ಸಾರ್ಥಕ ಜೀವನ ನಡೆಸಿ ಜನಮಾನಸದಲ್ಲಿ ನೆಲೆಸಿದ ಕರ್ಮಯೋಗಿಗಳು

ಸಾರ್ಥಕ ಜೀವನ ನಡೆಸಿ ಜನಮಾನಸದಲ್ಲಿ ನೆಲೆಸಿದ ಕರ್ಮಯೋಗಿಗಳು

ನಿಸ್ವಾರ್ಥ ಸೇವೆಗೈದ ಸತ್ಯ, ಅಹಿಂಸೆ, ಸರಳತೆ, ಉದಾತ್ತ ಚಿಂತನೆಗಳ ಹರಿಕಾರ ಮಹಾತ್ಮ ಗಾಂಧೀಜಿ ಹಾಗೂ ಸರಳ ಜೀವನ, ಪ್ರಾಮಾಣಿಕ ವ್ಯಕ್ತಿತ್ವದ, ಸೌಮ್ಯ ಹೃದಯದ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ಅಕ್ಟೋಬರ್ 2 ರಂದು ಆಚರಿಸುತ್ತಿದ್ದು, ತನ್ನಿಮಿತ್ತ ಈ ಲೇಖನ

ನಮನವಿದೋ ನಮನವಿದೋ ನಮನ ಸಹಜಯೋಗಿ

ಸಮತೆಗಾಗಿ ಬಾಳ್ವೆಯನೆ ಬೀಳ್ದ ನವವಿರಾಗಿ

ನಮನವಿದೋ ನಮನವಿದೋ ನಮನ ಸಹಜಯೋಗಿ

ಸಮತೆಗಾಗಿ ಸರ್ವಸ್ವವತೆತ್ತ ಮಹಾತ್ಯಾಗಿ

ಆನಂದಕಂದರ ನುಡಿಯಂತೆ ದೇಶಕ್ಕಾಗಿ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟ ಮಹಾತ್ಮ ಗಾಂಧೀಜಿ ತಮ್ಮ ಚಿಂತನೆ, ವಿಚಾರವಂತಿಕೆ, ಕ್ರಿಯಾಶೀಲತೆ, ಮಾನವೀಯ ದೃಷ್ಟಿಯಿಂದ ಮನುಕುಲದ ಮೇಲೆ ಕಾಲ, ದೇಶಗಳನ್ನು ಮೀರಿ ಪ್ರಭಾವ ಬೀರಿರುವ ಆಧುನಿಕ ಇತಿಹಾಸ ನಿರ್ಮಾಪಕರಲ್ಲಿ ಅಗ್ರ ಸ್ಥಾನದಲ್ಲಿರುವವರು.

ಭಾರತ ದೇಶ ಕಂಡ ಮಹಾನ್‍ ದಾರ್ಶನಿಕರಲ್ಲಿ ಗಾಂಧೀಜಿಯ ಹೆಸರು ಚಿರಸ್ಥಾಯಿ. ಸತ್ಯ, ಅಹಿಂಸೆ, ದಯೆ, ಪರೋಪಕಾರ ಮುಂತಾದ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ರಾಷ್ಟ್ರಕ್ಕಾಗಿ ಹೋರಾಡಿದ ದಿವ್ಯಚೇತನವಿದು. ಹಾಗಾಗಿ ಗಾಂಧಿ ಎಂಬುದು ಕೇವಲ ಹೆಸರಾಗಿ ಉಳಿಯದೇ ಒಂದು ವಿಶ್ವವಿದ್ಯಾಲಯವಾಗಿ, ಭಾರತೀಯರ ಶಕ್ತಿಯಾಗಿ ಕಂಗೊಳಿಸುತ್ತಿದೆ.

ಸತ್ಯವನ್ನು ಹಾಸಿ, ಅಹಿಂಸೆಯನ್ನು ಹೊದ್ದು ಭಾರತ ಮಾತೆಯನ್ನು ಬ್ರಿಟಿಷರ ದಾಸ್ಯದಿಂದ ಬಂಧಮುಕ್ತಗೊಳಿಸಿ ಮಾನವೀಯತೆ ಮತ್ತು ಅಹಿಂಸೆಯ ಪಾಠವನ್ನು ಪ್ರಪಂಚಕ್ಕೇ ಪರಿಚಯಿಸಿದ ಗಾಂಧೀಜಿಯವರ ವ್ಯಕ್ತಿತ್ವವನ್ನು ಪದಗಳಲ್ಲಿ ಕಟ್ಟಿಕೊಡುವುದು ಸುಲಭದ ಮಾತಲ್ಲ. 

