ದಿಟ್ಟ ಹೆಜ್ಜೆಯ ಧೀರ ಸನ್ಯಾಸಿ…

ದಿಟ್ಟ ಹೆಜ್ಜೆಯ ಧೀರ ಸನ್ಯಾಸಿ…

ದಿಟ್ಟ ಹೆಜ್ಜೆಯ ಧೀರ ಸನ್ಯಾಸಿ... - Janathavaniಸೆ.20.9.2023 ರಿಂದ 24.9.2023 ರವರೆಗೆ ಸಿರಿಗೆರೆಯಲ್ಲಿ ಲಿಂಗೈಕ್ಯ ಶ್ರೀ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 31ನೇ ಶ್ರದ್ಧಾಂಜಲಿ ಕಾರ್ಯಕ್ರಮ

ಮಠ – ಮಂದಿರಗಳೆಂದರೆ ಗುಮಾನಿಯಿಂದ ನೋಡುವ ವಿಚಾರ ವಂತರೂ, ಮೆಚ್ಚುವಂತೆ ಬೆಳೆದಿರುವ ಕೆಲವೇ ಧಾರ್ಮಿಕ ಸಂಸ್ಥೆಗಳಲ್ಲಿ ಒಂದು ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ. ಇದು ಜನಹಿತಕ್ಕಾಗಿ ಶಿಕ್ಷಣ, ಕಲೆ, ಸಾಹಿತ್ಯ, ಧರ್ಮಗಳನ್ನು ಬಳಸಿಕೊಳ್ಳುತ್ತಿರುವ ಪರಿ ಸೋಜಿ ಗವುಂಟುಮಾಡುತ್ತದೆ. ಮಠದ ಶ್ರೀ ಸಮಾಜಮುಖಿ ಮಣಿಹಕ್ಕೆ ಭದ್ರ ಬುನಾದಿ ಹಾಕಿದ ಕೀರ್ತಿ ಈ ಮಠದ 20ನೇ ಗುರುಗಳಾಗಿದ್ದ ಲಿಂ|| ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರಿಗೆ (1914-1992) ಸಲ್ಲಬೇಕು.

ಸ್ವಾತಂತ್ರ್ಯ ಪೂರ್ವದಲ್ಲಿ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿ ಗಳವರು ಸಿರಿಗೆರೆಯಲ್ಲಿ ಪ್ರಾರಂಭಿಸಿದ ಪ್ರೌಢಶಾಲೆ ಮತ್ತು ಉಚಿತ ವಿದ್ಯಾರ್ಥಿ ನಿಲಯಗಳು ಸಹಪಂಕ್ತಿ ಭೋಜನವನ್ನು  ರೂಢಿಗೊಳಿಸಿ, ಅಸ್ಪೃಶ್ಯತೆ ನಿವಾರಣೆ ಹಾಗೂ ಜಾತ್ಯತೀತತೆಯ ಪಾಠ ಕಲಿಸಿದವು.

ಸಿರಿಗೆರೆ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿದ್ದ ಹರಿಜನ ಜಿ. ದುಗ್ಗಪ್ಪನವರು ಸ್ವಾಮೀಜಿಯ ವರಿಗೆ ಎಷ್ಟು ಆಪ್ತರಾಗಿದ್ದರೆಂದರೆ, ಅವರ ಒಡನಾಟವು ಗುರುಗಳೊಡನೆ ಸಹಭೋಜನ ಮಾಡುವುದರಿಂದ ಪ್ರಾರಂಭಗೊಂಡು ಅವರು ಹೊಳಲ್ಕೆರೆ ಕ್ಷೇತ್ರದ ಶಾಸಕ ರಾಗಲು, ಅನಂತರ ಲೋಕಸೇವಾ ಆಯೋಗದ ಅಧ್ಯಕ್ಷರಾಗಲು ಕಾರಣವಾಯಿತು. 

ಜಗಳೂರಿನ ಆದರ್ಶ ಮುಸ್ಲಿಂ ರಾಜಕಾರಣಿ ಜೆ.ಎಂ. ಇಮಾಮ್ ಸಾಬ್ ಮತ್ತಿತರರು ಸ್ವಾಮೀಜಿಯವರ ಕಾರುಣ್ಯ ವಲಯದಲ್ಲಿದ್ದವರು. ಶಿಷ್ಯರ ಬಹಿಷ್ಕಾರ, ಬೆದರಿಕೆಗೂ ಬಗ್ಗದ ಅವರು, ಖ್ಯಾತ ಅರ್ಥಶಾಸ್ತ್ರಜ್ಞ – ಶಿಕ್ಷಣ ತಜ್ಞ ದಿ|| ಡಿ.ಎಂ. ನಂಜುಂಡಪ್ಪ ಅವರ ಊರು ಚಿತ್ರದುರ್ಗ ಜಿಲ್ಲೆಯ ದೊಗ್ಗನಾಳಿನಲ್ಲಿ ಹರಿಜನರ ಮದುವೆಯಲ್ಲಿ ಭಾಗವಹಿಸಿದ್ದರು. ಭರಮಸಾಗರದಲ್ಲಿ ಮಸೀದಿಯನ್ನು ಉದ್ಘಾಟಿಸಿದರು. ತಮ್ಮ ಮಠದಲ್ಲಿ ಬ್ರಾಹ್ಮಣ ವರ್ಗದ ಕೂಡಲಿ ಶೃಂಗೇರಿ ಸ್ವಾಮಿಗಳ ಉತ್ಸವ ಮಾಡಿಸಿದ್ದರು.

