ದೇಶದ ಆರ್ಥಿಕತೆಗೆ `ಕಸ-ವರ’ದ ನೆರವು..!

ದೇಶದ ಆರ್ಥಿಕತೆಗೆ `ಕಸ-ವರ’ದ ನೆರವು..!

ದೇಶದ ಆರ್ಥಿಕತೆಗೆ `ಕಸ-ವರ'ದ ನೆರವು..! - Janathavaniಹಳೆಯ ಆರ್ಥಿಕತೆಯಲ್ಲಿ ಕಚ್ಚಾ ವಸ್ತುಗಳನ್ನು ಉತ್ಪನ್ನಗಳಾಗಿ ಪರಿವರ್ತಿಸಿ ಬಿಸಾಕಲಾಗುತ್ತಿತ್ತು.
ಇದು ಒಮ್ಮುಖ ಚಲನೆಯಾಗಿತ್ತು. ಈಗ ಒಂದು ವಸ್ತುವನ್ನು ಮತ್ತೆ ಮತ್ತೆ ಮರು ಬಳಕೆ ಮಾಡುವ ಚಕ್ರ ರೂಪದ ಆರ್ಥಿಕತೆ ಬೇಕೆಂಬ ಬೇಡಿಕೆ ಹೆಚ್ಚಾಗುತ್ತಿದೆ.

ಪ್ರಧಾನ ಮಂತ್ರಿಗಳ ವಿಜ್ಞಾನ, ತಂತ್ರಜ್ಞಾನ ಹಾಗೂ ಆವಿಷ್ಕಾರ ಸಲಹಾ ಮಂಡಳಿ (ಪಿ.ಎಂ.-ಎಸ್‌.ಟಿ.ಐ.ಎ.ಸಿ.) ಮುಂದಿನ ತಾಂತ್ರಿಕ ಮೈಲಿಗಲ್ಲುಗಳಿಗೆ ನೀಲನಕ್ಷೆ ರೂಪಿಸಿದೆ. ಅದರಲ್ಲಿ ಕ್ವಾಂಟಂ ವಿಜ್ಞಾನ, ಕೃತಕ ಬುದ್ಧಿವಂತಿಕೆ, ಮಾನವ ಆರೋಗ್ಯಕ್ಕೆ ಜೈವಿಕ ವಿಜ್ಞಾನ ಇತ್ಯಾದಿಗಳೆಲ್ಲ ಇವೆ. ಇದರ ಜೊತೆಗಿರುವ ಮತ್ತೊಂದು ವಿಷಯ ಎಂದರೆ `ಕಸ ಸಂಪತ್ತು’!

ಹಳೆಗನ್ನಡದಲ್ಲಿ ಬಂಗಾರವನ್ನು ಕಸವರ ಎಂದೂ ಕರೆಯಲಾಗುತ್ತಿತ್ತು. ಬಹುಶಃ ಮುಂದೊಂದು ದಿನ ಕಸವೂ ಬಂಗಾರವಾಗುವ ಕಾಲ ಬರಬಹುದು ಎಂಬುದು ಆಗಿನವರ ಆಶಯವಾಗಿತ್ತೋ ಏನೋ. ಪ್ರಸಕ್ತ ಭಾರತದಲ್ಲಿ ಕಸ ಇನ್ನೂ ವರವಾಗಿಲ್ಲ, ಹೊರೆಯಾಗಿದೆ. ಆದರೆ, ಸ್ವೀಡನ್ ರೀತಿಯ ದೇಶಗಳು ಕಸವನ್ನು ವರ ಮಾಡಿಕೊಳ್ಳುವತ್ತ ಈಗಾಗಲೇ ಸ್ಪಷ್ಟ ಹೆಜ್ಜೆ ಇಟ್ಟಿವೆ.

ವಿಶ್ವದಾದ್ಯಂತ ಕಸವನ್ನು ವಿಲೇವಾರಿ ಮಾಡುವುದು ಹೇಗೆ ಎಂಬ ಚಿಂತೆ ಕಾಡುತ್ತಿದ್ದರೆ, ಸ್ವೀಡನ್‌ 2016ರಲ್ಲಿ ಕಸದ ರಾಶಿ ಇಲ್ಲದೇ ಪರದಾಡಿತ್ತು! ಏನಾಯಿತು ಎಂದರೆ, ಸ್ವೀಡನ್‌ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಘಟಕಗಳನ್ನು ಹೊಂದಿತ್ತು. ತ್ಯಾಜ್ಯದಿಂದ ಇಂಧನ ಉತ್ಪಾದಿಸುವ 32 ಘಟಕಗಳು ಕಾರ್ಯನಿರ್ವಹಿಸುತ್ತಿದ್ದವು. ದೇಶದ ಶೇ.9ರಷ್ಟು ಮನೆಗಳಿಗೆ ಈ ಘಟಕದಿಂದಲೇ ವಿದ್ಯುತ್ ಬರುತ್ತಿತ್ತು.