ಈ ಹಿನ್ನೆಲೆಯಲ್ಲಿ ಆಲ್ಬರ್ಟ್ ಐನ್‍ಸ್ಟೀನ್‍ರವರು ಗಾಂಧೀಜಿಯವರನ್ನು ಕುರಿತು ಯಾವ ರೀತಿಯ ಪ್ರಾಪಂಚಿಕ ಅಧಿಕಾರಗಳನ್ನು ಹೊಂದಿರದ ಜನನಾಯಕ. ತಮ್ಮ ಧ್ಯೇಯವನ್ನು ಜನರಿಗೆ ತಿಳಿಸಿ, ಅವರ ಮನವೊಲಿಸುವ ಚತುರ ರಾಜಕಾರಣಿ. ವಿವೇಕವುಳ್ಳ ಪ್ರತಿಭಾಶಾಲಿ. ತಮ್ಮ ದೃಢತೆ ಮತ್ತು ಕಾರ್ಯತತ್ಪರತೆಯಿಂದ ಅಸಾಧ್ಯವನ್ನು ಸಾಧ್ಯವೆನಿಸಿದ ಶೂರ. ಜನರನ್ನುದ್ಧರಿಸಿ ಮುಂದುವರೆದ ಸುಧಾರಕ. ಐರೋಪ್ಯರ ಪಾಶವೀ ಕೃತ್ಯಗಳನ್ನು ತಮ್ಮ ಸರಳ ಮಾನವೀಯ ನಡವಳಿಕೆಯ ಅಸ್ತ್ರದಿಂದ ಎದುರಿಸಿದ ಪರಾಕ್ರಮಿ. ಸದಾಕಾಲವು ಸರ್ವಮಾನ್ಯರೆನಿಸಿಕೊಂಡಿದ್ದಾರೆ. ಮುಂದೆ ಅನೇಕ ಹುಟ್ಟುಗಳಾದರೂ ಇಂತಹ ಮಾನವನ ಹುಟ್ಟು ಮತ್ತೊಮ್ಮೆ ಅಸಂಭವ ಮತ್ತು ನಂಬಿಕೆಗೆ ದೂರ. ಅಂತಹ ಮಹಾತ್ಮರ ಜೀವನ ತತ್ವ ಹಾಗೂ ಅವರ ಬಹುಮುಖ ಸಾಧನೆಗಳ ಬಗೆಗೆ ಎಷ್ಟು ಬರೆದರೂ ಸಾಲದು ಎಂದಿದ್ದಾರೆ.

ಭಾರತವನ್ನು  ಕೇವಲ ಬ್ರಿಟಿಷರ ರಾಜಕೀಯ ಹಾಗೂ ಆರ್ಥಿಕ ದಾಸ್ಯದಿಂದ ಮುಕ್ತಿಗೊಳಿಸು ವುದು ಮಾತ್ರವಲ್ಲ, ಸಾಂಸ್ಕೃತಿಕ ದಾಸ್ಯದಿಂದ ಮುಕ್ತಿಯನ್ನು ಹೊಂದಿ ದಾರಿದ್ರ್ಯದಿಂದ ದೂರ ಗೊಳಿಸುವುದೇ ನಿಜವಾದ, ಶ್ರೇಷ್ಠವಾದ ಸ್ವಾತಂತ್ರ್ಯ ವೆಂಬುದು ಅವರ ಕಲ್ಪನೆಯಾಗಿತ್ತು. ತಮ್ಮ ಕಲ್ಪನೆಯ ಸ್ವಾತಂತ್ರ್ಯವನ್ನು ಕಾರ್ಯಗತಗೊಳಿ ಸಲು ತ್ರಿಕರಣ ಶುದ್ಧಿಯಾಗಿ ಪ್ರಯತ್ನಿಸಿ ಯಶಸ್ವಿಯಾದ ಧೀರ ವ್ಯಕ್ತಿತ್ವ ಇವರದು. 

