ಹೊನ್ನಾಳಿ, ಏ.7- ಸಾರಿಗೆ ನೌಕರರ ದಿಢೀರ್ ಮುಷ್ಕರದಿಂದ ಹೊನ್ನಾಳಿ ಡಿಪೋಗೆ ದಿನಕ್ಕೆ ಸುಮಾರು 6 ರಿಂದ 7 ಲಕ್ಷ ರೂಪಾಯಿಗಳಷ್ಟು ನಷ್ಟ ಸಂಭವಿಸಲಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ.
ಡಿಪೋದಲ್ಲಿ 189 ಸಿಬ್ಬಂದಿ, 43 ಬಸ್ಸುಗಳ ಸಂಚಾ ರವಿದ್ದು, ಆಡಳಿತ ಇಲಾಖೆಯ ಸಿಬ್ಬಂದಿ ಹೊರತುಪಡಿಸಿ ಉಳಿದ ನೌಕರರು ಸೇವೆಗೆ ಗೈರು ಹಾಜರಾಗಿದ್ದರು. ಡಿಪೋದಲ್ಲಿ ಸರ್ಕಾರಿ ಬಸ್ಸುಗಳು ಸಾಲುಗಟ್ಟಿ ನಿಂತಿದ್ದವು.
ದಾವಣಗೆರೆಯಿಂದ ನೂರು ಖಾಸಗಿ ಬಸ್ಸುಗಳು, ಶಿವಮೊಗ್ಗದಿಂದ 80 ಖಾಸಗಿ ಬಸ್ಸುಗಳ ಸಂಪರ್ಕ ಕಲ್ಪಿಸಿದ್ದು, ಟೆಂಪೊ, ಆಟೋಗಳಿಗೆ ಅವಕಾಶ ಕಲ್ಪಿಸಿ ಸಾರ್ವಜನಿಕರಿಗೆ ದಿಢೀರ್ ಸಾರಿಗೆ ನೌಕರರ ಮುಷ್ಕರದಿಂದ ಆಗುವ ತೊಂದರೆ ಗಳನ್ನು ತಡೆಯುವ ಪ್ರಯತ್ನ ಮಾಡಲಾಗಿತ್ತು.
ಪಿಎಸ್‍ಐ ಬಸನಗೌಡ ಬಿರಾದಾರ್ ಅವರು ಸರ್ಕಾರಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀ ಲಿಸಿ, ಬಂದೋಬಸ್ತ್ ಮಾಡಿದ್ದರು. ಮುಷ್ಕರದಿಂದ ಜನಸಾಮಾನ್ಯರು ಪ್ರಯಾಣಕ್ಕಾಗಿ ಕಷ್ಟ ಪಡುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಹೊನ್ನಾಳಿಯಲ್ಲಿಂದು ಸಂತೆ ದಿನವಾಗಿದ್ದು, ಮುಷ್ಕರ ಹೆಚ್ಚು ಪರಿಣಾಮ ಬೀರಿತ್ತು.