ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ

ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ

ಆರೋಪ ಮುಕ್ತನಾಗಿ ಹೊರ ಬರುತ್ತೇನೆ : ಮಾಡಾಳ್

ತೆರೆದ ವಾಹನದಲ್ಲಿ ಶಾಸಕರ ಮೆರವಣಿಗೆ

ದಾವಣಗೆರೆ, ಮಾ. 7 – ಲಂಚ ಪ್ರಕರ ಣದಲ್ಲಿ ಸಿಲುಕಿದ ನಂತರ ನಾಪತ್ತೆಯಾಗಿದ್ದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಮಧ್ಯಂತರ ಜಾಮೀನಿನ ನಂತರ ಮತ್ತೆ ತವರು ಕ್ಷೇತ್ರವಾದ ಚನ್ನಗಿರಿಯಲ್ಲಿ ಬಹಿರಂಗವಾಗಿ ಕಾಣಿಸಿಕೊಂಡಿದ್ದಾರೆ.

ಈ ವೇಳೆ ಪತ್ರಕರ್ತರೊಂದಿಗೆ ಮಾತನಾ ಡಿದ ಅವರು, ನಾನು ಎಲ್ಲೂ ಹೋಗಿರಲಿಲ್ಲ. ಊರಿನಲ್ಲೇ ಇದ್ದೆ. ಆಪಾದನೆ ಬಂದಾಗ ಜನಸಂಪರ್ಕ ಕಡಿಮೆ ಮಾಡಿದ್ದೆ ಎಂದಿದ್ದಾರೆ. 

ಕೆಲವರು ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ. ನನ್ನ ವಿರುದ್ಧ ಮಾಡಿರುವ ಆರೋಪದಿಂದ ಮುಕ್ತನಾಗಿ ಹೊರ ಬರುತ್ತೇನೆ ಎಂದ ಅವರು, ನ್ಯಾಯಯುತವಾಗಿ ಗಳಿಸಿದ ಹಣ ತನ್ನ ಮಗ ಪ್ರಶಾಂತ್ ಬಳಿಯಿಂದ ಲೋಕಾಯುಕ್ತರಿಗೆ ಸಿಕ್ಕಿದೆ ಎಂದರು.

ಅಡಿಕೆಗೆ ಉತ್ತಮ ಬೆಲೆ ಬಂದಿರುವ ಕಾರಣ ಇಲ್ಲಿನ ಸಾಮಾನ್ಯ ಅಡಿಕೆ ತೋಟದವರ ಮನೆಯಲ್ಲೂ ಅಡಿಕೆ ಮಾರಿದ 2.5-3 ಕೋಟಿ ರೂ. ಹಣ ಇರುತ್ತದೆ. ಹೀಗಾಗಿ ತಮ್ಮ ಮನೆ ಯಲ್ಲಿ ಲೋಕಾಯುಕ್ತರಿಗೆ ಸಿಕ್ಕ ಹಣ ದೊಡ್ಡ ದೇನೂ ಅಲ್ಲ ಎಂದು ಸಮರ್ಥಿಸಿಕೊಂಡರು.

ನನ್ನ ಬಳಿ 125 ಎಕರೆ ಅಡಿಕೆ ತೋಟ, ಅಡಿಕೆ ಮಂಡಿ, ಎರಡು ಕ್ರಷರ್ ಸೇರಿದಂತೆ, ವ್ಯಾಪಾರ ವಹಿವಾಟು ಇದೆ. ಬೆಂಗಳೂರಿನ ಮನೆಯಲ್ಲಿ ಸಿಕ್ಕಿರುವ ಹಣಕ್ಕೆ ಲೆಕ್ಕ ಇದೆ. ಲೆಕ್ಕ ಕೊಟ್ಟು ಆ ಹಣ ವಾಪಸ್ ಪಡೆಯುತ್ತೇವೆ ಎಂದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾನು ಪಕ್ಷದ ಶಾಸಕ ಎಂಬುದನ್ನು ನೋಡದೇ ಕಾನೂನು ಪಾಲಿಸಿ ಎಂದು ಲೋಕಾಯುಕ್ತರಿಗೆ ತಿಳಿಸಿದ್ದಾರೆ. ಆಡಳಿತಾರೂಢ ಶಾಸಕರ ಮನೆ ಮೇಲೆ ದಾಳಿ ನಡೆದಿರುವುದು ಇದೇ ಮೊದಲು. ಇದರಿಂದ ಪಕ್ಷಕ್ಕೆ ಧಕ್ಕೆಯಾಗಿಲ್ಲ. ಭ್ರಷ್ಟಾಚಾರ ಆರೋಪದಿಂದ ಮುಕ್ತನಾಗಿ ಬರುತ್ತೇನೆ ಎಂದರು.