ಬುದ್ಧ, ಬಸವೇಶ್ವರರ ಸಾಲಿನಲ್ಲಿ ನಿಂತು ಭಾರತೀಯ ಸಂಸ್ಕೃತಿಯ ಹೆಮ್ಮೆಯ ಪುತ್ರರಾಗಿ ಸಹಸ್ರಾರು ವರ್ಷಗಳ ದಾಸ್ಯ ವಿಮೋಚನೆಗೆಂಬಂತೆ ಗಾಂಧೀಜಿ ಹುಟ್ಟಿದರು. ದೇಶ-ವಿದೇಶಗಳಲ್ಲಿ ವ್ಯಾಸಂಗ ಮಾಡಿ, ಎರಡು ಸಂಸ್ಕೃತಿಗಳ ಅಧ್ಯಯನದ ತರುವಾಯ ಭಾರತದಲ್ಲಿ ಜನರ ಮನಸ್ಸನ್ನು ಗೆದ್ದು ಸ್ವದೇಶಿ ಸ್ವಾತಂತ್ರ್ಯ ಸಂಪಾದನೆಯ ಮೂಲಕ ಜಗತ್ತಿನ ಗುಲಾಮಿ ರಾಷ್ಟ್ರಗಳನ್ನು ಜಾಗೃತಗೊಳಿಸಿ ಸ್ಫೂರ್ತಿ ತುಂಬಿದ ಧ್ರುವತಾರೆಯಾಗಿದ್ದಾರೆ. 

ಜನರ ಬಾಯಲ್ಲಿ ಬಾಪು ಎಂದೇ ಚಿರಪರಿಚಿತರಾದ ಗಾಂಧೀಜಿಯವರನ್ನು ರವೀಂದ್ರನಾಥ್‍ಠಾಗೋರ್‍ರವರು ‘ಮಹಾತ್ಮ’ ಎಂದು ಕರೆದಿದ್ದಾರೆ. ಅವರು ಹೆಸರಿಗೆತಕ್ಕಂತೆ ಮಹಾನ್ ವ್ಯಕ್ತಿತ್ವವನ್ನು ರೂಢಿಸಿಕೊಂಡಿದ್ದರು.ಯಾವುದೇ ವ್ಯಕ್ತಿಗೆ ಮಹಾತ್ಮ ಎಂಬ ಬಿರುದು ಸಿಗಬೇಕಾದರೆ ಅವರ ಅಂತರಂಗದಲ್ಲಿರುವ ಸದ್ಗುಣಗಳು ಬೇರೆಯವರಿಗೆ ಮಾದರಿಯಾಗಿರಬೇಕು.ಅವರಲ್ಲಿದ್ದ ಸರಳತೆ, ಅಹಿಂಸಾ ತತ್ವ, ಶಿಸ್ತು, ನಿಷ್ಠೆ ಮೊದಲಾದ ಗುಣಗಳು ಆ ಹೆಸರು ಪಡೆಯಲು ಕಾರಣವಾಯಿತು.

ಅಕ್ಟೋಬರ್ 2 ನ್ನು ಭಾರತದಲ್ಲಿ ಗಾಂಧಿ ಜಯಂತಿ ಎಂಬ ಸ್ಮರಣೀಯ ದಿನವನ್ನಾಗಿ ಆಚರಿಸಿದರೆ ವಿಶ್ವದಾದ್ಯಂತ ಈ ದಿನವನ್ನು ಅಂತರರಾಷ್ಟ್ರೀಯ ಅಹಿಂಸಾ ದಿನವನ್ನಾಗಿ ಆಚರಿಸಲಾಗುತ್ತದೆ. ಗಾಂಧಿ ಒಬ್ಬ ಪ್ರಕೃತಿ ಚಿಕಿತ್ಸೆಯ ಪ್ರಯೋಗಕಾರ, ಚಿಂತಕ, ದಾರ್ಶನಿಕ, ಮಾನವತಾವಾದಿ, ಉತ್ತಮ ಲೇಖಕರಾಗಿ ಸತ್ಯ ಮತ್ತು ಅಹಿಂಸೆ ಮೇಲೆ ಜೀವನವಿಡಿ ಪ್ರಯೋಗ ಮಾಡಿದ ಆತ್ಮ ಸಾಧಕ, ಅಪ್ಪಟ ಕರ್ಮಯೋಗಿ.

