ದಾವಣಗೆರೆ, ಸೆ. 22 – ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜನರಿಗೆ ಉದ್ಯೋಗವಾಗಲೀ, ನೆಮ್ಮದಿಯಾಗಲೀ ಸಿಕ್ಕಿಲ್ಲ. ಯಾವ ಲಾಭಕ್ಕೋಸ್ಕರ ಬಿಜೆಪಿಗೆ ಮತ ಹಾಕಿದ್ದೇವೆ ಎಂದು ಜನರು ಯೋಚಿಸುವಂತಾಗಿದೆ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ನಗರದ ಎಂ.ಬಿ.ಎ. ಮೈದಾನದಲ್ಲಿ ಇಂದು ಆಯೋಜಿಸಲಾಗಿದ್ದ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ 55ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಯಾವುದೇ ಉಪಯೋಗ ಆಗಿಲ್ಲ. ಅಡುಗೆ ಅನಿಲದ ಸಬ್ಸಿಡಿಯನ್ನೂ ನಿಲ್ಲಿಸಲಾಗಿದೆ. ಯಾವ ಲಾಭವೂ ಇಲ್ಲ, ಯಾವ ಪುರುಷಾರ್ಥಕ್ಕಾಗಿ ಬಿಜೆಪಿಗೆ ಮತ ಚಲಾಯಿಸಿದ್ದಾಗಿ ಮತದಾರರೇ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದವರು ತಿಳಿಸಿದರು.
ಈ ದೇಶದಲ್ಲಿ ಮುಂದಿನ ದಿನಗಳಲ್ಲಿ ದೊಡ್ಡ ಬದಲಾವಣೆಯ ಗಾಳಿ ಶುರುವಾಗಲಿದೆ. ಸಾಮರಸ್ಯ ಉಂಟಾಗಬೇಕು, ರೈತರ ಬದುಕು ಹಸನಾಗಬೇಕು, ರಾಜ್ಯದಲ್ಲಿ ಭ್ರಷ್ಟಾಚಾರ ತೊಲಗಬೇಕು ಎಂದು ನಮ್ಮ ನಾಯಕ ರಾಹುಲ್ ಗಾಂಧಿ ಅವರು ಚಿತ್ರದುರ್ಗದ ಮೂಲಕ 510 ಕಿ.ಮೀ. ಪಾದಯಾತ್ರೆ ರಾಜ್ಯದಲ್ಲಿ ಮಾಡಲಿದ್ದಾರೆ ಎಂದರು.
ಈ ಭಾರತ್ ಜೋಡೋ ಪಾದಯಾತ್ರೆಯಲ್ಲಿ ಜಿಲ್ಲೆಯ ಜವಾಬ್ದಾರಿಯನ್ನು ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಬಿ. ಮಂಜಪ್ಪ ಅವರಿಗೆ ವಹಿಸಲಾಗಿದೆ. ಈ ಪಾದಯಾತ್ರೆಯಲ್ಲಿ ಇಡುವ ಪ್ರತಿಯೊಂದು ಹೆಜ್ಜೆಯೂ ದೇಶಕ್ಕೆ ಕೊಡುಗೆ ಎಂದು ಶಿವಕುಮಾರ್ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ನಗರದಲ್ಲಿ ನಡೆದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯನವರ 75ನೇ ವರ್ಷದ ಅಮೃತ ಮಹೋತ್ಸವದ ಯಶಸ್ಸು ನೋಡಿ ರಾಜ್ಯ ಹಾಗೂ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ನಡುಗಿ ಹೋಗಿವೆ ಎಂದು ಹೇಳಿದರು.
November 23, 2024