ವನಿತೆಯರ ಹೃದಯವನ್ನು ಮಾಡೋಣ ಬಲ ಮತ್ತು ಆರೋಗ್ಯಕರ

ವನಿತೆಯರ ಹೃದಯವನ್ನು ಮಾಡೋಣ ಬಲ ಮತ್ತು ಆರೋಗ್ಯಕರ

ಪ್ರತಿ ವರ್ಷ ಸೆಪ್ಟೆಂಬರ್ 29 ರಂದು  ವಿಶ್ವ ಹೃದಯ ದಿನವನ್ನಾಗಿ  ಆಚರಿಸುತ್ತೇವೆ. 2023ರ ವಿಶ್ವ ಹೃದಯ ದಿನದ ಧ್ಯೇಯ ವಾಕ್ಯ `ಹೃದಯವನ್ನು ಬಳಸಿ, ಹೃದಯವನ್ನು ತಿಳಿಯಿರಿ’ (Use Heart, Know Heart) ಎಂದು ವರ್ಲ್ಡ್ ಹಾರ್ಟ್ ಫೆಡರೇಷನ್ ರವರು ಪ್ರಪಂಚದಾದ್ಯಂತ ಪ್ರತಿಯೊಬ್ಬರಿಗೂ ತಮ್ಮ ಹೃದಯವನ್ನು ಕಾಳಜಿ ಮಾಡಲು ನೆನಪಿಸುತ್ತಿದೆ. ಈ ಅಭಿಯಾನ ದಿಂದ ನಾವು ನಮ್ಮ ಹೃದಯವನ್ನು ಮೊದಲು ತಿಳಿದುಕೊಳ್ಳುವ ಅಗತ್ಯದ ಮೇಲೆ ಕೇಂದ್ರೀಕರಿಸುತ್ತದೆ, ಏಕೆಂದರೆ ನಮಗೆ ತಿಳಿದಿ ರುವುದನ್ನು ಮಾತ್ರ ನಾವು ಪ್ರೀತಿಸುತ್ತೇವೆ ಹಾಗು ರಕ್ಷಿಸುತ್ತೇವೆ. 

ಜನ ಸಾಮಾನ್ಯರಲ್ಲಿ ಹೃದಯ ಆರೋಗ್ಯದ ಜ್ಞಾನವು ಸೀಮಿತವಾಗಿದೆ. ಇದನ್ನು ಹೋಗಲಾಡಿಸಿ, ಹೃದಯ ಆರೋಗ್ಯದ ಬಗ್ಗೆ ಹೆಚ್ಚು ತಿಳಿದುಕೊಂಡು, ಹೃದಯದ ಉತ್ತಮ ಕಾಳಜಿ ತೆಗೆದುಕೊಳ್ಳಬೇಕು.

ಹೃದ್ರೋಗ ಎಂದರೇನು ?

ಹೃದ್ರೋಗ ಎಂದರೆ ಹೃದಯ ಅಥವಾ ರಕ್ತನಾಳಗಳ ಮೇಲೆ ಪರಿಣಾಮ ಬೀರುವ ರೋಗಗಳು. ಅಧಿಕ ರಕ್ತದೊತ್ತಡ, ಅನಾರೋಗ್ಯಕರ ಆಹಾರ, ಅಧಿಕ ಕೊಲೆಸ್ಟ್ರಾಲ್, ಮಧುಮೇಹ, ಬೊಜ್ಜು, ತಂಬಾಕು ಸೇವನೆ, ಮೂತ್ರಪಿಂಡ ಕಾಯಿಲೆ, ದೈಹಿಕ ನಿಷ್ಕ್ರಿಯತೆ, ಮದ್ಯದ ಹಾನಿಕಾರಕ ಬಳಕೆ ಜೊತೆಗೆ ಕೌಟುಂಬಿಕ ಇತಿಹಾಸ, ಲಿಂಗ ಮತ್ತು ವಯಸ್ಸು ಹೃದಯ ಹಾಗು ರಕ್ತನಾಳಗಳ ಮೇಲೆ ಅಪಾಯದ ಪರಿಣಾಮ ಬೀರಬಹುದು.