‘ಅಹಿಂಸಾ’ ಅಸ್ತ್ರದ ಮೂಲಕ ಹೋರಾಡಿ ಸ್ವಾತಂತ್ರ್ಯ ಪಡೆದಿದ್ದನ್ನು ಜಗತ್ತಿನ ಇತಿಹಾಸದಲ್ಲಿ ಎಲ್ಲಿಯೂ ನೋಡಲು ಸಾಧ್ಯವಿಲ್ಲ. ಆ ಸಾಧ್ಯತೆ ಏನಾದರೂ ನಡೆದಿದ್ದರೆ ಅದು ಗಾಂಧೀಜಿಯವರ ಚಿಂತನೆಯಲ್ಲಿ ಎಂದರೆ ಅತಿಶಯೋಕ್ತಿಯಾಗಲಾರದು. ಅವರು ತಮ್ಮ ಕೊನೆಯುಸಿರಿರುವ ತನಕ ಮಾಡಿದ ತ್ಯಾಗ, ನಡೆಸಿದ ಧ್ಯೇಯ ಅನುಪಮವಾದದ್ದು. ಪರರನ್ನು ತಮ್ಮಂತೆ ಕಾಣುವ ಮತ್ತೊಬ್ಬರ ಸ್ಥಾನದಲ್ಲಿ ನಿಂತು ಆಲೋಚಿಸುವ ಸ್ವಂತದ ಸುಖ-ದುಃಖಗಳ ಜೊತೆಗೆ ಇನ್ನಿತರರ ಬೇಕು ಬೇಡಗಳನ್ನು ಅರಿಯುವ, ಉದಾರಶೀಲವಾದ ಸಮಾನತೆಯ ನೀತಿಯುಕ್ತವಾದ ಗುಣಗಳನ್ನು ಯುವ ಪೀಳಿಗೆಯಲ್ಲಿ ಬೆಳೆಸಬೇಕಾಗಿದೆ. ಕೊಲೆ, ಸುಲಿಗೆ, ಹಿಂಸೆ, ಸೇಡಿಗಿಂತ ಪ್ರೀತಿ, ಪ್ರೇಮ, ಅಹಿಂಸೆಯ ಮೂಲಕ ಎಂಥ ದುಷ್ಟ ಶಕ್ತಿಯನ್ನಾದರೂ ದಮನಗೊಳಿಸಬಹುದು ಎನ್ನುವುದಕ್ಕೆ ಅವರ ಬದುಕೇ ಸಾಕ್ಷಿಯಾಗಿದ್ದು ನಮ್ಮೆಲ್ಲರ ಬದುಕಿಗೆ ದಾರಿ ದೀಪವಾಗಿದೆ. 

ಲಾಲ್ ಬಹದ್ದೂರ್ ಶಾಸ್ತ್ರಿ:

ಆರು ವರ್ಷದ ಬಾಲಕ ತನ್ನ ಸ್ನೇಹಿತರ ಜೊತೆ ಒಂದು ಹಣ್ಣಿನ ತೋಟಕ್ಕೆ ನುಗ್ಗಿ ಹಣ್ಣುಗಳನ್ನು ಕಿತ್ತರು. ಆಗ ತೋಟದ ಕಾವಲುಗಾರ ಬಂದಾಗ ಉಳಿದ ಹುಡುಗರೆಲ್ಲ ಓಡಿ ತಪ್ಪಿಸಿಕೊಂಡರು. ಈ ಪುಟ್ಟ ಹುಡುಗ ಕಾವಲುಗಾರನ ಕೈಗೆ ಸಿಕ್ಕಿ ಪೆಟ್ಟುತಿಂದ. ಅಳುತ್ತಾ ನನಗೆ ತಂದೆಇಲ್ಲ. ಹೊಡೆಯಬೇಡಿ ಎಂದು ಗೋಗರೆದ. ಕಾವಲುಗಾರನಿಗೆ ಬಾಲಕನ ಮೇಲೆ ಕರುಣೆ ಮೂಡಿ ತಂದೆ ಇಲ್ಲದ ಹುಡುಗನಾದರೆ ಬೇರೆಯವರಿಗಿಂತ ಒಳ್ಳೆಯವನಾಗಿರಬೇಕು ಎಂದು ಬುದ್ಧಿ ಹೇಳಿದ. ಆಗ ಆ ಬಾಲಕ ನನಗೆ  ಅವಮಾನವಾಗುವಂತಹ ಕೆಲಸವನ್ನು ಮತ್ತೆ ಎಂದೂ ಮಾಡುವುದಿಲ್ಲವೆಂದು ತೀರ್ಮಾನಿಸಿದ. ನುಡಿಯಂತೆ ನಡೆ ನಡೆದಂತೆ ನುಡಿ ಎಂಬ ತತ್ವಕ್ಕನುಗುಣವಾಗಿ ಬಾಳಿನುದ್ದಕ್ಕೂ ಹಾಗೆಯೇ ನಡೆದುಕೊಂಡ ಆ ಬಾಲಕನೆ ಸ್ವತಂತ್ರ ಭಾರತದ ಎರಡನೇ ಪ್ರಧಾನಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ.