ನನಗೆ ಲೋಕಾಯುಕ್ತದಿಂದ ಇದುವರೆಗೂ ಯಾವುದೇ ನೋಟಿಸ್ ಬಂದಿಲ್ಲ. 48 ಗಂಟೆಗಳ ಒಳಗೆ ಲೋಕಾಯುಕ್ತರ ಎದುರು ವಿಚಾರಣೆಗೆ ಹಾಜರಾಗುವಂತೆ ಜಾಮೀನು ನೀಡುವಾಗ ಹೈಕೋರ್ಟ್ ತಿಳಿಸಿದೆ. ಆ ಅವಧಿಯಲ್ಲಿ ವಿಚಾರಣೆಗೆ ಹಾಜರಾಗುತ್ತೇನೆ ಎಂದರು.

ಮುಂದಿನ ಚುನಾವಣೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಎರಡು ಬಾರಿ ಪಕ್ಷ ನನ್ನನ್ನು ಶಾಸಕನನ್ನಾಗಿ ಮಾಡಿದೆ. ಪಕ್ಷ ನನಗೆ ತಾಯಿ ಇದ್ದಂತೆ. ದ್ರೋಹ ಮಾಡುವುದಿಲ್ಲ. ಪಕ್ಷ ಹೇಳಿದಂತೆ ಕೇಳುತ್ತೇನೆ ಎಂದರು.

ಕರ್ನಾಟಕ ಸಾಬೂನು ಹಾಗೂ ಮಾರ್ಜಕ ನಿಯಮಿತದಲ್ಲಿ ನಾನು ಅಧ್ಯಕ್ಷನಾಗಿದ್ದಾಗ ಯಾವುದೇ ಅವ್ಯವಹಾರ ನಡೆದಿಲ್ಲ. ಅಧ್ಯಕ್ಷನಿಗೆ ಆಡಳಿತಾತ್ಮಕ ಹಾಗೂ ಟೆಂಡರ್ ನಿರ್ಧರಿಸುವ ಅಧಿಕಾರ ಇರುವುದಿಲ್ಲ ಎಂದು ವಿರೂಪಾಕ್ಷಪ್ಪ ಹೇಳಿದರು.

ಕಂಪನಿ ಪಾರದರ್ಶಕವಾಗಿ ಕಾರ್ಯನಿರ್ವಹಿಸಿದೆ. ಅಧಿಕಾರ ವಹಿಸಿಕೊಂಡಾಗ ಅದರ ಲಾಭ 40 ಕೋಟಿ ರೂ. ಇದ್ದದ್ದು, ಈಗ 240 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ನನ್ನ ಮೇಲೆ ಆರೋಪ ಬಂದ ಹಿನ್ನೆಲೆಯಲ್ಲಿ ಪಕ್ಷ ನಿಗಮದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ಕ್ರಮ ತೆಗೆದುಕೊಂಡಿದೆ. ಇದರಲ್ಲಿ ತಪ್ಪೇನೂ ಇಲ್ಲ ಎಂದವರು ಹೇಳಿದರು.

ಯಾರೋ ದುರುದ್ಧೇಶದಿಂದ ಈ ಕೆಲಸ ಮಾಡಿದ್ದಾರೆ. ಹಿಂದಿನ ಚುನಾವಣೆಯಲ್ಲಿ ನನ್ನ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿಸಿದ್ದರು. ಅದಕ್ಕೂ ಹಿಂದಿನ ಚುನಾವಣೆಯಲ್ಲಿ ಇನ್ನೇನೋ ಮಾಡಿಸಿದ್ದರು, ಇದೀಗ ಲೋಕಾಯುಕ್ತ ದಾಳಿ ಮಾಡಿಸಿದ್ದಾರೆ ಎಂದಿದ್ದಾರೆ.

ಮಾಡಾಳ್ ಮೆರವಣಿಗೆ : ಈ ವೇಳೆ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಮಾಡಾಳ್ ಅವರನ್ನು ಹೆಗಲ ಮೇಲೆ ಹೊತ್ತು ಕುಣಿದರು. ಮೈಸೂರು ಪೇಟೆ ಹಾಗೂ ಹಾರ ಹಾಕಿದರು. ತೆರೆದ ವಾಹನದ ಮೇಲೆ ಮೆರವಣಿಗೆ ಮಾಡಿ ಪುಷ್ಪವೃಷ್ಟಿ ಮಾಡಲಾಯಿತು. ಮಾಡಾಳ್ ಪರ ಜೈಕಾರದೊಂದಿಗೆ, ಕಾರ್ಯಕರ್ತರು ಬಿಜೆಪಿ ಬಾವುಟ ಬೀಸುತ್ತಾ ಸಂಭ್ರಮಿಸಿದರು.

error: Content is protected !!