ರಸ್ತೆ ಅಪಘಾತ : ಕುಂಬಳೂರಿನ ಮೂವರ ಸಾವು

ರಾಣೇಬೆನ್ನೂರು, ಡಿ.4- ಇಲ್ಲಿಗೆ ಸಮೀಪದ ರಾಷ್ಟ್ರೀಯ ಹೆದ್ದಾರಿ 4 ರ ಕಮದೋಡು ಬಳಿ ಇಂದು ಸಂಜೆ 4ರ ಸಮಯದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಹರಿಹರ ತಾಲ್ಲೂಕು ಕುಂಬಳೂರಿನ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಹರಿಹರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಕೋಶಾಧ್ಯಕ್ಷರೂ ಆದ ಮಲೇಬೆನ್ನೂರು ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಎನ್.ಹನುಮಂತಪ್ಪ, ಅವರ ಪುತ್ರಿ ರಾಜೇಶ್ವರಿ (32), ಮೊಮ್ಮಗಳು ಶಿವಾನಿ (10) ಅಪಘಾತದಲ್ಲಿ ಮೃತಪಟ್ಟಿರುವ ನತದೃಷ್ಟರು.

ಹನುಮಂತಪ್ಪ ಅವರು ತಮ್ಮ ಕಾರಿನಲ್ಲಿ ಹುಬ್ಬಳ್ಳಿಯಲ್ಲಿದ್ದ ಸಂಬಂಧಿಕರ ಮದುವೆಗೆ ತೆರಳಿ ವಾಪಾಸ್ ಕುಂಬಳೂರಿಗೆ ಆಗಮಿಸುವ ಸಂದರ್ಭದಲ್ಲಿ, ಅವರಿದ್ದ ಕಾರು ಮತ್ತು ಕಂಟೈನರ್ ಲಾರಿ ನಡುವೆ ಡಿಕ್ಕಿಯಾದ ಪರಿಣಾಮ ಈ ದುರಂತ ನಡೆದಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ರಸ್ತೆ ಅಪಘಾತದಿಂದಾಗಿ ಕೆಎ 17 ಪಿ 3157 ಸಂಖ್ಯೆಯ ಕಾರು ನಜ್ಜುಗುಜ್ಜಾಗಿದೆ. ಹನುಮಂತಪ್ಪ ಸ್ವತಃ ಕಾರು ಚಲಾಯಿಸುತ್ತಿದ್ದರು. ಮೃತರ ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ನಾಳೆ ಶನಿವಾರ ಕುಂಬಳೂರಿನಲ್ಲಿ ನೆರವೇರಿಸಲಾಗುವುದು ಎಂದು ಅವರ ಕುಟುಂಬ ವರ್ಗದವರು ತಿಳಿಸಿದ್ದಾರೆ.

ಹಾವೇರಿ ಎಸ್ಪಿ ದೇವರಾಜ್‌, ರಾಣೇ ಬೆನ್ನೂರು ಗ್ರಾಮಾಂತರ ಸಿಪಿಐ ಭಾಗ್ಯದೇವಿ, ಹಲಗೇರಿ ಪಿಎಸ್‌ಐ ಮಂಜುನಾಥ್‌ ಅವರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.

ಸಂತಾಪ : ಹನುಮಂತಪ್ಪ ಅವರ ನಿಧನಕ್ಕೆ ರಾಮಕೃಷ್ಣ ಆಶ್ರಮದ ಶ್ರೀ ಶಾರದೇಶಾನಂದ ಸ್ವಾಮೀಜಿ, ಯಲವಟ್ಟಿಯ ಸಿದ್ಧಾಶ್ರಮದ ಶ್ರೀ ಯೋಗಾನಂದ ಸ್ವಾಮೀಜಿ, ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಹೆಚ್‌.ಎಸ್. ಮಂಜುನಾಥ್‌ ಕುರ್ಕಿ, ಗೌರವ ಕಾರ್ಯದರ್ಶಿಗಳಾದ ಬಿ.ದಿಳ್ಯೆಪ್ಪ, ಎನ್.ಎಸ್.ರಾಜು, ನಿಕಟಪೂರ್ವ ಅಧ್ಯಕ್ಷ ಎ.ಆರ್‌. ಉಜ್ಜಿನಪ್ಪ, ತಾಲ್ಲೂಕು ಕಸಾಪ ಅಧ್ಯಕ್ಷ ಓ.ಜಿ. ರುದ್ರಗೌಡ್ರು, ಎನ್‌.ಜಿ. ಶಿವಾಜಿ ಪಾಟೀಲ್‌, ಜಿಗಳಿಯ ಗೌಡ್ರ ಬಸವರಾಜ್, ಲಯನ್ಸ್‌ ವಿದ್ಯಾಸಂಸ್ಥೆ ಅಧ್ಯಕ್ಷ ಬಿ. ಚಿದಾನಂದಪ್ಪ, ಶಿವ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಡಾ. ಬಿ. ಚಂದ್ರಶೇಖರ್‌, ಹಿರಿಯ ಮುಖಂಡರಾದ ಮಾಗಾನಹಳ್ಳಿ ಹಾಲಪ್ಪ, ಕೆ. ತೀರ್ಥಪ್ಪ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

error: Content is protected !!