ಮಹಿಳೆ ಮತ್ತು ಹೃದಯ

ಸಾಮಾನ್ಯವಾಗಿ ನಾವು ಹೃದ್ರೋಗ ಎಂದರೆ ಪುರುಷರ ತೊಂದರೆ ಎಂಬ ತಪ್ಪು ಕಲ್ಪನೆಯಲ್ಲಿದ್ದೇವೆ. ಹೆಚ್ಚಿನ ಸಂಶೋಧನೆ, ಚಿಕಿತ್ಸೆಯ ಪ್ರಯತ್ನ, ಕಾಯಿಲೆ ತಡೆಗಟ್ಟುವಿಕೆ ಪ್ರಾಥಮಿಕವಾಗಿ ಪುರುಷರ ಮೇಲೆ ಕೇಂದ್ರೀಕೃತವಾಗಿದೆ.

ಇತೀಚಿನ ದಿನಗಳ ಅಧ್ಯಯನಗಳು, ದತ್ತಾಂಶಗಳು ಭಾರತದಲ್ಲಿನ ಮಹಿಳೆಯರೂ ಸಹ ಹೃದ್ರೋಗ ಅಪಾಯವನ್ನು ಹೊಂದಿರುತ್ತಾರೆ ಎಂದು ತಿಳಿಸುತ್ತದೆ. ಇದು ಎಲ್ಲರಿಗು ಎಚ್ಚರಿಕೆಯ ಗಂಟೆ , ಹಾಗಾಗಿ ಈ ನಿಶ್ಯಬ್ದ ಬೆದರಿಕೆಗೆ ಬೆಳಕು ಚೆಲ್ಲುವ ಸಮಯ ಬಂದಿದೆ.

ಯಾವ ಮಹಿಳೆಯರು ಹೃದ್ರೋಗಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು ?

