ಕೊಟ್ರ : ಈರಾ….ಏನಿದು ಘೋರ!
ಈರ : ಯಾವುದೋ?
ಕೊಟ್ರ: ಏರುತಿಹುದು ಹಾರುತಿಹುದು ನೋಡು ನಮ್ಮ ಕೊರೊನಾ ಬಾವುಟ.
ಈರ: ಹೌದೋ! ಕೊರೊನಾ ಸ್ಕೋರು ಜಾಸ್ತಿ ಆಗ್ತಾ ಐತಿ. ಇನ್ನೆರಡು ದಿನದಾಗೆ ಹಾಫ್ ಸೆಂಚುರಿ ಹೊಡಿಯಂಗೆ ಕಾಣ್ತತಿ!
ಕೊಟ್ರ: ಹಾಫ್ ಏನು ನಾವು ಮುಂಜಾಗ್ರತೆ ವಹಿಸಲಿಲ್ಲಾ ಅಂದ್ರೆ ಸೆಂಚುರಿ ಹೊಡಿತಿವಿ! ಸ್ಕೋರ್ ಮನೆ ಹಾಳಾಗಲಿ. ವಿಕೆಟ್ಗಳು ಬೀಳಬಾರದು. ಹಂಗಾಗದಿರಲಿ ಅಂತಾ ಶಿವಪ್ಪ ಕಾಯೋ ತಂದೆ ಎಂದು ಪ್ರಾರ್ಥನೆ ಮಾಡೋಣ.
ಈರ: ಬರೇ ದೇವರಿಗೆ ಪ್ರಾರ್ಥನೆ ಮಾಡಿದರೆ ಸಾಲದು. ನಮ್ಮ ನಮ್ಮ ಜವಾಬ್ದಾರಿ ನಾವು ವಹಿಸಿಕೊಳ್ಳಬೇಕಾಗೇತಿ ನೋಡು.
ಕೊಟ್ರ : ಹೌದೋ, ನಮ್ಮ ಮಂದಿ, ಅಧಿಕಾರಿಗಳು ಅದನ್ನು ಮಾಡಿಲ್ಲ, ಇದನ್ನು ಮಾಡಿಲ್ಲ ಹಿಂಗೆ ಮಾಡಬೇಕಿತ್ತು ಅಂತಾ ಹೇಳ್ಕೆಂತಾ ಇದಾರೆ. ತಾವು ಯಾವುದನ್ನು ಮಾಡಬೇಕು ಯಾವುದನ್ನು ಮಾಡಬಾರದು ಅಂತ ತಲೆ ಕೆಡಿಸ್ಕೆಂಡಿಲ್ಲ.
ಈರ : ಅದು ನಿಜ. ಯಾವಾಗಲೂ ಈ ವಾಟ್ಸ್ಯಾಪು ಫೇಸ್ ಬುಕ್ಕಿನಾಗೆ ಇಂತಹ ಕಮೆಂಟ್ ಮಾಡಿದ್ದೇ ಮಾಡಿದ್ದು. ಬನ್ರೋ ಮಾರಾಯರೇ ಅಧಿಕಾರಿಗಳ ಹತ್ತಿರ ನೇರ ಮಾತಾಡೋಣ ಅಂದರೆ, ಈಗ ಬಿಜಿ ಅದವಿ ನೀ ಹೋಗಿ ಮಾತಾಡು ಅಂತಾರೆ.
ಕೊಟ್ರ : ಸರಕಾರದ ಕೆಲಸ ದೇವರ ಕೆಲಸ. ಅದಕ್ಕೆ ಅವರೇ ಮಾಡಲಿ ಅಂತಾ ಅವರ ವಾದ. ಆ ಬುದ್ದಿ ಜೀವಿಗಳು ನಮಗೆ ಫೋನ್ ಮಾಡಿ ನೀವು ಸರಕಾರದೋರಿಗೆ ಹೇಳಿ ಹಿಂಗ ಮಾಡಿಸಿರಿ ಹಂಗ ಮಾಡಿಸಿರಿ ಅಂತಾ ನಮಗೆ ಚುಚ್ಚಿ ಅವರು ಮಜಾ ತಗೋತಾರೆ! ನಾವು ಕುರಿಗಳು ಸಾರ್ ನಾವು ಕುರಿಗಳು ಅಂತಾ ಅಂಡಲೆದು ಮುಂದೆ ಹೊಂಟು ಬಿಡ್ತವಿ.
