ಲೊಕೇಶನ್ ವೀಕ್ಷಿಸುತ್ತಿದ್ದ ಶಾರ್ಟ್ ಫಿಲ್ಮ್ ನಿರ್ದೇಶಕನಿಗೆ ಬೆದರಿಸಿ ಸುಲಿಗೆ

ಇಬ್ಬರು ಆರೋಪಿಗಳ ಸೆರೆ: ಚಿನ್ನಾಭರಣ-ನಗದು ವಶ

ದಾವಣಗೆರೆ, ಸೆ.8- ಸಿನಿಮಾ ಚಿತ್ರೀಕರಣಕ್ಕೆಂದು ಲೊಕೇಶನ್ ವೀಕ್ಷಣೆಗಾಗಿ ಕೊಂಡಜ್ಜಿ ಕೆರೆಗೆ ಆಗಮಿಸಿದ್ದ ಹೊಸಪೇಟೆಯ ಶಾರ್ಟ್ ಫಿಲ್ಮ್ ನಿರ್ದೇಶಕರೋರ್ವರನ್ನು ಹೆದರಿಸಿ ಚಿನ್ನಾಭರಣ, ನಗದು ದೋಚಿದ್ದ ಸುಲಿಗೆಕೋರರನ್ನು ಘಟನೆ ನಡೆದ ಮೂರು ದಿನಗಳಲ್ಲೇ ಬಂಧಿಸಿ, ಸುಲಿಗೆ ಮಾಡಿದ್ದನ್ನೆಲ್ಲಾ ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಶಿವನಗರದ ಮನ್ಸೂರ್ ಅಲಿ (22) ಮತ್ತು ಸೈಪುಲ್ಲಾ ಅಲಿಯಾಸ್ ರೊಡ್ಡ (21) ಬಂಧಿತರು.

ಇದೇ ದಿನಾಂಕ 4ರಂದು ರಾಣೇಬೆನ್ನೂರು ತಾಲ್ಲೂಕು ಕೋಡಿಯಾಲ ಹೊಸಪೇಟೆ ವಾಸಿ ಶಾರ್ಟ್ ಫಿಲ್ಮ್  ನಿರ್ದೇಶಕ ಮನೋಜ್ ಕಾರಿನಲ್ಲಿ ಲೊಕೇ ಶನ್ ನೋಡಲು ಹರಿಹರ ತಾಲ್ಲೂಕು ಕೊಂಡಜ್ಜಿ ಗ್ರಾಮದ ಕೆರೆಗೆ ಬಂದಿದ್ದರು. ಈ ವೇಳೆ ಬೈಕಿನಲ್ಲಿ ಬಂದಿದ್ದ ಮೂವರೂ ಸುಲಿಗೆಕೋರರು ಈ ನಿರ್ದೇಶಕನನ್ನು ಹೆದರಿಸಿ ಕೊರಳಲ್ಲಿದ್ದ 25 ಗ್ರಾಂ ತೂಕದ 75 ಸಾವಿರ ಮೌಲ್ಯದ ಬಂಗಾರದ ಸರ, 20 ಸಾವಿರ ಮೌಲ್ಯದ ಐ-ಪೋನ್, 4 ಸಾವಿರ ನಗದು, ಪ್ಯಾನ್ ಕಾರ್ಡ್, ಎರಡು ಬ್ಯಾಂಕ್ ಗಳ ಎಟಿಎಂ ಕಾರ್ಡ್ ಗಳಿದ್ದ ಪರ್ಸ್ ಅನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಹರಿಹರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಎಸ್ಪಿ ಹನುಮಂತರಾಯ, ಎಎಸ್ಪಿ ರಾಜೀವ್‍, ದಾವಣಗೆರೆ ಗ್ರಾಮಾಂತರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ನರಸಿಂಹ ತಾಮ್ರಧ್ವಜ ಮಾರ್ಗದರ್ಶನದಲ್ಲಿ ಹರಿಹರ ಸಿಪಿಐ ಎಂ. ಶಿವಪ್ರಸಾದ್ ನೇತೃತ್ವದಲ್ಲಿ ಹರಿಹರ ಗ್ರಾಮಾಂತರ ಠಾಣಾ ಪಿಎಸ್ಐ ಡಿ. ರವಿಕುಮಾರ್‌, ಎಎಸ್ಐ ಮಹಮ್ಮದ್ ಸೈಪುದ್ದೀನ್ ಯಾಸೀನ್ ವುಲ್ಲಾ ಮತ್ತು ಸಿಬ್ಬಂದಿಗಳಾದ ರವಿ, ವೆಂಕಟೇಶ್‌, ಶ್ರೀಧರ ಬಣಕಾರ, ಹರೀಶ್‌, ದ್ವಾರಕೀಶಿ, ಸತೀಶ, ಮಹಮದ್ ಇಲಿಯಾಸ್, ನಾಗರಾಜ, ಸಿದ್ದಪ್ಪ, ಮುರುಳಿಧರ ಅವರನ್ನೊಳಗೊಂಡ ತಂಡವು ಆರೋಪಿಗಳನ್ನು ಪತ್ತೆ ಮಾಡಿದೆ.

ಈ ಇಬ್ಬರು ಆರೋಪಿಗಳ ವಿಚಾರಣೆ ಮಾಡಿದಾಗ ತಮ್ಮಿಬ್ಬರ ಜೊತೆಗೆ ತಲೆಮರೆಸಿಕೊಂಡಿರುವ ಭಾಷಾನಗರದ ಪೈರೋಜ್ ಸೇರಿ ಸುಲಿಗೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಕೃತ್ಯಕ್ಕೆ ಬಳಸಿದ ಬೈಕ್ ಸಹ ವಶಪಡಿಸಿಕೊಳ್ಳಲಾಗಿದೆ.

error: Content is protected !!