ಮಹಿಳಾ ಮೀಸಲಾತಿಯೂ… ವರ್ಗ ಭೇದವೂ…

ಮಹಿಳಾ ಮೀಸಲಾತಿಯೂ… ವರ್ಗ ಭೇದವೂ…

ಲಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಸ್ಥಾನಗಳನ್ನು ಮೀಸಲಿಡುವ ಕಾನೂನು ಈಗ ಜಾರಿಯಾಗಿದೆ. ಲೋಕಸಭೆಯ ಒಟ್ಟು 543 ಸದಸ್ಯರಲ್ಲಿ ಈಗ, ಕೇವಲ 82 ಮಹಿಳೆಯರಿದ್ದಾರೆ. ಇದು ಒಟ್ಟು ಸದಸ್ಯರ ಶೇ.15.2ರಷ್ಟು ಮಾತ್ರವಾಗಿದೆ. ಹೀಗಾಗಿ ಮಹಿಳಾ ಮೀಸಲಾತಿ ಸ್ವಾಗತಾರ್ಹವೇ.

ಪರಿಶಿಷ್ಟ ಜಾತಿ ಹಾಗೂ ಪಂಗಡದ ಮಹಿಳೆಯರಿಗೂ ಮೀಸಲಾತಿ ದೊರೆಯಲಿದೆ. ಅದರಂತೆ, ಇತರೆ ಹಿಂದುಳಿದ ವರ್ಗಗಳ ಮಹಿಳೆಯರಿಗೂ ಮೀಸಲಾತಿ ಬೇಕೆಂಬ ಬೇಡಿಕೆ ಕೇಳಿ ಬಂದಿದೆ. ಇದೂ ಸೂಕ್ತವೇ ಆಗಿದೆ.

ನಾಳೆ ಸಚಿವ ಸ್ಥಾನ, ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿ ಸ್ಥಾನಗಳಿಗೂ ಮೀಸಲಾತಿ ಕೇಳಿದರೂ ತಪ್ಪೇನಿಲ್ಲ. ಜನಪ್ರತಿನಿಧಿಗಳು ಜನತೆಯನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಇರಬೇಕು ಎಂಬ ಬೇಡಿಕೆ ಸ್ವಾಗತಾರ್ಹವೇ. 

ಈಗಿರುವ ಲೋಕಸಭೆ ಹಾಗೂ ವಿಧಾನಸಭೆಗಳು ಎಷ್ಟರ ಮಟ್ಟಿಗೆ ಭಾರತವನ್ನು ಪ್ರತಿಬಿಂಬಿಸುತ್ತಿವೆ? ಏಕೆಂದರೆ ಲೋಕಸಭೆಯಲ್ಲಿ ಮಹಿಳಾ ಪ್ರಾತಿನಿಧ್ಯವಷ್ಟೇ ಅಲ್ಲದೇ, `ಆಮ್ ಆದ್ಮಿ’ ಪ್ರಾತಿನಿಧ್ಯದ ಕೊರತೆಯೂ ಇದೆ. ಮಹಿಳೆಯಾಗಿರುವುದು ಸಂಸತ್ – ವಿಧಾನಸಭೆ ಪ್ರವೇಶಕ್ಕೆ ಎಷ್ಟು ಅಡ್ಡಿಯಾಗಿದೆಯೋ ಅಷ್ಟೇ ಅಡ್ಡಿ ಬಡವರು ಹಾಗೂ ಮಧ್ಯಮ ವರ್ಗದವರಿಗೂ ಇದೆ. ಮುಂದಾನೊಂದು ಕಾಲದಲ್ಲಿ ಮಹಿಳಾ ಮೀಸಲಾತಿ ಜಾರಿಗೆ ಬಂದ ಸಂದರ್ಭದಲ್ಲಿ, ಬಡ ಹಾಗೂ ಮಧ್ಯಮ ವರ್ಗದ ಸಮರ್ಥರಿಗೆ ಪ್ರಾತಿನಿಧ್ಯ ಸಿಗುವುದು ಕಷ್ಟಸಾಧ್ಯ. ಉಳ್ಳವರು ಹಾಗೂ ಉನ್ನತ ರಾಜಕಾರಣಿಗಳ ಕುಟುಂಬದ ಮಹಿಳೆಯರಿಗೇ ಶಾಸನ ಸಭೆಗಳ ಬಾಗಿಲು ಸುಲಭವಾಗಿ ತೆರೆಯಲಿದೆ.