ಹೀಗಾಗಿ ಅಲ್ಲಿನ ಸಾಕಷ್ಟು ಇಂಧನ ಅಗತ್ಯಕ್ಕೆ ಕಸವೇ ಆಧಾರವಾಗಿತ್ತು. ಆದರೆ, ತ್ಯಾಜ್ಯ ನಿರ್ವಹಣೆಯನ್ನು ಆ ದೇಶ ಎಷ್ಟರ ಮಟ್ಟಿಗೆ ಪಾಲಿಸಿತ್ತು ಎಂದರೆ, ಅಲ್ಲಿನ ವಿದ್ಯುತ್ ಘಟಕಗಳಿಗೆ ಕಸದ ಕೊರತೆಯಾಗಿತ್ತು. ಕೊನೆಗೆ ಬೇರೆ ದೇಶಗಳಿಂದ ಕಸ ಆಮದು ಮಾಡಿಕೊಂಡು ಪರಿಸ್ಥಿತಿ ನಿಭಾಯಿಸಲಾಯಿತು.

ಸ್ವೀಡನ್‌ 2015ರ ವೇಳೆಗಾಗಲೇ ಮನೆಗಳಿಂದ ಶೇ.99ರಷ್ಟು ಘನತ್ಯಾಜ್ಯವನ್ನು ಮರುಬಳಕೆ ಮಾಡಿಕೊಳ್ಳುತ್ತಿತ್ತು. ಈಗ ಸ್ವೀಡನ್ ಮತ್ತಷ್ಟು ಮುಂದೆ ಸಾಗಿದೆ. ಬಳಕೆಯಾಗುವ ಎಲ್ಲ ವಸ್ತುಗಳನ್ನು ಹೇಗಾದರೂ ಮಾಡಿ ಮರು ಬಳಕೆ ಹಂತಕ್ಕೆ ತರಬೇಕು ಎಂದು ದೇಶ ಶ್ರಮಿಸುತ್ತಿದೆ. ಅದರ ಅಂಗವಾಗಿ, ಹಳೆಯ ಬಟ್ಟೆಗಳಿಂದ ನೂಲು ಬೇರ್ಪಡಿಸಿ, ಹೊಸ ಬಟ್ಟೆ ಮಾಡಲಾಗುತ್ತಿದೆ. 

ಈ ಎಲ್ಲ ಹಿನ್ನೆಲೆ ನೋಡಿದಾಗ, ಭಾರತದ ಪ್ರಧಾನ ಮಂತ್ರಿ ಸಮಿತಿಯು ತ್ಯಾಜ್ಯದಿಂದ ಸಂಪತ್ತು ಎಂಬ ಗುರಿ ಹೊಂದಿರುವುದರಲ್ಲಿ ಅಚ್ಚರಿ ಪಡಬೇಕಿಲ್ಲ.  ಹಳೆಯ ಆರ್ಥಿಕತೆಯಲ್ಲಿ ಕಚ್ಚಾ ವಸ್ತುಗಳನ್ನು ಉತ್ಪನ್ನಗಳಾಗಿ ಪರಿವರ್ತಿಸಿ ಬಿಸಾಕಲಾಗುತ್ತಿತ್ತು. ಇದು ಒಮ್ಮುಖ ಚಲನೆಯಾಗಿತ್ತು. ಈಗ ಒಂದು ವಸ್ತುವನ್ನು ಮತ್ತೆ ಮತ್ತೆ ಮರು ಬಳಕೆ ಮಾಡುವ ಚಕ್ರ ರೂಪದ ಆರ್ಥಿಕತೆ ಬೇಕೆಂಬ ಬೇಡಿಕೆ ಹೆಚ್ಚಾಗುತ್ತಿದೆ. 

ಈ ಹಿನ್ನೆಲೆಯಲ್ಲಿ, ಲಿಥಿಯಂ ಬ್ಯಾಟರಿ, ಇ – ತ್ಯಾಜ್ಯ, ಕೈಗಾರಿಕಾ ತ್ಯಾಜ್ಯ, ಗುಜರಿ ಲೋಹ, ರಬ್ಬರ್, ಹಳೆ ವಾಹನ, ಜಿಪ್ಸಮ್, ಸೌರ ಫಲಕ ಹಾಗೂ ನಗರ ಸಂಸ್ಥೆಗಳ ತ್ಯಾಜ್ಯಗಳನ್ನು ಉತ್ಪನ್ನಗಳಾಗಿ ಪರಿವರ್ತಿಸುವ ಗುರಿ ಹೊಂದಲಾಗಿದೆ.