ಶಾಸ್ತ್ರಿಯವರು 1904 ಅಕ್ಟೋಬರ್ 2 ರಂದು ಉತ್ತರ ಪ್ರದೇಶದ ಮೊಘಲ್ ಸರಾಯ್‍ನಲ್ಲಿ ಶಾರದಾ ಪ್ರಸಾದ್ ಮತ್ತು ದುಲಾರಿದೇವಿ ದಂಪತಿಗಳ ಪುತ್ತರಾಗಿ ಜನಿಸಿದರು. ಅತಿ ಚಿಕ್ಕವಯಸ್ಸಿನಲ್ಲಿಯೇ ಹೋರಾಟದ ಮನೋಭಾವ ಬೆಳೆಸಿಕೊಂಡಿದ್ದ ಇವರು ತಮ್ಮ ಓದನ್ನು ಅರ್ಧದಲ್ಲಿಯೇ ನಿಲ್ಲಿಸಿ 1921 ರಲ್ಲಿ ಮಹಾತ್ಮ ಗಾಂಧಿಯವರ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿದರು. 16 ನೇ ವಯಸ್ಸಿನಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಭಾರತದ ಸ್ವಾತಂತ್ರ್ಯಕ್ಕೆ ಅವಿರತವಾಗಿ ಹೋರಾಡಿ ತಮ್ಮ ಜೀವನವನ್ನು ದೇಶಕ್ಕಾಗಿ ಮುಡುಪಿಟ್ಟರು. ಸತ್ಯ, ಪ್ರಾಮಾಣಿಕತೆ, ಸ್ವಾಭಿಮಾನಇವರ ಉಸಿರಾಗಿತ್ತು. 1926 ರಲ್ಲಿ ಶಾಸ್ತ್ರಿ ಎಂಬ ಬಿರುದನ್ನು ಕಾಶಿ ವಿದ್ಯಾಪೀಠದಿಂದ  ಪಡೆದಇವರು ಮೃದು ಸ್ವಭಾವದ ವ್ಯಕ್ತಿಯಾಗಿ, ದಕ್ಷ ಪ್ರಧಾನಿಯಾಗಿ ಆಡಳಿತ ನಡೆಸಿದ ಶಾಸ್ತ್ರಿಯವರ ಬದುಕಿನಲ್ಲಿ ನಡೆದ ಅನೇಕ ಘಟನೆಗಳು ಅನುಕರಣೀಯವಾಗಿವೆ.

ಲಾಲ್ ಬಹದ್ದೂರ್ ಶಾಸ್ತ್ರಿಯವರು ಪ್ರಧಾನಿಯಾದ ಸಂದರ್ಭದಲ್ಲಿ ದೇಶದಲ್ಲಿ ಬರಗಾಲ ಆವರಿಸಿತು. ಆಗ ಹೊರದೇಶದಿಂದ ಆಹಾರವನ್ನು ಆಮದು ಮಾಡಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿ ಸಾಲಭಾರ ಅಧಿಕವಾಯಿತು. ಆ ಸಂದರ್ಭ ಅರಿತ ಶಾಸ್ತ್ರಿಯವರು ವಾರದಲ್ಲಿ ಒಂದು ದಿನ ಊಟವನ್ನು ಬಿಟ್ಟರೆ ಎಷ್ಟು ಆಹಾರ ಸಂಗ್ರಹವಾಗುವುದೆಂದು ಲೆಕ್ಕಾಚಾರ ಹಾಕಿ ಪ್ರತಿ ಸೋಮವಾರ ರಾತ್ರಿ ಊಟವನ್ನು ಬಿಡಲು ಸಾರ್ವಜನಿಕರಲ್ಲಿ  ಮನವಿ ಮಾಡಿದರು. ಮಾತಿಗಿಂತ ಕೃತಿ ಮೇಲು ಎನ್ನುವಂತೆ ತಾವೂ ಸಹ ಊಟವನ್ನು ತ್ಯಜಿಸಿದರು. ಈ ನಿರ್ಣಯವು ಅವರ ಸ್ವಾಭಿಮಾನಕ್ಕೆ ಸಾಕ್ಷಿಯಾಗಿದೆ.