ಸ್ವಾಮೀಜಿಯವರು 1946 ರಲ್ಲಿ ಸಿರಿಗೆರೆಯಲ್ಲಿ ಪ್ರೌಢಶಾಲೆಯನ್ನು ಸ್ಥಾಪಿಸಿದರಲ್ಲದೆ, 1962ರಲ್ಲಿ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯನ್ನು ಹುಟ್ಟು ಹಾಕಿದರು. ಇಂದು ಈ ಸಂಸ್ಥೆಯು ಮಧ್ಯ ಕರ್ನಾಟಕದ ಹದಿನಾಲ್ಕು ಜಿಲ್ಲೆಗಳಲ್ಲಿ, ಶಿಶುವಿಹಾರದಿಂದ ಮೊದಲ್ಗೊಂಡು ಇಂಜಿನಿಯರಿಂಗ್ ಕಾಲೇಜಿನವರೆಗೆ 258 ಶಾಲಾ-ಕಾಲೇಜು-ಹಾಸ್ಟೆಲ್‍ಗಳನ್ನು ನಡೆಸುತ್ತಿದೆ. ಪೇಟೆ, ಪಟ್ಟಣಗಳಿಗೆ ಹೋಗಿ ವಿದ್ಯಾಭ್ಯಾಸ ಮಾಡಲಾಗದ ಗ್ರಾಮೀಣ ಬಡಮಕ್ಕಳ ಆಶಾಕಿರಣವಾಗಿರುವ ಈ ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ಇಂದು ಸುಮಾರು 50 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಜಾತೀಯತೆಯ ಪಿಡುಗನ್ನು ನಿವಾರಿಸಲು ಅವರು ಮದುವೆಗಳ ಮೂಲಕ ಅಂತರ್‌ಜಾತೀಯ, ಅಂತರ ಧರ್ಮೀಯ, ಅಂತರ ರಾಷ್ಟ್ರೀಯ ಸಂಬಂಧಗಳನ್ನು ಪೊರೆದು, ಪೋಷಿಸಿದರು. ಖ್ಯಾತ ಸಮಾಜಶಾಸ್ತ್ರಜ್ಞ  ಡಾ| ಹಿರೇಮಲ್ಲೂರು ಈಶ್ವರನ್ ಹಾಗೂ ಹಾಲೆಂಡಿನ ಒಬಿನಾ ಡಿ.ಸಿಟರ್ ಇವರ ವಿವಾಹವನ್ನು 1960ರಲ್ಲಿ ಶ್ರೀಮಠದಲ್ಲಿ ನೆರವೇರಿಸಿದರು. ಅವರ ಮುಂದಾಳ್ತನದಲ್ಲಿ ನಡೆದ ವಿಧವಾ ವಿವಾಹಗಳು ಅನೇಕ.

ಪ್ರವಚನ, ಸಂಗೀತ, ನಾಟಕ, ಸಾಹಿತ್ಯ ಪ್ರಕಟಣೆಗಳ ಮುಖಾಂತರ ಶರಣರ ಜೀವನಾದರ್ಶಗಳು ಜನಮನದಲ್ಲಿ ಮೂಡುವಂತೆ ಮಾಡಲು ಅವರು ಅಕ್ಕನ ಬಳಗ, ಅಣ್ಣನ ಬಳಗ, ತರಳಬಾಳು ಕಲಾ ಸಂಘ, ತರಳಬಾಳು ಪ್ರಕಾಶನ ಹಾಗೂ ಶರಣ ಸಮ್ಮೇಳನಗಳನ್ನು ಹುಟ್ಟು ಹಾಕಿದರು. ಬೇರೆ ಬೇರೆ ಕಡೆ ನಡೆಯುವ ಶ್ರೀಮಠದ ತರಳಬಾಳು ಹುಣ್ಣಿಮೆ ಮಹೋತ್ಸವವು ಇಂದಿಗೂ ಶರಣ ತತ್ವ ಪ್ರಚಾರದ ಬಹುದೊಡ್ಡ ಪ್ರಭಾವೀ ಮಾಧ್ಯಮವಾಗಿದೆ. ಕಾಲ, ಕಾಯಕ ಹಾಗೂ ಕಾಸುಗಳ ಮಹತ್ವವನ್ನು ತಮ್ಮ ಜೀವನುದ್ದಕ್ಕೂ ಅರಿತು ಆಚರಿಸಿದವರು ಅವರು.