ಅಂದ ಹಾಗೆ, ಈ ಇಡೀ ಪ್ರಕ್ರಿಯೆ ಲಾಭದಾಯಕವಷ್ಟೇ ಅಲ್ಲದೇ ಸಾಕಷ್ಟು ಜನರಿಗೆ ಉದ್ಯೋಗ ಒದಗಿಸುವಂಥದ್ದೂ ಆಗಿದೆ. 2025ರ ವೇಳೆಗೆ ಭಾರತದ ತ್ಯಾಜ್ಯ ವಿಲೇವಾರಿ ವಲಯ 14 ಶತಕೋಟಿ ಡಾಲರ್‌ಗಳಿಗೆ ತಲುಪುವ ಸಾಧ್ಯತೆ ಇದೆ. ಈಗಾಗಲೇ ನಗರ ಪಾಲಿಕೆಗಳಿಂದ ಪ್ರತಿ ವರ್ಷ 62 ದಶಲಕ್ಷ ಟನ್‌ಗಳ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ.

ಭಾರತ ನಿರುದ್ಯೋಗದ ತೀವ್ರ ಸಮಸ್ಯೆಯನ್ನು ಎದುರಿಸುತ್ತಿದೆ. ಚಕ್ರ ಮಾದರಿಯ ಆರ್ಥಿಕತೆಯಿಂದ ನಿರುದ್ಯೋಗ ಸಮಸ್ಯೆ ಬಗೆಹರಿಸಲು ತುಸು ನೆರವು ಸಿಗಲಿದೆ. ದಿ ಗ್ಲೋಬಲ್ ಕ್ಲೈಮೇಟ್ ಆಕ್ಷನ್ ಸಮ್ಮಿಟ್ ವರದಿಯ ಪ್ರಕಾರ, ವೃತ್ತ ಮಾದರಿಯ ಆರ್ಥಿಕತೆಯಿಂದ 2030ರ ವೇಳೆಗೆ 65 ದಶಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ. ಈ ದೃಷ್ಟಿಯಿಂದಲೂ ಕಸವು ವರವಾಗಬಹುದಾಗಿದೆ.

ಆದರೆ, ಈ ಕಸವನ್ನು ಸಂಪತ್ತನ್ನಾಗಿ ಮಾಡುವಲ್ಲಿ ಭಾರತ ಸಾಗುವ ದಾರಿ ಇನ್ನೂ ದೂರವಿದೆ. ತ್ಯಾಜ್ಯ ಕಡಿಮೆ ಮಾಡುವ, ಮರು ಬಳಕೆ ಸಂಪನ್ಮೂಲವನ್ನು ಗರಿಷ್ಠಗೊಳಿಸುವ ಹಾಗೂ ನಿರಂತರವಾಗಿ ಮರು ಬಳಕೆ ಮಾಡುವ ಚಕ್ರ ರೀತಿಯ ಆರ್ಥಿಕತೆ ಸದ್ಯಕ್ಕಿನ್ನೂ ಕನಸಾಗಿದೆ.

ಉಕ್ರೇನ್ – ರಷ್ಯಾ ಸಮರದ ಅವಧಿಯಲ್ಲಿ ಪೆಟ್ರೋಲ್ ಉತ್ಪನ್ನಗಳ ಬೆಲೆ ಅತೀವ ಏರಿಕೆಯಾಗಿ ವಿಶ್ವದ ಆರ್ಥಿಕತೆಯೆಲ್ಲ ತಳಮಳಕ್ಕೆ ಸಿಲುಕಿವೆ. ಆದರ ಹೊಡೆತ ಭಾರತದ ಮೇಲೂ ಬಿದ್ದು, ಹಣದುಬ್ಬರ ತೀವ್ರವಾಗಿತ್ತು. ಭಾರತ ಇಂಧನಕ್ಕಾಗಿ ಬೇರೆ ದೇಶಗಳನ್ನು ಅವಲಂಬಿಸಿದೆ. ಹೀಗಿರುವಾಗ ಮತ್ತೆ ಮತ್ತೆ ಉಕ್ರೇನ್ ರೀತಿಯ ಪರಿಸ್ಥಿತಿ ಎದುರಾಗದೇ ಇರದು.

ಭಾರತವನ್ನು ನಿಜವಾದ ಸ್ವಚ್ಛ ಭಾರತ ಮಾಡಬೇಕಾದರೆ ಈ ವಲಯದಲ್ಲಿ ಸಾಕಷ್ಟು ಅನ್ವೇಷಣೆಗಳು, ಹೂಡಿಕೆ ಹಾಗೂ ಉದ್ಯೋಗಾವಕಾಶಗಳು ಸೃಷ್ಟಿಯಾಗಬೇಕಿದೆ. ಆಗ ನಿಜವಾಗಿಯೂ ಭಾರತಕ್ಕೆ `ಕಸ-ವರ’ ಸಿಗಲಿದೆ.


ಎಸ್.ಎ. ಶ್ರೀನಿವಾಸ್‌
[email protected]

 

error: Content is protected !!