ರೈಲ್ವೆ ಮಂತ್ರಿಗಳಾಗಿ ಸಾಮಾನ್ಯ ಜನರ ಅಗತ್ಯಗಳಿಗೆ ಗಮನ ನೀಡಿದ್ದು ವಿಶೇಷ. ಒಮ್ಮೆ ಕಡು ಬೇಸಿಗೆಯಲ್ಲಿ ಪ್ರಯಾಣ ಮಾಡುವ ಸಂದರ್ಭದಲ್ಲಿ ತಣ್ಣಗಿರಲೆಂದು ಒಂದು ದೊಡ್ಡ ಮಂಜುಗಡ್ಡೆಯನ್ನು ಅವರು ಪ್ರಯಾಣಿಸುವ ಪ್ರಥಮದರ್ಜೆ ಬೋಗಿಯಲ್ಲಿ ಇಡಲಾಗಿತ್ತು. ಬೋಗಿಯಲ್ಲಿ ತಣ್ಣನೆ ವಾತಾವರಣ ಇದ್ದುದ್ದನ್ನು ಕಂಡ ತಕ್ಷಣ ಶಾಸ್ತ್ರಿಯವರು ಕೇಳಿದ ಮೊದಲ ಪ್ರಶ್ನೆ ಮೂರನೇ ದರ್ಜೆ ಬೋಗಿಯಲ್ಲೂ ಮಂಜುಗಡ್ಡೆಗಳನ್ನು ಇಡಲಾಗಿದೆಯೇ? ಎಂದು. ತಮಗೊಬ್ಬರಿಗೆ ಈ ಸೌಲಭ್ಯವಿರುವುದನ್ನು ತಿಳಿದ ಅವರು, ಮೂರನೇ ದರ್ಜೆಯಲ್ಲಿ ಇರದ ಯಾವ ಸೌಲಭ್ಯಗಳೂ ತಮಗೆ ಬೇಡವೆಂದು ಮಂಜುಗಡ್ಡೆಯನ್ನು ತೆಗೆಯಲು ಹೇಳುತ್ತಾರೆ. ಮುಂದೆ ಮೂರನೇ ದರ್ಜೆ ಬೋಗಿಗಳಿಗೂ ಫ್ಯಾನ್‍ಗಳ ವ್ಯವಸ್ಥೆ ಅವರ ಕಾಲದಲ್ಲೇ ಬರುತ್ತದೆ. ಈ ಘಟನೆ ಅವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ.

ಶಾಸ್ತ್ರಿಯವರು ತಮ್ಮ ಮೊದಲ ಆದ್ಯತೆಯನ್ನು ದೇಶದ ರೈತರಿಗೂ ಗಡಿ ಕಾಯುವ ಯೋಧರಿಗೂ ಕೊಟ್ಟರು. ಶಸ್ತ್ರಾಸ್ತ್ರಗಳ ಆಧುನೀಕರಣಕ್ಕೆ ಆದ್ಯತೆ ನೀಡಿದರು. ‘ಜೈಜವಾನ್, ಜೈಕಿಸಾನ್’ ಎಂಬ ಘೋಷಣೆ ಇಂದಿಗೂ ರೈತರ ಮತ್ತು ಯೋಧರ ಬಗ್ಗೆ ಗೌರವ ಮೂಡಿಸುತ್ತದೆ. ನಿಸ್ವಾರ್ಥ ಸೇವೆಗೈದ ಸತ್ಯ, ಅಹಿಂಸೆ, ಸರಳತೆ, ಉದಾತ್ತ ಚಿಂತನೆಗಳ ಹರಿಕಾರ ಗಾಂಧೀಜಿಯವರ ಹಾಗೂ ಸರಳ ಜೀವನ, ಪ್ರಾಮಾಣಿಕ ವ್ಯಕ್ತಿತ್ವದ, ಸೌಮ್ಯ ಹೃದಯದ  ಲಾಲ್ ಬಹದ್ದೂರ್ ಶಾಸ್ತ್ರಿ ಇವರೀರ್ವರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಆಚರಣೆಯಲ್ಲಿ ತರುವುದರ ಮೂಲಕ ಗೌರವ ಸಲ್ಲಿಸಬೇಕು. 


ಸಾರ್ಥಕ ಜೀವನ ನಡೆಸಿ ಜನಮಾನಸದಲ್ಲಿ ನೆಲೆಸಿದ ಕರ್ಮಯೋಗಿಗಳು - Janathavani– ಡಾ. ಗೀತಾ ಬಸವರಾಜು, ಉಪನ್ಯಾಸಕರು, ಎ.ವಿ.ಕೆ ಮಹಿಳಾ ಕಾಲೇಜು, ದಾವಣಗೆರೆ

error: Content is protected !!