  • ಋತುಬಂಧ (Menopause) – ಮಹಿಳೆಯರು ಯಾವುದೇ ವಯಸ್ಸಿನಲ್ಲಿ ಹೃದ್ರೋಗವನ್ನು ಬೆಳೆಸಿಕೊಳ್ಳಬಹುದು. ಆದರೆ ಋತುಬಂಧದ ನಂತರ ಹೃದ್ರೋಗದ ಅಪಾಯ ಹೆಚ್ಚುತ್ತದೆ. ಈಸ್ಟ್ರೋಜೆನ್ ಹಾರ್ಮೋನ್, ಹೆಣ್ಣು ಮಕ್ಕಳ ಹೃದಯ ರಕ್ಷಿಸಲು ಸಹಾಯ ಮಾಡುತ್ತದೆ, ಹಾಗಾಗಿ ಸಾಮಾನ್ಯವಾಗಿ ಮಹಿಳೆಯರಲ್ಲಿ ಪುರುಷರಿಗಿಂತ ಅಂದಾಜು ಹತ್ತು ವರ್ಷಗಳ ನಂತರ ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ಋತುಬಂಧ ಹಾಗು ನಂತರದ ಸಮಯದಲ್ಲಿ ಈಸ್ಟ್ರೋಜೆನ್ ಮಟ್ಟವು ಕಡಿಮೆಯಾಗುತ್ತದೆ ಹಾಗಾಗಿ ಹೃದಯ ಕಾಯಿಲೆಗಳ ಅಪಾಯವೂ ಹೆಚ್ಚುತ್ತದೆ.
  • ಹೃದ್ರೋಗ ಕೌಟುಂಬಿಕ ಇತಿಹಾಸ – ರಕ್ತ ಸಂಬಂಧಿ ಕುಟುಂಬಸ್ಥರ ಹೃದಯ ಕಾಯಿಲೆಯಿಂದ ಮಹಿಳೆಯರ ಹೃದಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
  • ತಾಯಿ ಅಥವಾ ಸಹೋದರಿ 65 ವರ್ಷಕ್ಕಿಂತ ಮತ್ತು ತಂದೆ ಅಥವಾ ಸಹೋದರ 55 ವರ್ಷಕ್ಕಿಂತ ಮೊದಲು ಹೃದ್ರೋಗದಿಂದ ಬಳಲುತ್ತಿದ್ದರೆ, ಆ ಮಹಿಳೆಯೂ ಹೃದ್ರೋಗದಿಂದ ಬಳಲುವ ಸಾಧ್ಯತೆಗಳು ಹೆಚ್ಚು.
  • ಗರ್ಭವಾಸ್ಥೆಯಲ್ಲಿ ಅಧಿಕ ರಕ್ತದೊತ್ತಡ, ಮಧುಮೇಹ, ರಕ್ತಹೀನತೆಯಂತಹ ತೊಂದರೆಗಳು ಮುಂದೆ ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತವೆ.
  • ಹಾರ್ಮೋನ್‌ಗಳ ಜನನ ನಿಯಂತ್ರಣದ ಬಳಕೆ, ಎಂಡೋಮೆಟ್ರಿಯೋಸಿಸ್, ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್, ಮಾನಸಿಕ ಒತ್ತಡ, ಆತಂಕ ಅಥವಾ ಖಿನ್ನತೆ, ಧೂಮಪಾನ, ದೈಹಿಕ ನಿಷ್ಕ್ರಿಯತೆ, ಬೊಜ್ಜು ಅಥವಾ ಅಧಿಕ ತೂಕ, ರಕ್ತದೊತ್ತಡ ಹೀಗೆ ಅನೇಕ ಸಮಸ್ಯೆಗಳು ಹೃದ್ರೋಗವನ್ನು ಹೆಚ್ಚಿಸುವ ಅಪಾಯ ಹೊಂದಿರುತ್ತವೆ.
  • ಮೇಲೆ ತಿಳಿಸಿದ್ದರಲ್ಲಿ ಒಂದಕ್ಕಿಂತ ಹೆಚ್ಚಿನ ಅಪಾಯಗಳನ್ನು ಹೊಂದಿದ್ದಾರೆ, ನಿಮ್ಮ ಹೃದಯ ಆರೋಗ್ಯವನ್ನು ಅರ್ಥ ಮಾಡಿಕೊಳ್ಳಲು ಹೃದ್ರೋಗ ತಜ್ಞರನ್ನು ತಕ್ಷಣವೇ ಕಂಡು, ಬೇಕಾದ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಉತ್ತಮ.

ಮಹಿಳೆಯರಲ್ಲಿ ಹೃದ್ರೋಗ ಮತ್ತು ಹೃದಯಾಘಾತದ ಲಕ್ಷಣಗಳು ಯಾವುವು ?

  • ಎದೆಯಲ್ಲಿ ನೋವು ಅಥವಾ ತೀಕ್ಷ್ಣವಾದ ಅಸ್ವಸ್ಥತೆ.
  • ಕುತ್ತಿಗೆ, ದವಡೆ, ಗಂಟಲು, ಮೇಲು ಹೊಟ್ಟೆ ಅಥವಾ ಬೆನ್ನಿನಲ್ಲಿ ನೋವು.
  • ವಾಕರಿಕೆ, ವಾಂತಿ λ ಆಯಾಸ λ ಉಸಿರಾಟದ ತೊಂದರೆ

ಮಹಿಳೆಯರಲ್ಲಿ ಹೃದಯಾಘಾತದ ಲಕ್ಷಣಗಳು ಪುರುಷರಿಗಿಂತ ಭಿನ್ನವಾಗಿರಬಹುದು. ಮಹಿಳೆಯರಲ್ಲಿ ಎದೆನೋವು ಬರುವ ಸಾಧ್ಯತೆ ಪುರುಷರಿಗಿಂತ ಸ್ವಲ್ಪ ಕಡಿಮೆ.

ಹೃದಯಾಘಾತಗಳು ನಾವು ಚಲನಚಿತ್ರಗಳಲ್ಲಿ ನೋಡಿದಂತೆ ಹಠಾತ್, ನಾಟಕೀಯ ಘಟನೆಗಳಂತೆ ಕಾಣುವುದಿಲ್ಲ. ರೋಗಲಕ್ಷಣಗಳು ಸೌಮ್ಯ ಅಥವಾ ಬಲವಾಗಿರಬಹುದು, ಲಕ್ಷಣಗಳು ಮೆಲ್ಲಗೆ ಶುರುವಾಗಬಹುದು, ನಿಂತು ಮತ್ತೆ ಹಿಂದಿರುಗಲೂ ಬಹುದು.

