ವಯಂ ನಿವೃತ್ತಿ ಪಡೆದು ವಕೀಲರಾಗಿ ಸೇವೆ ಆರಂಭಿಸಿದರು. ವಕೀಲಿ ವೃತ್ತಿ ಜೊತೆಗೆ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. 

ಅಪಾರ ದೈವಭಕ್ತರಾಗಿದ್ದ ಶಿವಮೂರ್ತಿಸ್ವಾಮಿಯವರು, ಯಡಿಯೂರಿನ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಯ ಪರಮಭಕ್ತರಾಗಿದ್ದರು. ಅಂಧರ ಬಾಳಿನ ಬೆಳಕಾಗಿದ್ದ ಲಿಂ. ಪುಟ್ಟರಾಜ ಗವಾಯಿಗಳ ಅಚ್ಚುಮೆಚ್ಚಿನ ಶಿಷ್ಯರಾಗಿದ್ದರು. ಗದುಗಿನಲ್ಲಿ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಅಂಧ ಮಕ್ಕಳಿಗೆ ಅನ್ನ, ಪ್ರಸಾದ ನೀಡಿ ಸಂಗೀತವನ್ನು ಕಲಿಸಿಕೊಡುವುದನ್ನು ನೋಡಿದ ಶಿವಮೂರ್ತಿ ಸ್ವಾಮಿಯವರು ದಾವಣಗೆರೆಯಲ್ಲಿಯೂ ಈ ರೀತಿಯ ಆಶ್ರಮವನ್ನು ಸ್ಥಾಪಿಸಲು ತಮ್ಮ ಕೆಲವು ಸ್ನೇಹಿತರ ಜೊತೆ ಕಾರ್ಯೋನ್ಮುಖರಾದರು. ದಾವಣಗೆರೆಯ ಹೊರಭಾಗದ ಬಾಡಾ ಕ್ರಾಸ್ ಬಳಿ ಇರುವ ಜಾಗವನ್ನು ಆಯ್ಕೆ ಮಾಡಿಕೊಂಡರು. ಆದರೆ ನಿವೇಶನಕ್ಕೆ ಬೇಕಾದ ಹನ್ನೆರಡೂವರೆ ಲಕ್ಷ ರೂಪಾಯಿಗಳನ್ನು ಹೊಂದಿಸಲು ದಾನಿಗಳ ಹತ್ತಿರ ಹೋಗಬೇಕೆಂದು ನಿರ್ಧರಿಸಿದರು. 

ಈ ಸಮಯದಲ್ಲಿ ಪುಟ್ಟರಾಜ ಗವಾಯಿಗಳು ದಾವಣಗೆರೆಗೆ ಆಗಮಿಸಿದ್ದ ವಿಷಯ ತಿಳಿದ ಶಿವಮೂರ್ತಿಸ್ವಾಮಿ ಮತ್ತು ಸ್ನೇಹಿತರು ಗುರುಗಳ ದರ್ಶನ ಪಡೆದು, ಆಶ್ರಮದ ನಿವೇಶನದ ಬಗ್ಗೆ ತಿಳಿಸಿ, ನಿವೇಶನ ನೋಡಲು ವಿನಂತಿಸಿದರು. ಇದಕ್ಕೆ ಸಮ್ಮತಿಸಿದ ಪುಟ್ಟರಾಜ ಗವಾಯಿಗಳು ಬಾಡಾ ಕ್ರಾಸ್ ಬಳಿ ಇರುವ ನಿವೇಶನಕ್ಕೆ ಆಗಮಿಸಿದರು. ನಿವೇಶನದಲ್ಲಿ ಓಡಾಡಿದ ಗುರುಗಳು ಆಶ್ರಮಕ್ಕೆ ನಿವೇಶನ ಸೂಕ್ತವಾಗಿದೆ ಎಂದು ಹರ್ಷದಿಂದ ಹೇಳಿದರು. ನಿವೇಶನಕ್ಕೆ ಹಣ ಹೊಂದಿಸಲು ತಮ್ಮ ತುಲಾಭಾರದಿಂದ ಬಂದ ಹಣವನ್ನು ಉಪಯೋಗಿಸಿಕೊಳ್ಳಬೇಕೆಂದು ಸೂಚಿಸಿದರು. 