ಕವಿ ನಿಸಾರ್ ಅಹಮದ್ ಮೇಲೆ ಹೋಗೋಕೆ ಮುಂಚೆ ನಮ್ಮಂತವರ ಬಗ್ಗೆ ಮೊದಲೇ ಬರೆದಿಟ್ಟಿದ್ದರು ನೋಡು.
ಈರ : ಮತ್ತೇ, ಈ ಬುದ್ದಿ ಜೀವಿಗಳ ಕೆಲಸ ಯಾವುದು?
ಕೊಟ್ರ: ಟಿ.ವಿ. ನೋಡೋದು. ಪೇಪರ್-ಪುಸ್ತಕ ಓದೋದು. ಒಂದೆರಡು ಗಂಟೆ ವಾಟ್ಸ್ಯಾಪು. ಒಂದೆರಡು ಗಂಟೆ ಫೇಸ್ ಬುಕ್ಕು. ಸಾಯಂಕಾಲ ಮನೆ ಟೆರಾಸ್ ಮೇಲೆ ವಾಕು. ಆಮೇಲೆ ಊಟ ಮಾಡಿ ಮತ್ತೆ ಫೇಸ್ ಬುಕ್ಕು ವಾಟ್ಸ್ಯಾಪು.
ಈರ : ಹಾಂ! ನಮ್ಮ ಕಡೆ ಮನೆ ಕಲಾವಿದನ ಕೆಲಸ ಹಂಗೇ ಅನಿಸ್ತತಿ. ಟಿ.ವಿ. ಏನು ನೋಡಲ್ಲ. ಅದೂ ಇದು ಪೇಪರಿನಾಗೆ ಬರಿತಾನೆ.
ಕೊಟ್ರ : ಅವನು ಬಿಡು ತಮಾಷೆ ಮಾತಿನಾಗೆ ಬರೆದು ಮಂದಿಗೆ ಅಮಾವಾಸೆ ತೋರುಸ್ತಾನೆ.
ಈರ :ಅಂದಂಗೆ ಆ ಪಕ್ಕದ ಮನೆ ಪರಮೇಶಿ ಏನೋ ತಯಾರಿ ನಡೆಸ್ಯಾನಂತಲ್ಲಾ ಏನು?
ಕೊಟ್ರ: ಅದೇ ಸೋಮವಾರದಿಂದ ವಹಿವಾಟು ಗರಿಗೆದರುತಾವು ಅಂತ ಸ್ವಲ್ಪ ತಯಾರಿ ನಡೆಸಬೇಕು ಅಂತಿದ್ದ.
ಈರ: ಏನು ತಯಾರಿ?
ಕೊಟ್ರ: ಆಧಾರ್ ಕಾರ್ಡ್, ಎ.ಟಿ.ಎಂ ಕಾರ್ಡ್ ಜೊತೆಗೆ ಒಂದಿಷ್ಟು ಚಿಲ್ಲರೆ ಶಿಸ್ತಾಗಿ ಪರ್ಸ್ ನಾಗೆ ಇಟ್ಟುಕೊಳ್ಳೋದು. ಮಾಸ್ಕ್ ಹಾಕ್ಯಂಡು ನೀರು ಕುಡಿಯೋದು, ಚಕ್ಕಲಿ, ಖಾರ, ಶೇಂಗಾ ಬೀಜ ತಿನ್ನೋದು ಮತ್ತೇ ಗಂಟೆಗಟ್ಟಲೇ ನಿಲ್ಲುವುದು ಪ್ರಾಕ್ಟೀಸ್ ಮಾಡ್ತಾ ಅದಾನ.
ಈರ: ಮಾಸ್ಕ ಹಾಕ್ಯಂಡು ನಿಲ್ಲೋ ಪ್ರಾಕ್ಟಿಸ್ ಯಾಕೆ?!
ಕೊಟ್ರ: ಕ್ಯೂನಾಗೆ ನಿಲ್ಲಕ್ಕೆ.
ಈರ : ಎಲ್ಲಿ?
ಕೊಟ್ರ: ಎಣ್ಣೆ ಅಂಗಡಿ ಮುಂದೆ !
ಆರ್.ಟಿ. ಅರುಣ್ಕುಮಾರ್
[email protected]