ಎ.ಡಿ.ಆರ್. ಸಂಸ್ಥೆಯ ಪ್ರಕಾರ ಲೋಕಸಭೆಯಲ್ಲಿ ಒಟ್ಟು 475 ಕೋಟ್ಯಾಧೀಶರಿದ್ದಾರೆ. ಅಂದರೆ ಶೇ.88ರಷ್ಟು ಜನಪ್ರತಿನಿಧಿಗಳು ಕೋಟ್ಯಾಧೀಶರಿದ್ದಾರೆ. ಇದೇ ಸಂಸ್ಥೆಯ ವರದಿ ಪ್ರಕಾರ ಲೋಕಸಭಾ ಸದಸ್ಯರ ಸರಾಸರಿ ಆಸ್ತಿ ಪ್ರಮಾಣ 20.47 ಕೋಟಿ ರೂ. ಹಾಗೂ ರಾಜ್ಯಸಭಾ ಸದಸ್ಯರ ಸರಾಸರಿ ಆಸ್ತಿಯ ಪ್ರಮಾಣವಂತೂ 79.54 ಕೋಟಿ ರೂ.!

ಮತ್ತೊಂದು ವರದಿಯ ಪ್ರಕಾರ ದೇಶದ 140 ಕೋಟಿ ಜನರ ಪೈಕಿ 2.24 ಕೋಟಿ ಜನ ಮಾತ್ರ ಆದಾಯ ತೆರಿಗೆ ಪಾವತಿಸುವಷ್ಟು ಶ್ರೀಮಂತರಿದ್ದಾರೆ. ಅಂದರೆ ದೇಶದ ಶೇ.1-2ರಷ್ಟಿರುವ ಶ್ರೀಮಂತ ವರ್ಗವೇ ಲೋಕಸಭೆ ಹಾಗೂ ವಿಧಾನಸಭೆಗಳ ಬಹುತೇಕ ಸೀಟುಗಳನ್ನು ಕಬಳಿಸಿಕೊಳ್ಳುತ್ತಿದೆ.

 ಪ್ರತಿ ವರ್ಷ ಲೋಕಸಭೆ ಹಾಗೂ ವಿಧಾನಸಭೆಗೆ ಪ್ರವೇಶಿಸುವ ವೆಚ್ಚ ಹೆಚ್ಚಾಗುತ್ತಲೇ ಇದೆ. ಪಾರ್ಟಿ ಫಂಡ್‌ ಕೊಟ್ಟರೂ ಸಹ, ವೈಯಕ್ತಿಕವಾಗಿ ಹಣದ ಥೈಲಿ ಇಲ್ಲದೇ ಜನಪ್ರತಿನಿಧಿಯಾಗುವ ಕನಸು ನನಸಾಗುವುದು ಕಷ್ಟ. ಲೋಕಸಭೆ ಹಾಗೂ ವಿಧಾನಸಭೆ ಒತ್ತಟ್ಟಿಗಿರಲಿ, ಪಾಲಿಕೆಯ ಸ್ಥಾನಕ್ಕೆ ಸ್ಪರ್ಧಿಸುವುದೂ `ಆಮ್ ಆದ್ಮಿ’ಗೆ ಕಷ್ಟಸಾಧ್ಯವಾಗಿದೆ.