ಶ್ರೀಗಳು ವಚನ ಸಾಹಿತ್ಯದ ಪ್ರಕಟಣೆ-ಪ್ರಸಾರದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದರು. ಸಾಹಿತಿಗಳಾದ   ಡಾ|| ಹೆಚ್. ತಿಪ್ಪೇರುದ್ರಸ್ವಾಮಿ ಮತ್ತು  ಡಾ|| ಮಹದೇವ ಬಣಕಾರರೊಡನೆ ಅಕ್ಕಮಹಾದೇವಿ ಬಯಲಾದ ಕದಳಿ ವನದ ಸಂಶೋಧನೆ ಮಾಡಿದ್ದರು (1961).

ಪಟ್ಟಕ್ಕೆ ಬಂದ ಸಂಕಷ್ಟ ಕಾಲದಲ್ಲಿ (1937-38) ಬರೆದ ದಿನಚರಿಗಳು ಅವರ ಅಂತರಂಗಕ್ಕೆ  ಹಿಡಿದ ಕನ್ನಡಿಗಳಾಗಿವೆ. `ಶಿಷ್ಯರ ಹಣವನ್ನು ತೆಗೆದುಕೊಂಡು ಹೋಗಿ ಮಠದಲ್ಲಿರುವ ಅಣ್ಣ-ತಮ್ಮಂದಿರ ಹೆಂಡಿರು, ಮಕ್ಕಳಿಗೆ ಹಾಕುವ ನಾಮಧಾರಿ ಗುರುಗಳು ಸಮಾಜದಿಂದ ತೊಲಗದವರೆಗೆ ನಮಗೆ ಕಲ್ಯಾಣ ವಿಲ್ಲ’ ಎಂದು ಅವರು ದಿನಚರಿಯಲ್ಲಿ ದಾಖಲಿಸಿದ್ದಾರೆ! 

ಅವರ ಸಮರ್ಥ ಉತ್ತರಾಧಿಕಾರಿಗಳಾದ ಶ್ರೀ ತರಳಬಾಳು ಜಗದ್ಗುರು ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿ ಗಳವರು, ಈ ದಿನಚರಿಗಳನ್ನು ಅತ್ಯಂತ ಕಷ್ಟಪಟ್ಟು ಅಚ್ಚುಕಟ್ಟಾಗಿ ಸಂಪಾದಿಸಿ `ಆತ್ಮ ನಿವೇದನೆ’ ಎಂಬ ಹೆಸರಿನಲ್ಲಿ ಪ್ರಕಟಿಸಿದ್ದಾರೆ. 

ಕನ್ನಡ ಮತ್ತು ಸಂಸ್ಕೃತಗಳಲ್ಲಿ ಘನ ವಿದ್ವಾಂಸರಾಗಿದ್ದ ಶ್ರೀಗಳು, ಕಾಶಿಯಲ್ಲಿ ಓದುವಾಗಲೇ ಸಂಸ್ಕೃತದಲ್ಲಿ ಕವನ ಬರೆಯುತ್ತಿದ್ದರು. ಲಿಂಗೈಕ್ಯ ಶ್ರೀಗಳ ಮುಖ್ಯ ಕೃತಿಗಳು ‘ಶತಮಾನೋತ್ಸವ ಸಂದೇಶ’, ‘ಅಣ್ಣ ಬಸವಣ್ಣ’ ಹಾಗೂ ‘ಮರಣವೇ ಮಹಾನವಮಿ’, ‘ಶರಣಸತಿ ಲಿಂಗಪತಿ’, ಮತ್ತು ‘ವಿಶ್ವಬಂಧು ಮರುಳಸಿದ್ಧ’ ನಾಟಕಗಳು.