ಈ ವಿಷಯ ಹರಡುತ್ತಿದ್ದಂತೆಯೇ ಭಕ್ತರು ನಾ ಮುಂದು, ತಾ ಮುಂದು ಎಂಬಂತೆ ಮುಂದೆ ಬಂದರು. ಒಂದೇ ವೇದಿಕೆಯಲ್ಲಿ ಪುಟ್ಟರಾಜ ಗವಾಯಿಗಳ 155 ತುಲಾಭಾರ ನಡೆದಿದ್ದು ಐತಿಹಾಸಿಕ ದಾಖಲೆಯಾಯಿತು. ಹೀಗೆ ಬಾಡಾ ಕ್ರಾಸ್ ಬಳಿ ಶ್ರೀ ವೀರೇಶ್ವರ ಪುಣ್ಯಾಶ್ರಮ ಸ್ಥಾಪನೆಯಾಗಲು ಶಿವಮೂರ್ತಿ ಸ್ವಾಮಿಯವರಿಗೆ ಎನ್.ಎಂ. ಕಡೇಕೊಪ್ಪ, ಅಜ್ಜಂಪುರದ ಶೆಟ್ರು ಸುಶೀಲಮ್ಮ ಮತ್ತಿತರರು ಕೈ ಜೋಡಿಸಿದರು. 

ಶಾಸಕ ಶಾಮನೂರು ಶಿವಶಂಕರಪ್ಪ, ವಿಧಾನಪರಿಷತ್ ಮಾಜಿ ಮುಖ್ಯ ಸಚೇತಕ ಡಾ. ಎ.ಹೆಚ್. ಶಿವಯೋಗಿಸ್ವಾಮಿ ಸೇರಿದಂತೆ, ಅನೇಕರು ಆಶ್ರಮದ ಕಟ್ಟಡ ನಿಮಾಣಕ್ಕೆ ಸಹಕಾರ ನೀಡಿದರು. ಸುಮಾರು ಎರಡೂವರೆ ಕೋಟಿ ರೂಪಾಯಿಗಳ ಆಕರ್ಷಕ, ಭವ್ಯ ಶಿಲಾ ಮಂಟಪದ ನಿರ್ಮಾಣದಲ್ಲಿಯೂ ಶಿವಮೂರ್ತಿಸ್ವಾಮಿ ಅವರು ಅಪಾರ ಶ್ರಮ ವಹಿಸಿದ್ದರು. ಇವರ ಜೊತೆಗೆ ಆಶ್ರಮದ ಗೌರವಾಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ, ಅಧ್ಯಕ್ಷ ಅಥಣಿ ವೀರಣ್ಣ, ಸಹಕಾರ್ಯದರ್ಶಿ ಜಾಲಿಮರದ ಕರಿಬಸಪ್ಪ, ಉಪಾಧ್ಯಕ್ಷ ಅಜ್ಜಂಪುರದ ಶೆಟ್ರು ಮೃತ್ಯುಂಜಯ, ದೇವರಮನೆ ಶಿವಕುಮಾರ್, ಯಲ್ಲಪ್ಪ ಮತ್ತಿತರರು ಸಹಕರಿಸಿದರು. 

ಶಿವಮೂರ್ತಿ ಸ್ವಾಮಿಯವರು ಶಿಕ್ಷಣ ಕ್ಷೇತ್ರಕ್ಕೂ ಪ್ರವೇಶಿಸಿದರು. ಆವರಗೆರೆಯಲ್ಲಿ ಗ್ರಾಮೀಣ ಬಡ ಮಕ್ಕಳಿಗೆ ಅನುಕೂಲವಾಗುವಂತೆ ಶ್ರೀ ಸಿದ್ದಲಿಂಗೇಶ್ವರ ವಿದ್ಯಾ ಸಂಸ್ಥೆಯ ಅಡಿಯಲ್ಲಿ ಶ್ರೀ ಗುರು ಪಂಚಾಕ್ಷರಿ ಗವಾಯಿಗಳ ಸ್ಮಾರಕ ಶಾಲೆಯನ್ನು ಆರಂಭಿಸಿದರು. ಎಲ್.ಕೆ. ಜಿ ಯಿಂದ ಎಸ್.ಎಸ್.ಎಲ್.ಸಿ.ವರೆಗೆ ನೂರಾರು ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಯಲ್ಲಿ ಡೊನೇಶನ್ ಪಡೆಯದೇ ಕೇವಲ ಫೀ ಮಾತ್ರ ಕಟ್ಟಿಸಿಕೊಂಡು ಬಡಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. 

ಹೀಗೆ ಶಿವಮೂರ್ತಿ ಸ್ವಾಮಿಯವರು ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಹೆಸರು ಮಾಡಿದ್ದು, ಇಂದು ಅವರು ನಮ್ಮ ಕಣ್ಣ ಮುಂದೆ ದೈಹಿಕವಾಗಿ ಇಲ್ಲದಿದ್ದರೂ ಅವರು ಮಾಡಿದ ಕಾರ್ಯಗಳ ಮೂಲಕ ಇನ್ನೂ ಜೀವಂತವಾಗಿದ್ದಾರೆ .


– ಬಕ್ಕೇಶ ನಾಗನೂರು, ಹಿರಿಯ ಪತ್ರಕರ್ತರು

error: Content is protected !!