ಕೇವಲ ದುಡ್ಡಿದ್ದರಷ್ಟೇ ಸಾಲದು, ನಿರ್ದಿಷ್ಟ ಕುಟುಂಬದ ಸದಸ್ಯರಾಗಿದ್ದರೆ ಶಾಸನ ಸಭೆ ಪ್ರವೇಶವಷ್ಟೇ ಅಲ್ಲದೇ ಸಚಿವ ಸ್ಥಾನ, ಮುಖ್ಯಮಂತ್ರಿ ಅಷ್ಟೇ ಏಕೆ ಪ್ರಧಾನ ಮಂತ್ರಿ ಗಾದಿಗಳೂ ಲಭ್ಯ. ಹೀಗಾಗಿ ಸಾಕಷ್ಟು ರಾಜಕೀಯ ಸ್ಥಾನಗಳು ಹಣ – ಕುಟುಂಬ ಬಲ ಉಳ್ಳವರಿಗೆ `ಮೀಸಲಾಗಿವೆ’.

ಮೊನ್ನೆ ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದಲ್ಲಿನ ಜಾತೀಯತೆ ಬಗ್ಗೆ ಮಾತನಾಡಿ, ಸನಾತನ ಧರ್ಮವನ್ನು ರೋಗಗಳಿಗೆ ಹೋಲಿಸಿದ್ದರು. ಆ ಕಾಲದಲ್ಲಿ ಕೆಲ ಜಾತಿಯವರಿಗೆ ಸ್ಥಾನಗಳು ಮೀಸಲಾಗಿದ್ದವು. ಈಗಿನ ಕಾಲದಲ್ಲಿ ಕೆಲ ಕುಟುಂಬದವರಿಗೆ ರಾಜಕೀಯ ಸ್ಥಾನಗಳು ಮೀಸಲಾಗಿವೆ. ಇಂತಹ `ರೋಗಗ್ರಸ್ಥತೆ’ಯಿಂದ ಸಿಕ್ಕುವ ಲಾಭಗಳನ್ನು ಆಯಾ ಕುಟುಂಬದವರು ಬಿಟ್ಟು ಕೊಡುವ ಔದಾರ್ಯತೆ ತೋರಿದ ಉದಾಹರಣೆಗಳನ್ನು ಶೋಧಿಸಬೇಕಿದೆ.

ಇತ್ತೀಚೆಗೆ ಕೆಲ ರಾಜಕಾರಣಿಗಳು ಸಂವಿಧಾನವನ್ನು ತಮ್ಮ ಧಾರ್ಮಿಕ ಗ್ರಂಥ ಎಂದು ಹೇಳುವುದನ್ನು ಪದ್ಧತಿ ಮಾಡಿಕೊಂಡಿ ದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಲೋಕಸಭೆ ಪ್ರವೇಶಿಸುವಾಗ ಹೊಸ್ತಿಲಿಗೆ ನಮಸ್ಕರಿಸಿದ್ದರು. ಒಂದು ರೀತಿ ಸಂಸತ್ತೂ ಸಹ ಧಾರ್ಮಿಕ ಕೇಂದ್ರದ ರೀತಿ ಎಂದು ಕೆಲವರು ಭಾವಿಸಿದಂತಿದೆ. ಅದರ ಗರ್ಭಗುಡಿ ಪ್ರವೇಶಿಸಲು ಬಡವರೂ ಸೇರಿದಂತೆ ಅರ್ಹ ಎಲ್ಲರಿಗೂ ಅವಕಾಶ ಬೇಕಿದೆ. ಈ ಬಗ್ಗೆ ಗಮನ ಹರಿಸುವುದು ಯಾವಾಗ? ಶಾಸನ ಸಭೆಗಳು ನಿಜವಾದ ಭಾರತದ ಪ್ರತಿಬಿಂಬಿವಾಗುವುದು ಯಾವಾಗ?

– ಎಸ್.ಎ. ಶ್ರೀನಿವಾಸ್‌

error: Content is protected !!