`ಜರತಾರಿ ಜಗದ್ಗುರು’ವಿನಂತಹ ಕ್ರಾಂತಿಕಾರಿ ಕಾದಂಬರಿಗಳನ್ನು ಬರೆದು ಕಪಟ ಸನ್ಯಾಸಿಗಳಿಗೆ ಸಿಂಹಸ್ವಪ್ನರಾಗಿದ್ದ ಖ್ಯಾತ ಕಾದಂಬರಿಕಾರ ಬಸವರಾಜ ಕಟ್ಟೀಮನಿ ಅವರು, `ಸಾಹಿತಿಗಳಾದ ನಾವು ಮಾಡಬೇಕಾದ ಕಾರ್ಯವನ್ನು ಸ್ವಾಮೀಜಿಯವರೊಬ್ಬರು ಮಾಡಿರುವ ರೆಂದರೆ, ಯಾರೇ ಆದರೂ ಮೆಚ್ಚಲೇಬೇಕು… ರಾಮಕೃಷ್ಣ ಮಿಷನ್‍ನಂತೆ ಸಿರಿಗೆರೆ ತರಳಬಾಳು ಮಿಷನ್ ರೂಪುಗೊಂಡು, ಸಾಮಾನ್ಯ ಜನರನ್ನು ಸರಿದಾರಿಯಲ್ಲಿ ನಡೆಸುತ್ತಿದೆ’ ಎಂದು ಮೆಚ್ಚುಗೆಯಾಡಿದ್ದಾರೆ.

ಲಿಂಗೈಕ್ಯ ಶ್ರೀಗಳವರ 31ನೇ ಶ್ರದ್ಧಾಂಜಲಿ ಸಮಾರಂಭವು ಈ ಬಾರಿ ದಿನಾಂಕ 20 ರಿಂದ 24.9. 2023 ರವರೆಗೆ ಸಿರಿಗೆರೆಯಲ್ಲಿ ಶ್ರೀ ತರಳಬಾಳು ಜಗದ್ಗುರು ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಸಮ್ಮುಖದಲ್ಲಿ ನಡೆಯಲೇರ್ಪಾಡಾಗಿದೆ. 

ಇದರಲ್ಲಿ ಕೃತಜ್ಞ ಜನತೆ ಸ್ವಯಂಪ್ರೇರಣೆಯಿಂದ ಧನ-ಧಾನ್ಯ, ಹಣ್ಣು-ತರಕಾರಿ ಸಮರ್ಪಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಟೊಂಕ ಕಟ್ಟಿ ನಿಂತಿರುವುದು ಲಿಂಗೈಕ್ಯ ಶ್ರೀಗಳವರ ಜನಪ್ರಿಯತೆ ಹಾಗೂ ಅಚ್ಚಳಿಯದ ಪ್ರಭಾವದ ಧ್ಯೋತಕವಾಗಿದೆ. ಈ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಸಾಹಿತಿಗಳು, ಕಲಾವಿದರು, ರಾಜಕಾರಣಿಗಳು, ಅಧಿಕಾರಿ ಗಳು, ಲಿಂಗೈಕ್ಯ ಶ್ರೀಗಳವರಿಗೆ ಶ್ರದ್ಧಾಂಜಲಿ ಅರ್ಪಿಸಲಿದ್ದಾರೆ. 

ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಹಾಗೂ ಖ್ಯಾತ ಸಂಗೀತ ನೃತ್ಯ ತಂಡಗಳಿಂದ ಪ್ರದರ್ಶನವನ್ನು ಮತ್ತು ರಕ್ತದಾನ, ನೇತ್ರ ಪರೀಕ್ಷೆ ಹಾಗೂ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಿದೆ. 

ಇದೇ ಸಂದರ್ಭದಲ್ಲಿ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ನಿವೃತ್ತ ನೌಕರರು ಹಾಗೂ ಸಂಸ್ಥೆಯ ಶಾಲಾ-ಕಾಲೇಜುಗಳ ಹಿರಿಯ ವಿದ್ಯಾರ್ಥಿಗಳ ಸಮಾವೇಶವೂ ನಡೆಯಲಿದೆ.

ಶ್ರೀಮಠದಲ್ಲಿ ಸಾಮೂಹಿಕ ಪ್ರಾರ್ಥನೆ, ಶಿವಮಂತ್ರ ಲೇಖನ, ವಿಶೇಷ ಪೂಜೆ ಮತ್ತು ಮಹಾರುದ್ರಾಭಿಷೇಕ ಜರುಗಲಿವೆ. ಲಿಂಗೈಕ್ಯ ಶ್ರೀಗಳವರ ಉತ್ಸವಮೂರ್ತಿ ಮೆರವಣಿಗೆ, ಕುಂಭ ಮೇಳ ಸ್ವಾಗತ, ಶಿವ ಧ್ವಜಾರೋಹಣ ಕಾರ್ಯಕ್ರಮಗಳು ನಡೆಯಲಿವೆ.

ಪ್ರೊ|| ಎಸ್.ಬಿ. ರಂಗನಾಥ್

ನಿವೃತ್ತ ಪ್ರಿನ್ಸಿಪಾಲ್, ದಾವಣಗೆರೆ.

error: Content is protected !!