ದಾವಣಗೆರೆ, ಮಾ. 14- ನಗರದಲ್ಲಿ ಕಳೆದ ಮೂರು ದಶಕಗಳಿಂದ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ, ಕನ್ನಡ ನಾಡು-ನುಡಿಗಳನ್ನು ವೈಭವೀಕರಿಸುವ ನಿಟ್ಟಿನಲ್ಲಿ ರಾಜ್ಯ, ರಾಷ್ಟ್ರಮಟ್ಟದ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ, ನಿರಂತರ ಕ್ರಿಯಾಶೀಲವಾದ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ನಗರದ ವಿವಿಧ ಬಡಾವಣೆಗಳಲ್ಲಿ ಶಾಖೆಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ಈಗಾಗಲೇ ಡಿ.ಸಿ.ಎಂ. ಟೌನ್ಶಿಪ್ ಶಾಖೆ, ಎಸ್.ಎಸ್.ಬಡಾವಣೆ ಶಾಖೆ ಉದ್ಘಾಟನೆಯಾಗಿದ್ದು, ನೂತನವಾಗಿ ಸಿದ್ದವೀರಪ್ಪ ಬಡಾವಣೆಯ ಮೂರನೇ ಶಾಖೆಯನ್ನು ಉದ್ಘಾಟಿಸಲು ಸೇರಿದ ಸಭೆಯಲ್ಲಿ ಈ ಶಾಖೆಯ ಅಧ್ಯಕ್ಷರಾಗಿ ಶ್ರೀಮತಿ ಲಲಿತಾ ಕಲ್ಲೇಶ್ ಅವರನ್ನು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಸಂಸ್ಥೆಯ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಗೆ ಮೊದಲಿಗೆ ಲಲಿತಾ ಕಲ್ಲೇಶ್ ಸ್ವಾಗತಿಸಿದರು. ಕಾವ್ಯ ಕುಂಚದ ಸಕ್ರಿಯ ಸದಸ್ಯರಾದ ಪಿ.ವಿಶ್ವನಾಥ್, ಮಹದೇವ ಅಸಗೋಡು ತಮ್ಮ ತಮ್ಮ ಅನಿಸಿಕೆ ಹಂಚಿಕೊಂಡು ಕಾವ್ಯ ವಾಚನದೊಂದಿಗೆ ಎಲ್ಲರನ್ನೂ ರಂಜಿಸಿದರು.
ಕಲಾಕುಂಚ ಪ್ರಧಾನ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜಿ.ಬಿ.ಲೋಕೇಶ್, ಯೋಗ ಸಾಧಕಿ, ಗಾಯಕಿ ರೇಣುಕಾ ರಾಮಣ್ಣ ಸಂಸ್ಥೆಯ ಮೂರು ದಶಕಗಳ ಸಾಧನೆ ವಿವರಿಸಿದರು. ನೂತನ ಸದಸ್ಯೆ ಸುಮಾ ಏಕಾಂತಪ್ಪ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹೊಸ ಸದಸ್ಯರ ಸೇರ್ಪಡೆ ಸೇರಿದಂತೆ ಇನ್ನುಳಿದ ವಿಚಾರ ಚರ್ಚೆ ನಂತರ ಪೂರ್ವಸಿದ್ಧತೆಯೊಂದಿಗೆ ನೂತನ ಶಾಖೆಯ ಉದ್ಘಾಟನಾ ದಿನಾಂಕವನ್ನು ನಿಗದಿ ಮಾಡಲು ತೀರ್ಮಾನ ಕೈಗೊಳ್ಳಲಾಯಿತು. ಕೊನೆಯಲ್ಲಿ ಕಲಾಕುಂಚ ಮಹಿಳಾ ವಿಭಾಗದ ಸಂಘಟನಾ ಕಾರ್ಯದರ್ಶಿ ಶ್ರೀಮತಿ ಕುಸುಮಾ ಲೋಕೇಶ್ ವಂದಿಸಿದರು.