ಮಹಿಳೆಯರಲ್ಲಿ ಹೃದ್ರೋಗವನ್ನು ತಡೆಯಬಹುದೇ?

ಸಾಮಾನ್ಯವಾಗಿ ನಾವು ಶೇ. 50ರಿಂದ 60ರಷ್ಟು ಹೃದಯ ಕಾಯಿಲೆಗಳನ್ನು ಜೀವನ ಶೈಲಿ ಬದಲಾವಣೆಯಿಂದ ತಡೆಗಟ್ಟಬಹುದು.

  • ವರ್ಷಕೊಮ್ಮೆ ನಿಮ್ಮ ವೈದ್ಯರನ್ನು ಭೇಟಿ ಮಾಡಿ
  • ನಿಮ್ಮ ರಕ್ತದೊತ್ತಡ, ಕೊಲೆಸ್ಟ್ರಾಲ್ ಮತ್ತು ಸಕ್ಕರೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ.
  • ನಿಯಮಿತವಾಗಿ ವ್ಯಾಯಾಮ ಮಾಡಿ. ಕನಿಷ್ಠ ಪ್ರತಿ ವಾರಕ್ಕೆ 150 ನಿಮಿಷಗಳವರೆಗೆ ವಾಕಿಂಗ್ ಕಡ್ಡಾಯ ಮಾಡಿಕೊಳ್ಳಿ.
  • ತಂಬಾಕು ಹಾಗು ಮದ್ಯ ಸೇವನೆಯನ್ನು ನಿಲ್ಲಿಸಿ.
  • ಹೃದಯ ಆರೋಗ್ಯಕರ ಆಹಾರವನ್ನು ಸೇವಿಸಿ.

ಸರಿಯಾದ ಆಯ್ಕೆಗಳು ದೊಡ್ಡ ವ್ಯತ್ಯಾಸವನ್ನು ಮಾಡಬಹುದು. ನಿಮ್ಮ ಹೃದಯ ಆರೋಗ್ಯಕ್ಕೆ ಏನು ಮಾಡಬಹುದೆಂಬುದನ್ನು ನಿಮ್ಮ ಹತ್ತಿರದ ಹೃದಯ ತಜ್ಞರಲ್ಲಿ ತಿಳಿದುಕೊಳ್ಳಿ.

ನೆನಪಿಡಿ ರೋಗಲಕ್ಷಣಗಳ್ಲಿಲದೆ ಮಹಿಳೆಯರು ಹೃದ್ರೋಗ ವನ್ನು ಹೊಂದಿರಬಹುದು. ಆದರೆ ಹೃದ್ರೋಗದ ಅಪಾಯದ ಬಗ್ಗೆ ನೀವು ಗಮನ ಹರಿಸಿದರೆ, ಸಮಸ್ಯೆಗಳ್ಳನ್ನು ತಡೆಗಟ್ಟಲು ಅಥವಾ ಹದಗೆಡದಂತೆ ತಡೆಯಲು ನೀವು ಕ್ರಮ ತೆಗೆದುಕೊಳ್ಳಬಹುದು.


– ಡಾ. ಲೋಹಿತಾಶ್ವ ಎಸ್.ಬಿ. ಕನ್ಸಲ್ಟೆಂಟ್ ಇಂಟರ್ವೆನ್ಶನಲ್ ಕಾರ್ಡಿಯೋಲಾಜಿಸ್ಟ್, ಜ. ಜ. ಮು. ವೈದ್ಯಕೀಯ ಮಹಾವಿದ್ಯಾಲಯ, ಎಸ್. ಎಸ್. ನಾರಾಯಣ ಹಾರ್ಟ್ ಸೆಂಟರ್, ದಾವಣಗೆರೆ. 99028 79988

error: Content is protected !!