ವಿಶ್ವ ವಿಖ್ಯಾತ ದಸರಾ, ಕರುನಾಡ ಹೆಮ್ಮೆಯ ಹಬ್ಬ ದಸರಾ

ವಿಶ್ವ ವಿಖ್ಯಾತ ದಸರಾ, ಕರುನಾಡ ಹೆಮ್ಮೆಯ ಹಬ್ಬ ದಸರಾ

ದೇಶ – ವಿದೇಶಗಳಿಂದ ಪ್ರವಾಸಿಗರು ಆಗಮಿಸಿ, ವೀಕ್ಷಿಸುವ ನಮ್ಮ ನಾಡ ಹಬ್ಬ ಭಾರತ ದಾದ್ಯಂತ ಆಚರಣೆಯಲ್ಲಿರುವ ನವರಾತ್ರಿಯಾಗಿದೆ.

ಒಂದೊಂದು ದಿನವೂ ಒಂದೊಂದು ಹೆಸರಿನಿಂದ ದೇವಿಯನ್ನು ಅಲಂಕರಿಸಿ, ಪೂಜಿಸುವ ಹಬ್ಬ `ಶೈಲಾಪುತ್ರಿ, ಬ್ರಹ್ಮಾಚಾರಿಣಿ, ಚಂದ್ರಘಂಟ, ಕೂಷ್ಮಂಡಾ ದೇವಿ, ಸ್ಕಂದಮಾತಾ, ಕಾಳ ರಾತ್ರ, ಕಾತ್ಯಾಯಿನಿ, ಮಹಾಗೌರಿ, ಸಿದ್ಧದಾತ್ರಿ’ ಎಂಬ ಒಂಭತ್ತು ಅವತಾರಗಳನ್ನು ಎತ್ತಿದ ದೇವಿಯನ್ನು ವಿಜೃಂಭನೆಯಿಂದ ಆರಾಧಿಸುವ ಹಬ್ಬ ಇದಾಗಿದೆ. ಒಂದೊಂದು ದಿನವೂ ಒಂದೊಂದು ಬಣ್ಣದ ವಸ್ತ್ರದಿಂದ ದೇವಿಯನ್ನು ಅಲಂಕರಿಸಿ ಪೂಜಿಸುತ್ತಾರೆ.

ಸಡಗರದಿಂದ ಮೈಸೂರಿನಲ್ಲಿ ನಡೆಯುವ ದಸರಾ ಉತ್ಸವವಂತೂ ಕಣ್ಣುಗಳಿಗೆ ಹಬ್ಬ. ಹಿಂದೆ ವಿಜಯನಗರ ಸಾಮ್ರಾಜ್ಯವಾದ ಹಂಪಿಯಲ್ಲಿ ಮಹಾನವಮಿ ಎಂದು ಆಚರಣೆ ಮಾಡಲಾಗುತ್ತಿತ್ತು. ನಂತರ ಮೈಸೂರು ಅರಸರ ವೈಭವದ ಪ್ರತೀಕವಾಗಿ ದಸರಾ ಆಚರಣೆ ನಡೆದಿತ್ತು. ಈಗ ಇದು ರಾಜ್ಯ ಸರ್ಕಾರದಿಂದ ಆಚರಿಸಲಾಗುತ್ತದೆ. ಶ್ರೀ ಚಾಮುಂಡೇಶ್ವರಿ ದೇವಿಯ ಅದ್ಧೂರಿ ಮೆರವಣಿಗೆ ಬಹು ಸಂಭ್ರಮದಿಂದ ನಡೆಸಲಾಗುತ್ತದೆ.

`ದಶ’ ಎಂದರೆ ಹತ್ತು `ಹರ’ ಎಂದರೆ ಸಂಸ್ಕೃತ ದಲ್ಲಿ ಸೋಲಿಸುವುದು ಎಂದು ಅರ್ಥ ಎರಡೂ ಸೇರಿ ದಸರಾ ಎಂದು ಪ್ರಸಿದ್ಧವಾಗಿದೆ. ವರ್ಷದ ಹತ್ತನೇ ತಿಂಗಳಲ್ಲಿ ಆಚರಿಸುವ ಹಬ್ಬ.

ರಾಮಾಯಣದಲ್ಲಿ ಶ್ರೀ ರಾಮನು ರಾವಣನ ಮೇಲೆ ಸಾಧಿಸಿದ ವಿಜಯದ ಪ್ರತೀಕವಾಗಿ ಈ ಹಬ್ಬ ಆಚರಣೆಯಲ್ಲಿದೆ. ಮಹಾಭಾರತದಲ್ಲಿ ಪಾಂಡವರು ಶಮೀ ವೃಕ್ಷದಲ್ಲಿ ಇಟ್ಟಿದ್ದ ಆಯುಧ ಗಳನ್ನು ತೆಗೆದು ಕೌರವರ ವಿರುದ್ಧ ಹೋರಾಡಿ ಜಯ ಗಳಿಸಿದ ದಿನವೆಂದು ವಿಜಯದಶಮಿ ಆಚರಣೆಗೆ ಬಂದಿದೆ. ಚಾಮುಂಡಿ ಮಾತೆ ಮಹಿಷಾಸುರನನ್ನು ವಧಿಸಿದ ದಿನವೂ ಇದಾಗಿದೆ.

ಒಟ್ಟಿನಲ್ಲಿ ದುಷ್ಟ ಶಕ್ತಿಯ ವಿರುದ್ಧ ದೈವಿ ಶಕ್ತಿ ಜಯ ಸಾಧಿಸಿದ ದಿನ ಕೆಟ್ಟದ್ದು ನಶಿಸಿ ಒಳ್ಳೆಯದ್ದು ಮೆರೆದ ದಿನವಾಗಿದೆ. ಈ ದಸರ 412ನೇ ವರ್ಷದ ಆಚರಣೆ ಇದಾಗಿದೆ. ಮೈಸೂರಿನಲ್ಲಿ ನಡೆಯುವ ಜಂಬೂ ಸವಾರಿ ವಿಶ್ವವಿಖ್ಯಾತವಾಗಿದೆ. ಗಜ ಪಡೆಯ ಗಾಂಭೀರ್ಯತೆ ಚಿನ್ನದ ಅಂಬಾರಿಯಲ್ಲಿ ಕುಳಿತ ಶ್ರೀ ಚಾಮುಂಡೇಶ್ವರಿ ಮಾತೆಯನ್ನು ಕಣ್ತುಂಬಿಕೊಳ್ಳುವುದೇ ಒಂದು ಹೆಮ್ಮೆಯ ಸಂಗತಿ.

ಒಟ್ಟಿನಲ್ಲಿ 10 ದಿನಗಳ ಕಾಲ ಆಚರಿಸಲ್ಪಡುವ ಮಹಾ ಸಂಭ್ರಮದ ಹಬ್ಬವೇ ದಸರಾ. ಮಹೋನ್ನತ ನಾಡಹಬ್ಬ ಇದಾಗಿದ್ದು, ಕನ್ನಡಿಗರಿಗೆ ಹೆಮ್ಮೆಯ ಆಚರಣೆಯಾಗಿದೆ. 


– ಕೋಮಲ ವಿ. ಕುಮಾರ್, ದಾವಣಗೆರೆ.

error: Content is protected !!